ಇದುವೇ ಪಾಪಿಯ ಯಮಲೋಕ!
ಭಾವಿಕರೆಂಬರು ಭೂಲೋಕ!
ದೈತ್ಯರೆಂಬವರ ಕರೆಕಳಿಸಿ
ಹೊಟ್ಟೆಗೆಂಬವರ ಹಿಡಿದೆಳಿಸಿ
ಮುಟ್ಟದೆ ಮೈದೊಗಲನು ಸುಲಿಸಿ
ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ
ಇದುವೇ ಪಾಪಿಯ ಯಮಲೋಕ!
ಭಾವಿಕರೆಂಬರು ಭೂಲೋಕ!
ಒಕ್ಕಲಮಕ್ಕಳ ಹಡಿದೆಳೆದು
ಸಾಲದಪಾಶದಿ ಬಿಗಿಬಿಗಿದು
ಹೊಟ್ಟೆಯಹೊದಿಕೆಯ ಹರಿದೊಗೆದು
ಬಿಸಿನೆತ್ತರವನೆ ಸುರಿಸುರಿದು
ಇದುವೇ ಪಾನಿಯ ಯಮಲೋಕ!
ಭಾವಿಕರೆಂಬರು ಭೂಲೋಕ!
ಹೆಣ್ಣಿನಜಾತಿಯ ಹೆಡಮುರಿಕಟ್ಟಿ
ಧರ್ಮಸ್ಥಂಭಕೆ ಕೈ ಕಟ್ಟಿ
ಕಂಗುಡ್ಡಿಗಳಂ ಹೊರಗಟ್ಟಿ
ನರಕದಕೂಪದ ನೆಲೆಗಟ್ಟಿ
ಇದುವೇ ಪಾಪಿಯ ಯಮಲೋಕ!
ಭಾವಿಕರೆಂಬರು ಭೂಲೋಕ!
ಅಂತ್ಯಜನೆಂಬನ ಅಗ್ನಿಗೆ ಕೊಟ್ಟು
ಕೊಲ್ಲದೆ ಗೋಳಿನ ಗಾಣದೊಳಿಟ್ಟು
ಅನ್ನವನಿಕ್ಕದೆ ಸೆರೆಯೊಳಗಿಟ್ಟು
ಹದ್ದು ನಾಯಿಗಾ ಹೆಣವನೆ ಬಿಟ್ಟು
ಇದುವೇ ಪಾಪಿಯ ಯಮಲೋಕ!
ಭಾವಿಕರೆಂಬರು ಭೂಲೋಕ!
*****








