ಇದ್ದಿತು ಕತ್ತೆಯ ಬೆನ್ನಿನ ಮೇಲೆ
ಕಲ್ಲಿನ ಭಾರವು ಆರು ಮಣ
ಕರಿಯ ಕಲ್ಲುಗಳ ಭಾರದ ತುದಿಗೆ
ಕುಳಿತಿತು ಸುಮ್ಮನೆ ಒಂದುನೊಣ
ಏರನು ಹತ್ತುವುದಾಗದೆ ಕತ್ತೆ
ಅಂದಿತು “ಆಯ್ಯೋ ಅಪ್ಪಾ ಸತ್ತೆ
ಬದುಕಿಸು ಹೇಗಾದರೂ ನನ್ನ”
ತನಗೇ ಕತ್ತೆಯು ಹೇಳಿತುಯೆಂದು
ತನ್ನಳವಿಗೆ ನೊಣ ಸಂತಸಗೊಂಡು
ಆಂದಿತು “ಬಾಗಿಸದಿರು ಬೆನ್ನ!”
ಸೊಕ್ಕಿನ ಮಾತಿಗೆ ಕೋಪಿಸಿಕೊಂಡು
ಬಾಲವ ಝಾಡಿಸಿ ನೊಣವನು ಕಂಡು
ಅದನು ಕೊಲ್ಲದೇಬಿಡೆ ತಾನೆಂದು
ಎತ್ತಿತು ಕತ್ತೆಯು ಕಾಲುಗಳ
ನೊಣವು ಹಾರುವಾದಿಕ್ಕಿಗೆ ಒದ್ದು
ದಾರಿಯ ಅಂಚಿನ ತಗ್ಗಿಗೆ ಬಿದ್ದು
ತಪ್ಪಿಸಿಕೊಂಡಿತು ಕೀಲುಗಳ!
ತಗ್ಗಿಗೆ ಬಿದ್ದಾ ಕತ್ತೆಯ ಬೆನ್ನಿಗೆ
ಇದ್ದಿತು ಭಾರವು ಆರು ಮಣ
ಕರಿಯ ಕಲ್ಲುಗಳ ಭಾರದ ತುದಿಗೆ
ಕುಳಿತಿತು ಗರುವದಿ ಅದೇ ನೊಣ!
*****








