೧
ನೋಡಬೇಡ ನೋಡಬೇಡ ನೋಡಬೇಡವೇ
ಇಂತು ನನ್ನನು!
ತೋಡಬೇಡ ತೋಡಬೇಡ ತೋಡಬೇಡವೇ,
ಕಣ್ಣಿನಲ್ಲೆ, ತೋಡಬೇಡ
ನನ್ನ ಎದೆಯನು!
ಸಾವಿರಾರು ಅರ್ಥಗಳನು
ಕಟ್ಟಿ ನಿನ್ನ ನೋಟಕಾನು
ಮಿಲ ಮಿಲ ಮಿಲ ನರಳುವಂತೆ ಆಡಬೇಡವೇ
ಆಡಬೇಡ ಆಡಬೇಡ ಆಡಬೇಡವೇ
ಕಣ್ಣಿನಲ್ಲೆ, ಆಡಬೇಡ
ನೂರು ಮಾತನು!
ನನ್ನ ಕಂಡು ಕಾಣದಂತೆ ದಾರಿಯನ್ನು ಹಿಡಿದು ಹೋಗು,
ಚಿಂತೆಯಿಲ್ಲ,
ನೀನು ನಿನ್ನ ಪಾಡಿಗೆ!
ಓರೆನೋಟದಂಬುಗಳನು ಚುಚ್ಚದಿರೇ ಚುಚ್ಚದಿರೇ
ಎದೆಯ ಜೇನ ಗೂಡಿಗೆ!
ಕರಿಯ ಮಿಂಚಿನಂತೆ ಹೊಳೆಸ
ಬೇಡ ಕಣ್ಣಗುಡ್ಡೆಯ!
ಎದೆಯ ಮೂಲ ಬಯಕೆಗಳಿಗೆ
ಕಟ್ಟ ಬೇಡ ಬಡ್ಡಿಯ!
೨
ಒಂದೆ ಎರಡೆ ನಿನ್ನ ನೋಟ ಗೈಯುತಿರುವ ಹಾವಳಿ?
ಒಂದೆ ಸಮನೆ ಪಟ ಪಟ ಪಟ ರೆಕ್ಕೆ ಬಡಿವುದೆದೆಯ ಬಾವಲಿ.
ಮೊದಲು, ಎದೆಗೆ ಕಿಚ್ಚನಿಡುವ
ನಿನ್ನ ಓರೆನೋಟವನ್ನೆ
ಕುರುಡನಂತೆ ನೋಡದೆನ್ನ ಪಾಡಿಗಾನು ಇದ್ದು ಬಿಡುವ
ಹುಚ್ಚು ಆಸೆ ಮೊಳೆವುದು!
ಒಂದೆ ನಿಮಿಷ, ಈ ಆಸೆಗೆ
ವಿಘ್ನಕೋಟಿ ಬೆಳೆವುದು!
ಅಹಂಕಾರವೆದ್ದು ನಿಂತು
ಏಳಿಸೆನ್ನ ನುಡಿವುದಿಂತು:
“ಅಯ್ಯೊ! ಪೆಚ್ಚೆ! ನಿನ್ನನೊಲಿದು
ನೋಡುತಿಹಳು! ವಿಮುಖನಾಗಬೇಡ ನೀನು!”
“ಅಹುದು” ಎಂದು ತಾಳ ಹಾಕಿ
ಮೆರೆವುದೆದೆಯು ಮುದದೊಳು!
“ನನ್ನ, ಓವೊ, ನನ್ನ ಕಡೆಗೆ
ನೋಟಗಳನು ಚೆಲ್ಲುತಿಹಳು,
ಈಕೆ” ಯೆಂದು ನಿನ್ನ ಬಯಸಿ
ಆಸೆ ಕುಣಿವುದೆದೆಯೊಳು!
ನೂರಾರು ಕನಸುಗಳನು
ಕಟ್ಟಿ ಕುಣಿವುದೆದೆಯೊಳು!
ಕನಸ ಮತ್ತದೆನಿತು ಹೊತ್ತು!!
ಮತ್ತೆ ತಿರೆಯ ಬಾಯ್ಗೆ ತುತ್ತು
ಈ ಎಲ್ಲ ಭ್ರಮೆಗಳು!
ಸಣ್ಣದೊಂದು ತೂತಿನಿಂದ
ಜಿನುಗಿ ಜಿನುಗಿ ಬರುವ ನೀರ
ಹೋಲಿ, ದನಿಯದೊಂದು, ಬಗೆಯ
ಕೇಣಕಿ ಕೆಣಕಿ ಕೇಳ್ವುದು:
“ಮರುಳೆ! ನಿನ್ನ ಕಂಡರೆನಗೆ
ನಗೆಯು ಬೆರೆತ ಮರುಕವು!
ಏಕೊ ನಿನ್ನ ನೋಡುವವಳ
ಒಲಿದಳೆಂದು ಭ್ರಮಿಸುವೆ!”
“ಏಕೊ?”
ಯಾರು ಬಲ್ಲರಿದಕೆ ಮದ್ದ?
ಏಕೊ, ಏನೊ, ಇನ್ನು ನನ್ನ ನಿಂತು ನೀನು
ನೋಡಬೇಡ ನೋಡಬೇಡ ನೋಡಬೇಡವೇ!
ತೋಡಬೇಡ ತೋಡಬೇಡ ತೋಡಬೇಡವೇ,
ಕಣ್ಣಿನಲ್ಲೆ, ತೋಡಬೇಡ
ನನ್ನ ಎದೆಯನು!
ಸಾವಿರಾರು ಅರ್ಥಗಳನು
ಕಟ್ಟಿ ನಿನ್ನ ನೋಟಕಾನು
ಮಿಲ ಮಿಲ ಮಿಲ ನರಳುವಂತೆ
ಆಡಬೇಡ ಆಡಬೇಡ ಆಡಬೇಡವೇ.
ಕಣ್ಣಿನಲ್ಲೆ, ಆಡಬೇಡ
ನೂರು ಮಾತನು!
*****








