Home / ಕಥೆ / ನೀಳ್ಗತೆ / ಅಂಬಾಲಿಕೆ

ಅಂಬಾಲಿಕೆ

ಪಾಠಕವರ್ಗ!

ಇದು ‘ರಾಜಾಸ್ಥಾನದ ಇತಿಹಾಸ ಮಂಜರಿ’ ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು. ಗ್ರಂಥವು ಚಿಕ್ಕುದಾದರೂ ಹಲವು ನೀತಿಗಳು ಅಡಕವಾಗಿರುವುವು.

|| ಶ್ರೀ ||

ಅಂಬಾಲಿಕೆ

ಒಂದನೆಯ ಅಧ್ಯಾಯ.

ಒಂದು ದಿವಸ ದುರ್ಗದ ರಾಜೋದ್ಯಾನದಲ್ಲಿ ರಾಜಾ ಭಗವತೀದಾಸನ ಏಕ ಮಾತ್ರ ಪುತ್ರಿಯಾದ ಅಂಬಾಲಿಕೆಯು ವಿಹರಿಸುತ್ತಿದ್ದಳು, ಆಗ ಸಂಧ್ಯಾಕಾಲವಾಗಿತ್ತು. ಭಗವಾನ್ಪ್ರಭಾಕರನು ಕ್ಷೀಣತೇಜನಾಗಿ ಅಸ್ತಮಿಸುತ್ತಿದ್ದನು. ರಾಜಪುತ್ರಿಯಾದ ಅಂಬಾಲಿಕೆಯು ಅಸೀಮ ಸೌಂದರ್ಯಮಯಿ. ಪೂರ್ಣಚಂದ್ರನಂತಹ ಮುಖ, ಅಂದವಾದ ಹುಬ್ಬುಗಳು, ಕಪ್ಪಾದ ಮುಂಗುರುಳು, ತೊಂಡೇಹಣ್ಣಿನಂತಹ ಕೆಂದುಟಿಗಳು, ವಿಶಾಲವಾದ ಕಣ್ಣುಗಳು. ಇವುಗಳಿಂದ ಕೂಡಿ ಸರ್ವರ ಪ್ರೀತಿಗೂ ಪಾತ್ರಳಾಗಿದ್ದ ಈ ರಾಜಕುಮಾರಿಗೆ ವಿವಾಹವಾಗುವ ವಯಸ್ಸು ಬಂದೊದಗಿದ್ದರೂ, ಅದಾವಕಾರಣಗಳ ದೆಸೆಯಿಂದಲೋ ಇನ್ನೂ ವಿವಾಹವಾಗಿರಲಿಲ್ಲ. ರಾಯಗುವರಿಗೆ ಪ್ರಕೃತಿಯ ಸೌಂದರ್ಯದ ಮೇಲೆ ಬಹಳ ಇಷ್ಟ. ಉದ್ಯಾನವು ಹೂವುಗಳನ್ನು ಹೊಮ್ಮಿಸುತ್ತಿರುವ ಚಂಪಕವೃಕ್ಷಗಳಿಂದಲೂ, ಚಿಗುರಿದ ಅಶೋಕವೃಕ್ಷಗಳಿಂದಲೂ ಮತ್ತು ಅನೇಕ ತರಹದ ಲತಾವೃಕ್ಷಗಳಿಂದಲಂಕೃತವಾಗಿತ್ತು. ತಂಗಾಳಿಯು ಬಹಳ ಮನೋಹರವಾಗಿ ಬೀಸುತ್ತಿದ್ದುದು, ಹೂವುಗಳಲ್ಲಿನ ಮಕರಂದವನ್ನು ಪಾನಮಾಡುವುದರ ಸಲುವಾಗಿ ಭ್ರಮರಗಳು ತಂಡತಂಡವಾಗಿ ಬಂದು ಬಹಳ ಆನಂದದಿಂದ ಗಾನಮಾಡುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿಯೇ, ತೇಜೋನಿಧಿಯಾದ ಸೂರ್ಯಬಿಂಬವು ಅಸ್ತಾಚಲದ ಹಿಂದೆ ಸಂಪೂರ್ಣವಾಗಿ ಮರೆಯಾಗಲು ಕಳಲೆಯು ಪ್ರಪಂಚವನ್ನು ಪರಿವೇಷ್ಟಿಸಿದುದು. ಅದನ್ನು ಕಂಡು, ಕತ್ತಲಾದಮೇಲೆ ಸ್ತ್ರೀಯರು ಹೊರಗೆ ಸಂಚರಿಸುವುದು ಸರಿಯಲ್ಲವೆಂಬುವುದನ್ನು ಚೆನ್ನಾಗಿ ತಿಳಿದಿದ್ದ ಅಂಬಾಲಿಕೆಯು ಅರಮನೆಯನ್ನು ಕುರಿತು ಹೊರಡಲುದ್ಯುಕ್ತಳಾದಳು.

ಅಂಬಾಲಿಕೆಯು ಒಂದೆರಡು ಹೆಜ್ಜೆಗಳಷ್ಟು ದೂರ ಮುಂದುವರಿಯುವಷ್ಟರಲ್ಲಿಯೇ, ಆರೋ ಅವಳ ಹಿಂದಣಿಂದ, “ರಾಜಕುಮಾರಿ! ಸ್ವಲ್ಪ ನಿಲ್ಲು. ಅನಂತರ ಅರಮನೆಗೆ ಹೋಗುವೆಯಂತೆ!” ಎಂದು ಸಣ್ಣ ಧ್ವನಿಯಲ್ಲಿ ಕೂಗಿದರು. ರಾಜ ಕುಮಾರಿಯು ಇದನ್ನು ಕೇಳಿ ಚಮಕಿತಳಾಗಿ ಹಿಂದಿರುಗಿ ನೋಡಿ ಮಂತ್ರಿಸುತನಾದ ಮೋಹನಸಿಂಹನನ್ನು ಕಂಡಳು. ಆದರೆ ಅವನ ಮನದಲ್ಲಿ ಆವುದೋ ಒಂದು ದುರಭಿಪ್ರಾಯವಿರಬೇಕೆಂದುಕೊಂಡು ಪುನಃ ಮುಂದುವರಿಯಲುಜ್ಜುಗಿಸಿದಳು. ಇದನ್ನು ಕಂಡು ಮೋಹನಸಿಂಹನು, ಅಂಬಾಲಿಕೆ! ಇಷ್ಟು ಬೇಗ ಈ ನಿರ್ಭಾಗ್ಯನನ್ನು ಮರೆಯಲು ಯೋಚಿಸಿರುವಿಯೇನು?” ಎಂದನು. ಅದಕ್ಕೆ ಅಂಬಾಲಿಕೆಯು, “ಮೋಹನಸಿಂಹ! ಇಂತಹ ಅವೇಳೆಯಲ್ಲಿ ನೀನು ರಾಣೀವಾಸದ ಉಪವನವನ್ನು ಪ್ರವೇಶಮಾಡಿದುದು ಒಳ್ಳೆಯದಲ್ಲ. ಅದು ಹಾಗಿರಲಿ ನೀನು ಇಲ್ಲಿಗೆ ಬಂದುದಕ್ಕೆ ಸರಿಯಾದ ಕಾರಣವೇನಾದರೂ ಇರುವುದೋ?” ಎಂದಳು.

ಮೋಹನ – “ಕಾರಣವಿಲ್ಲದೆ ಎಂದಿಗಾದರೂ ಬರುವೆನೆ? ಅದಕ್ಕೆ ತಕ್ಕ ಕಾರಣವಿದ್ದೇ ಇರುವುದು.”

ಅಂಬಾಲಿಕೆ – “ಹಾಗಾದರೆ ಅಂತಹ ಕಾರಣವಾವುದು?” ಮೋಹನಸಿಂಹನು ರಾಜಕುಮಾರಿಯನ್ನು ಚಪಲದೃಷ್ಟಿಯಿಂದ ನೋಡುತ್ತ, “ರಾಯಗುವರಿ! ಅದರ ಕಾರಣವು ನೀನೇ” ಎಂದು ಹೇಳಿದನು.

ಇದನ್ನು ಕೇಳಿ ಅಂಬಾಲಿಕೆಯು ಆಪಾದಮಸ್ತಕಪರ್ಯಂತವೂ ತರಗೆಲೆಯಂತೆ ನಡುಗಿದಳು. ಆದರೂ ಧೈರ್ಯವನ್ನವಲಂಬಿಸಿ, “ಎಲಾ! ನೀಚನೇ! ಈ ಕ್ಷಣವೇ ಇಲ್ಲಿ ನಿಲ್ಲದೆ ಹೊರಟುಹೋಗು. ಇಲ್ಲದಿದ್ದರೆ ನಿನಗೆ ಒಳ್ಳೆಯದಾಗುವುದಿಲ್ಲ.

ಮೋಹನಸಿಂಹನು ಈ ಹೆದರಿಕೆಯನ್ನು ಸ್ವಲ್ಪವೂ ಲಕ್ಷಿಸದೆಯೇ, “ಅಂಬಾಲಿಕೆ! ಈಗ ನೀನು ನನ್ನನ್ನು ವಿವಾಹವಾಗುವುದಕ್ಕೆ ಸಮ್ಮತಿಸಿದರೆ ಸರಿ. ಇಲ್ಲವಾದರೆ,-ಇಗೋ! ನೋಡು. ನಾಳೆ, ನಿಮ್ಮ ತಂದೆ, ನಿಮ್ಮ ರಾಜ್ಯವಾವುದೂ ಇರುವುದಿಲ್ಲ. ಹಾಗೆ ಮಾಡುವಷ್ಟು ಅಪಾರವಾದ ಶಕ್ತಿಯು ನನ್ನಲ್ಲಿದೆ.” ಎಂದನು.

ಅಂಬಾಲಿಕೆಯು ಈ ಅಹಿತಸೂಚಕವಾದ ಮಾತುಗಳನ್ನು ಕೇಳಲಿಚ್ಚಿಸದೆ, ಬಹಳ ಘಟ್ಟಿಯಾದ ಸ್ವರದಿಂದ ರಾಜದೂತರನ್ನು ಕೂಗಿದಳು, ತಕ್ಷಣವೇ ಮಂತ್ರಿಸುತನಾದ ಮೋಹನಸಿಂಹನು ಆ ವೃಕ್ಷಸಂದಣಿಯಲ್ಲಿ ಮಾಯವಾಗಿಬಿಟ್ಟನು. ಸ್ವಲ್ಪ ಹೊತ್ತಿನಲ್ಲಿಯೇ ಕೆಲವು ರಾಜದೂತರು ಬಂದು ರಾಜಪುತ್ರಿಯನ್ನು ಸುರಕ್ಷಿತವಾಗಿ ಅರಮನೆಗೆ ಕರೆದೊಯ್ದರು. ಅಲ್ಲಿ ಅವಳು ರಾಜೋದ್ಯಾನದಲ್ಲಿ ನಡೆದ ಸಮಾಚಾರವನ್ನು ತನ್ನ ಮಾತೆಗೆ ತಿಳುಹಿದಳು. ಆಗ ರಾಣಿಯು ಕುಪಿತಳಾಗಿ, ಎಲ್ಲವನ್ನೂ ಭಗವತಿದಾಸನಿಗೆ ತಿಳುಹಿದಳು. ಅದಕ್ಕೆ ಅವನಾವ ಉತ್ತರವನ್ನೂ ಕೊಡಲಿಲ್ಲ; ಆದರೆ, ಬಹಳ ಆಲೋಚನಾಮಗ್ನನಾದನು.
* * *

ಎರಡನೆಯ ಅಧ್ಯಾಯ

ಮಾರನೇ ದಿವಸ ಪ್ರಾತಃಕಾಲದಲ್ಲಿ ಮೋಹನ ಸಿಂಹನು ಅರಮನೆಯನ್ನು ಪ್ರವೇಶಿಸಿ ರಾಜಾಭಗವತೀ ದಾಸನನ್ನು ಕಂಡನು. ಮಂತ್ರಿ ಪುತ್ರನಿಗೆ ಅರಮನೆಯನ್ನು ಪ್ರವೇಶಿಸಲು ಅಧಿಕಾರವನ್ನು ಸ್ವಯಂ ಭಗವತೀದಾಸನೇ ಕೊಟ್ಟಿದ್ದನು. ಅದು ಕಾರಣ ಮೋಹನನು ಆರ ಆತಂಕವೂ ಇಲ್ಲದೆ ರಾಜನ ಇದಿರಿಗೆ ಬಂದು ನಿಂತನು. ಕುಶಲಪ್ರಶ್ನೆಗಳಾದನಂತರ ರಾಜನು, ಮೋಹನನು ಅರಮನೆಗೆ ಬಂದದರ ಕಾರಣವನ್ನು ವಿಚಾರಿಸಿದನು. ಮೋಹನಸಿಂಹನು ಅದಕ್ಕೆ ಯಾವ ಪ್ರತ್ಯುತ್ತರವನ್ನೂ ಕೊಡದೆ ಮೌನವಾಗಿದ್ದನು.

ಭಗವತಿ ದಾಸ – ಮೋಹನಸಿಂಹ! ನಿನ್ನೆಯದಿವಸದ ನಿನ್ನ ವರ್ತನವೆಲ್ಲವೂ ನನಗೆ ತಿಳಿಯಿತು. ಸಂಧ್ಯಾಕಾಲದಲ್ಲಿ ನೀನು ರಾಣೀವಾಸದ ಉಪನವನವನ್ನು ಏಕಾಕಿಯಾಗಿ ಒಳಹೊಕ್ಕುದು ಬಹಳ ತಪ್ಪು.”

ಮೋಹನಸಿಂಹ-(ನಿರುತ್ತರ).

ಭಗವತೀದಾಸ – ಮಂತ್ರಿ ಕುಮಾರ! ನಿನ್ನ ಅಪರಾಧವನ್ನು ಪ್ರಚ್ಛನ್ನವಾಗಿಟ್ಟು ಕೊಂಡು ಮರೆತುಬಿಡುವೆನೆಂದು ತಿಳಿಯಬೇಡ : ಶೀಘ್ರದಲ್ಲಿಯೇ ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸುವೆನು.

ಮೋಹನಸಿಂಹ – ಮಹಾರಾಜ! ದುಡುಕಬೇಡಿರಿ, ನಿಮ್ಮ ಮಗಳ ಮತ್ತು ನಿಮ್ಮ ರಾಜ್ಯದ ಮಂಗಳದ ಮೇಲೆ ದೃಷ್ಟಿಯನ್ನಿಟ್ಟು ಚೆನ್ನಾಗಿ ಆಲೋಚಿಸಿ ಮಾತನಾಡಿರಿ. ಇಲ್ಲವಾದರೆ ಬಹಳ ವ್ಯಥೆಗೀಡಾಗುವಿರಿ.

ಭಗವತೀದಾಸ – ಎಲಾ, ಪಾಪಿ! ಅಧಮ!! ಇಂದು ನೀನು ನನ್ನ ಪವಿತ್ರವಾದ ಕುಲಕ್ಕೇ ಕಳಂಕವನ್ನು ತಂದೊಡ್ಡಿರುವಿ. ಈ ಉಪಕಾರಕ್ಕಾಗಿ ನಿನಗೆ ನನ್ನ ಏಕಮಾತ್ರ ಪುತ್ರಿಯನ್ನು ವಿವಾಹಮಾಡಿಕೊಟ್ಟು ನಿನ್ನನ್ನು ನನ್ನ ರಾಜ್ಯಕ್ಕೆ ಹಕ್ಕುದಾರನನಾಗಿ ಮಾಡಿಕೊಳ್ಳಬೇಕೆಂದು ಬೊಗಳುವಿಯೋ? ಥು! ನೀಚಾ!! ನನ್ನಿದಿರಿನಿಂದ ಆಚೆಗೆ ತೊಲಗಿ ಹೋಗು : ಒಂದು ಕ್ಷಣವಾದರೂ ನನ್ನಿದಿರಿನಲ್ಲಿ ನಿಲ್ಲಬೇಡ. ಹಾಗೆ ನಿಂತರೆ ನಿನಗೆ ನಿಸ್ತಾರವಿಲ್ಲ ಎಂದು ಗದರಿಸಿಕೊಂಡನು.

“ಮಹಾರಾಜ! ಇಂದು, ನೀವು ನನಗೆ ಯಾವ ರಜಪೂತನೂ ಸಹಿಸಲಾರದಷ್ಟು ಅಪಮಾನವನ್ನು ಮಾಡಿರುವಿರಿ, ಅದಕ್ಕಾಗಿ ನಾನು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳದೆಬಿಡೆನು. ಮಹಾರಾಜ! ಈ ವಿಷಯವನ್ನು ಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟಿರಿ, ಮರೆಯ ಬೇಡಿರಿ” ಎಂದು ಹೇಳುತ್ತ ಮೋಹನಸಿಂಹನು ಅರಮನೆಯನ್ನು ಬಿಟ್ಟು ಸ್ವಗೃಹಾಭಿಮುಖನಾದನು.

ಮೋಹನಸಿಂಹನು ಹೊರಟುಹೋಗುತ್ತಲೇ ರಾಜನು ತನ್ನ ಮಂತ್ರಿಯಾದ ವಿಕ್ರಮಸಿಂಹನನ್ನು ಕರೆಯಿಸಿ ಮೋಹನನ ದುರ್ವ್ಯಾಪಾರವನ್ನು ಅವನಿಗೆ ತಿಳುಹಿದನು. ಇದನ್ನು ಕೇಳುತ್ತಲೇ ವಿಕ್ರಮಸಿಂಹನ ಮುಖವು ಕೆಂಪಗಾಯಿತು. ಭ್ರೂಗಳು ಕೃಷ್ಣಸರ್ಪಗಳನ್ನು ಹೋಲಿದುವು. ತುಟಿಗಳು ಅದುರಿದುವು. ಅವನ ನೇತ್ರಗಳಲ್ಲಿ ಕ್ರೋಧಾನಲವು ಪ್ರಜ್ವಲಿಸಲಾರಂಭವಾಯಿತು. ತಕ್ಷಣವೇ ಅವನು ಒಬ್ಬ ಸೇವಕನನ್ನು ಕೂಗಿ, ಮೋಹನನನ್ನು ಕರೆದುಕೊಂಡು ಬಾರೆಂದು ಆಜ್ಞಾಪಿಸಿದನು. ಸ್ವಲ್ಪ ಹೊತ್ತಿನಲ್ಲಿಯೇ ಆ ಸೇವಕನು ಹಿಂತಿರುಗಿ ಬಂದು ಉತ್ತಮಾಶ್ವವೊಂದನ್ನು ಆರೋಹಿಸಿ ನಾಗೂರಿಗೆ ಅಭಿಮುಖನಾಗಿ ಪ್ರಯಾಣಮಾಡಿದನೆಂದು ಬಿನ್ನವಿಸಿದನು. ಆಗ, ವಿಕ್ರಮಸಿಂಹನು ಅತಿಪ್ರಯಾಸದಿಂದ ತನ್ನ ಕೋಪವನ್ನು ತನ್ನಲ್ಲಿಯೇ ಅಡಗಿಸಿಕೊಂಡು, “ಮಹಾರಾಜ! ಸಮಾಧಾನಚಿತ್ತರಾಗಿರಿ. ಆ ಪರಮಪಾಪಿ-ಆಚಂಡಾಲನನ್ನು ಸ್ಮರಿಸಬೇಡಿ. ಇಂದಿನಿಂದ ಅವನು ನನಗೆ ತ್ಯಾಜ್ಯನಾದ ಪುತ್ರನಾಗಿರುವನು. ಆ ಅಧ ಮಾಧವನ ಗೊಡ್ಡು ಬೆದರಿಕೆಗೆ ತಾವು ಭಯಪಡಬೇಕಾದುದರವಶ್ಯವಿಲ್ಲ” ಎಂದನು.
* * *

ಮೂರನೆಯ ಅಧ್ಯಾಯ

ಪಾಠಕಮಹಾಶಯ! ಪಿತನ ಗೃಹವನ್ನು ಪರಿತ್ಯಜಿಸಿದ ಬಳಿಕ ಮೋಹನನು ನಾಗೂರನ್ನು ಕುರಿತು ಹೊರಟುದು ಸರಿಯಷ್ಟೆ? ಈಗ ಅವನೇನಾದನೆಂಬುದನ್ನು ವಿಚಾರಿಸಿಕೊಳ್ಳುವೆವು.

ದುರ್ಗದಿಂದ ನಾಗೂರು ಸುಮಾರು ಹದಿನೈದು ಕ್ರೋಶಗಳಷ್ಟು ದೂರದಲ್ಲಿದ್ದಿತು. ನಾವು ಆವಕಾಲದ ಚರಿತ್ರೆಯನ್ನು ವಿವರಿಸಲೆಳಸಿರುವೆವೋ, ಆಕಾಲದಲ್ಲಿ ಮುಜ ಫರಖಾನನೆಂಬುವನು ನಾಗೂರಿನ ಅಧಿಪತಿಯಾಗಿದ್ದನು. ಮುಜಫರನು ವಿನಯ, ಪಾಪ ಭೀತಿ, ಮುಂತಾದ ಸನ್ಮಾರ್ಗಗಳ ವಾಸನೆಯನ್ನೇ ತಿಳಿಯದ ಮತ್ತು, ಆಪ್ರಮಾಣಿಕತೆ, ಇಂದ್ರಿಯ ಪಾರವಶ್ಯ, ವ್ಯಭಿಚಾರ, ವಂಚನೆ, ಇತ್ಯಾದಿ ದುರಾಚಾರಗಳಿಂದ ಕೂಡಿದ ಅಧರ್ಮೈಕನಿರತನಾಗಿದ್ದನೆಂದರೆ ಸದ್ಯಃ ಸಾಕಾಗಿರುವುದು. ಪ್ರದೋಷಕಾಲದ ಹೊತ್ತಿಗೆ ಮೋಹನಸಿಂಹನು, ಅರಮನೆಯ ಮುಂದೆ ಬಂದು ನಿಂತು,-ಒಬ್ಬ ಚಿತ್ರಗಾರನು ತನ್ನ ಚಿತ್ರಪಠಗಳೊಂದಿಗೆ ಬಂದಿರುವನೆಂದು ಹೇಳಿ ಕಳುಹಿಸಿದನು. ನಿರಂತರವೂ ಸ್ವಾರ್ಥದಲ್ಲಿಯೇ ಆಸಕ್ತನಾಗಿರುತ್ತಿದ್ದ ಆ ರಾಜನಿಗೆ ಮತ್ತಾವ ಕೆಲಸವೂ ಇಲ್ಲದಿದ್ದುದರಿಂದ, ಅಂದು ಅವನು ಪ್ರಮೋದದ ಉದ್ಯಾನದಲ್ಲಿ ಕುಳಿತು ಸುರೆಯನ್ನು ಸೇವಿಸುತಲಿದ್ದನು. ಮೋಹನನ ಬರುವಿಕೆಯನ್ನು ತಿಳಿದೊಡನೆಯೇ ಅವನಿದ್ದೆಡೆಗೆ ಬಂದು, “ಎಲ್ಲಿ?- ನಿನ್ನ ಚಿತ್ರಪಟಗಳನ್ನು ತೆಗೆದು ತೋರಿಸು.” ಎಂದನು.

ಆಗ ಮೋಹನನು ತನ್ನ ಕಂಕುಳಿನಲ್ಲಿದ್ದ ಗಂಟನ್ನು ಬಿಚ್ಚಿ ಚಿತ್ರ ಪಠಗಳನ್ನು ಒಂದೊಂದಾಗಿ ತೆಗೆದು ತೋರಿಸುತ್ತೆ, “ಮಹಾಪ್ರಭು! ನಾನೊಬ್ಬ ಪ್ರಸಿದ್ಧನಾದ ಚಿತ್ರಗಾರನು, ರಾಜಾಸ್ಥಾನದ ರಾಜರುಗಳೆಲ್ಲರೂ ತಂತಮ್ಮ ಮತ್ತು ತಂತಮ್ಮ ಮನೆಯವರ ಚಿತ್ರಗಳನ್ನು ಬರೆಯಿಸಿಕೊಳ್ಳುವುದಕ್ಕೆ ನನ್ನನ್ನೇ ಕರೆಸುವರು. ನನ್ನಲ್ಲಿರುವ ಚಿತ್ರಗಳಲ್ಲಿನ ಎಲ್ಲಾ ಮನುಷ್ಯರನ್ನೂ ನಾನೇ ಸ್ವತಃ ನೋಡಿ ಬಂದಿರುತ್ತೇನೆ. ಈಗ್ಯೆ, ಸುಮಾರು ಎರಡು ತಿಂಗಳುಗಳ ಕೆಳಗೆ ಮೀವಾರದ ರಾಣಾರವರು ತಮ್ಮ ಚಿತ್ರಪಠವನ್ನು ತಯಾರುಮಾಡುವುದಕ್ಕಾಗಿ ನನ್ನನ್ನು ಕಳುಹಿದ್ದರು. ಆಗ ಅವರು ನನ್ನ ಬುದ್ದಿ ಕುಶಲತೆಗೆ ಮೆಚ್ಚಿ ಒಂದು ಸಹಸ್ರ ವರಹಗಳನ್ನು ಪಾರಿತೋಷಿಕವಾಗಿ ಕೊಟ್ಟರು. ಅನಂತರ ನಾನು ಯೋಧಪುರದ ರಾಯರವರ ಚಿತ್ರವನ್ನು ತಯಾರುಮಾಡಿ ಅವರಿಂದ ದೊಡ್ಡ ಬಹುಮಾನವನ್ನು ಪಡೆದೆನು. ಮೊನ್ನೆ ತಾನೆ ದುರ್ಗದ ಭಗವತೀದಾಸರವರು ತಮ್ಮ ಕುವರಿಯ ರೂಪನ್ನು ಚಿತ್ರಿಸುವುದಕ್ಕಾಗಿ ನನ್ನನ್ನು ತಮ್ಮ ಬಳಿಗೆ ಕರೆಯಿಸಿದ್ದರು. ಸ್ವಲ್ಪ ಕಾಲದಲ್ಲಿಯೇ ನಾನು ಆ ರಾಜಕುಮಾರಿಯ ಅಸಮಾನವಾದ ರೂಪನ್ನು ಬಹಳ ಅಂದವಾಗಿ ಚಿತ್ರಿಸಿದೆನು. ಅದಕ್ಕಾಗಿ ಅವರು ಪಾರಿತೋಷಿಕವಾಗಿ ಒಂದು ಅಮೂಲ್ಯವಾದ ಮುತ್ತಿನ ಹಾರವನ್ನು ಕೊಟ್ಟುದೂ ಅಲ್ಲದೆ, ನನಗೆ ಕಷ್ಟ ಕಾಲವು ಸಂಪ್ರಾಪ್ತವಾದಾಗ ತಮ್ಮ ಬಳಿಗೆ ಬರಬಹುದೆಂದು ತಮ್ಮ ಅನುಜ್ಞೆಯನ್ನಿತ್ತಿರುತ್ತಾರೆ. ಅದಕ್ಕಾಗಿ ನಾನು ಅವರಿಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದಾಗಿರುವುದು, ಪ್ರಭುಗಳೇ! ಇತ್ತ ನೋಡಿ, ಆ ರಾಜಕುಮಾರಿಯ ಚಿತ್ರಪಠದ ಪ್ರತಿಯೊಂದು ಇಲ್ಲಿಯೇ ಇರುವುದು. ತಾವು ಈ ಗರೀಬನಮೇಲೆ ದಯವಿಟ್ಟು ಅದನ್ನು ಪರಿಕಿಸಿ ತಮ್ಮ ಅಭಿ ಪ್ರಾಯವನ್ನು ತಿಳುಹೋಣಾಗಲಿ” ಎಂದು ಹೇಳಿ, ಅಂಬಾಲಿಕೆಯ ಚಿತ್ರಪಠವೊಂದನ್ನು ಮುಜಫರಖಾನನ ಹಸ್ತದಲ್ಲಿಟ್ಟು, ನಮ್ರಭಾವದಿಂದ ದೂರದಲ್ಲಿ ನಿಂತುಕೊಂಡು, ಖಾನನ ಉತ್ತರಾಪೇಕ್ಷಿಯಾಗಿ, ತನ್ನ ತಾನೇ, ಭಗವತೀದಾಸನ ಮೇಲಿನ ಸೂಡನ್ನು ತೀರಿಸಿಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗವು ಸಮಾಗತವಾಯಿತೆಂದುಕೊಂಡು ಆನಂದಿಸುತ್ತಿದ್ದನು.

ಆ ಚಿತ್ರಪಠವನ್ನು ನೋಡಿದ ಕೂಡಲೇ ಮುಜಫರನ ಮನಸ್ಸು ಅನೇಕ ವಿಕಾರ ಗಳಿಗೊಳಗಾಯಿತು. ಅವನ ಮನದಲ್ಲಿ ಏನೇನೋ ಭಾವನೆಗಳುಂಟಾದುವು. ಹಾಗೆಯೇ ಸ್ವಲ್ಪಹೊತ್ತಿನವರೆಗೂ ಚಿತ್ರಾರ್ಪಿತಳಾದ ಆ ರಮಣಿಯ ಸೌಂದರ್ಯವನ್ನು ಚಂಚಲ ದೃಷ್ಟಿಯಿಂದ ನೋಡುತ್ತಿದ್ದನು. ಆಗ, ಮುಜಫರನು, ಚಿತ್ರಗತಳಾದ ರಾಜಕುಮಾರಿಯನ್ನು ವಿವಾಹಮಾಡಿಕೊಂಡು ಸುಖಿಸಬೇಕೆಂಬ ಉತ್ಕಟವಾದ ಇಚ್ಛೆಯುಳ್ಳವನಾದನು. ಅನಂತರ ಅವನು ಮೋಹನನನ್ನು ಕುರಿತು, “ಅಯ್ಯಾ! ಚಿತ್ರಗಾರ, ನಿನ್ನ ನಾಮಧೇಯವೇನು?” ಎಂದು ಪೃಚ್ಛಿಸಿದನು.

ಮೋಹನ – “ಮಹಾಪ್ರಭು! ನನ್ನ ಹೆಸರು-ಮೋಹನಸಿಂಹ-ನೆಂದಿರುವುದು.”

ಮುಜಫರಖಾನ್ – ಒಳ್ಳಿತು ಮೋಹನಸಿಂಹ; ನಾನು ಈ ಚಿತ್ರಪಠವನ್ನು ಕ್ರಯಕ್ಕೆ ತೆಗೆದುಕೊಳ್ಳುವೆನು. ಇದರ ಬೆಲೆಯೇನು?-ಹೇಳು.

ಮೋಹನಸಿಂಹ – ಹುಜೂರ್! ಅದಕ್ಕೆ ಪ್ರತಿಫಲವಾಗಿ ನನಗೇನೂ ಬೇಡ. ನನ್ನನ್ನು ತಮ್ಮ ಬಳಿ ಆವುದಾದರೊಂದು ಚಾಕರಿಯಲ್ಲಿಟ್ಟುಕೊಂಡರೆ ಸಾಕು.

ಮುಜಫರ – ಒಳ್ಳೆಯದು. ಇಂದಿನಿಂದಲೇ ನೀನು ನನ್ನ ಅಂಗರಕ್ಷಕಲ್ಲೋರ್ವನಾಗಿರು. ಇದನ್ನು ಕೇಳಿ ಅಲ್ಲಿದ್ದ ಒಬ್ಬ ಯವನ ಚಾಕರನು, “ಹುಜೂರ್! ನನ್ನ ಮನವಿಯನ್ನು ಲಾಲಿಸಬೇಕು.” ಎಂದನು.

ಮುಜಫರ – ಅದೇನೋ? ಗುಲಾಮ! ಬೇಗ ಹೇಳು.

ಚಾಕರನು – ಹುಜೂರ್! ಈ ಮನುಷ್ಕನು ರಜಪೂತನು, ಬಹಳ ಕೆಟ್ಟ ವಿಧರ್ಮಿಗಳ ಜಾತಿಗೆ ಸೇರಿದವನು. ಇವನು ಗೂಢಚಾರನಿರಬಹುದು. ಈ ಕಾಫರರನ್ನು ನಂಬುವುದಕ್ಕಾಗುವುದಿಲ್ಲವಾದುದರಿಂದ ಇವನನ್ನು ತಟ್ಟನೆ ಅಂಥಾ ಭಾರೀ ಚಾಕರಿಯಲ್ಲಿಟ್ಟು ಕೊಳ್ಳುವುದು ಬಹಳ ಅಪಾಯಕರವು.

ಅದಕ್ಕೆ ಮುಜಫರನು, “ನೀನು ಹೇಳಿದುದೂ ಉಚಿತವಾಗಿ ತೋರುತ್ತದೆ (ಮೋಹನನ ಕಡೆ ತಿರುಗಿ), ಅಯ್ಯಾ! ಚಿತ್ರಗಾರ! ನೀನು ನನ್ನ ಚಿತ್ರಪಠವೊಂದನ್ನು ಬರೆ. ಅದನ್ನು ನೋಡಿ ನಂಬುಗೆಯುಂಟಾದರೆ ನಿನ್ನನ್ನು ಚಾಕರಿಯಲ್ಲಿ ನಿಯಮಿಸುವೆವು.

ಅದಕ್ಕೆ ಸಮ್ಮತಿಸಿ, ಮೋಹನಸಿಂಹನು ಮಾರನೇ ದಿನ ಮುಜಫರನ ಚಿತ್ರಪಠವೊಂದನ್ನು ಬಹಳ ಸುಂದರವಾಗಿ ತಯಾರುಮಾಡಿಕೊಟ್ಟನು. ಚಿಕ್ಕಂದಿನಿಂದಲೂ ಚಿತ್ರಬರೆವ ವಿದ್ಯೆಯನ್ನು ಬಹಳ ಶ್ರಮದಿಂದ ಅಭ್ಯಾಸಮಾಡಿದ್ದನಾದುದುರಿಂದ ಅವನಿಗೆ ಅದು ಕಷ್ಟಕರವಾಗಿ ತೋರಿಬರಲಿಲ್ಲ. ಮುಜಫರನು ಮೋಹನನ ಕೌಶಲಕ್ಕೆ ಮೆಚ್ಚಿ ಅವನನ್ನು ತನ್ನ ಅಂಗರಕ್ಷಕರಲ್ಲೋರ್ವನನ್ನಾಗಿ ನಿಯಮಿಸಿದನು.

ಮೋಹನಸಿಂಹನಿಗೆ ತನ್ನ ಇಷ್ಟ ಪೂರ್ತಿಯಾದುದಕ್ಕೋಸ್ಕರ ಬಹಳ ಆಮೋದವುಂಟಾಯಿತು.
* * *

ನಾಲ್ಕನೆಯ ಅಧ್ಯಾಯ

ಮುಜಫರನು ಕಾಮಾಂಧನಾದನು. ನಮ್ಮ ಪ್ರಿಯ ಪಾಠಕ ಪಾಠಕಿಯರಿಗೆ ಚಿರಪರಿಚಿತನಾದ ಪುಷ್ಪಶರನ ಪ್ರಬಲಾವೇಶಕ್ಕೆ ಮುಜಫರನು ಸಿಕ್ಕಿ ಬಿದ್ದನು. ಅಂಬಾಲಿಕೆಯ ಚಿತ್ರ ಪಠವನ್ನು ನೋಡಿದಂದಿನಿಂದ ಅವನ ಮನಸ್ಸೇ ಬೇರೇ ಕಡೆಗೆ ತಿರುಗಿತು. ತನ್ನ ರಾಣೀವಾಸದ ಮುಸಲ್ಮಾನ ಬೇಗಮುಗಳನ್ನು ಕಂಡರೆ ಆಲಸ್ಯವನ್ನು ತೋರ್ಪಡಿಸಲಾರಂಭಿಸಿದನು. ಸುರೆಯನ್ನು ಪಾನಮಾಡಿದಾಗಲಂತೂ ಉನ್ಮತ್ತನಾಗಿ ಜ್ಞಾನರಹಿತನಾಗುತ್ತಿದ್ದನು. ಕೊನೆಗೆ ಮೋಹನಸಿಂಹನ ಹೇಳಿಕೆಯಪ್ರಕಾರ ಅಂಬಾಲಿಕೆಯನ್ನು ತನಗೇ ವಿವಾಹಮಾಡಿಕೊಡಬೇಕೆಂದು ಭಗವತೀದಾಸನಿಗೆ ಆಜ್ಞಾಪಿಸಿದನು.

ರಜಪೂತರು ಉತ್ತಮಜಾತಿಯವರು. ಯುದ್ಧ ಮಾಡಬಲ್ಲರು, ದೇಶಹಿತಕ್ಕಾಗಿ ತಮ್ಮ ಪ್ರಾಣಗಳನ್ನಾದರೂ ಅರ್ಪಿಸಬಲ್ಲರು, -ಆದರೆ, ಅವರು ಅಪಮಾನವನ್ನು ಮಾತ್ರ ಸೈರಿಸಲಾರರು. ಈ ಸಮಾಚಾರವನ್ನು ಕೇಳಿದೊಡನೆಯೇ ಭಗವತೀದಾಸನ ನೇತ್ರಗಳಲ್ಲಿ ದ್ವೇಷಾನಲವು ಪ್ರಕಾಶಿಸಲಾರಂಭವಾಯಿತು; ಹುಬ್ಬು ಗಂಟಿಕ್ಕಿದನು, ಮುಖವು ರೌದ್ರಾಕಾರವನ್ನು ತಾಳಿದುದು, ಶರೀರದಲ್ಲಿ ರೋಮೋದ್ಗಮವಾದುದು, ಅವನ ಹಸ್ತವು ಸಮೀಪದಲ್ಲಿದ್ದ ಕಬ್ಬುನದ ಅಸಿಯನ್ನೆಳೆಯಿತು. ರಾಜನು ಈ ಸಮಾಚಾರವನ್ನು ತಂದ ದೂತನನ್ನು ಸಮಾಪ್ತಿಗೊಳಿಸುವುದರಲ್ಲಿದ್ದನು, ಅಷ್ಟರಲ್ಲಿಯೇ ವಿಕ್ರಮಸಿಂಹನೇ ಮುಂತಾದವರು ಬಂದು ರಾಜನಿಗೆ ಬುದ್ದಿವಾದವನ್ನು ಹೇಳಿ ತಡೆದರು. ಆದರೆ ಭಗವತೀದಾಸನ ಕ್ರೋಧವು ತೃಣಮಾತ್ರವೂ ಕುಂದಲಿಲ್ಲ; ಕ್ಷಣೇಕ್ಷಣೇ ಆಧಿಕ್ಯವನ್ನು ತಳೆಯಲಾರಂಭವಾಯಿತು, ಭಗವತೀವಾಸನಿಗೆ, – ಈ ಹಾಳು ಯವನರಾಜ್ಯ ವೃಕ್ಷದ ಬೇರನ್ನೆ ಕಿತ್ತು ಬಿಸುಟು, ಅವರನ್ನು ಭಾರತ ವರ್ಷದಿಂದಲೇ ಹೊರದೂಡಬೇಕೆಂಬುವಷ್ಟರಮಟ್ಟಿಗೆ ಕೋಪಬಂದಿತು. ಆದರೆ, ರಾಜ ಧರ್ಮದ ಮೇಲೆ ದೃಷ್ಟಿಯನ್ನಿಟ್ಟು ಮುಜಫರನ ದೂತನನ್ನು ಸಂಹರಿಸಲಿಲ್ಲವಾದರೂ ಅವನನ್ನು ಚೆನ್ನಾಗಿ ಬಯ್ದು ಅಪಮಾನಗೊಳಿಸಿ ಕಳುಹಿಸಿದನು.

ಇದಾದ ಕೆಲವು ದಿನಗಳ ಬಳಿಕ ಒಂದು ದಿವಸ ಮಂತ್ರಿಯಾದ ವಿಕ್ರಮ ಸಿಂಹನು ಬಂದು ರಾಜನನ್ನು ಕಂಡು ಮಾತನಾಡಿದನು.

ವಿಕ್ರಮಸಿಂಹ – ಮಹಾರಾಜ! ಆ ವಿಷಯವನ್ನು ಆಗಲೇ ಮರೆತುಬಿಟ್ಟಿರುವಂತೆ ಕಾಣುತ್ತದೆ.

ಭಗವತೀದಾಸ – ಅದಾವುದು, ಅಂತಹ ವಿಷಯ?

ವಿಕ್ರಮಸಿಂಹ – ಮುಜಫರನ ವಿಷಯ.

ಭಗವತೀದಾಸ – ಅದನ್ನೇ? ಅದನ್ನು ಮರೆಯುವುದೆಂದರೇನು? ಅದು ಈಗಲೂ ನನ್ನ ಸ್ಮೃತಿಪಥದಲ್ಲಿರುವುದು. ಅದು ಹಾಗಿರಲಿ, ಈಗ ಅವನ ಸಮಾಚಾರವೇನು?

ವಿಕ್ರಮಸಿಂಹ – ಮಹಾರಾಜ! ತಾವು ಅವನ ದೂತನನ್ನು ತಿರಸ್ಕರಿಸಿದುದರಿಂದ ಕುಪಿತನಾದ ಮುಜಫರನು, ನನ್ನ ಪುತ್ರನಾಗಿದ್ದ ಮೋಹನಸಿಂಹನ ಹೇಳಿಕೆಯ ಪ್ರಕಾರ ನಮ್ಮ ಮೇಲೆ ದಂಡೆತ್ತಿ ಬರುತ್ತಿರುವನು.

ಭಗವತೀದಾಸ – ಇದು ನಿಜವೆ?

ವಿಕ್ರಮಸಿಂಹ – ಅಹುದು, ನನ್ನ ಗುಪ್ತಚರರಲ್ಲೋರ್ವನು ಬಂದು ಹೇಳಿದನು.

ಭಗವತೀದಾಸ – ಮಂತ್ರಿವರ್ಯನೆ! ಅದಕ್ಕೇತಕ್ಕೆ ಚಿಂತಿಸಬೇಕು? ಬಹಳ ಕಾಲದಿಂದಲೂ, ನಮ್ಮ ರಜಪೂತಯೋಧಗಣವು ರಣಸಮುದ್ರದಲ್ಲಿ ಧುಮಿಕಿ ಯವನರ ಎದೆಯ ರುಧಿರವನ್ನು ಹೀರಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ಬಹಳ ಆತುರಪಡುತ್ತಿರುವುದು. ಆ ನೀಚನಾದ ಮುಜಫರನ ಯವನ ಸೈನ್ಯವು ನಮ್ಮ ದುರ್ಗವನ್ನು ಸಮೀಪಿಸಿದುದೇ ಆದರೆ ನಮ್ಮ ಸುಶಿಕ್ಷಿತವಾದ ಸೇನೆಯು ಅದನ್ನು ನಿರ್ಮೂಲಮಾಡಿ ಮುಜಫರನ ಹೆಸರನ್ನು ಪ್ರಪಂಚದಿಂದಲೇ ಅಳಿಸಿ ಬಿಡುವುದರಲ್ಲಿ ಲೇಶಮಾತ್ರವೂ ಸಂದೆಗವಿರಲಾರದು. ಹೀಗಿರುವಲ್ಲಿ ನಾವು ಆ ತುಚ್ಛನಾದ ಯವನನಿಗೆ ಏತಕ್ಕಾಗಿ ಭಯಪಡಬೇಕು? ಅವನು ನಮ್ಮ ಸೈನ್ಯದ ಬಳಿ ಬರಲಿ! ಆಗ ರಾಜಪುತ್ರ ಕನ್ಯೆಯನ್ನು ಹೀನ ಜಾತಿಯವನು ಅಪೇಕ್ಷಿಸುವುದರ ಪರಿಣಾಮವೇನಾಗುವುದೆಂಬುದನ್ನು ಅವನಿಗೆ ಚೆನ್ನಾಗಿ ತಿಳುಹಿಸಿ ಬುದ್ದಿಗಲಿಸುವೆನು.

ವಿಕ್ರಮಸಿಂಹ – ಮಹಾರಾಜ! ಸಾವಧಾನದಿಂದ ಚಿತ್ತೈಸಿ, ಕೋಪೋದ್ರೇಕದಿಂದ ಸಿಕ್ಕಿದಹಾಗೆಲ್ಲ ಪ್ರವರ್ತಿಸುವುದು ಶ್ರೇಯಸ್ಕರವಾದುದಲ್ಲ. ಚೆನ್ನಾಗಿ ಪರ್ಯಾಲೋಚಿಸಿ ನೋಡಿ-ನಮ್ಮ ಸೇನೆಯೆಷ್ಟಿರುವುದು? ಅವರ ಬಲವೆಷ್ಟಿರುವುದು? ಅವರ ಅಗಾಧವಾದ ಸೇನೆಯನ್ನು ಇರಿಸಿದರೆ ನಮ್ಮ ಗತಿಯೇನಾಗುವುದು?

ಭಗವತೀದಾಸ – ವಿಕ್ರಮಸಿಂಹ! ಏನು ಹೇಳುತ್ತಿರುವಿ? ಒಂದೂವರೆ ಸಹಸ್ರ ಸುಶಿಕ್ಷಿತರಾದ ಯೋದ್ಧೃಗಳು ನಮ್ಮ ಆಜ್ಞಾಬದ್ಧರಾಗಿಲ್ಲವೆ?

ವಿಕ್ರಮಸಿಂಹ – ನಮ್ಮ ಬಳಿ ಇರುವವರಾದರೋ ಒಂದೂವರೆಸಹಸ್ರ ಸವಾರರು-ಆದರೆ, ಅವರ ಬಳಿ ಐದುಸಹಸ್ರ ರಾಹುತರಿರುವರಲ್ಲ!

ಭಗವತೀದಾಸ – ಮಂತ್ರಿವರ್ಯನೆ! ಹಾಗಾದರೆ ನಮ್ಮ ಸೈನ್ಯವು ಅವರ ಸೈನ್ಯವನ್ನಿದಿರಿಸಿ ಯುದ್ದ ಮಾಡಲಾರದೆ? ನಮ್ಮ ಸೈನಿಕರ ನರಗಳಲ್ಲಿಯೂ ದುರ್ಬಲತೆಯು ವ್ಯಾಪಿಸಿರುವುದೇನು? ನಮ್ಮವರೆಲ್ಲರೂ ಹೆಂಗಸರಾದರೋ? ನಮ್ಮ ಸೈನಿಕರಲ್ಲಿನ ರಜಪೂತರಕ್ತವು ಇಂಗಿಹೋಯಿತೆ? ನಮ್ಮವರು ತಮ್ಮ ಪೂರ್ವ ಪುರುಷರ ಶೌರ್ಯ, ಸ್ಥೈರ್ಯ, ಸಾಹಸಾದಿ ಸತ್ವಗುಣಗಳನ್ನು ಮರೆತುಬಿಟ್ಟರೆ? ಅವರ ಜ್ಞಾಪಕಶಕ್ತಿಯು ಹಾಳಾಗಿ ಹೋಯಿತೆ? ನಮ್ಮವರು, ಭರತಖಂಡಕ್ಕೆ ರತ್ನ ಪ್ರಾಯವಾದ ರಾಜಸ್ಥಾನದಲ್ಲಿ ಆರ್ಯವೀರದಂಪತಿಗಳಿಗೆ ಜನ್ಮಗ್ರಹಣಮಾಡಲಿಲ್ಲವೆ? ನಮ್ಮವರು ರಜಪೂತಜನನಿಯ ಸ್ತನ್ಯಪಾನವನ್ನು ಮಾಡಲಿಲ್ಲವೇನು? ನಮ್ಮವರೆಲ್ಲರಲ್ಲಿಯೂ ಕ್ಷಾತ್ರಧರ್ಮವು ತಿಲಮಾತ್ರವಾದರೂ ಉಳಿದುಕೊಳ್ಳದೆ ವಿಲುಪ್ತವಾಗಿ ಹೋಯಿತೆ?-ಎಲೈ, ವಿಕ್ರಮಸಿಂಹ! ನಮ್ಮ ರಜಪೂತರ ವೀರ್ಯಾದಿಗುಣಗಳನ್ನು ಹೀಗೆ ತೃಣೀಕರಿಸಿ ಮಾತನಾಡುವುದು ನಿನಗೆ,-ರಾಜಕಾರ್ಯಪ್ರವೀಣನಿಗೆ, ದೇಶಹಿತೈಷಿಗೆ, ದೀರ್ಘದರ್ಶಿಗೆ ಉಚಿತವಾದುದೆ? ಹಾ! ಹಾ!! ಹಾ!!! ಭಾರತೀಯರ ಗತಿಯಿಂತಾದುದು ಅತೀವ ಶೋಚನೀಯ!

ವಿಕ್ರಮಸಿಂಹ – ಮಹಾರಾಜ! ನಮ್ಮವರಲ್ಲಿ ವೀರ್ಯವಿಲ್ಲ ಎಂದು ನಾನು ಹೇಳಲಿಲ್ಲ. ನಮ್ಮವರು ಯುದ್ಧದಲ್ಲಿ ಇತರರೆಲ್ಲರನ್ನೂ ಹೊಡೆದಟ್ಟುವರು. ಸಮರ ಸಮುದ್ರದಲ್ಲಿ ನಮ್ಮ ಸೈನ್ಯದ ತರಂಗಗಳಿಂದ ತಾಡಿತವಾಗಿ ಬದುಕಿಬರುವವರಾರಿವರು? ಆದರೆ ಈಗ ನಾವು ಯುದ್ಧ ಮಾಡಿದರೆ ಅನೇಕ ಸ್ವಾಮಿ ಭಕ್ತರಾದ ರಜಪೂತಯೋಧರ ಪ್ರಾಣಗಳನ್ನು ವ್ಯರ್ಥವಾಗಿ ನಷ್ಟಗೊಳಿಸಬೇಕಾಗುವುದು. ಹಾಗೆ ನಷ್ಟಗೊಳಿಸಿದರೂ ಚಿಂತೆಯಿಲ್ಲ, ನಮಗೇನಾದರೂ ಲಾಭವುಂಟಾಗುವುದೋ…ಎಂದೆಂದುಕೊಂಡರೆ ನಮಗೆ ಅದರಿಂದ ಬರುವ ಪ್ರತಿಫಲವಾವುದೂ ಇಲ್ಲ. ಹೀಗಿರುವಲ್ಲಿ ಅನೇಕ ಪ್ರಾಣಗಳನ್ನು ಅನ್ನೆಯವಾಗಿ ಬಲಿಗೊಡುವುದು ಒಳ್ಳೆಯದಲ್ಲ.

ಭಗವತೀದಾಸ – ಎಲೈ, ಸಚಿವಪುಂಗವನೆ! ನಾನು ಮೊದಲು ದುಡುಕಿ ಮಾತನಾಡಿದುದನ್ನು ಮನ್ನಿಸು. ನೀನು ಹೇಳುವುದೂ ಅಲೋಚನಾರ್ಹವಾದುದು. ಈಗ ನನಗೆ ಈ ಕಷ್ಟದಿಂದ ಪಾರಾಗುವ ವಿಧವಾವುದೂ ತಿಳಿಯುವುದಿಲ್ಲ. ಆದುದರಿಂದ ನೀನೇ ಯೋಚಿಸಿಹೇಳಬೇಕು.

ವಿಕ್ರಮಸಿಂಹ – ರಾಜನೆ! ಇಂತಹ ಸಂದರ್ಭಗಳಲ್ಲಿ ಅನ್ಯರಾಜರ ಸಾಹಯ್ಯವಿಲ್ಲದೆ ಸ್ವತಂತ್ರವಾಗಿ ಪ್ರವರ್ತಿಸುವುದು ಬಹಳ ಅಪಾಯಕರವಾದುದು. ಅದುಕಾರಣ ಈಗ ನಾವು ಜಸಲಮೇರದಧಿಪತಿಯಾದ ಕರ್ಣರಾಯನ ಸಹಾಯ್ಯವನ್ನು ತೆಗೆದುಕೊಳ್ಳುವುದು ಒಳ್ಳೆಯದೆಂದು ತೋರುತ್ತಿದೆ. ಅವರು ನಮ್ಮ ಪಕ್ಷವನ್ನು ವಹಿಸಿದರೆ, ನಿಸ್ಸಂಶಯವಾಗಿಯೂ ನಮಗೇ ಜಯವು ಲಭ್ಯವಾಗುವುದು.

ಭಗವತೀದಾಸ – ಒಳ್ಳೆಯದು, ವಿಕ್ರಮಸಿಂಹ! ನಾಳೆಯೇ ನಾನು, ಪತ್ನಿ ಪುತ್ರಿಯರನ್ನು ಕರೆದುಕೊಂಡು ಸ್ವಲ್ಪ ಸೇನಾಸಮೇತನಾಗಿ ಜಸಲಮೀರಕ್ಕೆ ತೆರಳುವೆನು. ನಾನು ಹಿಂದಿರುಗಿ ಬರುವವರೆಗೂ ನೀನು ಇಲ್ಲಿನ ಕಾರ್ಯಭಾಗಗಳನ್ನು ನೋಡಿಕೊಂಡಿರು.

ವಿಕ್ರಮಸಿಂಹ – ಅಪ್ಪಣೆ

ಭಗವತೀದಾಸ – ಆದರೆ ಈ ವಿಷಯವು ಮಾತ್ರ ಗುಪ್ತವಾಗಿರಲಿ.

ಮೋಹನಸಿಂಹನು ಮುಜಫರನ ಸೇವೆಯಲ್ಲಿ ನಿರತನಾದುದನ್ನು ನಮ್ಮ ಪಾಠಕ ಸದಾಶಯರು ಇಷ್ಟು ಬೇಗಾಗಲೇ ಮರೆತುಬಿಟ್ಟಿರಲಾರರು. ಹಾಗೆ ಯವನರಾಜನ ಚಾಕರಿಯಲ್ಲಿ ನಿಂತಬಳಿಕ ಮೋಹನನ ಹಲವು ಗೂಢಚಾರರನ್ನು ದುರ್ಗಕ್ಕೆ ಕಳುಹಿ, ಅಲ್ಲಿ ನಡೆಯುವ ಸಂಗತಿಗಳೆಲ್ಲವನ್ನೂ ತನಗೆ ತಿಳುಹಿಸಬೇಕೆಂದು ಅಜ್ಞಾಪಿಸಿದ್ದನು.
ಅವರಲ್ಲೋರ್ವನು, ರಾಜಸಚಿವರ ಸಂಭಾಷಣೆಯನ್ನೂ ಮತ್ತು ಅವರ ತೀರ್ಮಾನವನ್ನೂ ಹೇಗೆಯೋ ತಿಳಿದು ಕೊಂಡುಬಂದು ಅದನ್ನು ಮೋಹನನಿಗೆ ಹೇಳಿಬಿಟ್ಟನು. ಇದನ್ನು ಮೋಹನನು ಮುಜಘರನಿಗೆ ತಿಳುಹಿಸಿದನು. ಆಗ ಮುಜಫರನು ಸೇನಾಸಮೇತನಾಗಿ, ಪ್ರಯಾಣ ಸನ್ನದ್ದನಾಗಿದ್ದ ರಾಜಾ ಭಗವತೀದಾಸನನ್ನು ಇದಿರಿಸಿ ಅವನ ಪುತ್ರಿಯನ್ನು ಬಲಾತ್ಕಾರವಾಗಿ ಕರೆದೊಯ್ಯುವೆನೆಂದು ಶಪಥಮಾಡಿಕೊಂಡು ಜಸಲಮೀರದ ಮಾರ್ಗದಲ್ಲಿಯೇ ಪ್ರಯಾಣವನ್ನು ಬೆಳೆಸಿದನು. ಮೋಹನಸಿಂಹನೂ ಅವನನ್ನನುಸರಿಸಿದನೆಂಬುದನ್ನು ಬರೆಯಬೇಕಾದುದರ ಆವಶ್ಯಕವೇ ಇಲ್ಲವು.
* * *

ಐದನೆಯ ಅಧ್ಯಾಯ

ಸಂಜೆಯಾಯಿತು, ಹಾಲುಚೆಲ್ಲದಹಾಗೆ ಬೆಳದಿಂಗಳು ಬಂದಿತು. ಕಳೆಯಾಣ್ಮನಿಂದ ಹೊರಸೂಸುವ ಅಮೃತವಳ್ಳಿಗಳು ಸರ್ವರಿಗೂ ಅತ್ಯುತ್ಸಾಹವನ್ನು ಉಂಟು ಮಾಡಿದುವು.

ಇಂದು ದುರ್ಗದ ಸೈನಿಕರಲ್ಲಿ ದೊಡ್ಡ ಕೋಲಾಹಲವೆದ್ದಿರುವುದು. ಎಲ್ಲರಿಗೂ ಆಶ್ಚರ್ಯದ ಮೇಲಾಶ್ಚರ್ಯ! ಆ ರಾತ್ರಿಯೇ ಪ್ರಯಾಣಮಾಡುವುದಕ್ಕೆ ಸಿದ್ಧರಾಗಿರಬೇಕೆಂದು ವಿಕ್ರಮಸಿಂಹ ಮಂತ್ರಿಪುಂಗವನು ಕಳ್ತಲಾದಮೇಲೆ ಸೈನಿಕರಿಗೆ ತಿಳಿಯಿಸಿದನು. ಆ ಸಮಾಚಾರವು ಒಂದೆರಡು ನಿಮಿಷಗಳಲ್ಲಿಯೇ ಊರಲ್ಲೆಲ್ಲಾ ಪಸರಿಸಿತು. ಅನಂತರ, ಎಲ್ಲಿ ನೋಡಿದರಲ್ಲಿ ಜನಸಮೂಹಗಳೇ ಕಾಣಬರುತ್ತಿದ್ದುವು. ಒಂದೆಡೆಸೇರಿ ಕೌತುಕದಿಂದ ಮಂತ್ರಿಯ ಆಜ್ಞೆಯ ಕಾರಣವನ್ನು ಚರ್ಚಿಸುತ್ತಿರುವವರು ಕೆಲವರು. ಕರ್ತವ್ಯದಮೇಲೆ ಹೋಗಲು ಸಿದ್ಧರಾಗುತ್ತಿರುವ ಸೈನಿಕರು ಕೆಲವರು, ಯುದ್ಧ ಭೂಮಿಯ ನೋಟವನ್ನು ಹೃದಯಂಗಮವಾಗುವಂತೆ ತಮ್ಮ ಜತೆಗಾರರಿಗೆ ತಿಳಿಸುತ್ತಿರುವ ಸೈನಿಕರು ಕೆಲವರು. ಹಿಂದೆ ನಡೆದ ಯುದ್ಧಗಳಲ್ಲಿ ತಾವು ಪ್ರದರ್ಶಿಸಿದ ಧೈರ್ಯ ಶೌರ್ಯಗಳನ್ನು ಜನಗಳಿಗೆ ವಿವರಿಸುತ್ತಿರುವ ಹಳಬರಾದ ಸೈನಿಕರು ಕೆಲವರು. ಮುಂದೆ ನಡೆದ ಯುದ್ಧದಲ್ಲಿ ಎಷ್ಟು ಭಯಂಕರವಾಗಿ ತಮ್ಮ ಶತ್ರಗಳನ್ನು ಹೊಡೆದಟ್ಟುವೆವೆಂದು ತಮ್ಮ ಪರಾಕ್ರಮವನ್ನು ತಾವೇ ಪ್ರಶಂಸಿಸುತ್ತಿರುವ ಸೈನಿಕರು ಹಲವರು. ತಮ್ಮ ಆಯುಧಗಳನ್ನು ತೊಳೆದು ಶುಭ್ರಪಡಿಸುತ್ತಿರುವವರು ಕೆಲವರು, ತಮ್ಮ ಅಶ್ವಗಳನ್ನು ಉಜ್ಜಿ ತೊಳೆಯುತ್ತಿರುವವರು ಕೆಲವರು. ಹಳೆಯ ಸಾಧಕಗಳನ್ನು ಜ್ಞಾಪಿಸಿಕೊಳ್ಳುತ್ತೆ ಅಸಿಗಳನ್ನು ಝಳಪಿಸುತ್ತಿರುವವರು ಹಲವರು. ಅನತಿಕಾಲದಲ್ಲಿಯೇ ಯೋದ್ಧರುಗಳೆಲ್ಲರೂ ಸುಸಜ್ಜಿತರಾಗಿ ಸಾಲುಸಾಲಾಗಿ ನಿಂತು ಮುಂದು ಅಪ್ಪಣೆಯನ್ನು ನೆರವೇರಿಸುವುದಕ್ಕಾಗಿ ಕಾಲನಿರೀಕ್ಷಣೆಮಾಡುತ್ತಿದ್ದರು.

ಊರಿನ ಜನಗಳಲ್ಲಿಯೂ ದೊಡ್ಡ ಗದ್ದಲವೆದ್ದುದು, ಸಮಾಚಾರವನ್ನು ಕೇಳಿದೊಡನೆಯೇ ಎಲ್ಲೆಲ್ಲಿದ್ದವರು ಅಲ್ಲಿಯೇ ನಿಂತುಬಿಟ್ಟರು. ಎಲ್ಲರಲ್ಲಿಯೂ ಆಶ್ಚರ್ಯವು ತಾನಾಗಿ ತಾನೇ ಆಕ್ರಮಿಸಿಕೊಂಡುದು, ಬೀದಿಯಲ್ಲಿ ಆಟವಾಡುತಲಿದ್ದ ಬಾಲಕರೆಲ್ಲರೂ, “ಎಲೋ! ಬನ್ನಿರೋ! ಯುದ್ಧಕ್ಕೆ ಹೋಗುವಂತಿದೆ. ನಾವೂ ಸಹ ಪೊರಮಟ್ಟು ಅರಿಗಳನ್ನು ಹೊಡೆದಟ್ಟುವ!” ಎಂದನ್ನಲಾರಂಭ ಮಾಡಿದರು. ವೃದ್ಧರೆಲ್ಲರೂ, ಆವುದೋ ಒಂದು ಮಹೋತ್ಸವವು ಸಮೀಪಗತವಾಯಿತೆಂದುಕೊಂಡರು. ಧನಾರ್ಥಿಗಳೆಲ್ಲರೂ, ತಾವು ಗಳಿಸಿದ ಸಂಪತ್ತನ್ನು ಭೂಗರ್ಭ ಮಾಡುವುದಕ್ಕೆ ಹೊರಟರು, ಯುವಕರೆಲ್ಲರೂ ಯುದ್ಧಾಪೇಕ್ಷಿಗಳಾಗಿ ಸೇನೆಯ ಹಿಂದೆ ಹೊರಡಲು ಅನುವಾದರು. ವೀರಮಾತೆಯರೆಲ್ಲರೂ ರಾಜನಿಗೆ ಸಾಹಾಯ್ಯ ಮೂಡುವಂತೆ ತಂತಮ್ಮ ಪುತ್ರರನ್ನು ಪ್ರೇರೇಸಿದರು. ವರ್ತಕರೆಲ್ಲರೂ ತಮ್ಮ ವ್ಯಾಪಾರಕ್ಕೆ ಎಲ್ಲಿಯಾದರೂ ಕುಂದುಬಂದಿತೆಂದು ಯೋಚಿಸುತ್ತಾ ಕುಳಿತುಬಿಟ್ಟರು. ಊರಲ್ಲಿ ಎಲ್ಲೆಲ್ಲಿ ನೋಡಿದರೂ ಗಲಭೆಯೇ ಕಂಡು ಬರುತ್ತಿದ್ದಿತು.

ಅರಮನೆಯಲ್ಲೂ ಸೇವಕ ಸೇವಕಿಯರ ಕೂಗಾಟ! ಹುಚು ಸಂಭ್ರಮ!! ರಾಣಿಯು ತಾನೇ ಸ್ವಂತವಾಗಿ ಪ್ರಯಾಣಕ್ಕೆ ಎಲ್ಲವನ್ನೂ ಅಣಿಮಾಡತೊಡಗಿರುವಳು. ಅರಮನೆಯ ಧನವನ್ನೆಲ್ಲ ಒಂದು ಕಡೆ ಹೂಳಿಟ್ಟು ಅದನ್ನು ವಿಕ್ರಮಸಿಂಹನಿಗೆ ತಿಳಿಸಿದುದಾಯ್ತು. ಇಷ್ಟೆಲ್ಲಾ ನಡೆದರೂ ಎಲ್ಲಿಗೆ ಹೋಗುವುದೆಂಬದು ಮಾತ್ರ ರಾಜಾ, ಮಂತ್ರಿ, ಮೋಹನನ ಗುಪ್ತಚರನೋರ್ವ, ಇವರಿಗಲ್ಲದೆ ಮತ್ಯಾವಪ್ರಾಣಿಗೂ ತಿಳಿಯದು. ಆದರೂ ಜನರ ಮಾತ್ರ ತಮ್ಮ ಮನಸ್ಸಿಗೆ ಬಂದಂತೆಲ್ಲಾ ಹೇಳಿಕೊಳ್ಳುತ್ತಿದ್ದರು. ಹೊರಡುವುದಕ್ಕೆ ಮುಂಚಿತವಾಗಿ ಊರು ಮತ್ತು ಅರಮನೆಗಳನ್ನು ಕಾಯುವುದಕ್ಕಾಗಿ ಸ್ವಲ್ಪ ಸೇನೆಯು ವಿಕ್ರಮಸಿಂಹಮಂತ್ರಿಯ ಅಧೀನಮಾಡಲ್ಪಟ್ಟುದು.

ಇಷ್ಟು ಹೊತ್ತಿಗೆ ಸೈನಿಕರು ತಮ್ಮ ತಮ್ಮ ನಾಯಕರ ಅಧೀನದಲ್ಲಿ ರಣಘೋಷವಂಗೈಯುತ್ತ ಅರಮನೆಯ ಮುಂದೆ ಬಂದು ನಿಂತರು. ಯೋಧ್ಯರೆಲ್ಲರೂ ಆಗಸವನ್ನು ಭೇದಿಸುವ ಹಾಗೆ ಧ್ವನಿಮಾಡಿದರು.

“ಜಯ! ಭಗವತೀದಾಸನಿಗೆ ಜಯವಾಗಲಿ!”

ಅನಂತರ ರಾಣಿಯೂ ರಾಯಗುವರಿ ಅಂಬಾಲಿಕೆಯೂ ಅವರವರ ಪಾಲ್ಕಿಗಳಲ್ಲಿ ಕುಳಿತರು. ರಾಜನು ಉತ್ತಮಾಶ್ವವೊಂದನ್ನಡರಿದನು. ಸೈನಿಕರೂ ತಂತಮ್ಮ ಅಶ್ವಗಳ ನ್ನಾರೋಹಿಸಿದರು. ರಣಭೇರಿಯು ಧ್ವನಿತವಾಯ್ತು, ಬಳಿಕ ಇನ್ನೊಂದುತಡವೆ ಸೈನಿಕ ಸೇನಾನಿಗಳೆಲ್ಲರೂ ಇಂತೆಂದು ಉಚ್ಛೈರ್ಘೋಷವನ್ನು ಮಾಡಿದರು.

“ಜಯ! ರಾಜಾ ಭಗವತೀದಾಸನಿಗೆ ಜಯ!!”

ಬಳಿಕ ಸೈನ್ಯವು ರಾಜಾಜ್ಞೆಯಮೇಲೆ ಜಸಲಮೀರವನ್ನು ಕುರಿತು ಹೊರಟಿತು.
* * *

ಆರನೆಯ ಅಧ್ಯಾಯ

ಜಸಲಮೀರದ ಮಾರ್ಗದಲ್ಲಿ ಸ್ವಲ್ಪ ದೂರ ಹೋಗುತ್ತಲೇ, ಮುಂದಿದ್ದ ದುರ್ಗದ ಸೈನಿಕರನ್ನೊಬ್ಬನು ತನ್ನ ಪಕ್ಕದಲ್ಲಿದ್ದ ಸವಾರನನ್ನು ಕುರಿತು, ಎಲೋ! ನೋಡು, ಇನ್ಯಾವುದೋ ಸೈನ್ಯವು ಇತ್ತ ಕಡೆಯೇ ಬರುವಂತಿದೆ! ಎಂದನು, ಆದರೆ ಎರಡನೆಯವನು ಅದನ್ನು ನಂಬಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಯಾವುದೋ ಒಂದು
ದೊಡ್ಡ ಸೈನ್ಯವು ದೂರದಲ್ಲಿ ಕಾಣಬಂದಿತು. ಆಗ ಎಲ್ಲರಿಗೂ ಧೃಡವಾದ ನಂಬುಗೆ ಯುಂಟಾಯಿತು. ಈ ವರ್ತಮಾನವು ಸ್ವಲ್ಪ ಕಾಲದಲ್ಲಿಯೇ ಭಗವತೀದಾಸನಿಗೆ ತಿಳಿಯಿತು. ಭಗವತೀದಾಸನಿಗೆ ಸ್ವಲ್ಪ ಕಷ್ಟಕ್ಕೆ ಬಂದಿತು. ತನ್ನ ಸೈನೃಸಂಚಲನದ ವಿಷಯವು ತನಗೆ ಮತ್ತಾ ವಿಕ್ರಮಸಿಂಹನಿಗೆ ಮಾತ್ರ ಗೊತ್ತಿರುವುದೆಂದು ಅವನಿಗೆ ನಂಬುಗೆಯಿತ್ತು. ಈಗ ಆ ನಂಬುಗೆಯು ಸಡಿಲವಾಯಿತು. ವಿಕ್ರಮಸಿಂಹನೇ ಎಲ್ಲಿಯಾದರೂ ಈ ಗುಪ್ತಸಮಾಚಾರಗಳನ್ನು ಶತ್ರುಗಳಿಗೆ ತಿಳಿಯಿಸಿರಬಹುದೆಂಬ ಯೋಚನೆಯು ಅವನ ಮನದಲ್ಲಿ ಉತ್ಪನ್ನವಾಗಿ ಅವನನ್ನು ಬಹಳವಾಗಿ ನಿಂದಿಸಲಾರಂಭಮಾಡಿದನು. ಕೊನೆಗೆ ಅವನು ವಿಕ್ರಮಸಿಂಹನೇ ದೂಷಿಯೆಂದು ನಿರ್ಧರಿಸಿಬಿಟ್ಟನು. ಆ ಪಾಪಿ-ಮೋಹನನ ಸೇವಕನು ಇವರ ಗುಸಮಾಚಾರವನ್ನು ಭೇದಿಸಿದುದು ಭಗವತೀದಾಸನಿಗೆ ತಿಳಿಯುವುದೆಂತು? ಕೊನೆಗೆ ತನ್ನ ಸೈನಿಕರಿಗೆ ಮುಂದುವರಿಸಬೇಕೆಂದು ಅಪ್ಪಣೆಮಾಡಿದನು. ಏತಕ್ಕೆಂದರೆ ಅವನಿಗೆ ತನ್ನ ಮುಂದೆ ಬರುತಲಿದ್ದ ಸೇನೆಯ ಮುಜಫರನದೇ ಅಹುದೋ ಅಥವಾ ಇನ್ನಾವರಾಜನದೋ-ಎಂಬ ಸಂಶಯವುಂಟಾಯಿತು.

ಸ್ವಲ್ಪ ಹೊತ್ತಿನೊಳಗಾಗಿ ಎರಡು ಬಲಗಳೂ ಸಂಧಿಸಿದುವು. ಇನ್ನೊಂದು ಮುಜಫರನ ಸೇನೆಯೆಂದು ತಿಳಿದಕೂಡಲೇ ಆ ಕತ್ತಲಲ್ಲಿಯೇ ಯುದ್ಧವು ಪ್ರಾರಂಭವಾಯಿತು. ಹೊಡೆದಾಟವು ಮೊದಲಾಯಿತು. ಎರಡು ಕಡೆಗಳ ಸೈನಿಕರೂ ರಣೋತ್ಸಾಹ ವರ್ಧಿತರಾಗಿ ಉನ್ಮಾದಗ್ರಸ್ತರಾಗಿ ಶತ್ರುಸಂಹರಣ ಕಾರ್ಯದಲ್ಲಿ ತೊಡಗಿದರು. ಪುಂಡರೀಕಗಳ ಬೃಂಹಿತ! ಅಶ್ವಗಳ ಹೇಷಾರವ!! ಫಿರಂಗಿಗಳ ಭಯೋತ್ಪಾದಕ ಶಬ್ದ!!! ವಿಜಯಿಗಳ ಕೋಲಾಹಲದ ಲಹರಿಗಳೊಡನೆ ಮರಣ ಮತ್ತು ತೃಷಾಪೀಡಿತರ ಆರ್ತಾಲಾಪಗಳು ನಿಲೀನ! ನಿಮಿಷನಿಮಿಷಕ್ಕೂ ಅಸಂಖ್ಯಾತರಾದ ಯೋದ್ಧೃಗಳು ಮಾರ್ತಾಂಡ ಪುತ್ರನಾಲಯವನ್ನು ಕುರಿತು ತೆರಳಿದರು. ಭೂಪ್ರದೇಶವು ಶೋಣಿತಾಕ್ತವಾಗಿ ಕೆಂಪು ವರ್ಣವನ್ನು ತಳೆದುದು. ಇದನ್ನು ನೋಡಿದವರಿಗೆ ಬೋಧೆಯಾಗುತ್ತಿದ್ದಿತು; ಏನೆಂದರೆ ಶಾಂತಮಯಿಯಾದ ಭೂದೇವಿಯು ಇಂದು ಇಷ್ಟು ರೌದ್ರಾಕಾರವನ್ನು ತಾಳಿರುವುದೇತಕ್ಕೋ? ಎಲ್ಲೆಲ್ಲಿ ದೃಷ್ಟಿ ಪ್ರಸರಣ ಮಾಡಿದರಲ್ಲಿ ಭಯಾನಕ ದೃಶ್ಯ! ಅಂದು ಆಸಮರಾಂಗಣದಲ್ಲಿ ಪಿಶಾಚಿಗಳಿಗೊಂದು ದೊಡ್ಡ ಔತನ!

ಎಷ್ಟಾದರೇನು? ಎಷ್ಟು ಹೃದಯಂಗಮವಾಗಿ ವರ್ಣಿಸಿದರೇನು? ಭಾರತೀಯರು ಮಾತ್ರ ಗೆಲ್ಲಲಿಲ್ಲ. ಅಂದು ನಾನು ರಜಪೂತ ಯೋದ್ದರುಗಳ ಬಿಸಿರಕ್ತವು ಅನ್ಯಾಯವಾಯಿತು. ಜಯಲಕ್ಷ್ಮಿಯಾದರೂ ಮುಜಫರನನ್ನೆ ಒಲಿದಳು ಭಗವತೀದಾಸನಾದರೋ ಅಳಿದುಳಿದವರೊಡನೆ ಜಸಲಮೀರಕ್ಕೆ ಪಲಾಯನಮಾಡಿದನು.

ಪಾಠಕರೆ! ಎಲ್ಲರೂ ಮರೆತಂತಿದೆ. ನಮ್ಮ ಕಥಾನಾಯಿಕೆಯ ಗತಿ ಯೇನಾದುದೆಂದು ವಿಚಾರಿಸಬೇಕಾದುದು ನಮ್ಮ ಕರ್ತವ್ಯವಲ್ಲವೆ?
* * *

ಯಾವಾಗ ಹಿಂದೂ ಯವನರ ಯುದ್ಧವು ಆರಂಭವಾಯಿತೋ ಆಗ ಅಂಬಾಲಿಕೆಗೆ ಅತ್ಯಂತಭಯವುಂಟಾಯಿತು. ಅದು ಕಾರಣ ಆಕೆಯು ತನ್ನ ಸಖಿಯನ್ನು ಕೂಗಿದಳು. ಆಗಲೂ ನಿಶ್ಯಬ್ಬ, ಸಖಿಯರಾರೂ ರಾಜಪುತ್ರಿಯ ಬಳಿ ಬರಲಿಲ್ಲ. ಇದು ಅಂಬಾಲಿಕೆಯ ಭಯವನ್ನು ಇಮ್ಮಡಿಮಾಡಿತು. ಆಗ ಪಲ್ಲಕ್ಕಿಯಹೊರಗಡೆ ಯಾರೋ ಗಟ್ಟಿಯಾಗಿ ನಕ್ಕಂತಾಯಿತು. ಅಂಬಾಲಿಕೆಯು ಪಾಲ್ಕಿಯ ಫರದೆಯನ್ನು ತೆರೆದಳು. ಆಗ ಪಲ್ಲಕ್ಕಿಯ ಬಳಿ ಒಂದು ವ್ಯಕ್ತಿಯು ಬಂದು ನಿಂತಿತು. ಆ ವ್ಯಕ್ತಿಯು ಪಾಠಕರಿಗೆ ಪೂರ್ವಪರಿಚಿತನಾದ, ಮಂತ್ರಿಸುತ `ಮೋಹನಸಿಂಹ’

ಮೋಹನಸಿಂಹನು ಕಿಲಕಿಲನೆ ನಕ್ಕನು. ಆ ನಗುವು ಅಂಬಾಲಿಕೆಯ ಹೃದಯವನ್ನು ಬೇಧಿಸಿಕೊಂಡು ಹೋಯಿತು. ತರುವಾಯ ಮೋಹನನು, “ರಾಯಗುವರಿ! ಹೊರಗೆ ನೋಡು. ಹಿಂದೂ ಮುಸಲ್ಮಾನರಿಗೆ ಅತಿಘೋರವಾದ ಯುದ್ಧವು ನಡೆಯುತಲಿದೆ. ಇನ್ನೊಂದು ನಿಮಿಷದಲ್ಲಿ ನಿನ್ನ ತಂದೆಯ ಸೇನೆಯು, ಸಾಗರದಲ್ಲಿ ಸೇರಿಹೋಗುವ
ನದಿಯ ತರಂಗಗಳಂತೆ, ಯವನರ ಸೇನಾಸಮುದ್ರದಲ್ಲಿ ಲೀನವಾಗಿಹೋಗುವುದು”
ಎಂದನು.

ಅಂಬಾಲಿಕೆಯು (ಆಶ್ಚರ್ಯಚಕಿತಳಾಗಿ) ಇದು ನಿಜವೆ?

ಮೋಹನ – ನಿಜ, ಅಂಬಾಲಿಕೆ! ಅದಕ್ಕೆ ಕಾರಣಕರ್ತರಾರೆಂದು ಗೊತ್ತೋ?

ಅಂಬಾಲಿಕೆ-ಗೊತ್ತು ಅದರ ಕಾರಣಕರ್ತನು ನೀನೇ

ಮೋಹನಸಿಂಹ – ನೋಡು, ಅಂಬಾಲಿಕೆ! ಹಿಂದೆ ನನ್ನನ್ನು ನೀಚನೆಂದು ಸಂಬೋಧಿಸಿ ತಿರಸ್ಕರಿಸಿ ಬಿಟ್ಟಿಯಲ್ಲ! ಹಾಗೆ ತಿರಸ್ಕರಿಸಿದುದು ನಿನ್ನ ತಪ್ಪೇನೂ ಅಲ್ಲ, ಏತಕ್ಕೆಂದರೆ
ಆಗ ನಿನಗೆ ನನ್ನ ಪೌರುಷ ಸಾಮರ್ಥ್ಯಗಳು ತಿಳಿದಿರಲಿಲ್ಲ. ರಾಜಕುಮಾರಿ! ಹೊರಗೆ
ನೋಡು, ಅಸಂಖ್ಯಾತಮುಸಲರು ವೀರಾವೇಶದಿಂದ, ಮೃಗೀಕುಲಗಳಂತೆ ಓಡಿಹೋಗುವ ನಿನ್ನ ಪಿತನ ಸೈನಿಕರನ್ನು ಸಂಹರಿಸುತ್ತಿರುವರು. ಚೆನ್ನಾಗಿ ಪರ್ಯಾಲೋಚಿಸಿ ನೋಡು, ಈಗಲಾದರೂ ನೀನು ನನ್ನನ್ನು ವಿವಾಹವಾಗುವುದಕ್ಕೆ ಸಮ್ಮತಿಸಿದರೆ ನಿನ್ನ ಹಿಂದಿನ ಅಪರಾಧಗಳನ್ನೆಲ್ಲಾ ಮನ್ನಿಸಿಬಿಡುವೆನು. ಅಷ್ಟೇ ಅಲ್ಲ, ತಂತ್ರಪರಂಪರೆಯ ಸಹಾಯದಿಂದ, ಈಗ ಯುದ್ದ ಮಾಡುತಿರುವ ಯವನರನ್ನೆಲ್ಲಾ ಓಡಿಸಿಬಿಡುವೆನು. ಅನಂತರ ನಾವಿಬ್ಬರೂ ಈ ಭೂತಳದಲ್ಲೇ ನಂದನವನವೊಂದನ್ನು ಕಲ್ಪಿಸಿಕೊಂಡು ಸುಖಿಸಿ ಬಿಡೋಣ. ರಾಯಗುವರಿ! ಒಂದಬಾರಿಯಾದರೂ ನಿನ್ನ ಮುದ್ದು ಮುಖಕಮಲವನ್ನು ಚುಂಬಿಸುವುದಕ್ಕೆ…. (ಎಂದು ರಾಜಪುತ್ರಿಯನ್ನು ಸಮೀಪಿಸಿ,) ಏನು ಹೇಳುವಿ? ಕಾಲವಾದರೋ ಮೀರಿಹೋಗುತ್ತಿರುವುದು.

ಅಂಬಾಲಿಕೆ – (ರೋಷಾರುಣನೇತ್ರಳಾಗಿ) ಎಲೊಮುಸಲರ ಪಾದಧೂಳಿಯನ್ನು ಪರಿಗ್ರಹಣವೂಡಿದ ನರಪಶುವೆ- ಏತಕ್ಕೆ ? ಪಶುವಿಗಿಂತಲೂ ಹೀನನಾದವನೆ! ಏನು ಬೊಗಳುತ್ತಿರುವಿ! ಬೇಗನೆ ನನ್ನಿ ದಿರಿನಿಂದ ತೊಲಗಿ ಹೋಗು.

ಮೋಹನ – ಹಾಗಾದರೆ ನೀನೊಪ್ಪುವುದಿಲ್ಲವಷ್ಟೆ?

ಅಂಬಾಲಿಕೆ – (ನಿಶ್ಚಲಧ್ವನಿಯಿಂದ) ಇಲ್ಲ. ಇಲ್ಲ. ಇಲ್ಲ.

ಮುಂದೆ ಬಂದಿದ್ದವನೇ ಹಿಂದಕ್ಕೆ ಸರಿದು ಮೊಹನನು ಕರ್ಕಶಧ್ವನಿಯಿಂದೆ, ‘ಗಫೂರ’ ಎಂದು ಕೂಗಿದನು. ಒಡನೆಯೇ ಒಬ್ಬ ಸ್ಕೂಲಕಾಯನಾದ, ದಾಡಿಮೀಶೆಗಳಿಂದ ಕೂಡಿದ ಮುಸಲನು ಮೋಹನನಿದಿರಿಗೆ ಬಂದು ನಿಂತನು. ಮೋಹನನು, “ಗಫೂರಖಾನ್! ಜೋಕೆಯಿಂದ ನೋಡಿಕೊ, ಈ ರಮಣಿಯನ್ನೂ ಇನ್ನೊಂದು ಪಲ್ಲಕ್ಕಿಯಲ್ಲಿರುವ ರಮಣಿಯನ್ನೂ ನವಾಬರ ಶಿಬಿರಕ್ಕೆ ಕರೆದೊಯ್ಯ ಬೇಕು, ಎಂದನು.

ಈಗಲೇ?

ಅಹುದು, -ಈ ರಾತ್ರಿಯೇ….ಈ ಕ್ಷಣವೇ.

ಅಪ್ಪಣೆ. ಹುಜೂರ್.

ತರುವಾಯ ಮೊಹನನು ಅಲ್ಲಿ ನಿಲ್ಲಲಿಲ್ಲ. ಎಲ್ಲಿಗೋ ಹೊರಟು ಹೋದನು.
* * *

ಏಳನೆಯ ಅಧ್ಯಾಯ
(ಉಪಸಂಹಾರವು)

ರಾಣಿಯೂ ಮಗಳೂ ಮುಜಫರನ ಬಂದಿಗಳಾದರು. ಮುಜಫರನ ಸಂತೋಷಕ್ಕಂತೂ ಪಾರವೇ ಇಲ್ಲ.

ಒಂದುದಿವಸ ಮುಜಫರನು ಸುರೆಯನ್ನು ಕುಡಿದು ಉನ್ಮತ್ತನಾಗಿ, ರಾಯಕುವರಿಯಮೇಲೆ ಅತ್ಯಾಚಾರವನ್ನು ಮಾಡಲುದ್ದೇಶಿಸಿ ಬಂದಿಗಳ ಮನೆಯನ್ನು ಹೊಕ್ಕನು. ಅವನು ಅಂಬಾಲಿಕೆಯ ಮಾನವನ್ನಪಹರಿಸಲುದ್ಯುಕ್ತನಾಗಲು, ಆಗ ಅವಳು ತನ್ನ ಮಡಿಲಿನಿಂದ ಚೂರಿಯೊಂದನ್ನು ತೆಗೆದು ಅತ್ಮಹತ್ಯವನ್ನು ಮಾಡಿಕೊಂಡಳು. ಆಕೆಯ ಸುಲಲಿತವಾದಾದೇಹವೃಕ್ಷವು ಕಡಿದು ಭೂಚುಂಬನ ಮಾಡಿದುದು. ಅಂಬಾಲಿಕೆಯಾದರೋ ಪರಲೋಕದ ಅನಂತ ಸುಖಧಾಮಕ್ಕೆ ಹೊರಟು ಹೋದಳು. ರಾಣಿಯಾದರೋ ಮುಜಫರನ ಬಳಿ ಇನ್ನೂ ಬಂದಿ!

ಕೊನೆಗೆ ರಾಜಾ ಭಗವತೀದಾಸನು ರಾಯಕರ್ಣನ ಸಾಹಾಯ್ಯದಿಂದ ಮುಜ ಫರನನ್ನು ಅವನ ಸೇನೆಯೊಡನೆ ಕೊಂದು ತನ್ನ ರಾಣಿಯನ್ನು ಬಿಡಿಸಿಕೊಂಡನು. ಮಗಳು ಸತ್ತ ಸಮಾಚಾರವನ್ನು ಕೇಳಿದೊಡನೆಯೇ ಮರ್ಛೆಹೋದನು. ಸ್ವಲ್ಪಕಾಲದಮೇಲೆ ವಿಚಾರಿಸಲು ಆತನು ಪುನರಪಿ ದುರ್ಗದಲ್ಲಿ ರಾಜ್ಯಭಾರಮಾಡುತಿದ್ದನೆಂದು ತಿಳಿಯಿತು.

ಇದಾದ ಹತ್ತು ದಿನಗಳಮೇಲೆ ಬೆಸ್ತರವನೊಬ್ಬನು ಒಂದುಶವವನ್ನು ತಂದನು. ಶವವು ಅಪರಿಚಿತನದೇನೂ ಆಗಿರಲಿಲ್ಲ. ರಾಜನೇ ಮುಂತಾದವರೆಲ್ಲರೂ ಅದನ್ನು ಮೋಹನನ ಶವವೆಂದು ನಿರ್ಧರಿಸಿದರು. ಆಗಲೂ ಸಹ ವಿಕ್ರಮಸಿಂಹನ ಕಂಗಳಿಂದ ಒಂದುತೊಟ್ಟು ನೀರೂಸಹ ಬಾರಲಿಲ್ಲ. ಇದಲ್ಲವೆ ರಜಪೂತರ ಸ್ಥೈರ್ಯ! ಕೊನೆಗೆ ವಿಕ್ರಮಸಿಂಹನು ನಿರ್ದೋಷಿಯೆಂಬುದು ವ್ಯಕ್ತವಾಯಿತು.

ತರುವಾಯ ರಾಜಮಂತ್ರಿಗಳು ಪ್ರಜೆಗಳನ್ನು ಚಿರಕಾಲ ಬಹಳ ಚೆನ್ನಾಗಿ ಪರಿಪಾಲಿಸಿದರು. ಆದರೆ ಅವರು ಅಂಬಾಲಿಕೆಯ ವಿಷಯವು ಜ್ಞಾಪಕಬಂದಾಗಲೆಲ್ಲಾ ಬಹಳ ದುಃಖಿತರಾಗುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್