ಅಥವಾ
ವಿಚಿತ್ರಾ ಕಾರಾಸ್ಥಾನ
೧ ಇದ್ದ ಮೂವರಲ್ಲಿ ಕದ್ದವರಾರು
“ರವಿಕಾಣದುದಂ ಕವಿಕಾಬ್ಬ೦”
ಮೊನ್ನೆ ಯಾರೋ ಹೇಳುತ್ತಿದ್ದರು, “ಶಾಸ್ತ್ರಜ್ಞರು ಹೆಚ್ಚು ಹೆಚ್ಚು ಕುಶಲಶನದಿಂದ ಧನವನ್ನು ರಕ್ಷಿಸುವ ಉಪಾಯವನ್ನು ಕಂಡು ಹಿಡಿದರೆ, ಕಳ್ಳರು ಅದಕ್ಕೂ ಹೆಚ್ಚಿನ ಕುಶಲತನದಿಂದ ಅದನ್ನು ಅಪಹರಿಸುವ ಉಪಾಯವನ್ನು ಕಂಡು ಹಿಡಿಯುವರು,” ಎಂದು. ಅದರ ಸತ್ಯತೆಯ ಈ ದಿನ ‘ಜಯಲಕ್ಷ್ಮ್ಮೀ’ ಬ್ಯಾಂಕಿನಲ್ಲಿ ಕರತಲಾಮಲಕವಾಗಿದೆ. ಇಲ್ಲಯ ತಿಜೂರಿಯ (Safe) ವೈಚಿತ್ರ್ಯವನ್ನು ವರ್ಣಿಸಲಳವಲ್ಲ! ಇದರ ಮುಂಭಾಗದಲ್ಲಿ ಅಕ್ಷರಗಳ ಚಕ್ರವೊಂದು ಕಾಣಬರುತ್ತಿತ್ತು. ಈ ಚಕ್ರದಕಲ್ಲಿಯ ಪ್ರತಿಯೊಂದು ಅಕ್ಷರವೂ ತಿರುಗುವಂತಿದ್ದು, ಬೇಕಾದ ಶಬ್ದವನ್ನು ಅದರಲ್ಲಿ ಜೋಡಿಸ ಬರುತ್ತಿತ್ತು. ಬ್ಯಾಂಕನ್ನು ಮುಚ್ಚುವ ಕಾಲದಲ್ಲಿ ಒ೦ದು ಸಂಕೇತದ ಶಬ್ದವನ್ನು ಮ್ಯಾನೇಜರನೂ, ಸರಾಫನೂ [ಕ್ಯಾಶಿಯರನೂ] ತಮ್ಮ ಪುಸ್ತಕದಲ್ಲಿ ಟಿಪ್ಪಣಿ ಮಾಡಿ, ಚಕ್ರದಲ್ಲಿಯ ಅಕ್ಷರಗಳನ್ನು ತಿರುಗಿಬಿಡುತ್ತಿದ್ದರು. ಆನಂತರ ಅವುಗಳ ಸ್ಥಾನವನ್ನು ಬದಲಿಸಲು ಕೀಲಿಯು ಗಟ್ಟಿಯಾಗಿ ಬೀಳುತ್ತಿತ್ತು. ಗೊತ್ತು ಮಾಡಿದ ಶಬ್ದಯೋಜನೆಯನ್ನು ಪುನಃ ಕೂಡಿಸಲು ಬಾಗಿಲು ತೆರೆಯುತ್ತಿತು. ಇಂತಹ ವಿಚಿತ್ರ ತಿಜೂರಿಯಿ೦ದ ಈ ದಿನ ೫೮,೦೦೦/- ರೂ. ಗಳು ಕಳವಾಗಿವೆ!!
ಮ್ಯಾನೇಜರನ ದುಷ್ಕೃತ್ಯವೆಂದು ಸರಾಫನೂ, ಸರಾಫನ ದುಷ್ಕೃತ್ಯವೆಂದು ಮ್ಯಾನೇಜರನೂ ಪರಸ್ಪರರು ಸಂಶಯಗ್ರಸ್ತರಾಗಿದ್ದರು. ಕೊಟ್ಟಕೊನೆಗೆ ಮ್ಯಾನೇಜರನು ಅಧಿಕಾರಯುಕ್ತವಾಣಿಯಿ೦ದ ಎಲಾ ಭ್ರಷ್ಟಾ, ಇನ್ನಾದರೂ ನಿನ್ನ ತಪ್ಪನ್ನು ಒಪ್ಪಿಕೋ. ಆದದ್ದಾಯಿತು. ತೆಗೆದುಕೊ೦ಡ ಹಣವನ್ನು ತಿರುಗಿ ಕೊಡು; ಎ೦ದರೆ ನಿನಗಾವ ಕೇಡೂ ಬಾರದು? ಎಂದನು. ಆಗ ಸರಾಫನು ಕೆಣಕಿದ ಕಾಳಸರ್ಪನ೦ತೆ “ರಾಯರೇ, ಈ ವಿದ್ಯವನ್ನೆಲ್ಲಿ ಕಲಿತಿರಿ? ನೀವು ಹಣವನ್ನು ಎತ್ತಿ ಹಾಕಿ ನನ್ನ ಮೇಲೆ ತಪ್ಪುಹೊರಿಸುವಿರಾ?” ಎ೦ದನು. ಇನ್ನೇನು? ಗೊತ್ತೇಯಿದೆಯಲ್ಲ! ಬಡವನ ಸಿಟ್ಟು ದವಡೆಗೆ ಮೂಲ!
ಪೊಲೀಸ್ ಇನ್ಸಪೆಕ್ಟರ್’ರು ಬ೦ದರು. ಯಾವಾಗಲೂ ದೊಡ್ಡ ದೊಡ್ಡವರ ಮನಸ್ಸು ಒಂದೇ ನೋಡಿರಿ! ಇನ್‌ಸ್ಪೆಕ್ಟರರು ಮ್ಯಾನೇಜರರ ಮಾತು ದಿಟವೆಂದರು. ಆಯಿತು. ಸರಾಫನಿಗೆ ಕಾರಾಗ್ರಹ ವಾಸವಾಯಿತು. ಪೋಲೀಸರ ಕೆಲಸ, ತಪ್ಪು ಮಾಡಿದವರು ಯಾರಾದರೇನು? ಒಟ್ಟಿನ ಮೇಲೆ ಒಬ್ಬನಿಗೆ ಶಿಕ್ಷೆಯಾದರೆ ಆಯಿತು.
ಮ್ಯಾನೇಜರನ ಹೆಸರು ಗು೦ಡೇರಾಯ; ಕ್ಯಾಶಿಯರನ ಹೆಸರು ರಘುನಾಧರಾಯ. ಮೊದಲಿನಿಂದಲೂ ಪರಸ್ಪರರಲ್ಲಿ ಪ್ರೀತಿಯೂ, ನಂಬಿಕೆಯೂ ದೃಢವಾಗಿದ್ದವು. ಈ ಆಕಸ್ಮಿಕ ಪ್ರಸಂಗದಲ್ಲಿ ಇಬ್ಬರೂ ಭಯಬ್ರಾ೦ತರಾಗಿದ್ದರು.
ಮೊದಲೇ ತಿಳಿಸಲ್ಪಟ್ಟಂತೆ ಪತ್ರೇದಾರರಲ್ಲಿ ಶಿರೋಮಣಿಯಾದ ಭೀಮಸಿಂಗನು ಬ೦ದನು. ಯಾರ ಮೋರೆಯ ಮೇಲೂ ಕಳೆಯಿರಲಿಲ್ಲ. ಇನ್ಸೆಪೆಕ್ಟರ್ ಸಾಹೇಬರು ಎಲ್ಲವನ್ನೂ ವಿವರಿಸಿದರು. ತಾವು ಮಾಡಿದುದೆಲ್ಲವೂ ವಿಹಿತವೇ ಎಂದು ಪತ್ತೇದಾರನು ಹೇಳಿದನು. ಆಗ ಸಾಹೇಬರಿಗಾದ ಆನಂದವು ಇಂದ್ರನಿಗೆಂದೂ ಆಗಲಿಕ್ಕಿಲ್ಲ!
ಭೀಮಸಿ೦ಗನು ಅತ್ತಿತ್ತ ನೋಡಿದನು. ಚ೦ಚಲೆಯ ಮುಖವು ಗಾಬರಿಯಿಂದ ಬಾಡಿಹೋಗಿತ್ತು. ಚ೦ಚಲೆಯು ಗುಂಡೇರಾಯನ ಪ್ರೀತಿಯ ಹೆಂಡತಿಯು. ಅವಳ ಮಗಳೂ ಎದೆಗುಂದಿದ್ದಳು. ಅವಳ ಹೆಸರು ಇಂದುಮತಿ. ಇದರಿಂದ ಮ್ಯಾನೇಜರನೇ ತಪ್ಪುಗಾರನೆಂದು ಭೀಮಸಿ೦ಗನ ಮನಸ್ಸಿಗೆ ಹೊಳೆದರೂ, ಮೊದಲಿನಿಂದಲೂ ಅವನನ್ನು ಬಲ್ಲವನಾದ್ದರಿಂದ ಭ್ರಾ೦ತಚಿತ್ತನಾದನು.
ಅನಂತರ ರಘುನಾಥರಾಯನೊಡನೆ ಬ೦ದೀವಾಸದ ಕಡೆಗೆ ಹರ್ಷದಿಂದ ಇನ್ಸಸ್ಪೆಕ್ಟರರು ನಡೆದರು. ಭೀಮಸಿಂಗನು ಮ್ಲಾನವದನನಾಗಿ ತಿಜೂರಿಯ ಬಳಿಯಲ್ಲಿಯೇ ಕುಳಿತನು. ಇವನ ವಿಚಾರಕ್ಕೆ ಬೀಗದ ಮೇಲಿನ ಒಂದು ಗೀಜಿನ (Scratch) ಗರುತುಮೂಲವಾಗಿತ್ತು. ಅದು ತೀರ ಹೊಸದೆಂದು ಸ್ಪಷ್ಟವಾಗಿ ಕಾಣುತ್ತಿತ್ತು. ಇಂತಹ ಗುರತು ಬೀಳಲು ಕಾರಣನೇನೆಂದು ನಮ್ಮ ಪತ್ತೇದಾರನು ಚಿ೦ತಿಸಿದನು. ಬೀಗವನ್ನು ಕೈಯಿಂದ ತೆಗೆಯುವಾಗ ಕೈ ಜಾರಿದರೆ ಅಂತಹ ಗೀಜು ಉಂಟಾಗುವದು ಅಶಕ್ಯವಾಗಿತ್ತು. ಒ೦ದು ವೇಳೆ ಕುಡುಕ (drunkard) ನಾದ ಮನುಷ್ಯನು ಸ್ಮೃತಿಯಿಲ್ಲದ ವೇಳೆಯಲ್ಲಿ ಬೀಗವನ್ನು ಒತ್ತಾಯದಿಂದ ತೆಗೆಯಲೆತ್ನಿಸಿದರೆ ಹೀಗಾಗುವ ಸಂಭವವಿತ್ಕು; ಆದರೆ ಗು೦ಡೇರಾಯನೇ ಆಗಲಿ ಅಥವಾ ರಘುನಾಥರಾಯನಾಗಲಿ ಅಂತವರಲ್ಲವೆಂಬದು ಭೀಮಸಿಂಗನಿಗೆ ಗೊತ್ತಿತ್ತು. ಹಾಗಾದರೆ ಇದರ ಮರ್ಮವೇನು? ಅದರ ಮರ್ಮವು ಭೀಮಸಿಂಗನಿಗೆ ಹೊಳೆಯಲು ಬಹಳ ಕಾಲ ಹಿಡಿಯಲಿಲ್ಲ. ಕೂಡಲೇ ಅವನು ಅದರ ಪ್ರಯೋಗವನ್ನು ಮಾಡಿನೋಡಲು ಮನೆಗೆ ಹೋದನು.
ನಮ್ಮ ಪತ್ತೇದಾರನ ಮನೆಯ ದಿವಾಣಖಾನೆಯಲ್ಲಿಯೂ ಸಾಧಾರಣ ಪ್ರತಿಯ ಒಂದು ತಿಜೂರಿಯಿತ್ತು. ತಾನು ಅದರ ಬೀಗವನ್ನು ತೆಗೆಯಲೆತ್ತಿಸುವಂತೆಯೂ, ಆಗ ತನ್ನ ಕೈಯನ್ನು ಒತ್ತಾಯದಿಂದ ತನ್ನ ಆಳುಮಗನು ಎಳೆಯಬೇಕೆಂದೂ ಗೊತ್ತು ಮಾಡಿದನು. ಪ್ರಯೋಗವೇನೋ ಸರಿಹೋಯಿತು; ಅಂತಹ ಗೆರೆಯು ಇಲ್ಲಿಯೂ ಮೂಡಿತು; ಆದರೆ ಬ್ಯಾಂಕಿನ ತಿಜೂರಿಯಲ್ಲಿನ
ಗೆರೆಯು ಆಗ್ನೇಯದ ಕಡೆಗೂ, ಇಲ್ಲಿಯ ಗೆರೆಯು ನೈಋತ್ಯದ ಕಡೆಗೂ ಹೋಗಿತ್ತು.
ಇದು ಭೀಮಸಿ೦ಗನಿಗೆ ಮಹತ್ವವೆನಿಸಲಿಲ್ಲ. ಒಟ್ಟಿನಲ್ಲಿ ಅವನು ತರ್ಕಿಸಿದ್ದೇನ೦ದರೆ,”ಕಳವನ್ನು ಮಾಡಿದುದು ಒಬ್ಬ ವ್ಯಕ್ತಿಯ ಸಾಹಸವಲ್ಲ; ಆಗ ಇಬ್ಬರಿದ್ದರು. ಒಬ್ಬನು ಕೀಲಿಯನ್ನು ತೆಗೆಯುವಾಗ, ಮತ್ತೊಬ್ಬನು ಬೇಡವೆಂದು ಬಲವಾಗಿ ಕೈಯನ್ನು ಎಳೆದಿರಬೇಕು. ಹೀಗೆ ಒಬ್ಬನ ಅಭಿಪ್ರಾಯವು ಮತ್ತೊಬ್ಬನ ಅಭಿಪ್ರಾಯಕ್ಕೆ ವಿರುದ್ಧವಾಗಿರಬೇಕು. ಗೆರೆಯು ನೈಋತ್ಯದ ಕಡೆಗೆ
ತಿರುಗಿರಬೇಕಾದರೆ ಆ ಎರಡನೆಯ ವ್ಯಕ್ತಿಯು ಎಡಭಾಗದಲ್ಲಿ ನಿಂತಿರಬೇಕಾಗಿತ್ತು; ಆದರೆ ಅದೀಗ ಆಗ್ನೇಯಕ್ಕಿದೆ. ಇದರಿಂದ ಆ ಎರಡನೆಯ ವ್ಯಕ್ತಿಯು ಬಲಭಾಗದಲ್ಲಿದ್ದನೆಂಬುವದು ಸ್ಪಷ್ಟವಾದ ಮಾತು.
“ಹಾಗಾದರೆ ಆ ಕಳ್ಳನು ತನ್ನ ಪ್ರತಿಕೂಲನನ್ನೇಕೆ ಕರೆತಂದನು? ಇದರಿಂದ ಅವನು ಮೂರ್‍ಖನೆಂದು ತೋರುವದು; ಆದರೆ ಇದು ಸುಳ್ಳು; ಕಳ್ಳನು ಕೀಲಿಯನ್ನು ತೆಗೆಯುವಾಗ ಆ ಎರಡನೆಯ ವ್ಯಕ್ತಿಯು ಗುಪ್ತರೀತಿಯಿಂದ ಅಲ್ಲಿಗೆ ಬ೦ದಿರಬಹುದು! ಬ೦ದವನು ಆಟವನ್ನು ನೋಡುತ್ತ ನಿಲ್ಲದೆ, ಕೂಡಲೇ ಕಳ್ಳನ ಕೈಯಿಂದ ಬೀಗದ ಕೈಯನ್ನು ಕಸಿದುಕೊ೦ಡಿರಬೇಕು! ಇದರಿಂದ ನೋಡಲು, ಎರಡನೆಯ ವ್ಯಕ್ತಿಯು ಹೊರಗಿನಿಂದ ಗುಪ್ತವಾಗಿ ಬರುವದು ಅಶಕ್ಯವೆಂದು ಮನಗಾಣುವದು. ಏಕೆಂದರೆ ಬ೦ದ ಕೂಡಲೆ, ಆ ವ್ಯಕ್ತಿಯು ಕಳ್ಳನ ಎಡಭಾಗದಲ್ಲಿ ನಿಂತು ಅವನು ಕೈಯನ್ನು ಸೆಳೆಯಬೇಕಾಗಿತ್ತು; ಕಳ್ಳನ ಬಲಗಡೆಯಲ್ಲಿ ಗೋಡೆಯು ಇದ್ದುದರಿಂದ, ಬಹಳ ಸ೦ಕೋಚವಾಗಿ ನಿಲ್ಲುವಷ್ಟು ಮಾತ್ರ ಸ್ಥಳವಿತ್ತು. ಇದರಿಂದ ನೋಡಲು ಕಳ್ಳನಿಗೆ ಪರಿಚಿತಿಯುಳ್ಳ ಒ೦ದು ವ್ಯಕ್ತಿಯು ಅವನೊಡನೆ ಬ೦ದು, ಅವನ ಬಲಭಾಗದಲ್ಲಿ ನಿಂತು, ಕೀಲಿಯನ್ನು ತೆಗೆಯುವ ಕಾಲದಲ್ಲಿ ಪ್ರತಿಬ೦ಧಕವನ್ನುಂಟು ಮಾಡಿರಬೇಕು. ಆಗ ಕಳ್ಳನು ಅದಾವ ಉಪಾಯದಿ೦ದಲೋ ಆ ವ್ಯಕ್ತಿಯನ್ನು ಸಮಾಧಾನಗೊಳಿಸಿರಬೇಕು. ಇಲ್ಲದಿದ್ದರೆ ಇಬ್ಬರಿಗೂ ಮನಸ್ತಾಪವಾಗಿ ಕಾವಲುಗಾರರಿಗೂ, ಅಟ್ಟದ ಮೇಲಿರುವ ಗುಂಡೇ ರಾಯರಿಗೂ ಎಚ್ಚರವಾಗುವ ಸಂಭವವಿತ್ತು!
“ಕಳ್ಳನೊಡನೆ ವ್ಯಕ್ತಿಯು ಬಂದುದರಿಂದ ಮೊದಲಿನಲ್ಲಿ ಇಬ್ಬರ ಅಭಿಪ್ರಾಯವೂ ಒಂದೇ ಆಗಿರಬೇಕು. ಹಾಗಾದರೆ ಅರಕ್ಷಣದಲ್ಲಿ ಎರಡನೆಯ ವ್ಯಕ್ತಿಯ ಮನವು ಬದಲಾಗಿ ಪ್ರತಿಕೂಲವಾದುದೇಕೆ? ಬ್ಯಾ೦ಕಿನಲ್ಲಿಯ ಹಣವನ್ನು ಎತ್ತಿ ಹಾಕಿದರೆ ಈ ವ್ಯಕ್ತಿಗಾದ ಹಾನಿಯೇನು? ಹಾಗಾದರೆ ಹೀಗಿರಬಹುದು. ಅದಾವುದೋ ಗೂಡಕಾರಣದಿಂದ ಈ ಎರಡನೆಯ ವ್ಯಕ್ತಿಯು ಈ ಕೆಲಸದಲ್ಲಿ ಸಹಾಯ ಮಾಡಲು ಒಪ್ಪಿರಬೇಕು; ಆದರೆ ಬಿಕ್ಕಟ್ಟಿನ ಹೊತ್ತಿನಲ್ಲಿ ಅನುತಾಪವಾಗಿ ಗು೦ಡೇರಾಯನಿಗೆ ಆಗಲಿ ಅಥವಾ ರಘುನಾಥರಾಯನಿಗೇ ಆಗಲಿ ಒದಗಬಹುದಾದ ಹಾನಿಯು ತನ್ನದೆಂದು ಅದು ಭಾವಿಸಿರಬೇಕು. ಇದರಿಂದ ನೋಡಲು, ಆ ಎರಡನೆಯ ವ್ಯಕ್ತಿಯು ಗುಂಡೇರಾಯನಿಗೆ ಅಥವಾ ರಘುನಾಥ ರಾಯನಿಗೆ ಬೇಕಾದವರಲ್ಲಿ ಒಬ್ಬ ನಾಗಿರಬೇಕು.”
ಇಷ್ಟೆಲ್ಲವನ್ನು ವಿಚಾರಿಸಿದರೂ “ಆ ರಘುನಾಥರಾಯನೇಕೆ ಆ ವ್ಯಕ್ತಿ ಯಾಗಿರಬಾರದು? ಅಥವಾ ಅವನೇಕೆ ಕದ್ದಿರಬಾರದು?” ಎಂಬ ಮುಖ್ಯ ಪ್ರಶ್ನೆಯು ಹಾಗೆಯೇ ಉಳಿಯಿತು.
*****
೨ ಇವೆಲ್ಲ ಸಾಧುಗಳಿಗೇಕೆ?
“ಬೆಳ್ಳಗಿದುದೆಲ್ಲ ಹಾಲಲ್ಲ”
ಈ ದಿನ ರಘುನಾಥರಾಯನ ಮನೆಯಲ್ಲಿ ಎಲ್ಲರಿಗೂ ಆನ೦ದ. ಅವನನ್ನು ಯೋಗ್ಯ ಜಾಮೀನಿನ (Security)ಮೇಲೆ ಸೆರೆಮನೆಯಿಂದ ಬಿಟ್ಟಿದ್ದಾರೆ! ಇದರ ಮೇಲೆ ಅವನ ತಂಗಿಯ ಹುಟ್ಟಿದ ದಿನ!! ಬೆ೦ಗಳೂರು ನಗರವೆಲ್ಲಬ ಆನಂದದಿಂದ ಕಣಿಯುವದೆಂದು ರಘುನಾಥರಾಯನ ಭಾವನೆಯಾಗಿದೆ. ಇವೆಲ್ಲಕ್ಕೂ ಕಳಸವನ್ನಿಡುವಂತೆ ಸಾಧುಗಳೊಬ್ಬರು ಮನೆಗೆ ಬಂದಿದ್ದಾರೆ. ಅವರ ಋಷಿಸದೃಶ ರೂಪದ ಕಾಂತಿಯಿ೦ದ ಮನೆಯಲ್ಲಿ ಅರುಣೋದಯವಾದಂತಿದೆ. ರಘುನಾಥನು ಗುರುಗಳೊಡನೆ ಬಹು ವಿನಯದಿಂದ ಮಾತನಾಡುತ್ತಲಿದ್ದಾನೆ. ಇಂತಹ ಸಮಯದಲ್ಲಿ ಅಂಚೆಯವನು ಒ೦ದು ಪತ್ರವನ್ನು ತಂದು ರಘುನಾಥನ ಕೈಯಲ್ಲಿ ಕೊಟ್ಟನು. ಅದರಲ್ಲಿ ೧೦೦ ರೂ. ಗಳ ಒಂದು ನೋಟೂ, ಬೇರೊಂದು ಪತ್ರವೂ ಇದ್ದವು. ಗುರುಗಳು ಆ ಪತ್ರವನ್ನು ಕ೦ಡು ಚಕಿತರಾಗಿ ಅದೇನೆಂದು ವಿಚಾರಿಸಿದರು. ಅದಕ್ಕವನು `ಗುಪ್ತರೀತಿಯಿ೦ದ ಪತ್ರಬರೆಯುವ ಕ್ರಮವಿದು’ ಎಂದು ಹೇಳಿದನು.
ಗುರುಗಳಲ್ಲಿ ಅತ್ಯಂತ ಭಕ್ತಿಯುಳ್ಳ ರಘುನಾಥರಾಯನು ಪತ್ರವನ್ನು ಅಲ್ಲೇ ಬಿಟ್ಟು ಹಣವನ್ನು ಪೆಟ್ಟಿಗೆಯಲ್ಲಿಡಲು ಒಳಕ್ಕೆ ಹೋದನು.
ಗುರುಗಳು ಪತ್ರವನ್ನು ತಿರುಗಿಸಿ ಅಂಚೆಯ ಮುದ್ರೆಯನ್ನು ನೋಡಿ ಅದು ಇದೇ ಊರಿನವರು ಬರೆದ ಪತ್ರವೆಂದು ತಿಳಿದುಕೊ೦ಡರು; ಮತ್ತು ಅದಾವ ಕೆಲಸಕ್ಕಾಗಿಯೋ ಆ ಪತ್ರದ ಪ್ರತಿ ನಕಲು ಮಾಡಿಕೊಂಡು ತಮ್ಮಲ್ಲಿಟ್ಟುಕೊಂಡರು.
ಮಾತಿನ ಮಾಲಿಕೆಯಲ್ಲಿ ಸಮಗ್ರವನ್ನು ಕೇಳಿ ಕೇಳಿ ತರ್‍ಕಿಸಿ ತರ್‍ಕಿಸಿ, ಬ್ಯಾಂಕಿನ ಕಳವಿನಲ್ಲಿ ರಘುನಾಥನಿಗೇನೂ ತಿಳಿಯದೆಂದು ಸಾಧುಗಳು ತಿಳಿದು ಕೊಂಡರು.
*****
೩. ಚಿತ್ರಮಯ ಪತ್ರ
Little flower, if I could understand what you are, root and all, and all in all, I should know what God and man is”
ರಘುನಾಧರಾಯನಿಗೆ ಬರೆದ ಆ ಪತ್ರದ ಒಕ್ಕಣಿಕೆಯು ಹೀಗಿತ್ತು.
532 c2.10: 871 c1,5- ಉ; 630, c1,9 || 512c2 10 +164, c2,6 369 c1,3+ನೆ? 96,c2,17:೧೦೦; 679,c1,22|| 316,c2 17+ ಇದ್ದೇನೆ 474,c219: 501, cl. 10+ ಇ, ಬಾ.
ಮೇಲ್ಕ೦ಡ ಪತ್ರದಲ್ಲಿ ನಮ್ಮ ಪತ್ರೇದಾರ ಶಿರೋಮಣಿಯಾದ ಭೀಮಸಿ೦ಗನ ಮನಸ್ಸು ಸಂಪೂರ್ಣವಾಗಿ ಲೀನವಾಗಿತ್ತು. ತಾನು ಭೂಮಿಯ ಮೇಲೆ ಇರುವೆನೋ, ಅಥವಾ ಭೂಮಿಯೇ ತನ್ನ ಮೇಲೆ ಇರುವದೋ ಎನ್ನುವದನ್ನು ಸಹ ತಿಳಿಯಲಾರದಷ್ಟು ಪರವಶನಾಗಿದ್ದನು ಆದಿನದ ಸಂಜೆಯು ಕವಿಕಲ್ಪನೆಯ ಸಂಜೆಯನ್ನು ಸಹ ಸ್ಪರ್ಧಿಸುವಷ್ಟು ಮನೋಹರವಾಗಿತ್ತು. ಅವನು ಇದ್ದಕ್ಕಿದ್ದ ಹಾಗೆಯೇ ಚಪ್ಪಾಳೆಯನ್ನು ಹೊಡೆಯಲು, ಮನೆಯ ಮುಂದಿನ ಹೂದೋಟದಲ್ಲಿ-ಸೌಂದರ್‍ಯದಲ್ಲಿ ತನ್ನನ್ನೇ ಹೋಲುವ ಹೂವುಗಳನ್ನು ಕೊಯ್ಯತ್ತಿದ್ದ ಹರಿಣಿಯು ಭೀಮಸಿಂಗನಿದ್ದ ಕೊಠಡಿಗೆ ಬಂದಳು. ರೂಪದಲ್ಲಿ ಎಷ್ಟು ಶ್ರೇಷ್ಠ ತರಳೋ, ಚತುರತೆಯಲ್ಲಿಯೂ ಅಷ್ಟೇ ಶ್ರೇಷ್ಠಳಾದ ತನ್ನ ಪ್ರಿಯಕಾಂತೆಯನ್ನು ಅವನು ಕಂಡನು. ನಕ್ಕರೆ ರತ್ನಗಳು ಸುರಿಯಬಹುದೆ೦ಬ ಹೆದರಿಕೆಯಿಂದ ಉಕ್ಕಿ ಬರುವ ಸಂತಸದ ಸವಿನಗೆಯನ್ನು ತಜಿತಡೆಯುತ್ತ ಹರಿಣಿಯು ಮೆಲ್ಲಮೆಲ್ಲಗೆ ಹೀಗೆ ಕೇಳಿದಳು:
“ಪ್ರಿಯರೇ!-
“ಹಾ! ತಡೆ. ನಿನ್ನ ಪ್ರಶ್ನೆಯು ತಿಳಿಯಿತು. ಸ್ವಲ್ಪ ಕೂಡ್ರು. (ಹರಿಣಿಯು ಕುಳಿತ ಮೇಲೆ) ನಾನೊಂದು ಸಮಸ್ಯೆಯಲ್ಲಿ ಬಿದ್ದಿದ್ದೆ ಅದರೆ…….. ” ಎ೦ದು ಭೀಮಸಿಂಗನು ನುಡಿದನು. ಅಷ್ಟರಲ್ಲಿ ಹರಿಣಿಯು: “ಸರಿ! ಅದರ ಮರ್ಮವು ತಿಳಿಯಿತೋ!
ಭೀಮ:- “ರಮಣೀಮಣಿಯೇ! ನೀನು ನಿಜವಾಗಿ ಚತುರಳು, ಈ ವಿಷಯದಲ್ಲಿ ನಿನ್ನನ್ನೂ ವಿಚಾರಿಸಬೇಕೆಂದು ನನ್ನ ಮನಸ್ಸಿದೆ.”
ಹರಿಣಿ:- “ಹಾಗಾದರೆ ತಡವೇಕೆ? ನನಗೆಲ್ಲಾ ತಿಳಿಯುತ್ತದೆ. ನನ್ನನ್ನು ಪರೀಕ್ಷಿಸಬೇಕೆಂದೋ ಇದೆಲ್ಲ?”
ಭೀಮ:- “ಪ್ರಿಯೆ, ಅದರಿಂದ ನನಗೇನು ಉಪಯೋಗ? ನನ್ನ ತರ್ಕದ ಸತ್ಯತೆಯನ್ನು ಪರೀಕ್ಷಿಸಲು ನೀನು ನನಗೆ ಬೇಕು. ಈ ಪತ್ರವನ್ನು ತೆಗೆದುಕೋ. ಇದು ಅಸಲಿಗೆ ಸರಿಯಾದ ನಕಲು,”
ಹರಿಣಿ:- “ಎಂದಮೇಲೆ ಬೇರೊಬ್ಬರ ಪತ್ರದ ನಕಲನ್ನು ನೀವು ತಂದಿರುತ್ತೀರಿ ಬಹಳ ಮಾಡಿ?
ಭೀಮ:- “ಬಹಳ ಮಾಡಿ ಪ್ರತಿಯೊಂದು ಸಂಖ್ಯೆಯೂ ವರ್ಣಮಾಲೆಯೊಳಗಿನ ಅಕ್ಷರಗಳ ಸಂಖ್ಯೆಯನ್ನು ಸೂಚಿಸಬಹುದಲ್ಲವೇ?”
ಹರಿಣಿ:- “ಒ೦ದು ವೇಳೆ ಹಾಗಿದ್ದರೆ ಈ ಪತ್ರದಲ್ಲಿ ಒತ್ತಕ್ಷರವುಳ್ಳ ಶಬ್ದಗಳೇ ಇಲ್ಲವೆ?”
ಭೀಮ:- “ಛೆ! ಹಾಗೆಂದರೇನು? ಒಳ್ಳೇದು; ಈ ವಿಷಯದಲ್ಲಿ ನೀನು ಊಹಿಸುವದಾದರೂ ಏನು?”
ಹರಿಣಿ:- “ಮೊದಲಿನ ದೊಡ್ಡೆ ಸಂಖ್ಯೆಗಳು ದೊಡ್ಡದೊಂದು ಪುಸ್ತಕದ ಪುಟಗಳನ್ನು ಸೂಚಿಸಬಹುದು. ಉದಾಹರಣೆಗಾಗಿ ಮೊದಲ ಸಂಖ್ಯೆಯಾದ 532 ನ್ನು ತೆಗೆದುಕೊಳ್ಳೋಣ, ಪ್ರತಿಯೊಂದು ಅಂಕೆಯೂ ವರ್ಣಮಾಲೆಯಲ್ಲಿನ ಅಕ್ಷರಗಳ ಸಂಖೈಯನ್ನು ಸೂಚಿಸಿದರೆ, 532 ಇದರ ಅರ್ಥವು. ‘ಉ ಇ ಆ’ ಅಧವಾ ವ್ಯಂಜನಗಳನ್ನು ತೆಗೆದುಕೊಂಡರೆ ಙ-“
ಭೀಮ:- “ಛೆ! ಬಿಡು ಬಿಡು!! ಅದು ಸರಿಹೋಗುವದಿಲ್ಲವೆಂಬುದು ನನಗೆ ಮೊದಲೇ ಗೊತ್ತಿತ್ತು. ದೊಡ್ಡ ಅ೦ಕೆಯು ಪುಟಸಂಖೈಯೇ ಸರಿ| ಆದರೆ ಅದರ ಮು೦ದಿನ ‘C’ ಎ೦ಬ ಅಕ್ಷರದ ಸಂಜ್ಞೆಯೇನು?”
ಹರಿಣಿ:- C ಎನ್ನುವದು ಪುನಃ ಪುನಃ ಬರೆಯಲ್ಪಟ್ಟಿರುವದರಿಂದ ಅದರ ಅರ್ಥವು ಬಹುಶಃ Chapter (ಅಧ್ಯಾಯ) ಎ೦ದಿರಬೇಕು!”
ಭೀಮ:- “ಯೋಚಿಸಿ ನೋಡಿದರೆ, ಅದು ಅಷ್ಟು ಸಮಂಜಸವಾಗುವದಿಲ್ಲ. ಎಕೆನ್ನುವಿಯಾ? ಒಂದು ಪುಸ್ತಕದ ಪುಟವನ್ನು ಸೂಚಿಸಿದ ಅದೇ ಪುಟದಲ್ಲಿಯ ಅಧ್ಯಾಯದ ಸಂಖ್ಯೆಯನ್ನು ಯಾವ ದಡ್ಡನೂ ಬರೆಯುವದಿಲ್ಲ. ಒಂದು ವೇಳೆ ಇದು ಸರಿಯಿದ್ದರೆ, ಪತ್ರಕಾರನು ಒಂದು ಮತ್ತು ಎರಡು ಇವುಗಳ ಹೊರತು ಬೇರೆಯ ಅಧ್ಯಾಯವನ್ನೇ ತೆಗೆದುಕೊಳ್ಳಬಾರದು?”
ಹರಿಣಿ:- “ಹಾ! ಅದು ಹೀಗೆ:C ಎ೦ದರೆ (Column) ಕಾಲಮು!!!”
ಭೀಮ:- “ಸರಿ! ಸರಿ!! ಈಗ ಇಷ್ಟು ಸ್ಪಷ್ಟವಾಯಿತು. ಪುಸ್ತಕವು 800 ಪುಟಗಳಿಗಿಂತಲೂ ಹೆಚ್ಚು ದೊಡ್ಡದು; ಅದರಲ್ಲಿ ಎರಡು ಕಾಲಮ್ ಗಳಿವೆ. ಕಾಲಮ್ಮಿನ ಮುಂದಿನ ಸಂಖ್ಯೆಯ ಬಹುಶಃ ಶಬ್ದ ಸ೦ಖ್ಯೆಯು. ಈ ಪತ್ರದ ಅಭಿಪ್ರಾಯವನ್ನು ಕಂಡು ಹಿಡಿಯಲು, ಇಬ್ಬರಲ್ಲಿಯೂ ಅಂತಹ ಪುಸ್ತಕವು ಇರಲೇಬೇಕು. ಪತ್ರವು ಯಾರಿಗೆ ಬಂದಿದೆಯೆ೦ಬುದಂತೂ ನನಗೆ ತಿಳಿದಿದೆ! ಬರೆದವರಾರು ಎನ್ನುವದೇ ಮುಖ್ಯ ಪ್ರಶ್ನೆ!!”
ಹರಿಣಿ:- ಇದಾರಿಗೆ ಬಂದಿದೆ? ಮತ್ತು ಬರೆದವರಾರು?”
ಭೀಮ:- “ಬರೆದವರಾರೋ ಗೊತ್ತಿಲ್ಲ. ಅದನ್ನೇ ಶೀಘ್ರವಾಗಿ ಕಂಡು ಹಿಡಿದು ಮು೦ದಿನ ಹೆಚ್ಚು ಜಾಣತನದ ಹಾಗೂ ವಿಚಿತ್ರತರವಾದ ಕೆಲಸಕ್ಕೆ ಕೈ ಹಾಕಬೇಕು Two heads are better than one ಎನ್ನುವಂತೆ ನಿನ್ನ ಸಲಹೆಯನ್ನು ಕೇಳಿ ನೋಡಿದೆ. ಇಬ್ಬರ ಅಭಿಪ್ರಾಯವೂ ಒ೦ದೇ ಆದುದರಿಂದ ನಮ್ಮತರ್ಕವು ಸರಿಯೆಂದು. ಮನವರಿಕೆಯಾದ೦ತಾಯಿತು!”
*****
೪ ಎಳೆಯೆಂತೂ ಸಿಕ್ಕಿತು! ಹಚ್ಚಡ ನುಂಗುವದು ಹೇಗೆ?
‘Wait, watch, pray, plead and then pocecd’
ಭೀಮಸಿ೦ಗನು ಹರಿಣಿಗೆ ಆ ಪುಸ್ತಕವು ಕನ್ನಡ ಶಬ್ದಕೋಶವೇ ಇರಬೇಕೆಂದೂ ಬಹುತರವಾಗಿ ಬೇರೆ ಪುಸ್ತಕಗಳು ಎರಡು ಕಾಲಂ (Column)ಗಳಲ್ಲಿ ಬರೆಯಲ್ಪಟ್ಟಿಲ್ಲವೆಂದೂ ವಿವರಿಸಿ ಹೇಳಲು, ಅವಳಿಗೆ ಹಿಡಿಸಲಾರದಷ್ಟು ಆನಂದವಾಯಿತು.
ಅನಂತರ ನಮ್ಮ ಪತ್ತೇದಾರನು ಪ್ರಸಿದ್ಧ ಪುಸ್ತಕ ವ್ಯಾಪಾರಿಯೊಬ್ಬನ ಬಳಿಗೆ ಹೋದನು. ನಮ್ಮ ಕಥಾನಕವು ನಡೆದ ಕಾಲದಲ್ಲಿ ಬೆಂಗಳೂರಿನಲ್ಲಿ ಒಂದೇ ಒ೦ದು ಪುಸ್ತಕದ ಅಂಗಡಿಯಿತ್ತು. ಆರು ವರ್ಷಗಳಿಂದಲೂ ಹನ್ನೆರಡು ಕನ್ನಡ ಕೋಶಗಳು ಖರ್ಚಾಗದೆ ಉಳಿದಿದ್ದವೆಂದೂ, ಈಗ ೫-೬ ತಿಂಗಳ ಹಿಂದೆ ‘ಜಯಲಕ್ಷ್ಮಿ’ ಬ್ಯಾಂಕಿನ ಮ್ಯಾನೇಜರರಾದ ಗುಂಡೇರಾಯರು ಒಂದು
ಪುಸ್ತಕವನ್ನು ತೆಗೆದುಕೊ೦ಡರೆ೦ತಲೂ ತಿಳಿಯ ಬಂದಿತು.
ರಘುನಾಥರಾಯನ ಬಳಿಯಲ್ಲಿಯೂ ಇ೦ತಹದೊಂದು ಕೋಶವು ಇರಲೇಬೇಕೆಂದು ತರ್ಕಿಸಿ, ಭೀಮಸಿ೦ಗನು ಅವರ ಮನೆಗೆ ಹೋದನು. ಸರಳಸ್ವಭಾವದ ರಘುನಾಥರಾಯನು ಕನ್ನಡಕೊಶವನ್ನು ಬಹು ವಿನಯದಿಂದ ಭೀಮಸಿ೦ಗನಿಗೆ ಕೊಟ್ಟನು.
ಅನ೦ತರ ಭೀಮಸಿಂಗನ ಆಪ್ಪಣೆಯ ಮೇರೆಗೆ ಹರಿಣಿಯು ಚ೦ಚಲೆಯ ಮನೆಗೆ ಹೋದಳು. ಅವಳ ಬೇಡಿಕೆಯಂತೆ ಆ ಕನ್ನಡ ಕೋಶವನ್ನು ಜಂಚಲೆಯು ಕೊಡದಿರಲಿಲ್ಲ.
ಹರಿಣಿಯೂ, ಭೀಮಸಿ೦ಗನೂ ಪುಸ್ತಕಗಳೆರಡನ್ನೂ ಚನ್ನಾಗಿ ಹೋಲಿಸಿ ನೋಡಿದರು. ಎರಡೂ ಒ೦ಬೇ ತರಹದ ಪುಸ್ತಕಗಳೆಂದು ಮನವರಿಕೆಯಾಯಿತು. ಅವುಗಳಲ್ಲಿ ಒಂದು ರಘುನಾಥರಾಯದೆಂದೂ, ಮತ್ತೊಂದು ಗುಂಡೇರಾಯನ ಮಗಳಾದ ಇಂದುಮತಿಯದೆಂದೂ ಸ್ಪಷ್ಟವಾಗಿ ತಿಳಿಯಿತು.
ಇನ್ನು ತಮ್ಮ ತರ್ಕದ ಸತ್ಯತೆಯನ್ನು ಕಂಡುಕೊಳ್ಳಲು ಪುಸ್ತಕದಲ್ಲಿಯ ಶಬ್ದಗಳನ್ನು ಹೋಲಿಸಲು, ಆ ವಿಚಿತ್ರ ಪತ್ರದ ಅಭಿಪ್ರಾಯವು ಹೀಗೆಂದು ತಿಳಿಯ ಬಂದಿತು.
“ನೀನು ಹೆದರಬೇಡ; ಅಪವಾದವ೦ತೂ ಬಂದಿದೆ. ಈಗ ೧೦೦ ರೂಪಾಯಿ ಕಳಿಸಿದ್ದೇನೆ. ಬೇರೆ ಕಡೆಗೆ ಹೋಗು.”
“ಇದರಿಂದ ನೋಡಲು, ಮೊದಲು ನಾನು ತರ್ಕಿಸಿದ್ದಂತೆ ರಘುನಾಥರಾಯನು ಅಪರಾಧಿಯಲ್ಲ. ಪತ್ರದಲ್ಲಿ ಬರೆದಂತೆ ಇವನು ಎಲ್ಲಿಯಾದರೂ ತಲೆ ತಪ್ಪಿಸಿಕೊ೦ಡರೆ ಇವನ ಮೇಲೆ ಸಂಶಯವು ದೃಢವಾಗುವದರಿಂದ ಅವನೆಂದಿಗೂ ಎಲ್ಲಿಗೂ ಹೋಗನು. ಇಂತಹ ಸಲಹೆಯನ್ನು ಕೊಟ್ಟ ಆ ವ್ಯಕ್ತಿಯು ಬಹುಶಃ ಇವನನ್ನು ಪ್ರೀತಿಸುವ ಓರ್ವ ರಮಣಿಯಾಗಿರಬೇಕು. ಅವಳ ಹೆಸರು
ಇಂದುಮತಿಯೆಂದು ಈ ಪುಸ್ತಕದಿ೦ದ ಸ್ಪಷ್ಟವಾಯಿತು.
ಹೀಗೆ ತರ್ಕಿಸಿ ಭೀಮಸಿಂಗನು ಇದ್ದಕ್ಕಿಂತೆಯೇ ಹೊರಗೆ ಹೊರಟು ಹೋದನು. ಅವನ ಸ್ವಭಾವವನ್ನರಿತ ಹರಿಣಿಗೆ ಅದು ಹೆಚ್ಚು ಆಶ್ಚರ್ಯವೆನಿಸಲಿಲ್ಲ.
ಭೀಮಸಿಂಗನು ಗು೦ಡೇರಾಯನ ಮನೆಗೆ ಹೋದಾಗ ಮಧ್ನಾಹ್ನ ೩ ಗಂಟೆಯಾಗಿರಬಹುದು. ಗು೦ಡೇರಾಯನು ಬ್ಯಾಂಕಿನ ಕೆಲಸಕ್ಕಾಗಿ ಹೋಗಿದ್ದನು. ಚಂಚಲೆಯು ಬಂಧುಗಳ ಮನೆಗೆ ಹೋಗಿದ್ದಳು. ಇಂದುಮತಿಯು ದಾರದಿಂದ ಹೂಗಳನ್ನು ಹೆಣೆಯುತ್ತ ತಲ್ಲೀನಳಾಗಿ ಕುಳಿತಿದ್ದಳು.
ಗು೦ಡೇರಾಯನಿಗೆ ರೂಪವತಿಯಾದ ಇವಳೊಬ್ಬಳೇ ಮಗಳೆಂಬದನ್ನು, ಅವಳನ್ನು ಚತುರನೂ ಸು೦ದರನೂ ಆದ ರಘುನಾಥರಾಯನಿಗೆ ಕೊಡುವ ಯೋಜನೆಯದ್ದಿತೆ೦ದೂ, ಮುಂದೆ ರಘುನಾಥರಾಯನು ಮ್ಯಾನೇಜರನಾಗುವ ಸಂಭವವಿತ್ತೆ೦ದೂ ಭೀಮಸಿಂಗನು ಈ ಮೊದಲೇ ತಿಳಿದಿದ್ದನು.
ಭೀಮಸಿ೦ಗನು ದಿವಾಣಖಾನೆಯಲ್ಲಿ ಬ೦ದುದನ್ನು ಕಂಡು ಸ್ವಲ್ಪ ಗಾಬರಿಯಾಗಿ ಅರಳಿದ ಕಣ್ಣುಗಳಿ೦ದ ನೋಡುತ್ತ “ಗು೦ಡೇರಾಯರು ಮನೆಯಲ್ಲಿಲ್ಲ” ಎಂದಳು.
ಭೀಮ:- “ಹಾಗಾದರೆ ಚಂಚಲಾಬಾಯಿಯವರೋ?!”
ಇ೦ದು:- “ಅವರೂ ಮನೆಯಲ್ಲಿಲ್ಲವಲ್ಲ!!”
ಭೀಮ:- (ಒಂದು ಆರಾಮಿ ಕುರ್‍ಚಿಯ ಮೇಲೆ ಕುಳಿತು ನಿಮ್ಮ ಆಳುಗಳು ಸಹ ಹೂದೋಟದ ಕಡೆಗೆ ಹೋಗಿರುವ ಹಾಗಿದೆ! ಅದು ಹಾಗಿರಲಿ! ಇಂದುಮತಿಬಾಯೀ, ನಿಮ್ಮೊಡನೆ ಒಂದೆರಡು ಮಾತನಾಡಬಹುದೇ?
ಇಂದು:- ಪರಪುರುಷರಾದ ನೀವು ಹೀಗೆ ಒಳಗೆ ಬರುವದು ಸಹ ಅನುಚಿತ!
ಭೀಮ:- ನೀವು ರಘುನಾಥರಾಯರನ್ನು ನಿಜವಾಗಿಯೂ ಪ್ರೀತಿಸುವಿರೋ?
ಇಂದುಮತಿಯು ಬಹು ಗಾಬರಿಯಾದಳು. ಭೀಮಸಿಂಗನು ತಾನು ಗುಟ್ಟನ್ನು ರಟ್ಟು ಮಾಡಿದ ಬಗೆಯನ್ನು ವಿವರಿಸಿದನು. ಇಂದುಮತಿಯ ಮನೋಹರವಾದ ಮುಖವು ಕ್ಷಣಕ್ಷ್ಮಣದಲ್ಲಿಯೂ ಬಣ್ಣ ಬಣ್ಣವಾಗುತ್ತಿತ್ತು. ಕಟ್ಟಕೊನೆಗೆ ಭೀಮಸಿ೦ಗನು,
“ಬಾಯೀ, ಇನ್ನಾದರೂ ನನ್ನ ಮನೋಭಿಪ್ರಾಯವು ತಿಳಿಯಿತೇ? ರಘನಾಥರಾಯನು ನಿರಪರಾಧಿಯೆಂದು ಸಿದ್ಧಪಡಿಸಲು, ನಾನು ಕೆಲವು ಸಂಗತಿಗಳನ್ನು ನಿಮ್ಮಿಂದ ತಿಳಿದುಕೊಳ್ಳಬೇಕಾಗಿದೆ.”
ಇ೦ದು:- “ಕೇಳಿದರೆ ತಿಳಿದುದನ್ನು ಹೇಳುವೆನು.”
ಭೀ:- “ಹಾಗಾದರೆ ಕಳವಾದ ಹಿ೦ದಿನ ದಿನ ನಿಮ್ಮ ಮನೆಗೆ ಯಾರಾದರೂ ಬಂದಿದ್ದರೋ? ನಡೆದ ಕಳವಿನಲ್ಲಿ ಭಾಗ ತೆಗೆದುಕೊಳ್ಳಲು ಅವರಿಗೇನಾದರೂ ಆಸ್ಪದವಿತ್ತೋ?
ಇ೦ದು:- ಕಳವಾದ ದಿನದ ರಾತ್ರಿ ಕೃಷ್ಣರಾಯನೂ ರಘುನಾಥನೂ ಊಟಕ್ಕೆ ಬಂದಿದ್ದರು. ಕೃಷ್ಣ ರಾಯನು ಬಹು ಒಳ್ಳೆಯ ಮನುಷ್ಯನು. ನಮ್ಮ ಅಮ್ಮನಿಗೆ ಅವನನ್ನು ಕಂಡರೆ ಪಂಚಪ್ರಾಣ. ಅವನು ನಮ್ಮ ಬಂಧುವೂ ಅಹುದು, ಊಟ ಮಾಡುವಾಗ ನಮ್ಮ ತಾಯಿಯು ಕೇಳಿದಳು: “ರಘುನಾಥರಾಯರು ಈಚೆಗೆ ನಮ್ಮನ್ನು ಮರೆತ ಹಾಗಿದೆ.” ಎಂದು. ಅದಕ್ಕೆ ರಘುನಾಥರಾಯರು “ಅದು ಹೇಗೆ ಸಾಧ್ಯ ತಾಯೀ? ನನ್ನ ತನುವೆಲ್ಲಿದ್ದರೂ ಮನವು ತಾಯಿಯವರ ಬಳಿಯಲ್ಲಿಯೇ! ಈ ದಿನ ನಮ್ಮ ಪೆಟ್ಟಿಗೆಗೂ ನಿಮ್ಮ ಹೆಸರನ್ನೇ ಇಟ್ಟಿದ್ದೇವೆ! ನೋಡಿರಿ.”
ಭೀಮಸಿಂಗ:- “ಅಮ್ಮಾ ಹೋಗಲಿ ಬಿಡಿ! ಅದೆಲ್ಲಾ ನನಗೇಕೆ? ಇನ್ನು ಮುಖ್ಯವಾದ ಕೆಲಸಗಳಿಗಾಗಿ ನಾನು ಈಗಲೇ ಹೊರಡಬೇಕು. ಇದಕ್ಕೆ ಆ ನಿಮ್ಮ ಬಂಧುವಾದ ಕೃಷ್ಣರಾಯನೂ ಸಹಾಯ ಮಾಡಬಹುದು. ಇನ್ನೊ೦ದು ಮಾತು! ಅವರು ಯಾವ ರೀತಿಯಲ್ಲಿ ಬಂಧುವಾಗಬೇಕು?”
ಇ೦ದು:- ಇವರು ನಮ್ಮ ತಾಯಿಯ ಅಣ್ಣನ ಮಗನು, ಹೈದರಾಬಾದಿನಲ್ಲಿ ಇದ್ದ ಶ್ರೇಷ್ಠ ಚಿನಿವಾಲರಾದ ಚಕ್ರಪಾಣಿರಾಯರ ಮಗಳನ್ನು ಕೊಟ್ಟು ಇವರಿಗೆ ಲಗ್ನವಾಗಿದೆ!! ಪಾಪ! ಪ್ರಾಯದಲ್ಲಿಯೇ ಅವಳು ತೀರಿಕೊ೦ಡಳಂತೆ, ಮೊನ್ನೆ ಮೊನ್ನಿನವರೆಗೂ ಪತ್ರ ವ್ಯವಹಾರವೂ ನಡೆಯುತ್ತಿತ್ತು. ಚಕ್ರಪಾಣಿ ರಾಯರು ತೀರಿಕೊ೦ಡ ನಂತರ ಇವರೂ ಹೈದರಾಬಾದಿಗೆ ಹೋಗಿಲ್ಲ.
ಭೀಮ:- ಸರಿ-ಸರಿ!! ನಾನು ಬ೦ದುದನ್ನು ಮಾತ್ರ ಯಾರಿಗೂ ಹೇಳಬೇಡಿ. ನಿಮ್ಮ ಪ್ರಿಯರಾದ ರಘುನಾಥರು ತಪ್ಪಿತಸ್ಥರಲ್ಲ. ನಿಜವಾದ ಕಳ್ಳನನ್ನು ಕಂಡು ಹಿಡಿಯುವ ಕಾರ್ಯದಲ್ಲಿ ಸ್ವಲ್ಪ ಸ್ವಲ್ಪ ಅನುಕೂಲ ಮಾಡಿಕೊಟ್ಟರೆ ಕೃತಜ್ಞನಾಗಿರುವೆನು.”
ಇಂದು:- ಆಗಲಿ, ರಾಯರೇ ಯಶಸ್ವಿಯಾಗಿರಿ.”
*****
೫ ನಾರಿಯ ತಂತ್ರವು ನಾರಾಯಣನಿಗೂ ತಿಳಿಯದು!
“Trust not your daughter’s mind by what you see them act”
ಭೀಮಸಿ೦ಗನಿಗೆ ಇಂದುಮತಿಯ ಸಂಭಾಷಣೆಯಿಂದ ಆ ವಿಚಿತ್ರ ತಿಜೂರಿಯ ಸಂಕೇತಶಬ್ದವು ಮೂರನೆಯವನಾದ ಕೃಷ್ಣರಾಯನಿಗೂ ತಿಳಿದಿತ್ತೆ೦ದು ಸ್ಪಷ್ಟವಾಯಿತು. ಹಾಗಾದರೆ ಅವನ ಮೋಸವೇನೂ ನಡೆದಿರಲಕ್ಕಿಲ್ಲವೇ? ಛೇ, ಹಾಗ್ಯೆ ಭಾವಿಸಲು ಕಾರಣವಿಲ್ಲ. ಏಕೆಂದರೆ, ಅವನು ಅವರ ಬಂಧುವು. ಇದಲ್ಲದೆ ಇಂದುಮತಿಯೇ ಅವನ ಸುಗುಣಗಳನ್ನು ಹೊಗಳಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಚಂಚಲಾಬಾಯಿಯ ತವರುಮನೆಗೆ ಹೋಗಿ ಕೃಷ್ಣರಾಯನ ಗುಣ ಕಥನಗಳನ್ನು ತಿಳಿಯುವದು ಭೀಮಸಿ೦ಗನಿಗೆ ಆಶಕ್ಯವೆಂದು ತೋರಿತು.
ಅದರಂತೆ ಭೀಮಸಿ೦ಗನು ಶ್ರೀರಂಗಪಟ್ಟಣಕ್ಕೆ ಬಂದು ಚ೦ಜಲಾಬಾಯಿಯ ಆಪ್ತರನ್ನು ವಿಚಾರಿಸಲು ಅವಳಿಗೆ ಅಣ್ಣ-ತಮ್ಮ೦ದಿರಾರೂ ಇರಲೇ ಇಲ್ಲವೆಂದು ತಿಳಿಯಬಂದಿತು!!!
ಭೀಮಸಿ೦ಗನು ಬಹು ಭ್ರಾ೦ತನಾದನು! ಇದರಲ್ಲಿ ಏನೋ ಗುಟ್ಟು ಇರಲೇಬೇಕೆಂದು ತಿಳಿದನು. ಅಣ್ಣ-ತಮ್ಮಂದಿರಿಲ್ಲದ ಚಂಚಲೆಯು ಕೃಷ್ಣರಾಯನು ತನ್ನ ಅಣ್ಣನ ಮಗನೆಂದು ಹೇಳಿದುದು ಹೇಗೆ? ಒಂದುವೇಳೆ ಕೃಷ್ಣರಾಯನೇ ವೇಷಧಾರಿಯಾಗಿದ್ದರೆ, ಅವನು ತನ್ನ ಅಣ್ಣನ ಮಗನೆಂಬುವದನ್ನು ಚಂಚಲೆಯು ಹೇಗೆ ಒಪ್ಪಿಕೊ೦ಡಳು? ಇಬ್ಬರೂ ಪರಸ್ಪರ ಪ್ರೇಮಿಗಳೆಂದು ಬಗೆದರೆ, ಚ೦ಚಲೆಯು ತೀರಾ ಹಿರಿಯಳು!! ಈ ಕಾರಸ್ಥಾನವು ಬಹು ಗೂಢವಿರುವದರಿಂದ, ಅದರ ಕೂಲಂಕಷವನ್ನು ವಿಚಾರಿಸಲು ಕೃಷ್ಣಾರಾಯನನ್ನು ಹುಡುಕಿಕೊಂಡು ಭೀಮಸಿ೦ಗನು ಪುನಃ ಬೆ೦ಗಳೂರಿಗೇ ಬರಬೇಕಾಯಿತು.
ಭೀಮಸಿ೦ಗನು ಆ ದಿನೆ ರಾತ್ರಿಯೇ ಕೃಷ್ಣರಾಯನ ಮನೆಯ ಬಳಿ ಬ೦ದನು. ಆಗ ರಾತ್ರಿ ಸುಮಾರು ಹನ್ನೆರಡು ಗಂಟೆಯಾಗಿತ್ತು. ಕತ್ತಲೆಯ ರಾತ್ರಿಯನ್ನು ಯಾರೂ ಬಹುತರವಾಗಿ ಬಯಸದಿದ್ದರೂ ಮುಚ್ಚುಮರೆ ಕೆಲಸ ಮಾಡುವವರು ಅಭಿನಂದಿಸುತ್ತಾರೆ. ನಮ್ಮ ಭೀಮಸಿಂಗನೂ ಆ ಕಾಳರಾತ್ರಿಯನ್ನು ಅಭಿನಂದಿಸಿದನು. ಏಕೆಂದರೆ ಭೀಕರವಾದ ಆ ರಾತ್ರಿಯಲ್ಲಿ ಕೃಷ್ಣರಾಯನ ಉಪ್ಪರಿಗೆಯಲ್ಲಿ ಒಂದು ದೀಪವು ಮ೦ದಮಂದವಾಗಿ ಉರಿಯುತ್ತಿತ್ತು. ಇದು ಇವನ ದಿನದ ಪದ್ದತಿಯೋ ಅಥವಾ ಏನಾದರೂ ರಹಸ್ಯವಿದೆಯೋ ಎ೦ದು ವಿಚಾರಿಸುತ್ತ ಭೀಮಸಿಂಗನು ನಿ೦ತಿರಲು, ಯಾರೋ ಸೀಳು ಹೊಡೆದ ಸದ್ದಾಯಿತು. ಅವನು ಸ್ವಲ್ಪ ಅಪ್ರತಿಭನಾಗಿ ಸರಿದು ನಿಂತನು. ಮೇಲಿನ ಕಿಟಿಕಿಯು ಸಂಪೂರ್ಣವಾಗಿ ತೆರೆಯಲ್ಪಟ್ಟು, ಕೃಷ್ಣರಾಯನು ಹೊರಕ್ಕೆ ಬಗ್ಗಿ ನೋಡಿ ಮೂರು ಸಲ ಚುಟಿಕೆಗಳನ್ನು ಹೊಡೆದನು. ಪುನಃ ಕೆಳಗಿನಿಂದ ಮೂರು ಚುಟಿಕೆಗಳು ಪ್ರತ್ಯುತ್ತರವಾಗಿ ಶಬ್ದ ಮಾಡಲ್ಪಟ್ಟವು. ಮು೦ದೆರಡು ನಿಮಿಷಗಳಲ್ಲಿ ಒಂದು ನೂಲೇಣಿಯು ಇಳಿಬಿದ್ದಿತು. ಚಪಲ ಚರಣೆಯಾದ ಓರ್ವ ಲಲನೆಯು ಲಗುಬಗೆಯಿಂದ ಅದನ್ನು ಹತ್ತಿ ಮೇಲಕ್ಕೆ ಹೋದಳು!! ಏಣಿಯೂ ಮೇಲಕ್ಕೆ ಹೋಯಿತು.
ಬೆರಗಿನ ಅರಳಿದ ಕಣ್ಣುಗಳಿಂದ ಭೀಮಸಿಂಗನು ಇದನ್ನೆಲ್ಲ ನೋಡಿದನು. ಸಮಯಕ್ಕೆ ಸರಿಯಾಗಿ ತನ್ನನ್ನು ಬರಮಾಡಿದ ದೈವಕ್ಕೆ ಬಹಳ ವಂದಿಸಿದನು. ಅನಂತರ ಮೆಲ್ಲನೆ ಎದುರಿನಲ್ಲಿದ್ದ ಒಂದು ಎತ್ತರವಾದ ಗಿಡವನ್ನೇರಿ (Telescope) ದೂರದರ್ಶ ಕಯಂತ್ರದ ಸಹಾಯದಿಂದ ಆ ಕೋಣೆಯಲ್ಲಿ ನಡೆಯುವದೆಲ್ಲವನ್ನೂ ನಿರೀಕ್ಷಿಸಲಾರಂಭಿಸಿದನು!
ಮಂದಪ್ರಕಾಶವುಳ್ಳ ಆ ಕೋಣೆಯಲ್ಲಿನ ಒಂದು ಮಂಚದ ಮೇಲೆ ಸುಮಾರು ೨೮ ವಷ೯ದ ಸುಂದರ ತರುಣನೊಬ್ಬನು ಮಲಗಿದ್ದನು. ಅವನ ತಲೆಯ ಬಳಿಯಲ್ಲಿ ಒಂದು ಆರಾಮೀ ಕುರ್‍ಚಿಯ ಮೇಲೆ ಅರ್‍ಧನಿಮೀಲಿತ ನೇತ್ರೆಯಾದ ಸ್ತ್ರೀಯಳೊಬ್ಬಳು ಮುಂದಕ್ಕೆ ಬಾಗಿ ಅದೇನೋ ವಿವರಿಸಿ ವಿವರಿಸಿ ಹೇಳುತ್ತಿದಳು. ಲಲನೆಯ ಮುಖದಲ್ಲಿ ಯಾಚನೆ, ದಯೆ, ಪ್ರೇಮ, ಆಕಾಂಕ್ಷೆ, ಆತುರತೆಗಳೂ. ತರುಣನ ಮುಖದಲ್ಲಿ ನಿಷ್ಠುರತೆ, ಕ್ರೌಯರಗಳೂ ಬಹು ಸ್ಪಷ್ಟವಾಗಿ ಒಡಮೂಡಿದ್ದವು. ಸುಮಾರು ಅರ್‍ಧತಾಸಿನ ನಂತರ ತರುಣನು ಮೇಲಕ್ಕೆದು ಆ ಶಯನಾಗಾರಕ್ಕೆ ಬೀಗವನ್ನು ಹಾಕಿ, ಮಹಡಿಯಿಂದಿಳಿದು, ಚಿನಿವಾಲ ಗಟ್ಟೆಯ ಕಡೆಗೆ ಸಾಗಿದನು.
ಹೊಂಚುಹಾಕಿ ಕುಳಿತಿದ್ದ ಭೀಮಸಿ೦ಗನು ಬಹಳ ಎಚ್ಚರದಿಂದ ಕೃಷ್ಣರಾಯನನ್ನೇ ಹಿ೦ಬಾಲಿಸಿದನೆಂದು ನಮ್ಮ ಚತುರ ವಾಚಕರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಾರ್ಯಾತುರನಾದಾ ಕೃಷ್ಣರಾಯನು ತನ್ನ ಗೊತ್ತಿನ ಚಿನಿವಾಲನನ್ನೆಬ್ಬಿಸಿ, ಅದೇನೋ ಹೇಳಿದನು. ಮು೦ದೆರಡು ನಿಮಿಷಗಳಲ್ಲಿ ಭೀಮ ಸಿಂಗನು ನೋಡುತ್ತಿರುವಂತೆಯೇ ಚಿನಿವಾಲನು ಕೃಷ್ಣರಾಯನ ಉಡಿಯಲ್ಲಿ ಕೆಲವು ಚಿನ್ನದ ಒಡವೆಗಳನ್ನು ಹಾಕಿದನು. ಕೃಷ್ಣ ರಾಯನು ಹೊರಭಾಗದಲ್ಲಿ ಬ೦ದು ನಿಂತಿದ್ದ ಭೀಮಸಿಂಗನನ್ನು ಲಕ್ಷ್ಯಕ್ಕೆತಾರದೆ ಅವಸರದಿಂದ ಹೊರಟು ಹೋದನು. ಏಕೆಂದರೆ ಪತ್ತೇದಾರ ಶಿರೋಮಣಿಯಾದ ಭೀಮಸಿಂಗನ ಹೆಸರನ್ನು ಅವನು ಕೇಳಿದ್ದನೇ ವಿನಹ, ಅವನನ್ನು ಕೃಷ್ಣರಾಯನು ಈ ಮೊದಲು ನೋಡಿರಲಲ್ಲ!!
ರಮಣಿಯು ಆ ಕಾಳರಾತ್ರಿಯಲ್ಲಿ ಆ ಒಡವೆಗಳೊಡನೆ ಏಕಾಕಿನಿಯಾಗಿ ಮನೆಗೆ ಹೊರಟಳು. ಭೀಮಸಿ೦ಗನು ಅವಳು ಗು೦ಡೇರಾಯನೆ ಮನೆಯನ್ನು ಪ್ರವೇಶಿಸಿ, ಒಳಗಿನಿಂದ ಬಾಗಿಲನ್ನು ಭದ್ರಪಡಿಸುವವರೆಗೂ ಕಾದಿದ್ದನು.
ಅನಂತರ ಚಂಚಲೆಯ ಈ ಸಾಹಸಕ್ಕೆ ಬೆರಗಾಗಿ ‘ಕುಸುಮ ಮಧ್ಯದಲ್ಲಿಯೂ ಪಾಷಾಣವಿರುವದೇ?’ ಎಂದುಕೊ೦ಡು, ಭೀಮಸಿಂಗನು ಮನೆಯ ಕಡೆಗೆ ಸಾಗಿದನು.
*****
೬ ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ
“A jest’s prosperity lies in the ears of those that hear it”
“ಚ೦ಚಲೆಯು ಮಧ್ಯರಾತ್ರಿಯಲ್ಲಿ ನಡೆಸಿದ ಸಾಹಸವನ್ನು ಯೋಚಿಸಲು ಅದು ಅವಳ ಗಂಡನಿಗೆ ಗೊತ್ತಾಗದ೦ತೆ ಮಾಡಿದ ಕೆಲಸವಾಗಿರಬೇಕು. ಇದರಿಂದ ಕೃಷ್ಣರಾಯನೂ, ಚಂಚಲೆಯೂ ಪರಸ್ಪರ ಪ್ರೀತಿಸುತ್ತಿದ್ದರೆಂಬುವದು ಒಡೆದು ಕಾಣುತ್ತಿತ್ತು!ಇಲ್ಲದಿದ್ದರೆ ಬಂಧುವಲ್ಲದ ಇವನೊಡನೆ ಇಷ್ಟೇಕೆ ಸಲಿಗೆ? ಸರಿ! (Love is blind) ಪ್ರೀತಿಯು ಕುರುಡು ಎನ್ನುವದು ಸುಳ್ಳಲ್ಲ. ಆದುದರಿ೦ದಲೇ ಅವನು ಅ೦ತಹ ರಾತ್ರಿಯಲ್ಲಿಯೇ ಒಡವೆಗಳನ್ನು ತಂದು ಕೊಟ್ಟುದು!! “ಓಡವೆಗಳು!! ಅವುಗಳನ್ನು ಕೃಷ್ಣರಾಯನು ಕೊ೦ಡು ತಂದನೇ? ಅಥವಾ ಚ೦ಚಲೆಯ ಆಭರಣಗಳನ್ನು ಮೊದಲು ಒತ್ತಿಯಿಟ್ಟು ಈಗ ಬಿಡಿಸಿಕೊಂಡು ಬ೦ದನೇ? ಇದರಿಂದ ನನ್ನ ಪತ್ತೆಯ ಕೆಲಸಕ್ಕೆ ಹೆಚ್ಚು ಪ್ರಯೋಜನವಿರುವಂತೆ ಕಾಣುವದಿಲ್ಲ. ಆದರೂ ತಿಳಿದು ನೋಡುವಾ. ಈ ಒಡವೆಗಳನ್ನು ರಾತ್ರಿಯಲ್ಲಿಯೇ ತ೦ದಿರುವದರಿಂದ, ಮರುದಿನವೇ ಏನಾದರೂ ವಿಶೇಷದ ದಿನವಾಗಿರಬೇಕು; ಪಂಚಾ೦ಗವು ಯಾವ ಹಬ್ಬವೂ ಇಲ್ಲವೆನ್ನುವದು! ಹಾಗಾದರೆ ಭೇರೆಡೆಯಲ್ಲಿ ಔತಣವಿರಬಹುದೇ? ಇದೀಗ ಸರಿ, ದಿವಾನ ಬಹದ್ಧೂರರ ಮನೆಯಲ್ಲಿ ಯಾವದೋ ಹುಟ್ಟಿದ ದಿನವೆಂದು ಸದ್ಗೃಸ್ಥರಿಗೆ ಊಟಕ್ಕೆ ಹೇಳಿದ್ದಾರೆ.
“ಕೃಷ್ಣರಾಯನು ಹೆೊರಬಿದ್ದೊಡನೆಯೇ ನಾನು ಚಿನಿವಾಲನನ್ನು ವಿಚಾರಿಸಬಹುದಾಗಿತ್ತು. ಹಾಗೆ ಮಾಡಿದ್ದಲ್ಲಿ ಆ ಚಿನಿವಾಲನು ನಾನು ಬ೦ದ ವಿಷಯವನ್ನು ಕೃಷ್ಣರಾಯನಿಗೆ ತಿಳಿಸುವ ಸಂಭವವಿತ್ತು. ಏಕೆಂದರೆ, ಪತ್ತೇದಾರನಾದ ನನ್ನ ಗುರುತು ಅವನಿಗಿರುವದರಿ೦ದ, ಒಂದಿಲ್ಲೊಂದು ಸಂಶಯದಿಂದ ಅವನು ಕೃಷ್ಣರಾಯನಿಗೆ ನಾನು ಬಂದ ವಿಷಯವನ್ನು ತಿಳಿಸಿಯೇ ತಿಳಿಸುತ್ತಿದ್ದನು.
“ಹಾಗಾದರೆ ಆ ಆಭರಣಗಳು ಹೊಸವೋ ಅಥವಾ ಹಳೆಯವೋ? ಒಂದು ವೇಳೆ ಹೊಸವಾಗಿದ್ದರೆ ಕೃಷ್ಣ ರಾಯನು ಅವುಗಳನ್ನು ಕೊ೦ಡು ತಂದಿರಬೇಕು. ಅಥವಾ ಹಳೆಯವಾಗಿದ್ದರೆ ಒತ್ತಿ (Mortgage) ಯಿ೦ದ ಬಿಡಿಸಿ ತಂದಿರಬೇಕು.
ಆದುದರಿ೦ದ ಇದರ ಮರ್ಮವನ್ನು ಅರಿಯಲು ನಾನು ಬೇರೊಂದು ತಂತ್ರವನ್ನು ಹೂಡಬೇಕು.”
ಈ ಪರಿಯ ಯೋಜನಾ ಮಾಲೆಯಲ್ಲಿ ಲೀನನಾಗಿದ್ದ ಭೀಮಸಿ೦ಗನನ್ನು ಹರಿಣಿಯು ಊಟಕ್ಕೆಂದು ಕರೆಯಲು, ಅವನು ಮಧ್ಯಾಹ್ನವು ಮೀರಿದುದನ್ನು ಅರಿತು ಬಹು ಚಕಿತನಾದನು.
ಇತ್ತ ದಿವಾನ ಬಹದ್ದೂರರ ಮನೆಯಲ್ಲಿ ಬಹಳ ಗಡಿಬಿಡಿಯು ನಡೆದಿತ್ತು. ಗು೦ಡೇರಾಯನೂ ಚಂಚಲಾ-ಇಂದುಮತಿಯರೂ ಬಂದಿದ್ದರು. ಇತರ ಸಭ್ಯ ಗೃಹಸ್ಥರೂ, ಅನೇಕ ಮಹಿಳೆಯರೂ ಮನೆಯ ಮು೦ದಿನ ಹೂದೋಟದಲ್ಲಿ ಗುಂಪುಗುಂಪಾಗಿ ತಿರುಗಾಡುತ್ತಿದ್ದರು.
ಇ೦ತಹ ವೇಳೆಯಲ್ಲಿ ಒಬ್ಬ ಜಾದೂಗಾರನು (Magician) ಅಲ್ಲಿಗೆ ಬ೦ದನು; ಅವನ ಮತ್ತು ಅವನ ಅನುಯಾಯಿಗಳ ದುಃಖವನ್ನು ದಿಟ್ಟಿಸಿ ನೋಡಿದರೆ ಬಹು ಚತುರ ಜನಗಳೆನ್ನುವದು ಒಡೆದು ಕಾಣುತ್ತಿತ್ತು. ಆಗ ದಿವಾನಬಹದ್ದೂರರೇ ಮುಂದೆ ಒ೦ದು ತಾಸು ವಿನೋದವನ್ನು ಮಾಡಿ ತೋರಿಸ ಹೇಳಿದರು. ಜಾಣನಾದ ಮುಖ್ಯಜಾದೂಗಾರನು ವಿನೋದಗಳ ಮಧ್ಯದಲ್ಲಿ ವಿಕಟವಾದವನ್ನು ಪ್ರಾರ೦ಭಿಸಿದನು. ಅವನ ಹುಚ್ಚು ಕಥೆ ಹಾಗೂ ವಿನೋದಗಳಿಗೆ ಎಲ್ಲರೂ ನಗುತ್ತಿದ್ದರು. ಮುಖ್ಯ ಜಾದೂಗಾರನು -ತನ್ನ ತೀಕ್ಷ್ಣವಾದ ದೃಷ್ಟಿಯಿಂದ ಕೆಲವು ವ್ಯಕ್ತಿಗಳನ್ನು ಆ೦ಗಾಲಿನಿಂದ ನಡುನೆತ್ತಿಯವರೆಗೂ ದಿಟ್ಟಿಸಿ ದಿಟ್ಟಿಸಿ ನೋಡುತ್ತಿದ್ದನು. ಇವನು ಮಾತನಾಡುವದು ಬರಿಯ ಮರುಳಾಟವೆಂದು ಸಕಲರು ತಿಳಿದಿದ್ದರೂ, ಕೃಷ್ಣರಾಯನೂ ಚಂಚಲೆಯೂ ಬಹು ಗಾಬರಿಯಾದರು. ಇಂದುಮತಿಯು ಸ೦ಶಯಗ್ರಸ್ತಳಾಗಿ ತಾನು ಈ ಮೊದಲು ಕೇಳಿದ ಈ ಧ್ವನಿಯು ಯಾರದೆಂದು ಚಿಂತಾಕುಲಳಾದಳು. ಜಾದೂಗಾರನು ಒ೦ದಾನೊಂದು ವಿಷಯವನ್ನು ಒತ್ತಿ ಒತ್ತಿ ನುಡಿಯಲು, ಚಂಚಲೆಯು ಗಾಬರಿಯಿಂದ ಚಿಟ್ಟನೆ ಚೀರಿಬಿಟ್ಟಳು!! ಸಕಲರ ನೋಟವೂ ಅತ್ತ ಕಡೆಗೆ ತಿರುಗಲು ನಮ್ಮ ಜಾದೂಗಾರನು ಗಂಟು-ಮೂಟೆಗಳನ್ನು ಕಟ್ಟಿ ಹೊರಡಲನುವಾದನು.
ದಿವಾನ ಬಹದ್ದೂರರು ರೂಪಾಯಿಗಳನ್ನು ಬಹುಮಾನವಾಗಿ ಕೊಡ ಹೋಗಲು, ಅವನು ಕೈಮುಗಿದು ಹಾಗೆಯೇ ಹೊರಟುಹೋದನು.
*****
ರಹಸ್ಯ ಸ್ಫೋಟನ.
೭ ಹಿಡಿದ ಕಾರ್ಯ ಸಾಧಿಸಲು ಹೆಣವಾದರೂ ಹೊರಬೇಕು
ಭೀಮಸಿಂಗನಿಗೆ ಆ ಆಭರಣಗಳು ಅಡುವಿಟ್ಟವುಗಳೆಂದು ತಿಳಿದು ಬಂದರೂ, ಪತ್ತೆಯ ಕಾರ್ಯದಲ್ಲಿ ಮಹತ್ವದ ಲಾಭವಾದಂತೆ ಕಂಡು ಬರಲಿಲ್ಲ. ಯೋಚಿಸುತ್ತ ಹೋದಂತೆ ಅವನ ಸಂಶಯವು ಕೃಷ್ಣರಾಯನ ಮೇಲೆ ದೃಢವಾಗುತ್ತ ಬಂತು; ಆದರೂ ಪ್ರತ್ಯಕ್ಷವಾದರೂ ಪರಾಂಬರಿಸಿ ನೋಡಬೇಕೆಂಬ ನುಡಿಯಂತೆ ಕೃಷ್ಣ ರಾಯನ ನಿಜಸ್ಥಿತಿಯನ್ನು ಬೈಲು ಮಾಡಲು ಅವನು ಟೊಂಕವನ್ನು ಕಟ್ಟಿದನು. ಯಾವ ಕ್ಷಣದಲ್ಲಿ ಕೃಷ್ಣರಾಯನು ಚಂಚಲೆಯ ಅಣ್ಣನ ಮಗನಲ್ಲವೆಂದು ತಿಳಿಯ ಬಂದಿತೋ, ಯಾವ ಕ್ಷಣದಲ್ಲಿ ವಿಚಿತ್ರವಾದ ತಿಜೂರಿಯ ಸಂಕೇತವು ಇವನಿಗೂ ತಿಳಿದಿತ್ತೆಂದು ಭೀಮಸಿಂಗನು ಅರಿತನೋ ಆ ಕ್ಷಣದಿಂದ ಅವನು ಕೃಷ್ಣ ರಾಯನ ಮೇಲೆ ವಕ್ರದೃಷ್ಟಿಯನ್ನು ಚಲ್ಲಿದ್ದನು. ಈಗ ಇಂದುಮತಿಯು ಹೇಳಿದಂತೆ ಅವನು ಶ್ರೇಷ್ಟ ಚಿನಿವಾಲನಾದ ಚಕ್ರಪಾಣಿರಾಯನ ಅಳಿಯನಾದರೂ ಅಹುದೋ ಹೇಗೆಂದು ವಿಚಾರಿಸಲು ಭೀಮನಿಂಗನು ಹೈದರಾಬಾದಿಗೆ ಬಂದನು.
ಬರುವಾಗ ಅವನು ಬೆಂಗಳೂರ ಸಿಟಿ ಮ್ಯಾಜಿಸ್ಟ್ರೇಟರ ಕಡೆಯಿಂದ ಕಾರ್ಯಾರ್ಥಿಯಾಗಿ ಬಂದಿರುವನೆಂದು ಪತ್ರವನ್ನು ತಂದಿದ್ದುದರಿಂದಲೂ, ಮಾತಿನಲ್ಲಿ ಬಹು ಸರಸ ಹೃದಯನಾಗಿದ್ದುದರಿಂದಲೂ ಚಕ್ರಪಾಣಿರಾಯನು ಅವನಿಗೆ ಯೋಗ್ಯ ಸನ್ಮಾನವನ್ನು ಮಾಡಿದನು.
ಮಾತಿನ ಸಂದರ್ಭವನ್ನು ನೋಡಿಕೊಂಡು ಚಕ್ರಪಾಣಿರಾಯರಿಗೆ ಹೆಣ್ಣು ಮಕ್ಕಳಾರೂ ಹುಟ್ಟಿಯೇ ಇಲ್ಲವೆಂದೂ, ತಾನೊಬ್ಬನೇ ಅವರ ಮಗನೆಂದೂ ತನ್ನ ಹೆಸರು ವಾಸುದೇವರಾಯನೆಂದೂ ಅವನು ಹೇಳಿಬಿಟ್ಟನು!
ಭೀಮಸಿಂಗನು ಈ ವಿಚಿತ್ರ ಪರಂಪರೆಗಳನ್ನು ನೋಡಿ ಬಹಳ ಭ್ರಾಂತನಾದನು. ಕಲ್ಲಿದ್ದಲಿನ ಗಣಿಯಲ್ಲಿ ಆಳವಾಗಿ ಅಗಿಯುತ್ತ ಹೋದಂತೆ, ಹೆಚ್ಚು ಹೆಚ್ಚಾಗಿ ಕಪ್ಪೇ ಕಂಡು ಬರುವಂತೆ ಇಲ್ಲಿನ ಸ್ಥಿತಿಯಾಯಿತೆಂದು ಬಗೆದನು.
ಮುಂದೆರಡು ದಿನಗಳಲ್ಲಿ ಮಾತಿನಲ್ಲಿ ಬಹು ಚತುರನಾದ ಭೀಮಸಿಂಗನು ಚಕ್ರಪಾಣಿರಾಯರ ಕಾಲದಿಂದಲೂ ಮನೆಯಲ್ಲಿ ನಂಬಿಗೆಯಿಂದಿದ್ದ ಒಬ್ಬ ಸೇವಕನ ಸ್ನೇಹವನ್ನು ಮಾಡಿದನು. ಸೇವಕನು ಭೀಮಸಿಂಗನೆ ಮಾತಿಗೂ ಅವನು ಕೊಡುವ ಬಹುಮಾನಗಳಿಗೂ ಬಲು ಮನಸೋತಿದ್ದನು. ಮುದುಕರಲ್ಲಿ ರೂಢಮೂಲವಾಗಿರುವ ತಮ್ಮ ಹಿಂದಿನ ಜೀವನದ ಸಂಗತಿಗಳನ್ನು ಬಹು ಸ್ವಾರಸ್ಯವಾಗಿ ಚಿತ್ರಿಸುವ ಕೌಶಲ್ಯವು ಈ ಮುದುಕನಲ್ಲಿಯೂ ಇತ್ತು. ನಮ್ಮ ಪತ್ತೇದಾರನು ಅದರ ಮಹತ್ವದ ಉಪಯೋಗವನ್ನು ತೆಗೆದುಕೊಳ್ಳದಿರಲಿಲ್ಲ.
ಆ ಮುದುಕನ ದಿನದಿನಗಳ ಮಾತಿನಿಂದ ಛೀಮಸಿಂಗನು ಇಷ್ಟು ಮಾತ್ರ ತಿಳಿದುಕೊಂಡನು:-
“ಚಕ್ರಪಾಣಿರಾಯನ ಮೊದಲಿನ ಹೆಸರು ಸರ್ವೊತ್ತಮರಾಯನೆಂದು. ಅವನು ಪ್ರಾಯದಲ್ಲಿ ಬಹು ಕಾಮಾಂಧನಾಗಿದ್ದನು. ಮುಂದೆ ಪ್ರಾಯದಲ್ಲಿಯೇ ತನ್ನ ತಂದೆಯ ವಿಶಿಷ್ಟ ಸಂಪತ್ತಿಗೆ ತಾನೇ ಅಧಿಕಾರಿಯಾದನು. ಆಗ ಅವನ ಮನೆಯಲ್ಲಿ ಪೂಜಾರಿಯೊಬ್ಬನಿದ್ದನು. ಅವನ ಮಗಳು ಅತ್ಯಂತ ಸುಂದರಿಯು. ಅವಳ ಹೆಸರು ಕಮಲಾ. ಉಪಾಯಾಂತರದಿಂದ ಇವನು ಆ ತರುಣಿಯನ್ನು ಕೆಡಿಸಿದನು. ಕೆಡಕಿನ ಕಿರೀಟವಿದೆಂಬಂತೆ ಅವಳು ಗರ್‍ಭಿಣಿಯಾದಳು. ಇದು ಜನಸಮಾಜಕ್ಕೆ ತಿಳಿಯಬಾರದೆಂದು ಪೂಜಾರಿಯೂ, ಅವನ ಹೆಂಡತಿಯೂ ಕಮಲೆಯನ್ನು ಬೆಂಗಳೂರಿನ ಹೆರಿಗೆಯ ಆಸ್ಪತ್ರೆ (Maternity Hospital)ಗೆ ಸಾಗಿಸಿದರು. ಹುಟ್ಟಿದ ಸುಲಕ್ಷಣವಾದ ಗಂಡುಮಗುವನ್ನು ಸೂಲಗಿತ್ತಿಗೇ ಸಾಕಿಕೊಳ್ಳೆಂದು ಕೊಟ್ಟರು. ಸರ್‍ವೋತ್ತಮರಾಯರು ಅವಳಿಗೆ ೫೦೦ ರೂ, ಗಳನ್ನು ಕೊಟ್ಟರು. ಇದೆಲ್ಲ ಈ ಸೇವಕನ ಸಮಕ್ಷಮದಲ್ಲೇ ನಡೆದುದು.”
“ಮುಂದೆ ಒಂದೆರಡು ವರ್ಷಗಳಲ್ಲಿ ಕಮಲೆಯನ್ನು ಬಹಳ ವರದಕಕ್ಷಿಣೆಯೊಡನೆ ಜಯಲಕ್ಷ್ಮಿ ಬ್ಯಾಂಕಿನ ಮ್ಯಾನೇಜರರಾದ ಗಂಡೇರಾಯರಿಗೆ ಕೊಟ್ಟು ಲಗ್ನ ಮಾಡಿದರು. ಪ್ರೌಢವಿವಾಹದಲ್ಲಿ ಬಹಳ ಶ್ರದ್ಧೆಯುಳ್ಳ ಅವರು ಹೆಚ್ಚೇನೂ ಚರ್ಚಿಸಲಿಲ್ಲ. ಕಮಲೆಯ ಗಂಡನ ಮನೆಯ ಹೆಸರು ಚಂಚಲಾ.
ಮುಂದೆ ಕೆಲವು ದಿನ ಕಳೆಯಿತು. ಸರ್ವೋತ್ತಮರಾಯರು ಮೊದಲೇ ಮದಾಂಧರು; ಮೇಲೆ ಮದ್ಯವನ್ನು ಕುಡಿಯುವ ದಿವ್ಯಪದ್ಧತಿಯಿತ್ತು. ಒಂದು ಸಲ ಸೇವಕನೊಬ್ಬನನ್ನು ಎಚ್ಚರದಪ್ಪಿ ಹೊಡೆಯಲಾರಂಭಿಸಲು ಅವನು ಸತ್ತು ಹೋದನು. ಆಗ ಅವರು ತಲೆ ತಪ್ಪಿಸಿಕೊಂಡು ಹೈದರಾಬಾದಿಗೆ ಬಂದರು. ಸರಕಾರಕ್ಕೆ ಗೊತ್ತಾಗಬಾರದೆಂದು ಚಕ್ರಪಾಣಿರಾಯರೆಂದು ಪುನಃ ನಾಮಕರಣ ಮಾಡಿಕೊಂಡರು! ಅವರಿಗೆ ಹೆಣ್ಣು ಮಕ್ಕಳಾರೂ ಹುಟ್ಟಿಯೇ ಇರಲಿಲ್ಲ!!
ಭೀಮಸಿಂಗನು ಆ ಸೂಲಗಿತ್ತಿಯ ಹೆಸರೇನೆಂದು ವಿಚಾರಿಸಲು ಯಮುನೆ ಎಂದು ತಿಳಿಯಿತು.
ಅನಂತರ ಭೀಮಸಿಂಗನು ಪುನಃ ಬೆಂಗಳೂರಿನಲ್ಲಿಯೇ ಪತ್ತೆಯ ಕೆಲಸವನ್ನು ಸಾಗಿಸಬೇಕಾಯಿತು. ಆದುದರಿಂದ ಅವನು ಹೈದರಾಬಾದನ್ನು ಬಿಟ್ಟನು. ಬೆಂಗಳೂರಿನ ಹೆರಿಗೆಯ ಆಸ್ಪತ್ರೆಯಲ್ಲಿ ವಿಚಾರಿಸಲು, ‘ಯಮುನೆ’ ಎಂಬ ಸೂಲಗಿತ್ತಿಯು ಸಿಕ್ಕಳು. ಅವಳನ್ನು ಗುಪ್ತವಾಗಿ ವಿಚಾರಿಸಿದ್ದರಲ್ಲಿ ಚಂಚಲೆಯು ಮಗುವನ್ನು ಕೊಟ್ಟು ಬಿಟ್ಟುದೂ, ಸರ್ವೋತ್ತಮ(ಚಕ್ರಪಾಣಿ)ರಾಯರು ೫೦೦ ರೂ. ಬಹುಮಾನ ಕೊಟ್ಟುದೂ ನಿಜವೆಂದು ತಿಳಿಯಬಂದಿತು; ಆದರೆ ಚಂಚಲೆಯ ಮಗುವು ಒಂದು ವರ್ಷ ತುಂಬುವುದರೊಳಗಾಗಿ ಸತ್ತು ಹೋಯಿತೆಂದು ಯಮುನೆಯ ದುಃಖದಿಂದ ಹೇಳಿದಳು. ಹಾಗಾದರೆ, ಇನ್ನು ಮುಂದೆ ಭೀಮಸಿಂಗನು ಏನು ಮಾಡಬೇಕು? ಇಷ್ಟೆಲ್ಲ ಪ್ರಯತ್ನಗಳ ಫಲವೇನು? ಅಂತೂ ಚಂಚಲೆಗೆ ಬಂಧುವಲ್ಲದ ಈ ಕೃಷ್ಣರಾಯನು ಅದಾವ ಮೋಸಗಾರನಾಗಿರಬೇಕು? ಇಂತಹ ಯೋಚನೆಗಳಿಂದ ಭೀಮಸಿಂಗನು ಬಹು ಹಣ್ಣಾದನು! ಏನೇನು ಮಾಡಿದರೂ ಅವನ ಪತ್ತೆಯ ಕಾರ್ಯದಲ್ಲಿ ಸ್ಪಷ್ಟವಾದ ಮಾರ್ಗವು ಸಿಕ್ಕಲೇ ಇಲ್ಲ.
*****
೮ ರಹಸ್ಯ ಸ್ಫೋಟನ II
Take warning hence ye, damsels fair, Of men’s insidious arts beware.
ಈ ದಿನ ಗುಂಡೇರಾಯನು ಊರಲ್ಲಿಲ್ಲ. ಇಂದುಮತಿಯಊ ಮನೆಯಲ್ಲಿಲ್ಲ. ಚಂಚಲೆಯ ತಾಯಿಯು ಮಗಳ ಮನೆಯಲ್ಲಿಯೇ ಬಂದಿದ್ದಾಳೆ. ಮಧ್ಯಾಹ್ನ ಮೂರು ಗಂಟೆಯಾಗಿರಬಹುದು. ಆಳು ಮಹಡಿಯ ಮೇಲೆ ಹತ್ತಿ ಬಂದು “ಅಮ್ಮಾ, ಆದಾರೋ ತಮ್ಮನ್ನು ನೋಡ ಬಂದಿದ್ದಾರೆ” ಎಂದನು.
ಅಷ್ಟರಲ್ಲಿ ಇಂತಹ ಸಂಧಿಯನ್ನು ಹೊಂಚು ಹಾಕಿದ್ದ ಭೀಮಸಿಂಗನು, ಮೇಲಕ್ಕೆ ಬಂದೇ ಬಿಟ್ಟನು! ತಾಯಿ-ಮಕ್ಕಳು ಭಯಭ್ರಾಂತರಾದರು. ಭೀಮಸಿಂಗನ “ಅಮ್ಮಾ, ನೀವಾರೂ ಭಯಪಡುವ ಕಾರಣವಿಲ್ಲ. ನಿಮ್ಮ ಹಿತದ ಸಲುವಾಗಿ ಕೆಲವು ಮಹತ್ವದ ಮಾತುಗಳನ್ನು ಕೇಳಲು ನಾನಿಲ್ಲಿಗೆ ಬರಲೇಬೇಕಾಯಿತು. ಇಲ್ಲದಿದ್ದರೆ ಗುಂಡೇರಾಯರಿಗೆ ಇಲ್ಲದ ಆರೋಪವು ಬರುವಂತಿದೆ” ಎಂದನು.
ತಾಯಿ-ಮಕ್ಕಳು ಬಹು ಉತ್ಕಂಠಿತರಾದರು. ಭೀಮಸಿಂಗನ ಸನ್ನೆಯಂತೆ ಸೇವಕನು ಹೊರಟು ಹೋದನು.
ಕೃಷ್ಣರಾಯನು ಚಕ್ರಪಾಣಿರಾಯರ ಅಳಿಯನೇ ಆಗಲಿ ಅಥವಾ ಚಂಚಲೆಯ ಅಣ್ಣನ ಮಗನೇ ಆಗಲಿ ಅಲ್ಲವೆಂಬ ವಿಷಯವನ್ನು ತಾನು ಕಂಡು ಹಿಡಿದ ಮಾರ್ಗವನ್ನೂ, ಹೈದರಾಬಾದಿನಲ್ಲಿ ತಾನು ಅರಿತ ವಿಷಯಗಳನ್ನೂ ಭೀಮಸಿಂಗನು ವಿವರಿಸಲು, ತಾಯಿ-ಮಕ್ಕಳು ಅರಳಿದ ಕಣ್ಣುಗಳಿಂದ ಆಶ್ಚರ್ಯಭರಿತರಾಗಿ ಕೇಳುತ್ತಿದ್ದರು.
ಕೃಷ್ಣರಾಯನು ಯಾರೆಂಬ ವಿಷಯವನ್ನು ಇದ್ದಕಿದ್ದಂತೆ ಹೇಳಿದರೆ, ಗುಂಡೇರಾಯನ ಮೇಲೆ ಬರಬಹುದಾದ ವಿಪತ್ತು ತಪ್ಪುವದೆಂದು ಭೀಮಸಿಂಗನ್ನು ಹೇಳಲು, ಚಂಚಲೆಯು ಮಾತನಾಡಲಾರಂಭಿಸಿದಳು:-
“ಜ್ಞಾನಿಗಳೆ, ನಿಜಸ್ಥಿತಿಯನ್ನು ಹೇಳುವ ಮನಸ್ಸು ನನಗಿಲ್ಲ; ಆದರೂ ಗುಂಡೇರಾಯನ ಹಿತಕ್ಕಾಗಿ ನಿರ್ವಾಹವಿಲ್ಲದೆ ಇದ್ದುದನ್ನು ಹೇಳಲೇ ಬೇಕಾಗಿದೆ. ಮುಂದೆ ನಾನು ಹೇಳುವ ಮತ್ತು ಈ ಮೊದಲು ತಮಗೆ ತಿಳಿದಿರುವ ವಿಚಿತ್ರ ವಿಷಯಗಳನ್ನು ನನ್ನ ಪತಿಗೆ ನೀವು ತಿಳಿಸುವುದಿಲ್ಲವೆಂದು ದೃಢವಾಗಿ ನಂಬಿರುತ್ತೇನೆ. ರಾಯರೇ, ನಿಮಗೆ ಹೇಗಿದ್ದರೂ ನನ್ನ ಹಾಗೂ ಚಕ್ರಪಾಣಿರಾಯರ ಪ್ರೇಮಕಥನವು ತಿಳಿದಿದೆ. ಇದರ ಫಲವಾಗಿ ಒಂದು ಮಗುವು ಇಲ್ಲಿಯ ಹೆರಿಗೆಯ ಆಸ್ಪತ್ರೆಯಲ್ಲಿ ಹುಟ್ಟಿದ ಸಂಗತಿಯೂ, ಅದನ್ನು ಸೂಲಗಿತ್ತಿಗೆ ಸಾಕಿಕೊಳ್ಳೆಂದು ಕೊಟ್ಟ ವಿಷಯವೂ ತಿಳಿದಿದೆ. ಮಂದೆ ಗುಂಡೇರಾಯರು ನನ್ನನ್ನು ಮೋಹಿಸಿ ಲಗ್ನವಾದರು. ಈಗೆರಡು ವರ್ಷಗಳ ಹಿಂದೆ ಈ ಕೃಷ್ಣರಾಯನು ನನ್ನ ಯಜಮಾನರಿಲ್ಲದ ವೇಳೆಯಲ್ಲಿ ಒಂದು ನನ್ನನ್ನು ಕಂಡನು. ಅವನ ಹೀನ ಸ್ಥಿತಿಯನ್ನು ನೋಡಿ ನನಗೆ ಮರುಕವಾಯಿತು. ಅವನ ವೆಚ್ಚಕ್ಕಾಗಿ ನನ್ನಲ್ಲಿದ್ದ ಧನವನ್ನು ಕೊಡಲಾರಂಭಿಸಿದೆ. ಮುಂದೆ ಅವನು ೧೦೦-೧೦೦ ಹೀಗೆ ದುಡ್ಡನ್ನು ಬೇಡಲಾರಂಭಿಸಿದನು.”
ಭೀಮ: “ಓಹೋ! ಹೀಗೋ? ಅದಕ್ಕಾಗಿ ನೀವು ಒತ್ತಿಯಿಡಲು (Mortgage) ನಿಮ್ಮ ಒಡವೆಗಳನ್ನು ಕೊಡುತ್ತಿದ್ದಿರೋ? ಆ ರಾತ್ರಿ ಅವನು ಬಿಡಿಸಿಕೊಂಡು ಬಂದ ವಿಷಯವನ್ನು ನಾನು ಬಲ್ಲೆ.”
ಚಂಚಲಾ (ಆಶ್ಚರ್ಯದಿಂದ): “ಚಾಣಾಕ್ಷರಾದ ನಿಮಗೆ ಹೇಳತಕ್ಕ ವಿಷಯವಾವುದೂ ಬಹುಶಃ ನನ್ನಲ್ಲಿರಲಿಕ್ಕಿಲ್ಲ! ಆದರೂ ಹೇಳುತ್ತೇನೆ: ನಾನು ಅವನ ಇಚ್ಛೆಯಂತೆ ನಡೆಯದಿದ್ದರೆ ಎಲ್ಲವನ್ನೂ ಹೇಳಿಬಿಡುತ್ತೇನೆಂದು ಹೆದರಿಸಿದ.’
ಭೀಮ: “ಎಲ್ಲವನ್ನೂ ಎಂದರೆ?”
ಚಂಚಲಾ: “ನನ್ನ ವಿಷಯದಲ್ಲಿ ನಿಮಗೆ ತಿಳಿದಿರುವ ಎಲ್ಲ ವಿಷಯವನ್ನೂ ಅವನು ಕಂಡು ಹಿಡಿದಿದ್ದನು. ಅವನು ನನ್ನ ಮಗನೆಂಬ ವಿಷಯವು ನನ್ನ ಯಜಮಾನರಇಗೆ ತಿಳಿದರೆ ಅನರ್ಥವಾಗುತ್ತಿತ್ತು!”
ಭೀಮ (ನಸುನಕ್ಕು): “ಹೀಗೆಲ್ಲ ಹೆದರಿಸಿದನೋ ಹಾಗಾದರೆ? ನಿಜ ಸ್ಥಿತಿಯನ್ನು ಹೇಳಬೇಕೆಂದರೆ ಅವನೇನೂ ನಿಮ್ಮ ಮಗನಲ್ಲ!”
ತಾಯಿ-ಮಕ್ಕಳಿಬ್ಬರೂ ಹೌಹಾರಿ ಕೇಳಿದರು: “ಇದೇನು. ಸ್ವಾಮೀ, ಹೀಗೆ ಹೇಳುತ್ತೀರಿ!!! ಹಾಗಾದರೆ ಅವನಾರು?”
ಭೀಮ: “ಸರಿ! ಬಹಳ ಚನ್ನಾಯಿತು!! ಇಷ್ಟ ದಿನಗಳಿಂದಲೂ ದುಡ್ಡು ಕೊಟ್ಟು ಸಹಾಯ ಮಾಡಿದ ನಿಮಗೇ ಗೊತ್ತಿಲ್ಲವೆ?”
ಇಬ್ಬರೂ: “ಮೋಸವಾಯಿತು! ಅವನಾರು? ಸ್ವಾಮೀ, ಆ ಕೃಷ್ಣರಾಯನಾರು?”
ಭೀಮ: “ಆ ವಿಷಯವನ್ನೇ ತಿಳಿದುಕೊಳ್ಳಲು ನಾನಿಲ್ಲಿಗೆ ಬಂದುದು. ನಾನು ಹೊತ್ತುಗಳೆದುದೆಲ್ಲ ವ್ಯರ್ಥವಾದಂತಿದೆ!
ಚಂಚಲಾ: “ನಿಜವಾಗಿಯೂ ಅವನು ನನ್ನ…….. ಅಲ್ಲವೇ? ವೇಷಧಾರಿಯಾದ ಮೋಸಗಾರನೇ?”
ಭೀಮ: “ತಾಯೀ, ನನಗೇನೂ ತಿಳೆಯದು. ನೀವೇ ಯೋಚಿಸಬಹುದು” ಎಂದು ಹೇಳಿ, ಸೂಲಗಿತ್ತಿಯ ಕೈಫಿಯತ್ತನ್ನು ಓದಿ ಹೇಳಿ, ಚಂಚಲೆಯ ಮಗುವು ಬಹಳ ದಿನಗಳ ಹಿಂದೆಯೇ ಸತ್ತು ಹೋದ ವಿಷಯವನ್ನು ಅವರ ಮನವರಿಕೆಯಾಗುವಂತೆ ಮಾಡಿದನು.
ಹೆಂಗಳೆಯರಿಬ್ಬರೂ ಭ್ರಾಂತರಾಗಿ ಕೇಳುತ್ತಿದ್ದರು. ಹೆಚ್ಚು ಮಾತನಾಡಲು ಭೀಮಸಿಂಗನಿಗೆ ಹೆಚ್ಚು ವೇಳೆಯಿರಲಿಲ್ಲ. ಬ್ಯಾಂಕಿನ ಕಳವಿನ ವಿಷಯದಲ್ಲಿ ಕೃಷ್ಣರಾಯನ ಸಂಬಂಧವಿತ್ತೇ ಹೇಗೆಂದು ಅವನು ವಿಚಾರಿಸಲು, ಚಂಚಲೆಯು ಹೀಗೆ ಹೇಳಿದಳು:
“ಕಳವಾದ ದಿನದ ರಾತ್ರಿ ಕೃಷ್ಣರಾಯನು ಊಟಕ್ಕೆ ಬಂದಿದ್ದನು.”
ಭೀಮ: “ಸರಿ! ಬಿಡಿ. ಬಿಡಿ!! ನಿಮ್ಮ ಹೆಸರನ್ನು ತಿಜೂರಿಗಿಟ್ಟ ವಿಷಯವು ಅವನಿಗೆ ತಿಳಿದು ಹೋಯಿತು! ಅಲ್ಲವೆ? ಮುಂದೆ?
ಪುನಃ ತಾಯಿ-ಮಕ್ಕಳಿಬ್ಬರೂ ಬೆರಗಾದರು. ಚಂಚಲೆಯು ಸಾವರಿಸಿಕೊಂಡು ಹೇಳಲಾರಂಭಿಸಿದಳು:
“-ಸರಿ! ರಾತ್ರಿ ನನ್ನನ್ನು ಕಾಡಿಬಿಟ್ಟನು. ಕೀಲಿ ಕೈಯನ್ನು (Key) ಗುಟ್ಟಾಗಿ ತಂದು ಕೊಡದಿದ್ದರೆ, ಯಜಮಾನರ ಮುಂದೆ ನನ್ನ ವಿಷಯವನ್ನೆಲ್ಲ ಹೇಳುವುದಾಗಿಯೂ, ತಂದು ಕೊಟ್ಟರೆ ಪುನಃ ಎಂದೆಂದೂ ನನ್ನ ಬಳಿಯಲ್ಲಿ ದುಡ್ಡಿಗಾಗಿ ಬರುವುದೇ ಇಲ್ಲವೆಂದೂ ಹೇಳಿದನು, ನಾನು ಬೇಡಿಕೊಂಡೆ, ಕಾಲಿಗೆ ಬಿದ್ದೆ; ದೇವರಲ್ಲಿ ಮೊರೆಯಿಟ್ಟೆ-“
ಭೀಮ: “ಸರಿ-ಸರಿ! ಕೊನೆಗೆ ಗುಂಡೇರಾಯರಿಗೆ ತಿಳೆಯದಂತೆ ಬೀಗದ ಕೈಯನ್ನು ತಂದುಕೊಟ್ಟಿರಿ, ಅಲ್ಲವೆ?”
ಚಂಚಲಾ(ಆರಕ್ತಮುಖಳಾಗಿ): “ಅಹುದು! ಅವನು ಬೀಗವನ್ನು ತೆರೆಯುವಾಗ ನನಗೆ ಬಹಳ ಸಂಕಟವಾಯಿತು. ಪತಿದೇವರಿಗೆ ಮೋಸಮಾಡುವ ಸತಿಯೆಂಥವಳೆಂದುಕೊಂಡೆ. ರೇಗಿದ ಹೆಬ್ಬುಲಿಯಂತೆ ಹಾರಿ, ಬೀಗದಿಂದ ಕೈಯನ್ನು ಕಿತ್ತುಕೊಂಡೆ. ಅವನು: `ಬಹಳ ಜೋಕೆ! ನೀನು ಸಂಸಾರಗೇಡಿಯೂ ಮಾನಹೀನಳೂ ಆಗುವೆ!’ಎಂದನು. ನಾನು ಬೆದರಿದೆ. ಕ್ಷಮಿಸೆಂದು ಕಾಲಿಗೆ ಬಿದ್ದೆ. ಅವನು ನಿರ್ಭಯನಾಗಿ ೫೦,೦೦೦ ರೂ. ಗಳ ನೋಟುಗಳನ್ನು ತಕ್ಕೊಂಡು ಹೋದನು. ಮುಂದಿನ ಸಂಗತಿಗಳು ನಿಮಗಂತೂ ತಿಳಿದೇ ಇವೆ.” ಎಂದಳು.
ಭೀಮಸಿಂಗನು ಇನ್ನು ಕಾಲಹರಣ ಮಾಡುವುದು ಅನವಶ್ಯವೆಂದು ತಿಳಿದು, ಆ ಹೆಂಗಳೆಯರಿಗೆ ಹೆದರಕೂಡದೆಂದು ನಂಬಿಗೆಯನ್ನು ಕೊಟ್ಟು, ತಾನು ಮನೆಯ ಕಡೆಗೆ ಹೊರಟನು.
*****
೯ ಮಾಡಿದ ಪಾಪಕ್ಕೆ ಮನವೇಸಾಕ್ಸಿ.
Early or late we stoop to fate.
ಭೀಮನಸಿಂಗನು ವೋಲೀಸ್ ಇನ್ಸಪೆಕ್ಟರರಿಗೆ ಕಳವಿನ ಪತ್ತೆಯಾಯಿತೆಂದು ಹೇಳಿ ಕಳುಹಿಸಿದನು. ಅವರಿಗೆ ಆಶ್ಚರ್ಯವಾಯಿತು. ಏಕೆಂದರೆ ಅವರಿನ್ನೂ ರಘುನಾಥರಾಯನೇ ತಪ್ಪಿತಸ್ಥನೆಂದು ಮನವರಿಕೆ ಮಾಡಿಕೊಂಡಿದ್ದರು. ಕ್ಷಣದಲ್ಲಿ ಇಬ್ಬರೂ ಸೇರಿ, ಕೃಷ್ಣರಾಯನ ಮನೆಗೆ ಬಂದರು. ೪-೬ ಜನ ಪೋಲೀಸರು ಅವರನ್ನು ಹಿಂಬಾಲಿಸಿದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಕೃಷ್ಣರಾಯನು ಚಂಚಲೆಗೆ ರೂಪಾಯಿಗಳನ್ನು ಕಳಿಸಿಕೊಡಬೇಕೆಂದೂ, ಇಲ್ಲದಿದ್ದರೆ, ತಾನು ಅವಳ ಮಗನೆಂಬ ವಿಚಿತ್ರವಿಷಯವನ್ನು ಗಂಡೇರಾಯುನಿಗೆ ತಿಳಿಸಬೇಕಾಗುವದೆಂದೂ ಒಂದೆರಡು ಸಲ ಬರೆದ ಪತ್ರವನ್ನು ಭೀಮಸಿಂಗನು ಜೊತೆಯಲ್ಲಿ ಸಂಗ್ರಹಿಸಿ ತಂದಿದ್ದನು.
ದಿವಾಣಖಾನೆಯಲ್ಲಿ ಒಂದು ಆರಾಮೀ ಕುರ್ಚೆ (Easychair) ಯಲ್ಲಿ ಒರಗಿಕೊಂಡು ಕೃಷ್ಣರಾಯನು ಒಂದು ವರ್ತಮಾನಪತ್ರವನ್ನು ಓದುತ್ತಿದ್ದನು. ಇದ್ದಕ್ಕಿದ್ದಂತೆಯೇ ದಿವಾಣಖಾನೆಯು ಪತ್ತೇದಾರ ಇನ್ಸಪೆಕ್ಟರ ಹಾಗೂ ಶಿಪಾಯಿಗಳಿಂದ ತುಂಬಿ ಹೋಗಲು, ಅವನು ಬೆಪ್ಪಾದನು!
ಭೀಮಸಿಂಗನು ತಾನು ಅವನ ವಿಷಯದಲ್ಲಿ ಕಂಡು ಹಿಡಿದ ಒಂದೊಂದೇ ತಂತ್ರಗಳನ್ನು ವಿವರಿಸಹತ್ತಿದನು. ತಾನು ಹೈದರಾಬಾದಿಗೆ ಹೋದುದನ್ನೂ ಮತ್ತು ಕೃಷ್ಣರಾಯನು ಚಕ್ರಪಾಣಿರಾಯರ ಅಳಿಯನಲ್ಲವೆಂಬದನ್ನೂ ಸ್ಪಷ್ಟವಾಗಿ ವಿವರಿಸಲು, ಕೃಷ್ಣರಾಯನ ಮುಖವು ಕೃಷ್ಣವರ್ಣವನ್ನೇ ಹೊಂದಿತು! ಕೃಷ್ಣರಾಯನು ಚಂಚಲೆಯ ಅಣ್ಣನ ಮಗನೆಂದು ಹೇಳಿಕೊಂಡುದನ್ನೂ ತಾನು ಚಂಚಲೆಗೆ ಅಣ್ಣ-ತಮ್ಮಂದಿರಿಲ್ಲದ ವಿಷಯವನ್ನು ತಿಳಿದ ಬಗೆಯನ್ನೂ ವಿಸ್ತರಿಸಲು ಕೃಷ್ಣರಾಯನು ತಲೆ ತಿರುಗಿ ಬೀಳುವಂತಾದನು. ಅವನು ಚಂಚಲೆಯ ಮಗನ ಸೋಗು ಹಾಕಿದುದನ್ನೂ, ಚಂಚಲೆಯ ಮಗನು ಬಾಲ್ಯದಲ್ಲಿಯೇ ತೀರಿಕೊಂಡದ್ದನ್ನೂ ಸ್ಪಷ್ಟಪಡಿಸಲು, ಕೃಷ್ಣರಾಯನು ಮೂರ್ಛಿತನಾದನು.
ಅವನಿಗೆ ನೀರು ತಟ್ಟಿದ ನಂತರ ಮೈಯಲ್ಲಿ ಸ್ಮೃತಿಯಂಟಾಗಲು, ಭೀಮಸಿಂಗನು ತನ್ನ ಮಾತನ್ನು ಮುಂದರಿಸಿದನು.
ಅವನು ಚಂಚಲೆಯ ಕೈಯಿಂದ ರೂಪಾಯಿಗಳನ್ನು ಎತ್ತಿ ಹಾಕಿದ ಬಗೆಯನ್ನೂ ಅವನು ಬರೆದ ಪತ್ರಗಳ ಒಕ್ಕಣಿಕೆಯನ್ನೂ ಒಡೆದೊಡೆದು ಹೇಳಲು, ಅವನು ಬಹು ಕಳೆಗುಂದಿದನು. ಕಳವಿನ ರಾತಿ, ಊಟದ ವೇಳೆಯಲ್ಲಿ ಅವನು ಸಾಂಕೇತಿಕ ಶಬ್ದವನ್ನು ಅರಿತ ಬಗೆಯನ್ನೂ, ಚಂಚಲೆಯನ್ನು ಬಲಾತ್ಕರಿಸಿ ಗುಂಡೇರಾಯನಿಗೆ ಮೋಸ ಮಾಡಿ ೫೦,೦೦೦ ರೂಪಾಯಿಗಳನ್ನು ಎತ್ತಿ ಹಾಕಿದ ದುಷ್ಕೃತ್ಯವನ್ನೂ ವಿವರಿಸಲು, ಕೃಷ್ಣರಾಯನು ಗಟ್ಟಿಯಾಗಿ ಚೀರಿ, ಕೆಳಕ್ಕೆ ಬಿದ್ದು ಬಿಟ್ಟನು! ಈ ಸಲ ಮಾತ್ರ ಕೃಷ್ಣರಾಯನು ನೀರು ತಟ್ಟಿದರೂ ಮೇಲಕ್ಕೇಳಲಿಲ್ಲ! ವೈದ್ಯರು ಬಂದು ಎದೆಯೊಡೆದು ಸತ್ತಿದ್ದನೆಂದು ಹೇಳಿಬಿಟ್ಟರು!
ಇನ್ಸಪೆಕ್ಟರನೂ ಭೀಮಸಿಂಗನೂ ದುಃಖಿತರಾದರು, ಏಕೆಂದರೆ ಕೋರ್ಟಿನಲ್ಲಿ ಕೃಷ್ಣರಾಯನ ಕೈಫಿಯತ್ತನ್ನು ತಗದುಕೊಂಡಿದ್ದರೆ ಹೆಚ್ಚು ಕೀರ್ತಿಯು ಬರುವ ಸಂಭವವಿತ್ತು.
ನಡೆದ ಸಂಗತಿಗಳನ್ನು ವಿವರಿಸಿ, ಗುಂಡೇರಾಯನಿಗೂ ರಘುನಾಥರಾಯನಿಗೂ ಪತ್ರಗಳನ್ನು ಬರೆಯಿಸಲಾಯಿತು.
*****
೧೦ ವಿಚಿತ್ರದ ಮೇಲೆ ವಿಚಿತ್ರ!
Unity in diversity.
ಭೀಮಸಿಂಗನು ನಿಜಸ್ಥಿತಿಯನ್ನು ಕಂಡು ಹಿಡಿದ ವಿಷಯವು ಊರಲ್ಲೆಲ್ಲ ಹಬ್ಬಿತು. ಕೂಡಲೆ ಗುಂಡೇರಾಯನೂ, ಚಂಚಲೆಯೂ, ಇಂದುಮತಿಯೂ, ರಘುನಾಥರಾಯನೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವನ ಮನೆಗೆ ಬಂದರು.
ಹರಿಣಿಯು ಎಲ್ಲರನ್ನೂ ಬರಮಾಡಿ, ಭೀಮಸಿಂಗನನ್ನು ಕರೆಯಲು ಒಳಗೆ ಹೋದಳು. ಮರುಕ್ಷಣದಲ್ಲಿ ಭೀಮಸಿಂಗನು ಒಪ್ಪುವ ಪೋಷಾಕಿನೊಡನೆ ಹೊರಕ್ಕೆ ಬಂದನು.
ಗುಂಡೇರಾಯನೂ ಚಂಚಲೆಯೂ ಪತ್ತೆದಾರನನ್ನು ಕಂಡು, ಹಿಡಿಸಲಾರದಷ್ಟು ಆನಂದಭರಿತರಾಗಿ, ಅವನಿಗೆ ತಮ್ಮ ಧನ್ಯವಾದಗಳನ್ನರ್ಪಿಸಿದರು.
ಇಂದುಮತಿಯು ಆಶ್ಚರ್ಯದಿಂದ ಜಾದೂಗಾರನು ಇಲ್ಲಿ ಬರಲು ಕಾರಣವೇನೆಂದು ಪ್ರಶ್ನಿಸಿದಳು.
ಹರಿಣಿಯು ಮುಗುಳುನಗೆಯಿಂದ ದಿಕ್ಕುಗಳನ್ನು ಬೆಳಗುತ್ತಿದ್ದಳು.
ಇವೆಲ್ಲವೂ ಏಕಕಾಲದಲ್ಲಿ ನಡೆದು ಹೋದುವು, ಅವರೆಲ್ಲರ ಆಶ್ಚರ್ಯವೂ ಇಮ್ಮಡಿಯಾಗುವ೦ತೆ ಭೀಮಸಿಂಗನು ತಾನೇ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ರೂಪಗಳನ್ನು ಧರಿಸುವುದಾಗಿ ತಿಳಿಯ ಹೇಳಿದನು.
ಯಾರ ಮನಸ್ಸಿಗೂ ಕಳಂಕವೆನಿಸಿದಂತೆ ತನ್ನ ಪತ್ತೆಯ ಕಾರ್ಯವನ್ನು ವಿವರಿಸಲು, ಎಲ್ಲರೂ ಅ ಅವನನ್ನು ಆಭನಂದಿಸಿದರು.
ಇಂತಹ ಅದ್ಭುತ ಕಾರ್ಯವನ್ನು ಮಾಡಿದವನಿಗೆ ಕೊಡಬಹುದಾದ ಬಹುಮಾನವು ಯಾವುದೆಂದು ಎಲ್ಲರೂ ಏಕಕಂಠದಿಂದ ಕೇಳಲು, ರಘುನಾಥ-ಇಂದುಮತಿಯರ ವಿವಾಹ ಮಾಡಿದರೆ ಅದೇ ತನಗೆ ಕೊಡಬಹುದಾದ ಹೆಚ್ಚಿನ ಬಹುಮಾನವೆಂದು ಭೀಮಸಿಂಗನು ಹೇಳಿದನು.
ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಇನ್ಸಪೇಕ್ಟರ್ ಸಾಹೇಬರು ಸರಕಾರದಿಂದ ಭೀಮಸಿಂಗನಿಗೆ ಬಂದಿರುವ ಬರುದು- ಬಹುಮಾನಗಳನ್ನು ಹೇಳಲು, ಸಕಲರಿಗೂ ಆನಂದವಾಯಿತು!
ಉಪಸಂಹಾರ
ಇಲ್ಲಿಗೆ ನಮ್ಮ ಕಥೆಯು ಮುಗಿಯಿತು. ದುರ್ಘಟವಾದ ಕಳವು ಪತ್ತೆ ಮಾಡಲ್ಪಟ್ಟುದಕ್ಕಾಗಿ ಭೀಮನಸಿಂಗನಿಗೆ ಪತ್ತೇದಾರ ಇನ್ಸಪೆಕ್ಟರನ ಕೆಲಸವನ್ನು ಕೊಟ್ಟರು. ಹರಿಣಿಯ ಸಹಾಯದಿಂದ ಅವನು ಹೆಚ್ಚು ಹೆಚ್ಚು ಚಿತ್ರಮಯ ಅಪರಾಧಗಳನ್ನು ಶೋಧ ಮಾಡಹತ್ತಿದನು.
ಭೀಮಸಿಂಗನ ಕೇಳಿಕೆಯಂತೆ ರಘುನಾಥ- ಇಂದುಮತಿಯರ ವಿವಾಹವು ಬಹಳ ವಿಜೃಂಭಣೆಯಿಂದ ನಡೆಯಿತು.
ಗುಂಡೇರಾಯನಿಗೆ ವಿರಾಮವೇತನ (Pension)ವು ದೊರೆತ ನಂತರ, ರಘುನಾಥರಾಯನೇ ಬ್ಯಾಂಕಿನ ಮ್ಯಾನೇಜರನಾದನು.
*****