ಇರುವು ಅರಿವಿನೊಳು ಹರವಿಕೊಳ್ಳುತಿದೆ
ಹಿಗ್ಗಿ ನೊಂದು ಬಟ್ಟೆ
ಬೀಜ ಮೊಳೆತು ಹೂತಿರಲು ಕಂಪು
ಅದು ಏನು ಕಣ್ಣು-ಕಟ್ಟೆ?
ಮೈಯ ಗೊರಟದಲಿ ಉಸಿರು ಚಿಗುರುತಿದೆ
ಬಗೆಯ ಮೊಗ್ಗು ಹೂತು
ಅರಿವು ಕಾತು ಹಣ್ಣಾಗುತಿಹುದು ಒಳ-
ಹಿಗ್ಗಿ ಬೀಜ ಬೀತು.
ಬೀಜದಲ್ಲಿ ಅಡಗಿಹುದು ಮರವು ಮರ-
-ದಲ್ಲಿ ಅಡಗಿ ಬೀಜ
ತೇಜವೆಂಬ ಬಸಿರಲ್ಲಿ ಕತ್ತಲಿದೆ
ಕತ್ತಲಲ್ಲೆ ತೇಜ.
ಮಣ್ಣಿನಲ್ಲಿ ಮಣ್ಣಾಗಬೇಡ ಕಣ್ಣಾಗು
ಗುಪ್ತ ತೇಜ!
ಇರುಳಿನಲ್ಲಿ ನೀ ಕರಗಬೇಡ ಅದ
ಬೆಳಗಬೇಕು ರಾಜ!
*****

















