ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು;
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು;
ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು
ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತಿದ್ದಳು.
ಕುರಿಗಳಿಲ್ಲ ಬೇರೆ ನೆರೆಯೊಳಲ್ಲಿ ಮರಿಯದೊಂದೆ ಇತ್ತು;
ಕೊರಳಿಗೊಂದು ಸಣ್ಣ ಹುರಿಯ ಬಿಗಿದು ಕಲ್ಗೆ ಕಟ್ಟಿ ಇತ್ತು;
ಪುಟ್ಟ ಹುಡುಗಿ ದಟ್ಟವಾದ ಹುಲ್ಲ ಮೇಲೆ ಮಂಡಿಯೂರಿ,
ಬೆಟ್ಟದಿಂದ ಬಂದ ಮರಿಗೆ ತಿಂಡಿಯಿಡುತಲಿದ್ದಳು.
ಕಿವಿಯನಲುಗಿ, ತಲೆಯನೊಲೆದು, ಬಾಲವನ್ನು ಕುಣಿಸಿ, ನಲಿದು,
ಅವಳ ಕಯ್ಯ ತಿಂಡಿಯನ್ನು ಮುದ್ದಿನಿಂದ ಸವಿವ ಮರಿಗೆ
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ದನಿಯ ಕೇಳಿದೊಡನೆ,
ಅವಳ ಹೃದಯವೆನ್ನ ಹೃದಯದಲ್ಲಿ ಕಲೆತುಹೋಯಿತು.
ಕಣ್ಣಿಗಂದವಾದ ಮಗುವೊ, ಮುದ್ದುಗಾರನಾದ ಮರಿಯೊ,
ಕಣ್ಣು ನೆಟ್ಟು ನೋಡುತಿದ್ದೆನೊಲುಮೆಯಿಂದ ಜೋಡಿ ಚೆಲುವ;
ಕುಡಿಸಿ ಮುಗಿಸಿ ಮರಿಯ ಬಿಟ್ಟು ಹುಡುಗಿ ಮನೆಗೆ ಹೊರಟಳಾಗ,
ನಡೆಯಲಿಲ್ಲ ಹತ್ತು ಹೆಜ್ಜೆ, ಹಾಗೆ ನಿಂತುಕೊಂಡಳು.
ತಿರುಗಿ ಮರಿಯನಕ್ಕರಿಂದ ನೋಡುವವಳ ಮೊಗದ ಬಗೆಯ
ಮರೆಯಲಿದ್ದ ಜಾಗದಿಂದ ಕಂಡೆನವಳು ಕಾಣದಂತೆ;
ಅಳತೆ ಮಾಡಿ ನುಡಿಯ ಹೆಣೆವ ವರವ ಕೊಡಲು ವಾಣಿ ಈಗ
ಎಳೆಯಮರಿಗೆ ಹೀಗೆ ಹಾಡದಿರಳೆ ಎಂದುಕೊಂಡೆನು.
“ಕೊರತೆಯೇನು ಕಂದ ನಿನಗೆ? ಹುರಿಯನೇಕೆ ತುಯ್ಯುತಿರುವೆ?
ಮರೆಯದುಣಲು ಮಲಗಲೆಲ್ಲ ನೇರ್ಪುಮಾಡಿ ಇರುವೆನಲ್ಲ!
ನೆಲದ ಹುಲ್ಲು ಮೆತ್ತೆಯಲ್ಲ! ಇದಕೆ ಹಸುರೆ ಇಲ್ಲವಲ್ಲ!
ಮಲಗು, ಮರಿಯೆ, ಮಲಗು, ಕಂದ; ನಿನಗೆ ಕೊರತೆಯಾವುದು?
ಏನು ನೀನು ಹುಡುಕುತಿಹುದು? ಮನಸಿಗೇನು ಬಯಕೆ ಇಹುದು?
ನೀನು ಬಲಿತು ಬೆಳೆಯುತಿರುವೆ; ಸೊಬಗು ಹೊಮ್ಮಿ ಹೊಳೆಯುತಿರುವೆ,
ಇಲ್ಲಿ ಗರುಕೆ ಎಳೆಯ ಗರುಕೆ, ಇಲ್ಲಿ ಹೂವಿಗೆಣೆಯ ಕಾಣೆ.
ಅಲ್ಲಿ ಹಸುರು ಪಯಿರು ಬೀಸಿ, ಬಿಡದೆ ಕಿವಿಯೊಳುಲಿವುದು.
ಬಿಸಿಲು ಕಾದು ಹೊಳೆವ ಹೊತ್ತು, ನಾರುಹುರಿಯನಿತ್ತ ನೀಡು,
ಬಸಿರಿಮರದ ನೆರಳ ಸೇರಿ ತಂಪುಮಾಡಿಕೊಳ್ಳಬಹುದು,
ಗಿರಿಯ ಬಿರುಸು ಗಾಳಿಮಳೆಗೆ ಹೆದರಿಕೊಂಡು ನಡುಗಲೇಕೆ?
ಗಿರಿಯ ಗಾಳಿಮಳೆಗಳಿಲ್ಲಿ ಕನಸಿನಲ್ಲಿ ಸುಳಿಯುವು.
ಮಲಗು, ಮುದ್ದು ಮರಿಯೆ, ಮಲಗು; ಮರೆತೆಯೇನು ನಿನ್ನ ಪಾಡ?
ಮಲೆಯ ದೂರದಿರುಬಿನಲ್ಲಿ ಅಪ್ಪ ನಿನ್ನ ಕಂಡ ದೆಸೆಯೆ?
ಹಲವು ಮಂದೆ ಮೇದುವಲ್ಲಿ, ನಿನಗೆ ನೀನೆ ಎನುವರಿಲ್ಲ,
ಕೆಲದೊಳಿರದೆ ನಿನ್ನ ತಾಯಿ ಬಿಟ್ಟು ನಡೆದಳೆಲ್ಲಿಯೋ.
ತೋಳಿನಲ್ಲಿ ಎತ್ತಿಕೊಂಡ, ಮರುಕದಿಂದ ಮನೆಗೆ ತಂದ,
ಹೇಳು, ಬಂದ ಭಾಗ್ಯವುಳಿದು, ಎಲ್ಲಿ ಅಲೆಯುವಾಸೆ ಕಂದ?
ಸಾಕುತಿಹೆನು ತಾಯಿಯಂತೆ – ಈದ ತಾಯಿ ಬೆಟ್ಟದಲ್ಲಿ
ಸಾಕಿ ಸಲಹುತಿದ್ದಳೇನು, ಇಷ್ಟು ಪ್ರೀತಿತೋರುತ?
ಎರಡುಸಾರಿ, ಹಗಲು ಹೊತ್ತು, ನನ್ನ ಪುಟ್ಟ ತೊಟ್ಟಿಯಲ್ಲಿ,
ತೊರೆಯ ತಿಳಿಯ ನೀರ ತಂದು, ನೀನೆ ಬಲ್ಲೆ, ಕುಡಿಸುತಿರುವೆ;
ಎರಡುಸಾರಿ, ಮಂಜು ಬಿದ್ದು, ಹೊಲಗಳೆಲ್ಲ ನೆನೆದ ವೇಳೆ,
ಕರೆದು ಬಿಸಿಯ ನೊರೆಯ ಹಾಲ, ಹೊಸದ ತಂದು ಹೊಯ್ಯುವೆ.
ಬೇಗ ಮಯ್ಯಿ ತುಂಬಿಕೊಂಡು, ಕಾಲು ಬಲಿತು ನೆಗೆಯ ಬಲ್ಲೆ,
ಆಗ ನನ್ನ ಪುಟ್ಟ ಬಂಡಿ ಕಟ್ಟಿಕೊಡುವೆ, ಎಳೆಯುವಂತೆ.
ನನ್ನ ಜೊತೆಯೊಳಾಟವಾಡಿ, ಚಳಿಯ ಗಾಳಿ ಕೊರೆಯುವಾಗ,
ನನ್ನ ಬಳಿಯೆ ರೊಪ್ಪವಾಗಿ, ಕೆಡೆಯುವಂತೆ ಬೆಚ್ಚಗೆ.
ಮಲಗ ಒಲ್ಲದೊಲ್ಲದೇಕೊ, ಪ್ರಾಣಿ, ಪಾಪ! ಮನಸಿನೊಳಗೆ
ಸುಳಿದು ಬಂದ ತಾಯ ನೆನಹು ತೊಳಲುತಿಹುದೊ ಏನೋ ಅರಿಯೆ;
ನನಗೆ ತಿಳಿಯದಂತೆ ನಿನಗೆ ಪ್ರೀತಿಯಾದುದಾವುದಿಹುದೊ,
ಕನಸಿನೊಳಗೆ ಹೊಳೆದದಾವ ನೋಟ ಪಾಟ ಸೆಳೆವುದೋ!
ಗಿರಿಯ ನೆತ್ತಿ ಏನು ಹಸುರು, ಏನು ಚೆಲುವುನೋಡಲಯ್ಯೊ!
ಬರುವುವೆಂದು ಕೇಳಿ ಬಲ್ಲೆನಲ್ಲಿ ಬಿರುಸುಗಾಳಿ ಮಬ್ಬು
ಎಳೆಯ ಮಗುವಿನಂತೆ ನಗುತ ನಗುತ ನೆಗೆವ ತೊರೆಗಳಲ್ಲಿ
ಮುಳಿಸು ಬರಲಿ, ಎರೆಗೆ ಹಸಿದ ಸಿಂಹದಂತೆ ಮೊರೆವುವು.
ಎರಗಲಾರದಲ್ಲಿ ಹದ್ದು , ಅದಕೆ ಬೆದರ ಕೆಲಸವಿಲ್ಲ.
ಇರುಳು ಹಗಲು ಭದ್ರವಿಲ್ಲಿ, ಹಟ್ಟಿ ಇಹುದು ಪಕ್ಕದಲ್ಲಿ.
ಅಳುಕಿ ಏಕೆ ಅರಚಿಕೊಳುವೆ? ಹುರಿಯ ತುಯ್ದು ಹಿಂದೆ ಬರುವೆ?
ಮಲಗು, ಕಂದ ಬೆಳಕುಹರಿದ ಗಳಿಗೆ ಬಂದು ಕಾಣುವೆ.
ತಳುಗಿ, ತಳುಗಿ, ಹೆಜ್ಜೆಯಿಟ್ಟು, ಮನೆಯ ಕಡೆಗೆ ನಡೆಯುವಾಗ,
ಹಲವು ಸಾರಿ ಹಾಡನಿದನು ನನಗೆ ನಾನೆ ಹೇಳಿಕೊಂಡೆ;
ಪದವನೆಲ್ಲ ಪಂಕ್ತಿಪಂಕ್ತಿಯಾಗಿ ಮಗುಚಿನೋಡುವಾಗ,
ಪದದೊಳವಳದರ್ಧಮಾತ್ರ, ಅರ್ಧ ನನ್ನದೆನಿಸಿತು.
ತಿರುಗಿ, ತಿರುಗಿ, ಪದವನಿದನು ನನಗೆ ನಾನೆ ಹೇಳಿಕೊಂಡೆ;
ಅರೆಗೆ ಹೆಚ್ಚೆ ಹೆಣ್ಣ ಪಾಲು ಎಂದು ತೋರಿತೇಕೆ ಎನಲು,
ಅವಳ ಕಣ್ಣ ನೋಟದಿಂದ; ಅವಳ ನುಡಿಯ ಮರುಕದಿಂದ,
ಅವಳ ಹೃದಯವೆನ್ನ, ಹೃದಯದಲ್ಲಿ ಕಲೆತುಹೋಯಿತು.
*****
WORDSWORTH : The Pet Lamb
















