ದೇವರು ಕೊಟ್ಟರೇನು ಕಡಿಮೆ?

ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. “ನಾವು ಬಡವರು. ಅಂಥ ಬಟ್ಟೆ, ತಿನಿಸು, ಆಟಿಗೆಗಳನ್ನು ಎಲ್ಲಿಂದ ತರೋಣ? ಶ್ರೀಮಂತಿಕೆಯಿದ್ದರೆ ನಮಗೂ ಸಿಗುತ್ತಿದ್ದವು” ಎಂದಳು ತಾಯಿ.

“ನಮಗೆ ಶ್ರೀಮಂತಿಕೆ ಏಕಿಲ್ಲ?” ಮಗನ ಪ್ರಶ್ನೆ.
“ದೇವರು ಕೊಟ್ಟಿದ್ದರೆ ಶ್ರೀಮಂತಿಕೆ ಇರುತ್ತಿತ್ತು” ಇದು ತಾಯಿಯ ಸಮಾಧಾನ.
“ದೇವರು ಕೊಡುವನೇ ? ಹಾಗಾದರೆ ಅವನನ್ನು ಕಂಡು ನಮಗೆ ಬೇಕಾದುದನ್ನೆಲ್ಲ ಇಸಗೊಂಡು ಬರುತ್ತೇನೆ. ಎಲ್ಲಿದ್ದಾನೆ ದೇವರು.?”
“ಎಲ್ಲಿಯೋ ಇದ್ದಾನಂತೆ ದೇವರು. ನಾವೇನೂ ಕಂಡಿಲ್ಲ” ಎಂದಳಾಕೆ.
“ನಾಳೆಯೇ ನಾನು ದೇವರನ್ನು ಹುಡುಕಲು ಹೋಗುವೆನು. ದಾರಿಯ ಬುತ್ತಿ ಕಟ್ಟಿಕೊಡು.”

ತಾಯಿ ದಾರಿಯ ಬುತ್ತಿ ಕಟ್ಟಿಕೊಡಲು ದೇವರನ್ನು ಹುಡುಕುತ್ತ ಮಗನು ಹೊರಟೇಬಿಟ್ಟನು. ಕೆಲವು ಹರದಾರಿ ದಾರಿ ನಡೆದ ಬಳಿಕ, ದೊಡ್ಡದಾದ
ಜನಜಂಗುಳಿ ಸೇರಿ ಅಲ್ಲೊಂದು ಬಾವಿ ಅಗಿಯುವ ಕೆಲಸದಲ್ಲಿ ತೊಡಗಿತ್ತು.

ಅಲ್ಲಿಗೆ ಹೋಗಿ ಹುಡುಗನು ಕೇಳಿದನು . “ದೇವರು ಎಲ್ಲಿರುತ್ತಾನೆ?”  ನಾನು ಅವನನ್ನು ಕಾಣ ಬೇಕಾಗಿದೆ.

ಜನರೆಲ್ಲ ನಕ್ಕುಬಿಟ್ಟರು, ಹುಚ್ಚು ಹುಡುಗನೆಂದು. “ದೇವರು ಇಲ್ಲಿಯಂತೂ ಇಲ್ಲ. ಎಲ್ಲಿದ್ದಾನೆ ನಮಗೆ ಗೊತ್ತೂ ಇಲ್ಲ. ನಿಮಗೆ ಅವನು ಸಿಕ್ಕರೆ ನಮ್ಮ
ಸಲುವಾಗಿ ಒಂದು ಪ್ರಶ್ನೆ ಕೇಳಿಕೊಂಡು ಬಾ. ನಮ್ಮ ಬಾವಿಗೆ ನೀರು ಯಾವಾಗ ಬೀಳುತ್ತವೆ?” – ಸಾಹುಕಾರನು ಹೇಳಿದನು.

ಹುಡುಗನು ಮತ್ತೆ ಕೆಲವೊಂದು ಹರದಾರಿ ದಾಟುವಲ್ಲಿ ಒಂದು ಹೆಬ್ಬಾವು ದಾರಿಯಲ್ಲಿ ಅಡ್ಡ ಬಿದ್ದಿದೆ. ದಾಟಲೂ ಸಾಧ್ಯವಿಲ್ಲ. ಕಾಲಕಡೆಯಿಂದಲೋ ತಲೆಕಡೆಯಿಂದಲೋ ಹಾಯ್ದು ಸುತ್ತುವರಿದು ಹೋಗಬೇಕೆಂದರೆ ಹೊರಹೊರಳಿ ಬಂದು ತಡೆಮಾಡತೊಡಗಿತು. “ದಾರಿ ಬಿಡು ಹಾವಣ್ಣ” ಎಂದು ಹುಡುಗ
ಕೇಳಲು “ನೀನೆಲ್ಲಿ ಹೋಗುವಿ” ಎಂದು ಮರುಪ್ರಶ್ನೆ ಮಾಡಿತು ಹಾವು.

“ದೇವರನ್ನು ಹುಡುಕಲು ಹೊರಟಿದ್ದೇನೆ. ನಿನಗೇನಾದರೂ ಗೊತ್ತಿದೆಯೇ ದೇವರೆಲ್ಲಿ ಇದ್ಧಾನೆಂಬುದು” ಎಂದು ಬಾಲಕನು ಕೇಳಲು ಹಾವು ಹೇಳಿತು.  “ದೇವರು ಇದ್ದಾನೆಂದು ಎಲ್ಲರೂ ಹೇಳುತ್ತಾರೆ. ಕಂಡವರಾರೋ ಗೊತ್ತಿಲ್ಲ.  ನಿನಗೆ ದೇವರ ದರ್ಶನವಾದರೆ ನನ್ನ ಸಲುವಾಗಿ ಒಂದು ಮಾತು ಕೇಳು.  ನನ್ನ ಕಣ್ಣು ಎಂದು ಬರುವವು?”

“ಕೇಳಿಕೊಂಡು ಬರುತ್ತೇನೆ” ಎಂದು ಮರುನುಡಿದು ಬಾಲಕನು ಪುನಃ ಹರದಾರಿ ಮುಂದೆ ಹೋಗಿ ಒಂದು ಕಟ್ಟಡವಿಗೆ ಬಂದನು. ಅಲ್ಲಿ “ದೇವರೇ”
ಎಂದು ಆರ್ತ ಧ್ವನಿಯಿಂದ ಕೂಗಲು, ದೂರದಿಂದ “ಓ” ಎಂಬ ದ್ವನಿ ಕೇಳಿಸಿತು.  ಅಲ್ಲಿಗೆ ಹೋದನು. ಒಬ್ಬ ಮುಷ್ಟಿನ ಸತ್ಪುರುಷನು ಅಲ್ಲೊಂದು ಗುಡಿಸಲು
ಕಟ್ಟಿಕೊಂಡು ವಾಸಿಸುತ್ತಿದ್ದನು. “ಏಕೆ ಕೂಗಿದೆ ನನ್ನನ್ನು” ಎಂದು ಕೇಳಿದನು.  “ಹಾಗಾದರೆ ನೀನೇ ದೇವರು” ಎಂದನು ಬಾಲಕನು. “ನಾನು ದೇವರು ಅಹುದೋ
ಅಲ್ಲವೋ ತೆಗೆದುಕೊಂಡು ಏನುಮಾಡುತ್ತಿ? ನಿನಗೇನು ಬೇಕಾಗಿತ್ತು” ಎಂದನಾ ಮುದುಕ.

“ನಾವು ಬಡವರು. ಒಳ್ಳೆಯ ಬಟ್ಟೆ – ತಿಂಡಿ – ಆಟಿಕೆ ನಮಗೆ ಸಿಗುವುದಿಲ್ಲ.  ಅವನ್ನೆಲ್ಲ ಕೊಡು” ಎಂದು ಕೇಳಿದ ಬಾಲಕನಿಗೆ ಆ ಸತ್ಪುರುಷನು ಒಂದು ಬಟ್ಟಲು ಕೊಟ್ಟು. ಇದನ್ನು ಪೂಜಿಸಿ ನಿನಗೆ ಬೇಕಾದುದನ್ನು ಕೇಳಿಕೋ. ಅದು ಕೊಡುತ್ತದೆ ಎಂದನು. ಬಟ್ಟಲು ತೆಗೆದುಕೊಂಡು ತನ್ನೂರಿಗೆ ಹೊರಟು, ದಾರಿಯಲ್ಲಿ ಒಂದೂರಿನ ಮನೆಯಲ್ಲಿ ರಾತ್ರಿ ವಸತಿ ಮಾಡಿದಾಗ ಆ ಮನೆಯವರಿಗೆ ತನ್ನ ಪ್ರವಾಸದ ಉದ್ದೇಶವನ್ನೆಲ್ಲ ವಿವರಿಸಿ, ದೇವರು ಕೊಟ್ಟ ಬಟ್ಟಲು ತೋರಿಸಿದನು.

ಅದು ಬೇಡಿದ್ದು ಕೊಡುತ್ತದೆಂದು ಹೇಳಿದನು. ಮನೆಯವರು ಆತನಿಗೆ ಕಣ್ಣು ತಪ್ಪಿಸಿ ಆತನ ಗಂಟಿನೊಳಗಿನ ಬಟ್ಟಲು ಎತ್ತಿ ಅಂಥದೇ ಆದ ತಮ್ಮ ಬಟ್ಟಲನ್ನು ಅದರಲ್ಲಿ ಇರಿಸಿದರು.

ತನ್ನೂರಿಗೆ ಬಂದ ಬಳಿಕ ತಾಯಿಗೆ ಎಲ್ಲ ಸಂಗತಿಯನ್ನು ವಿವರಿಸಿ, ಬಟ್ಟಲು ಪೂಜೆ ಮಾಡಿದನು. ಆದರೆ ಅದು ಏನೂ ಕೊಡಲಿಲ್ಲ. ದೇವರೆಂದು
ಹೇಳಿಕೊಂಡ ಆ ಮುದುಕನೇ ಮೋಸ ಮಾಡಿದನೆಂದು ಬಗೆದು ಮರುದಿನ ಮತ್ತೆ ಪ್ರಯಾಣ ಮಾಡಿದನು.

ಕಟ್ಟಡವಿಯ ಆ ಸತ್ಪುರುಷನನ್ನು ಕಂಡು, ತಾವಿತ್ತ ಬಟ್ಟಲು ಏನೂ ಕೊಡಲಿಲ್ಲವೆಂದು ಹೇಳಿದನು. “ದಾರಿಯಲ್ಲಿ ಆ ಬಟ್ಟಲನ್ನು ಗಂಟಿನಿಂದ ಕಡೆಗೆ ತೆಗೆದಿದ್ದೆಯಾ” ಎಂದು ಮುತ್ತಯ್ಯ ಕೇಳಿದರೆ . “ಒಮ್ಮೆ ಹಸಿವೆಯಾದಾಗ ಅದನ್ನು ಪೂಜಿಸಲು ಹೊರಗೆ ತೆಗೆದಿದ್ದೆ. ಆಗ ಅದು ಕೆಲಸಕೊಟ್ಟಿತು. ಇನ್ನೊಮ್ಮೆ ಒಂದು ಹಳ್ಳಿಯಲ್ಲಿ ವಸತಿ ಮಾಡಿದಾಗ ಆ ಮನೆಯವನಿಗೆ ತೋರಿಸಲು ತೆಗೆದಿದ್ದೆ” ಎಂದು ಮರುನುಡಿದನು.

“ನಿನ್ನ ಬಟ್ಟಲು ಕಳುವಾದದ್ದು ಅದೇ ಮನೆಯಲ್ಲಿ.  ಈ ಸಾರೆ ಮಂತ್ರಿಸಿದ ಎರಡು ಬಡಿಗೆ ಕೊಡುವೆನು. ಈ ಸಲವೂ ಆ ಮನೆಯಲ್ಲಿ ವಸತಿಮಾಡು. ಈ ಬಡಿಗೆಗಳು ನಿನ್ನ ಬಟ್ಟಲು ಇಸಗೊಡುವವು” ಎಂದು ನುಡಿದು ಆ ಸತ್ಪುರುಷನು ಎರಡು ಬಡಿಗೆಗಳನ್ನು ಅವನ ಕೈಗಿತ್ತನು.

ಹಿಂದಿನ ಸಾರೆ ಕೇಳಲು ಮರೆತ ಎರಡು ಮಾತುಗಳನ್ನೂ ಈ ಸಾರೆ ವೃದ್ಧಮುನಿಗೆ ಕೇಳಿಕೊಂಡನು . “ನನಗೆ ದಾರಿಯಲ್ಲಿ ಅಡ್ಡಗಟ್ಟಿದ ಹಾವಿನ ಕಣ್ಣು ಹೋಗಿದ್ದರಿಂದ ದಾರಿಕಾರರು ತುಳಿಯುತ್ತ ಎಡಹುತ್ತ ಹೋಗುತ್ತಾರೆ.  ಕಣ್ಣು ಯಾವಾಗ ಬರುವವು ಕೇಳಿಕೊಂಡು ಬರಹೇಳಿದೆ ಆ ಹಾವು.

“ಆ ಹಾವು ಕಟ್ಟಿದ ಹುತ್ತಿನಲ್ಲಿ ಅಪಾರ ದ್ರವ್ಯವಿದೆ. ಅದನ್ನೆಲ್ಲ ದಾನಮಾಡಿದರೆ ಎರಡೂ ಕಣ್ಣು ಬರುವವು” ಎಂದನು ಮುನಿ.

ಇನ್ನೊಂದು ಪ್ರಶ್ನೆ . “ಆ ಸಾಹುಕಾರನು ಅಗಿಸುವ ಬಾವಿಯಲ್ಲಿ ನೀರು ಯಾವಾಗ ಬೀಳವವು?”

“ಆ ಸಾಹುಕಾರ ಇನ್ನೊಬ್ಬ ಮಗಳನ್ನು ಕನ್ಯಾದಾನಮಾಡಿ ಮದುವೆ. ಮಾಡಿ ಕೊಟ್ಟರೆ ಬಾವಿಗೆ ಸಾಕಷ್ಟು ನೀರು ಬೀಳುವದು” ಮುನಿಯ ಉತ್ತರ.

ಮಂತ್ರಿಸಿದ ಎರಡು ಬಡಿಗೆಗಳನ್ನು ತೆಗೆದುಕೊಂಡು ಆ ಬಾಲಕನು ತನ್ನೂರ ಹಾದಿ ಹಿಡಿದನು. ಹೊತ್ತು ಮುಳುಗುವ ಸಮಯಕ್ಕೆ, ಹಿಂದಿನ ಸಾರೆ ವಸತಿಮಾಡಿದ ಆ ಹಳ್ಳಿಗೆ ಬಂದು, ಆದೇ ಮನೆಯಲ್ಲಿ ತಂಗಿದನು. ಮನೆಯವರಿಗೆ ಈ ಸಾರೆಯ ಪ್ರವಾಸಕಥೆಯನ್ನೆಲ್ಲ ಹೇಳಿದನು. ಅದರಿಂದ ಮನೆಯವರಿಗೆ ಹೊಸ ಆಸೆ ಹುಟ್ಟಿತು.

ಅತಿಥಿಯನ್ನು ಅದಾವುದೋ ನೆವದಿಂದ ಹೊರಗೆ ಕಳಿಸಿ, ಅವನ ಗಂಟಿಗೆ ಕೈ ಹಚ್ಚುವದೇ ತಡ, ಮಂತ್ರದ ಆ ಬಡಿಗೆಗಳು ಸರತಿಯಂತೆ ಕುಸುಬಿ ಬಡೆದಂತೆ ಬಡಿಯತೊಡಗಿದವು. ಏಟು ತಾಳಲಾರದೆ ಮನೆಯವನು ಹಿಂದಿನ ತಪ್ಪು ಒಪ್ಪಿಕೊಂಡು ಕದ್ದಿಟ್ಟುಕೊಂಡ ಆ ಬಟ್ಟಲನ್ನು ಬಾಲಕನಿಗೆ ಕೊಟ್ಟನು.

ಮರುದಿನ ಬೆಳಗಾಗುವ ಹೊತ್ತಿಗೆ ಬಾಲಕನು ಬಟ್ಟಲು, ಬಡಿಗೆ ಕಟ್ಟಿಕೊಂಡು ತನ್ನ ದಾರಿಹಿಡಿದನು. ಕೆಲವು ಹರದಾರಿ ನಡೆಯುವಷ್ಟರಲ್ಲಿ ಆ ಹೆಬ್ಬಾವು
ಭೆಟ್ಟಿಯಾಯಿತು. ಕೇಳಿಕೊಂಡು ಬಂದ ಪ್ರಕಾರ ಅದರ ಕಣ್ಣು ಬರುವ ಉಪಾಯ ಹೇಳಿದನು. ಹಾವು ತನ್ನ ಹುತ್ತದೊಳಗಿನ ಅರ್ಧಮರ್ಧ ದ್ರವ್ಯವನ್ನು ಬಾಲಕನಿಗೆ ದಾನ ಕೊಡಲು ಕಣ್ಣು ನಿಚ್ಚಳವಾಗತೊಡಗಿದವು.ಅಲ್ಲಿಂದ ಹೊರಟು ಬಾವಿ ಅಗಿಯುವಲ್ಲಿ ಬಂದು ಸಾಹುಕಾರನನ್ನು ಕರೆದು ಹೇಳಿದನು.
ಮಗಳನ್ನು ಕನ್ಯಾದಾನ ಮಾಡಿ ಧಾರೆಯರೆದುಕೊಟ್ಟರೆ, ಬಾವಿಗೆ ವಿಪುಲ ನೀರು ಬೀಳುವದೆಂದು ದೇವರು ಹೇಳಿದ್ದಾನೆ.  “ಹಾಗಿದ್ದರೆ ಮತ್ತೇಕೆ ತಡ? ಇಲ್ಲದ ವರವನ್ನು ಹುಡುಕುತ್ತ ಎಲ್ಲಿಗೆ ಹೋಗಲಿ? ನಿನಗೇ ನನ್ನ ಮಗಳನ್ನು ಕೊಟ್ಟು ಧಾರೆಯೆರೆಯುತ್ತೇನೆ” ಎಂದು ಹೇಳಿ, ಅದೊಂದು ದಿನ ಅವನನ್ನು ಇರಿಸಿಕೊಂಡು ಬೆಳಗಾಗುವಷ್ಟರಲ್ಲಿ ಮದುವೆ ಸಿದ್ಧತೆ ಮಾಡಿ, ಮಗಳೊಂದಿಗೆ ಆತನಿಗೆ ಅಕ್ಕಿಕಾಳು ಹಾಕುವ ಹೊತ್ತಿಗೆ ಬಾವಿಯೊಳಗಿನ ಸೆಲೆ  ಕ್ಷಣಾರ್ಧದಲ್ಲಿ ನೀರಿನಿಂದ ತುಂಬಿ ತುಳುಕಾಡಿತು.

ಹೆಬ್ಬಾವು ಕೊಟ್ಟ ದ್ರವ್ಯವನ್ನು ಗಾಡಿಯ ಮೇಲೆ ಹೇರಿಸಿಕೊಂಡು, ಹೊಸ ಹೆಂಡತಿಯೊಡನೆ ಬಂಡಿಯಲ್ಲಿ ಕುಳಿತು ತನ್ನ ಬಟ್ಟಲು – ಬಡಿಗೆಗಳೊಡನೆ
ಸುಖವಾಗಿ ತನ್ನೂರು ಸೇರಿದನು.

ತಾಯಿ ಅವನಿಂದ ಸಮಗ್ರ ವೃತ್ತಾಂತವನ್ನು ಕೇಳಿ ಸಂತೋಷಪಟ್ಟಳು.  ಮಗ ಸೊಸೆಯರೊಂದಿಗೆ ಆಕೆ ಬಹುಕಾಲ ಸುಖದಿಂದ ಬಾಳ್ವೆಮಾಡಿದಳು.
ದೇವರು ಕೊಡಲಿಕ್ಕೆ ನಿಂತರೇನು ತಡ?
*****

ಸಂಗ್ರಹ: ಸಿಂಪಿ ಲಿಂಗಣ್ಣ
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಯಲಿರುವವರ ಪ್ರಣಾಳಿಕೆ
Next post ಪ್ರಶ್ನೆಗೆ ಪ್ರಶ್ನೆ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys