ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ
ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು
ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧||

ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ
ಪುರುಷನ ಹೃದಯವು ಅದನ್ನು ಕಾಣುತ
ನವಿಲೊಲು ಕುಣಿಯುತಿದೆ ||೨||

ಕಣ್ಣಂಚಿನ ಆ ಮಿಂಚೇನೋ ಅದು
ಹಣ್ಣಿಗೆ ಬಂದಿಹ ಹೊಂಚೇನೊ
ಒಲುಮೆಯ ರಸವನು ಸುರಿಸುತ ಹರಿಸುತ
ಇನಿಯನ ಕೂಡಲು ಬರುತಲಿದೆ ||೩||

ಗಿರಿಗಳ ಮೇಲ್ಗಡೆ ನಾಚಿಕೆ ಮುಸುಕನು
ಎಳೆಯುವ ಸೆಳೆತವು ಬಲು ಮೋಡಿ
ಮಲೆಗಳ ಮೇಲಿನ ಬಲೆಯೇನೋ
ಎದೆ ಕಾಣದೆ ಮುಚ್ಚುವ ಕಲೆ ಏನೊ ||೪||

ಮೊದಲಿನಂತೆ ಬರಿ ಹುಡುಗಿ ಎಂದರೆ
ಆದೀತೇ ಚೆಲುವನು ನೋಡಿ
ಅಲ್ಲಿಂ ಬಯಲಿಗೆ ನಿರಿಯನು ಚಿಮ್ಮುತ
ಬರುತಿಹ ಒಯ್ಯಾರವ ನೋಡಿ ||೫||

ಹಳ್ಳಕೊಳ್ಳಗಳ ಕೆರೆಕಾಲುವೆಗಳ
ತಂಪಿನ ತಡಿಯಲಿ ಚೆನ್ನಾಟ
ನೀರಲಿ ಮಿಂದು ಕೂಡಲು ಚೆಲ್ಲಿ
ಕಣ್ಣು ಮಿಟುಕಿದೊಲು ಬಿಸಿಲಾಟ ||೬||

ಹಚ್ಚಹಸುರಿನ ಸೀರೆಯನುಟ್ಟು
ಚಂದಿರ ಚಿಕ್ಕೆಯ ಕುಂಕುಮ ಬೊಟ್ಟು
ಬಣ್ಣ ಬಣ್ಣಗಳ ಹೂವಿನ ಒಡವೆಯ
ಮಾಲೆ ಮಾಲೆಗಳ ಒಡನಾಟ ||೭||

ಕೈಮೈ ಡೊಂಕಿನ ಬೆಳಕಿನ ಬೆಡಗಿನ
ಛಂದವು ಬಂಧವು ಒಡಲಲ್ಲಿ
ಈಗಲೊ ಹರ್ಷದ ಪುಳಕವು ಚಿಮ್ಮಿದೆ
ಮೈಮೇಲೆಲ್ಲಾ ರಸವಲ್ಲಿ ||೮||

ಸಗ್ಗದ ಚೆಲುವಿನ ಭಂಡಾರ ಮೈ
ಗೊಂಡಿದೆ ಇನಿಯಳ ಸಿಂಗಾರ
ನವನವಯೌವನಶಾಲಿನಿ ಬಂದಳು
ಪುರುಷನ ವರಿಸುವ ಬಂಗಾರ ||೯||
*****