ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ
ಕಣ್ಣ ಮಿಟುಕಿಸಿ ಕಂಬಳಿ ಸರಿಸಿ
ಮೂಡಲ ಮನೆಯೊಳಗೆ ಸೂರಪ್ಪ ಆಗಲೆ
ಎದ್ದೆದ್ದು ಬೆಳಕ ಕಳಿಸ್ಯವನೆ
ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ
ಬೆಟ್ಟಪ್ಪ ತಲೆಯೆತ್ತಿ ಕುಂತವನೆ
ಮೋಡದ ಮರಿಗಳ ತಲೆ ತಡವಿ ಹೇಳ್ಯವನೆ
ಕುರಿಗಳ ಜತೆ ಹೋಗಿ ಆಡ್ಕೊಳ್ಳಿರೊ
ಇಂತಿವನು ಇನ್ನೇನು ದಿನವೆಲ್ಲ ಕುಂತಿರನು
ತಪಸು ಮಾಡೋನಂತೆ ನಟಿಸುತ್ತ
ತಪಸು ಮಾಡೋನಂತೆ ಬೆಟ್ಟಪ್ಪ ನಟಿಸುತ್ತ
ಅರ್‍ಧಕ್ಕೆ ಕಣ್ಮುಚ್ಚಿ ತೂಕಡಿಸಿ
ಸೂರಪ್ಪ ಮಹರಾಯ ಬೇಗನೆ ಹೋಗಪ್ಪ
ಹಕ್ಕಿಗಳು ಬಂದಾವ ಕರೆಯೋದಕ್ಕೆ
ಬೆಟ್ಟಪ್ಪ ಕಾಯ್ತಾನೆ ಸಂಜಿಯಾಗೋದನ್ನೆ
ಸಂಜ್ಯಾದ ತಕ್ಷಣ ಕಂಬಳಿಯೆಳೆದು
ಕಂಬಳಿಯಲ್ಲಿದ್ರೆ ಮಂಜಾದ್ರೂ ಆಯಿತು
ಮಂಜನ್ನೆ ಮೈಮೇಲೆ ಎಳಕೊಂಡು
ಅಡಗಿದ್ದ ಕನಸುಗಳು ಧುಮ್ಮೆಂದು ಬೀಳ್ತಾವೆ
ದೂಡ್ಕೊಂಡು ಹಿಡಕೊಂಡು ತಬ್ಕೊಂಡು
ತಪ್ಪಲಲಿ ಕುರಿಗಳು ತೆಪ್ಪದಲಿ ಅಂಬಿಗ
ನೀರಲ್ಲಿ ಚಂದ್ರ ಬಿದ್ದು
ನಾವಿನ್ನು ಬೆಟ್ಟಪ್ಪ್ನ ಅವನಷ್ಟ್ಕೆ ಬಿಟ್ಟು
ನಮ್ಮಷ್ಟ್ಕೆ ಚದ್ದರ ಹೊದ್ದು
*****