ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ!
ಪ್ರೀತಿಸಿದ್ದವ ಹಾಗೆ ನಾನು,
ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು
ಮರೆಯಾಗಿಯೇ ಹೋದೆ ನಾನು.
ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ
ತಿಳಿಯಲಾಗಲೇ ಇಲ್ಲ ನಮಗೆ
ಯಾವುದವಳ ವಿಚಾರ, ಯಾವುದು ನನ್ನದು ಎಂದು
ಹಾಗಿತ್ತು ಅನ್ಯೋನ್ಯ ಬೆಸುಗೆ.
ಆದರಯ್ಯೋ! ಒಂದು ಕಿರುಗಳಿಗೆಯಲ್ಲಿ
ಬದಲಾಗಿಯೇ ಬಿಟ್ಟಳವಳು ;
ಹಾಗೆಂದೆ ಪ್ರೀತಿಸುತ್ತಿರಬೇಡ ಬಹುಕಾಲ
ಸರಿವೆ ಹಳೆಹಾಡತೆ ನೀನೂ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.