ಸರಕಾರ ಹೇಳುತ್ತದೆ
ನೀನೊಬ್ಬ ಪ್ರಜೆ
ಉದ್ಯೋಗ ಹೇಳುತ್ತದೆ
ನೀನೊಬ್ಬ ಉದ್ಯೋಗಿ
ನಿನಗೆ ರವಿವಾರ ರಜೆ

ಗುರುಗಳು ಹೇಳುತ್ತಾರೆ
ನೀನು ಶ್ರೀಮಠದ ಭಕ್ತ
ವಿವೇಕಾನಂದರು ಬರೆಯುತ್ತಾರೆ
ನೀನೊಬ್ಬ ಮುಕ್ತ

ಸಂಘಟನೆ ಹೇಳುತ್ತದೆ
ನೀನೊಬ್ಬ ಸದಸ್ಯ
ಗೆಳತಿ ಗೊಣಗುತ್ತಾಳೆ
ನೀನೊಂದು ರಹಸ್ಯ

ಆದರೆ ಒಂದು ಕನ್ನಡಿ ಹೇಳುತ್ತದೆ
ನೀನಿರುವುದು ಹೀಗೆ
ಕನ್ನಡಿಯೇ ಕನ್ನಡಿಯೇ ನನ್ನ ಕನ್ನಡಿಯೇ
ನೀನು ಕನ್ನಡಿಯಾಗಿದ್ದು ಹೇಗೆ ?

ನನಗನಿಸುತ್ತದೆ
ನಾನೊಂದು ಕನ್ನಡಿಯಾಗಬೇಕು
ಕೆದರಿದ ಕೂದಲ ಹುಡುಗ
ಕೈಹಣಿಗೆ ಹಿಡಿದು
ಬಾಚಿಕೊಳ್ಳಲು ನನ್ನ ನೋಡಬೇಕು

ನನಗನಿಸುತ್ತದೆ
ನಾನೊಂದು ಕನ್ನಡಿಯಾಗಬೇಕು.
*****