ಪಾಂಡವ-ಕೌರವರ ಜನನ

-ಭೀಷ್ಮನ ಸೂಚನೆಯ ಮೇರೆಗೆ ಮಕ್ಕಳ ಫಲಕ್ಕಾಗಿ ಸಿದ್ಧರಿಂದ ಚಿಕಿತ್ಸೆ ಪಡೆಯಲೆಂದು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಹೊರಟ ಪಾಂಡುರಾಜನು, ಮಾರ್ಗಮಧ್ಯದಲ್ಲಿ ವಿಶ್ರಮಿಸುತ್ತಿರುವಾಗ ಜಿಂಕೆಗಳ ರೂಪದಲ್ಲಿದ್ದ ಮುನಿದಂಪತಿಗಳನ್ನು ಕೊಂದಂತೆ ಕನಸಾಗಲು ಕಳವಳಗೊಂಡು, ಸದಾ ಅದೇ ಚಿಂತೆಯಲ್ಲಿ ಮುಳುಗಿದ. ಅವನು ಬಳಿಕ ಮುಂದುವರೆದು ಎದುರಾದ ಸಂಕಟಗಳನ್ನೆಲ್ಲ ಅನುಭವಿಸುತ್ತ, ಈ ಸಂಕಟಗಳು ತನಗಾಗಿಯೇ ಲೋಕದಲ್ಲಿ ಉಳಿದುಕೊಂಡಿವೆ ಎಂದುಕೊಂಡು ಕಡಿದಾದ ಪರ್ವತಗಳನ್ನೇರಿ ಕಣಿವೆ ಕಂದರಗಳನ್ನು ದಾಟಿ, ಉತ್ತರದ ಹಿಮಾಲಯ ಪರ್ವತಗಳ ತಪ್ಪಲಿನ ಸಿದ್ಧರಿದ್ದ ಪ್ರದೇಶವನ್ನು ತಲುಪಿದನು-

ಅಂತೂ ಇಂತೂ ಪಾಂಡುವು ತಲುಪಿದ ಹಿಮವತ್ಪರ್ವತ ತಪ್ಪಲನು
ಸಿದ್ಧರು ಮುನಿಗಳು ನೆಲೆಸಿದ್ದಂತಹ ಗಿಡಮೂಲಿಕೆಗಳ ತಾಣವನು
ನಿತ್ಯವು ಹಸುರಿನ ಮನೆಯಲಿ ಬದುಕುತ ಜನತೆಯ ಪ್ರೀತಿಯ ಗಳಿಸಿದನು
ಸತ್ಯವನವರಿಗೆ ತಿಳಿಸಿ ಅವರಿಂದ ಸೂಕ್ತ ಚಿಕಿತ್ಸೆಯ ಬಯಸಿದನು
ಅಂತೆಯೆ ಅಲ್ಲಿನ ಹಿರಿಯನ ಕಾಣುತ ತನ್ನ ಸಮಸ್ಯೆಯ ಹೇಳಿದನು
ಗಂಡಸು ತಾನೆಂದೆನ್ನಿಸಿಕೊಳ್ಳಲು ದೈನ್ಯತೆಯಿಂದಲಿ ಬೇಡಿದನು!
ಶತ್ರುರಾಜರನು ಮಣ್ಣುಮುಕ್ಕಿಸುವ ರಾಜನ ದೈನ್ಯದ ನುಡಿ ಕೇಳಿ
ಮಿತ್ರನೆಂದು ಅವನನ್ನು ಸ್ವೀಕರಿಸಿ ಅವನ ಮೇಲೆ ಕನಿಕರ ತಾಳಿ
ತಮ್ಮ ಕೈಲಾದ ಸಹಾಯ ಮಾಡಲು ಮನಮಾಡಿದ್ದರು ಅವರೆಲ್ಲ
ಹಿಮಾಲಯದ ಗಿಡಮೂಲಿಕೆ ನೀಡಲು ಶುರುವಿಟ್ಟರು ಹಗಲಿರುಳೆಲ್ಲ
ಸಿದ್ಧರು ವೈದ್ಯರು ಎಷ್ಟೋ ವಿಧದಲಿ ಹಲವು ಚಿಕಿತ್ಸೆಯ ನೀಡಿದರು
ತಮಗೆ ತಿಳಿದಿರುವ ವೈದ್ಯವಿದ್ಯೆಗಳನೆಲ್ಲ ಪ್ರಯೋಗವ ಮಾಡಿದರು
ಫಲಿತವು ಏನೂ ಕಾಣದೆ ಕಡೆಯಲಿ ಕುಳಿತೇಬಿಟ್ಟರು ಕೈಚೆಲ್ಲಿ
ವೈದ್ಯರು ಅವನನು ಕರೆದು ಹೇಳಿದರು- “ಸಾಧ್ಯವಾಗದಿದೆ ಇನ್ನಿಲ್ಲಿ
ಫಲವೇನಾದರೂ ದೊರೆಯುವುದಿದ್ದರೆ ವರುಷಗಳೇ ಬೇಕಾಗುವುದು
ಅಷ್ಟರವರೆಗೂ ಹೆಣ್ಣಿನ ಸಂಗವು ಪ್ರಾಣಕ್ಕೇ ಎರವಾಗುವುದು”

ಮಕ್ಕಳಿಲ್ಲದ ಮೇಲೆ ನರಜನ್ಮವೇತಕೆ? ಮಕ್ಕಳು ಬಾಳಿನ ಬೆಳಕಲ್ಲವೆ?
ಅಕ್ಕರೆ ತುಂಬಿದ ಮಕ್ಕಳು ಮನಸಾರೆ ನಕ್ಕರೆ ಮನಸಿಗೆ ಹಿತವಲ್ಲವೆ?
ಸಕ್ಕರೆ ನಗುವಿನ ಮಗುವಿರಬೇಕೆಂಬ ಕಕ್ಕುಲಾತಿ ಮನದ ಮಡುಕಿನಲಿ
ಮಕ್ಕಳು ಮನೆತುಂಬ ಇರಬೇಕು, ಇದ್ದರೆ ಅಕ್ಕರೆ ಬರುವುದು ಬದುಕಿನಲಿ

ಪಾಂಡುವು ಚಿಂತೆಯ ಮಾಡುತ ಕೊರಗಿದ ಬೇರೆ ದಾರಿ ತನಗಿನ್ನೇನು?
ಮಾಡಬೇಕಾದುದೆಲ್ಲ ಮಾಡಿದೆನು ಆದರೆ ಫಲವಿರದಾಯ್ತಿನ್ನು
ಪುತ್ರಸಂತಾನ ಫಲವು ತನಗಿಲ್ಲ ಏನು ತಾನೆ ಮಾಡಲಿ ನಾನು?
ಆದರೆ ಶಂತನು ವಂಶವು ನಶಿಸಲು ಬಿಡಲೇಕೂಡದು ತಾನಿನ್ನು
ವಂಶಕೆ ಅಂಟಿದ ಶಾಪದ ರೀತಿಯ ನಿಯೋಗಪದ್ಧತಿ ಶರಣಿನ್ನು
ವಿಧಿಯೇ ಇಲ್ಲದೆ ಪಾಲಿಸಬೇಕಿದೆ ತೆಗೆದುಕೊಂಡು ತೀರ್ಮಾನವನು!

ಪಟ್ಟದರಾಣಿಯು ಕುಂತಿಗೆ ಹೇಳಿದ- “ಪ್ರಿಯೇ, ನನ್ನ ಮನಸಿನ ಅರಸಿ
ಮಕ್ಕಳ ಪಡೆದುಕೊ ಮಹನೀಯರಲಿ ನಿಯೋಗ ಪದ್ಧತಿ ಅನುಸರಿಸಿ
ಕಷ್ಟನಷ್ಟಗಳು ನಿಂದಾಪವಾದಗಳೇನು ಬಂದರೂ ಎದುರಿಸುವೆ
ಜೀವನದಲ್ಲಿನ ಟೀಕೆ-ಟಿಪ್ಪಣಿಯ ಕಪ್ಪುಮೋಡಗಳ ಕರಗಿಸುವೆ
ಇಷ್ಟಾನಿಷ್ಟಗಳೇನೇ ಇರಲಿ ಕೇಳಿಕೊಳ್ಳುವೆನು ನಿನ್ನನ್ನು
ಇಷ್ಟವಿದ್ದರೂ ಇಲ್ಲದಿದ್ದರೂ ಒಪ್ಪಲೇಬೇಕು ನೀನಿದನು”
ಕುಂತಿಯು ಮನದಲಿ ಚಿಂತೆಯ ಮಾಡುತ ಕುಳಿತಳು ತಲೆಯಲಿ ಕೈಹೊತ್ತು
ಪತಿಯ ಮಾತನ್ನು ಪಾಲಿಸದಿದ್ದರೆ ಬೇರೆಯ ದಾರಿಯು ಏನಿತ್ತು?
ಮಕ್ಕಳ ಪಡೆಯಲು ರಾಜ್ಯಕೋಶಗಳ ಬಿಟ್ಟು ಬಂದದ್ದು ನೆನಪಾಯ್ತು
ಬಂದ ಕಾರ್ಯ ನೆರವೇರಿಸಿಕೊಳ್ಳದೆ ಹಿಮ್ಮರಳುವುದು ಕಷ್ಟವಾಗಿತ್ತು
ಕುಂತಿಯು ಯೋಚಿಸಿ ಒಪ್ಪಿಗೆ ಕೊಟ್ಟಳು, ಮಕ್ಕಳ ಪಡೆಯಲು ಒಲವಿತ್ತು
ಮದುವೆಗೆ ಮೊದಲೇ ಮುನಿಯು ನೀಡಿದ್ದ ಅಂದಿನ ವರಗಳ ಬಲವಿತ್ತು!

ಪಾಂಡುವು ಸಿದ್ಧರ ಹಿರಿಯನ ಸಂಧಿಸಿ ತನ್ನಯ ಬೇಡಿಕೆ ಮಂಡಿಸಿದ
ಧರ್ಮದ ಮೂರುತಿ ಎನ್ನುವ ಕೀರ್ತಿಯ ಗಳಿಸಿದ್ದವನ ವಿನಂತಿಸಿದ
ಯಮನ ಅಂಶದಲಿ ಬಂದವನವನೂ ಕರುಣೆಯ ತೋರಲು ಮುಂದಾದ
ಕುಂತಿಯು ಭಕ್ತಿಯ ಭಾವದಿ ಸೇವೆಯ ಮಾಡಲು ವರವನು ಕರುಣಿಸಿದ
ನವಮಾಸದ ಹೊರೆ ಇಳಿದಿರಲವಳಿಗೆ ಶುಭಸಮಯದಿ ಮತ್ರೋತ್ಸವವು
ಸುದ್ದಿಯು ತಲುಪಿತು ಹಸ್ತಿನಾಪುರಕೆ ಎಲ್ಲೆಡೆ ಸಂತಸ ಸಂಭ್ರಮವು!
—–
ಈ ಹಿಂದೆ ಕುಂತಿ ಇನ್ನೂ ಚಿಕ್ಕವಳಿದ್ದಾಗ ದುರ್ವಾಸ ಮುನಿಗಳು ಅವಳ ಸೇವೆಯನ್ನು ಮೆಚ್ಚಿ ಅವಳಿಗೆ ಮಕ್ಕಳನ್ನು ಪಡೆಯುವ ಐದು ವರಗಳನ್ನು ಕೊಟ್ಟಿದ್ದರು. ಕುಂತಿಯು ಕುತೂಹಲದಿಂದ ಮಂತ್ರ ಪರೀಕ್ಷೆಗೆಂದು ಮೊದಲನೆಯ ಮಂತ್ರವನ್ನು ಜಪಿಸಿ ಸೂರ್ಯನಿಂದ ಕರ್ಣನನ್ನು ಪಡೆದುಕೊಂಡು ಲೋಕಾಪವಾದಕ್ಕೆ ಹೆದರಿ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಿದ್ದಳು. ಇನ್ನೂ ನಾಲ್ಕು ವರಗಳು ಹಾಗೆಯೇ ಇದ್ದವು. ಅದನ್ನು ಪಾಂಡುವಿಗೆ ಹೇಳಿ, ಅವನ ಒಪ್ಪಿಗೆ ಪಡೆದು ಯಮನಿಂದ ಯುಧಿಷ್ಠಿರ (ಧರ್ಮರಾಯ)ನನ್ನೂ, ವಾಯುದೇವನಿಂದ ಭೀಮನನ್ನೂ, ಇಂದ್ರನಿಂದ ಅರ್ಜುನನನ್ನೂ ಪಡೆದುಕೊಳ್ಳುತ್ತಾಳೆ. ಪಾಂಡುವಿನ ಕೋರಿಕೆ ಮೇರೆಗೆ ತನ್ನಲ್ಲಿ ಉಳಿದಿದ್ದ ಇನ್ನೊಂದು ಮಂತ್ರವನ್ನು ಮಾದ್ರಿಗೆ ನೀಡುತ್ತಾಳೆ. ಅವಳು ಆ ವರದ ಬಲದಿಂದ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ಅವಳಿ ಮಕ್ಕಳಾದ ನಕುಲ-ಸಹದೇವರನ್ನು ಪಡೆದುಕೊಳ್ಳುತ್ತಾಳೆ. ಒಟ್ಟಿನಲ್ಲಿ ಪಾಂಡುವಿಗೆ ಐದು ಮಂದಿ ಮಕ್ಕಳಾದರು.

ಧೃತರಾಷ್ಟ್ರನ ಸತಿ ಗಾಂಧಾರಿಗೆ ಇದು ಸಹಿಸಲು ಆಗದ ಸಂಕಟವು
ಕುರುವಂಶಕೆ ಹಿರಿವಾರಸುದಾರನ ಕೊಡಲಾಗದ ಮನಸಿನ ನೋವು
ಅಂದಿನ ದಿನ ಗಾಂಧಾರಿಗೆ ಚಿಂತೆಯು, ನಿದ್ರೆಯು ಇಲ್ಲದೆ ಹೊರಳಿದಳು
ಅರೆಬರೆ ನಿದ್ದೆಯ ಮಂಪರು ಸ್ಥಿತಿಯಲಿ ಕನಸನು ಕಾಣುತ ನರಳಿದಳು
ಕುಂತಿಯ ಮೇಲಿನ ಮತ್ಸರದಿಂದಲಿ ತನ್ನಯ ಬಸುರನು ಹೊಸಕಿರಲು
ಗರ್ಭದ ಪಿಂಡವು ತುಂಡುಗಳಾಗಿ ನೂರ ಒಂದು ಹೋಳಾಗಿರಲು
ಕೂಡಲೆ ಅಲ್ಲಿಗೆ ಆಗಮಿಸಿದ್ದನು ಓರ್ವ ದಿವ್ಯ ಮಹಾಪುರುಷ
ಹೋಳುಗಳೆಲ್ಲವ ಸಂಗ್ರಹಿಸಿದ್ದನು ತಡಮಾಡದೆ ಮುಂದಿನ ನಿಮಿಷ
ಪ್ರತಿಯೊಂದನ್ನೂ ಬೇರೆಬೇರೆಯೇ ಶೈತ್ಯದ ಮಡಕೆಯೊಳಿರಿಸಿದನು
ಮಡಕೆ ಬಾಯಿಯನು ಭದ್ರಪಡಿಸುತ್ತ ಜೋಪಾನವಾಗಿರಿಸಿದನು
ಕೆಲದಿನ ಕಳೆಯಲು ಮಡಕೆಗಳಿಂದಲಿ ನೂರ ಒಂದು ಮಕ್ಕಳು ಹುಟ್ಟಿ
ಎಲ್ಲರು ಒಟ್ಟಿಗೆ ‘ಅಮ್ಮಾ..!’ ಎನ್ನಲು ಗಾಂಧಾರಿಯ ಮನಸಿಗೆ ತಟ್ಟಿ
ಕೂಡಲೆ ರಾಣಿಯು ಗಾಬರಿಗೊಳ್ಳುತ ಭಯದಲಿ ಕಣ್ಣನು ತೆರೆದವಳು
ಕನಸೆಂದರಿತಳು ಕಸಿವಿಸಿಗೊಂಡಳು ಮತ್ತೆ ಮಂಪರಲಿ ಮುಳುಗಿದಳು!
ಗಾಂಧಾರಿಯು ಗರ್ಭಿಣಿಯಾಗಿದ್ದಳು ಪ್ರಸವವಿನ್ನೂ ಆಗಿರಲಿಲ್ಲ.
ಕುಂತಿಗೆ ಮೊದಲೇ ಮಗುವಾಗಿದ್ದುದು ಅವಳ ಮನಸ್ಸಿಗೆ ಹಿತವಿಲ್
ಕನಸಲಿ ಕಂಡುದನೆಲ್ಲವ ನೆನೆಯುತ ಮೆಲ್ಲಗೆ ಹೊಟ್ಟೆಯ ಸವರಿದಳು
ಅಂದಿನ ರಾತ್ರಿಯೆ ಮಗನನು ಹೆತ್ತಳು, ತಾಯಿಯಾಗಿ ತಾ ಸುಖಿಸಿದಳು!

ಹೆಣ್ಣಿನ ಮನದಲಿ ಮತ್ಸರವೆಂಬುದು ತಣ್ಣಗೆ ಅಡಗಿದ ಕಡಲ ಉರಿ
ಹೆಣ್ಣಿಗೆ ಜಗದಲಿ ಮನ್ನಣೆ ದೊರೆವುದು ಮೃಣ್ಮಯ ಜಗದಲಿ ಒಡಲ ಸಿರಿ
ಹೆಣ್ಣಿನ ಮನವನು ಅರಿಯುವುದೆಂಬುದು ಲೋಕದ ಮಂದಿಗೆ ಒಗಟಾಯ್ತು
ಹೆಣ್ಣೇ ಹೆಣ್ಣಿಗೆ ಶತ್ರುವು ಎಂಬುದು ಲೋಕರೂಢಿಯಲಿ ಬೆಳೆದಾಯ್ತು

ಪಾಂಡುವು ಕುಂತಿಯ ಮಗನಿಗೆ ಹೆಸರನು ಕೊಟ್ಟ ‘ಯುಧಿಷ್ಠಿರ’ ಎನ್ನುತಲಿ
ಧರ್ಮವೇ ತಾನು ಮೈವೆತ್ತಂತಿರೆ ಶೋಭಿಸುತಿದ್ದನು ಕಾಡಿನಲಿ!
ಗಾಂಧಾರಿಯು ಕರೆದಳು ಮಗನನ್ನು ‘ದುರ್ಯೋಧನ’ ಎಂದೆನ್ನುತಲಿ
ವೀರಯೋಧ ಗುಣಲಕ್ಷಣ ಹೊಂದಿದ ವೀರ ಕುಮಾರನು ನಾಡಿನಲಿ!

ವರುಷವು ಉರುಳಿತು ಹರುಷವು ಅರಳಿತು ಕಾಡು-ನಾಡಿನಲಿ ಸವಿಬೆರೆತು
ಹರುಷವೆಂಬುವುದು ಶಾಶ್ವತ ಉಳಿವುದೆ? ಮನದಲ್ಲಿ ಮತ್ಸರವಿರೆ ಕುಳಿತು
ಯೋಧನ ಲಕ್ಷಣ ಹೊಂದಿದ ಮಗನನು ಧೃತರಾಷ್ಟ್ರನು ಪಡೆದನು ಎಂದು
ಕಾಡಿಗೆ ಹೇಗೋ ಸುದ್ದಿಯು ತಲುಪಿತು ಪಾಂಡು-ಕುಂತಿಯರ ಕಿವಿಗಂದು
ಮತ್ಸರವೆಂಬುದು ಮನುಜನ ಮನಸಿನ ಮೊದಲನೆ ಶತ್ರುವು ಜಗದಲ್ಲಿ
ಹೊಟ್ಟೆಯ ಕಿಚ್ಚಿಗೆ ಔಷಧವೆಂಬುದು ಇರದಾಗಿದೆ ಈ ಲೋಕದಲಿ!
ಪಾಂಡುವು ಚಿಂತೆಯ ಮಾಡುತ ಹೇಳಿದ- “ನಮ್ಮಯ ಮಗನದು ಶಾಂತ ಗುಣ
ಕ್ಷತ್ರಿಯ ಲಕ್ಷಣವೆಂದರೆ ಅದುವೇ ಶತ್ರುವ ಜಯಿಸುವ ವೀರತನ
ಅಣ್ಣನಿಗಂತಹ ಮಗನು ಜನಿಸಿದನು, ನಮಗೆ ಇಲ್ಲ ಎಂಬುದು ಕೊರಗು
ಆದ್ದರಿಂದ ಬಲಶಾಲಿಯಾದ ಇನ್ನೋರ್ವ ಪುತ್ರನಿಗೆ ತಾಯಾಗು”
ಪಾಂಡುವು ಹೇಳಿದ ಮಾತಿನ ಅರ್ಥವು ಮತ್ತೆ ಒಂದು ನಿಯೋಗವದು
ಕುಂತಿಯು ಮನದಲಿ ಸಂತಸಗೊಂಡಳು ತನಗೆ ಒಲಿದ ಶುಭಯೋಗವಿದು
ಮಡದಿಯು ಕೂಡಲೆ ಒಪ್ಪಿಗೆಯಿತ್ತಳು ಅವಳಿಗೆ ಸಂತಸವಾಗಿತ್ತು
ಪಾಂಡುವಿಗೋ ಬಲಶಾಲಿ ಪುತ್ರನನು ಪಡೆವ ಆಸೆ ಬಲವಾಗಿತ್ತು!

ಪಾಂಡುವು ಕೂಡಲೆ ಧರ್ಮಮೂರ್ತಿಯನ್ನು ಭೇಟಿಯ ಮಾಡಿದ ತಾನಂದು
ಅವನ ಮನಸಿನಲಿ ಇದ್ದುದು ಒಂದೇ ಧೀರಮಗನು ತನಗಿರಲೆಂದು
ಧರ್ಮನು ಹೇಳಿದ- “ಮಾರುತನೆಂಬುವ ನಾಯಕನಿರುವನು ಸೇನೆಯಲಿ
ವಾಯುದೇವನ ಅಂಶದಿ ಜನಿಸಿದ ಮಹಾವೀರನವ ಬಲಶಾಲಿ”
ಪಾಂಡುವು ಮಾರುತ ಭೇಟಿಯ ಮಾಡುತ ಬೇಡಿದ ಅವನ ನಿಯೋಗಕ್ಕೆ
ಒಪ್ಪಿಗೆ ನೀಡಿದ ಮಾರುತ ಬಂದನು ಸುಂದರಿ ಕುಂತಿಯ ಸನಿಹಕ್ಕೆ
ವರವನು ನೀಡಲು, ಕುಂತಿಯ ಬಸುರಲಿ ಪುತ್ರನು ಜನಿಸಿದ, ಕಲಿಭೀಮ
ಕೆಣಕಿದರವನನು ಯಾರೂ ಉಳಿಯರು ಆಗಿಯೇಬಿಡುವರು ನಿರ್ನಾಮ!

ಭೀಮನ ಹುಟ್ಟಿನ ನಂತರ ಪಾಂಡುವು ಕೆಲದಿನ ಸುಮ್ಮನೆ ಇದ್ದವನು
ತ್ರಿಲೋಕವೀರನು ಎನ್ನುವ ಮಗನನು ಪಡೆಯಲೆಂದು ತಾ ಬಯಸಿದನು
ಧರ್ಮಮೂರುತಿಯ ಸೂಚನೆ ಮೇರೆಗೆ ಇಂದ್ರನೆಂಬ ಅವರೊಡೆಯನನು
ಭೇಟಿಯ ಮಾಡಿದ, ಇಂದ್ರನ ಅಂಶದಿ ಜನಿಸಿದ್ದಂತಹ ವೀರನನು
ಆ ದಿನದಂದೇ ಇಂದ್ರನ ಸಂಧಿಸಿ ಪಾಂಡುವು ಬೇಡಿದ ವರವನ್ನು
ಕರುಣೆಯ ತೋರಿಸು ಎನ್ನುತ ಬೇಡಿದ ಕೈಗಳ ಮುಗಿಯುತ ಅವನನ್ನು
ಪಾಂಡುವು ಬೇಡಿದ ಬೇಡಿಕೆಯನ್ನವನು ಪರಿಶೀಲನೆಗೊಳಪಡಿಸಿದನು
ಕುಂತಿಯ ನೋಡಿದ ನಂತರ ಇಂದ್ರನು ಸಂತಸದಿಂದಲಿ ಒಪ್ಪಿದನು!
ಇಂದ್ರನ ಸಂಗಡ ಸಂಭ್ರಮದಿಂದಲಿ ಕುಂತಿ ನಿಯೋಗವ ಹೊಂದುತಲಿ
ವರದಲಿ ಪಡೆದಳು ‘ಅರ್ಜುನ’ನೆಂಬುವ ಸುಂದರ ಮಗನನು ಸನಿಹದಲಿ
ಹೆಮ್ಮೆಯಿಂದ ಅವಳಂದು ಬೀಗಿದಳು ವೀರಮಾತೆ ತಾನೆನ್ನುತ್ತ
ಮಹಾಪರಾಕ್ರಮಿಳಾಗಿರುವಂತಹ ವೀರ ಸುಪುತ್ರರ ಸಲುಹುತ್ತ!
ಕಾಡಿನ ಬದುಕಲಿ ಕೊರಗಿದ ಮಾದ್ರಿಯು ಮೌನದಿ ಸಂಕಟ ಅನುಭವಿಸಿ
ತಾನು ಕೂಡ ತಾಯಾಗುವ ಕನಸನು ಕಾಣುತಲಿದ್ದಳು ಕಳವಳಿಸಿ
ಒಮ್ಮೆ ಧೈರ್ಯದಲಿ ಕೇಳಿಯೇಬಿಟ್ಟಳು ಪಾಂಡು-ಕುಂತಿಯರ ಓಲೈಸಿ
`ಅಯ್ಯೋ ಪಾಪ!’ ಎನ್ನುತ ಕುಂತಿಯು ಒಪ್ಪಿಗೆ ಕೊಟ್ಟಳು ಹಾರೈಸಿ
ಪಾಂಡುವಿಗೂ ಮನದಲ್ಲಿಯೆ ಇದ್ದಿತು ಆಸೆಯು ಕಿರಿಪತ್ನಿಯ ಮೇಲೆ
ಆದರೆ ಕುಂತಿಗೆ ಹೆದರಿದ ರಾಜನು ಸಮ್ಮನೆ ಇದ್ದನು ಹೇಳದೆಲೆ
ಕುಂತಿಯು ಒಪ್ಪಿಗೆ ನೀಡಿದ ನಂತರ ಅವನಿಗೆ ಸಂತಸವಾಗಿತ್ತು
ಮಕ್ಕಳನವಳೂ ಪಡೆಯಲಿ ಎನ್ನುತ ಅವನ ಮನವು ಹಾರೈಸಿತ್ತು!

ಸವತಿಯ ಮತ್ಸರವೆಂಬುದು ಜಗದಲಿ ಅವತರಿಸಿದ್ದಿತು ಆದಿಯಲಿ
ಸವತಿತನವು ಇದು ಸರ್ವಕಾಲದಲಿ ಸವಕಲಾಗುವುದೆ ಸೃಷ್ಟಿಯಲಿ?
ತವಕದಿಂದ ತನ್ನೆದೆಯ ತಣಿಸುವಲಿ ವಿವಶರಾಗದಿರಲಾದೀತೆ?
ಸವತಿಯಾಗಿದ್ದ ಮಾದ್ರಿಯ ಮನದಲಿ ಸವತಿತನವು ಮರೆಯಾದೀತೆ?

ಕುಂತಿಗೆ ಇರುವರು ಮೂವರು ಮಕ್ಕಳು, ಮಾದ್ರಿಯು ಚಿಂತೆಯ ಮಾಡಿದಳು
ಒಮ್ಮೆಗೆ ಇಬ್ಬರು ಮಕ್ಕಳು ಹುಟ್ಟಲಿ ಎನ್ನುತ ಸಂಚನು ಹೂಡಿದಳು
ಪಾಂಡುರಾಜನಿಗೆ ಚಿಕಿತ್ಸೆ ನೀಡಲು ಬಂದಿದ್ದಂತಹ ವೈದ್ಯರನು
ಅಶ್ವಿನಿದೇವತೆ ಅಂಶದೊಳಿಂದಲಿ ಜನಿಸಿದ್ದಂತಹ ಅವಳಿಯನು
ಒಪ್ಪಿಸಿ ನಿಯೋಗ ಪದ್ಧತಿಯಿಂದಲಿ ಪಡೆದಳು ಇಬ್ಬರು ಪುತ್ರರನು
ಏಕಕಾಲಕ್ಕೆ ಇಬ್ಬರು ಮಕ್ಕಳು, ನಕುಲ ಮತ್ತು ಸಹದೇವರನು!

ಸವತಿಯ ಸಂಚನು ನೋಡಿದ ಕುಂತಿಯು ನಿಯೋಗ ಪದ್ಧತಿ ನಿಲ್ಲಿಸುತ
ಮತ್ತೆ ಇನ್ನು ಮಕ್ಕಳು ಬೇಡೆನ್ನುತ ಪದ್ಧತಿಯನೆ ರದ್ದಾಗಿಸುತ
ಪರಿವಾರವೆಲ್ಲವ ಊರಿಗೆ ಕಳುಹಿಸಿ, ತಮ್ಮೈವರು ಮಕ್ಕಳ ಜೊತೆಗೆ
ಕುಂತಿಯು ಪಾಂಡುವು ಮಾದ್ರಿಯ ಸಂಗಡ ನಡೆದರು ಕಾಡಿನ ಬೇರೆಡೆಗೆ!

ಅಂತೂ ಪಾಂಡುವು ನಿಯೋಗದಿಂದಲಿ ಐವರು ಮಕ್ಕಳ ಪಡೆದಿದ್ದ
ಶಂತನು ವಂಶಕೆ ವಾರಸುದಾರರ ತರುವಲಿ ಬಹಳವೆ ದಣಿದಿದ್ದ!
ತನ್ನ ಅಂಶದಲಿ ಮಕ್ಕಳ ಪಡೆಯುವ ಭಾಗ್ಯವು ಇಲ್ಲದೆ ನೊಂದಿದ್ದ
ಆದರೆ, ಮುಂದೆಂದಾದರು ಸಾಧ್ಯವೆ? ಎನ್ನುವ ಹಂಬಲ ಹೊಂದಿದ್ದ!

ಹಸ್ತಿನಪುರ ಗಾಂಧಾರಿಯ ಬಸುರಲಿ ದುರ್ಯೋಧನ ಜನಿಸಿದ ಬಳಿಕ
ವರುಷದ ಮೊದಲೇ ದುಶ್ಯಾಸನನೂ ಜನಿಸಿರಲವಳ ಬಲು ಪುಳಕ
ವೀರರಾದಂಥ ಇಬ್ಬರು ಮಕ್ಕಳು ಹೆಮ್ಮೆಯಿಂದವಳು ಬೀಗಿದಳು
ಕುಂತಿಗೆ ಮೂವರು ಮಕ್ಕಳು ಎನ್ನುತ ಮನಸಿನಲ್ಲಿಯೇ ಕೊರಗಿದಳು
ಮತ್ತೆ ಮತ್ತೆ ಹೆತ್ತಳು ತೆರಪಿಲ್ಲದೆ ಅವಳಿ-ಜವಳಿ ಇನ್ನೂ ನಾಲ್ಕು
ಸಾಲು ಸಾಲು ಮಕ್ಕಳು ಹುಟ್ಟುತಲಿರೆ ಅನಿಸಿತವಳಿಗಿಷ್ಟೇ ಸಾಕು
ಗಾಂಧಾರಿಯ ಈ ಮಕ್ಕಳ ಜೊತೆಗೇ ಧೃತರಾಷ್ಟ್ರನ ದಾಸಿಯರಲ್ಲಿ
ಅವನಿಗೆ ಹುಟ್ಟಿದ ಮಕ್ಕಳ ಸಂಖ್ಯೆಯು ನೂರರ ಹತ್ತಿರ ಸಾಗಿತ್ತು
ಧೃತರಾಷ್ಟ್ರನ ಮಕ್ಕಳ ಸಂಭ್ರಮವು ಒಂದುನೂರ ಒಂದಾಗಿತ್ತು
ನೂರ ಒಂದರಲಿ ‘ದುಶ್ಯಲೆ’ ಎನ್ನುವ ಹೆಣ್ಣುಮಗುವು ಕೂಡಾ ಇತ್ತು
ಗಾಂಧಾರಿಯು ಹಿಂದೊಮ್ಮೆ ಕನಸಿನಲಿ ಕಂಡುದು ನಿಜವೇ ಆಗಿತ್ತು
ಅಣ್ಣನು ಶಕುನಿಯು ಸಂಗಡವಿದ್ದನು ಅವಳಿಗೆ ಸಂತಸವಾಗಿತ್ತು
ನೂರೊಂದು ಮಕ್ಕಳು ಒಟ್ಟಿಗೆ ಇರುತಿರೆ ಮಹಾತಾಯಿ ತಾನೆನಿಸಿದಳು
ಎಲ್ಲಾ ಮಕ್ಕಳ ಸಾಕಿ ಸಲುಹುತ್ತ ತಾಯ್ತನದಲ್ಲಿ ಸುಖಿಸಿದಳು!
ಮಕ್ಕಳ ಲಾಲನೆ ಪಾಲನೆ ಮಾಡುತ ಶಕುನಿಯೂ ಇದ್ದ ಜೊತೆಯಲ್ಲಿ
ಅಕ್ಕರೆಯಿಂದಲಿ ತಂಗಿಯ ಮಕ್ಕಳ ಹಿತವನು ಬಯಸುತ ಹಿತದಲ್ಲಿ
ಪಟ್ಟದರಾಣಿಯ ತಮ್ಮನವನೆಂದು ಹೆಚ್ಚಿನ ಗೌರವ ಸಿಗುತಿತ್ತು
ಕೆಟ್ಟಮನಸ್ಸನು ಹೊಂದಿದ್ದಂತಹ ಅವನ ಮನದಿ ಸ್ವಾರ್ಥವು ಇತ್ತು!

ಸಮಯ ಸಾಧಕರು ಸದಾ ಕಾಲವೂ ತಮ್ಮ ಒಳಿತನ್ನು ಬಯಸುವರು
ಸಮಚಿತ್ತವನ್ನು ಸಾಧಿಸಿಕೊಳ್ಳುತ ಹೇಗೋ ಜೀವನ ಸವೆಸುವರು
ಸಮಯ ಸಿಕ್ಕಾಗ ಪರರ ಮನೆಯಲ್ಲಿ ಬೇಳೆಯ ಬೇಯಿಸಿಕೊಳ್ಳುವರು
ಸಮಯಾಸಮಯವ ಅವರನುಕೂಲಕೆ ತಾವೇ ಹೊಂದಿಸಿಕೊಳ್ಳುವರು

ಹಿರಿಯ ಭೀಷ್ಮನಿಗೆ ಶಕುನಿಯ ಬುದ್ಧಿಯು ಮನಸಿಗೆ ಹಿಡಿಸುತ್ತಿರಲಿಲ್ಲ
ಆದರೆ, ಅವನನು ದೂರೀಕರಿಸಲು ಸೂಕ್ತ ಕಾರಣವು ಇರಲಿಲ್ಲ
ಹಿರಿಯನಾಗಿ ಹಿತವಚನವ ಹೇಳಿದ- “ರಾಜಕಾರ್ಯದಲ್ಲಿ ದೂರವಿರು”
ಆದರೆ, ಶಕುನಿಯು ಬೆಲೆಕೊಡಲಿಲ್ಲ ಎಷ್ಟೇ ಅವನನು ದೂರಿದರೂ
ಕುರುಡನಾದ ಧೃತರಾಷ್ಟ್ರನ ಬೆಂಬಲ ಶಕುನಿಯ ಬೆನ್ನಿಗೆ ಇರುತಿತ್ತು
ರಾಣಿಯಾಗಿರುವ ಗಾಂಧಾರಿಯ ಬೆಂಬಲವೂ ಅವನಿಗೆ ಸಿಗುತಿತ್ತು
ಎಲ್ಲ ಮಕ್ಕಳನ್ನು ನೋಡಿಕೊಳ್ಳುವನು ಎಂದು ಭೀಷ್ಮನೂ ಸಹಿಸಿದ್ದ
ನೂರ ಒಂದು ಮಂದಿಯನ್ನೂ ಸಲುಹುವ ಜವಾಬ್ದಾರಿಯನ್ನು ವಹಿಸಿದ್ದ!

ಒಟ್ಟಿನಲ್ಲಿ ಕುರುವಂಶದೊಳೊಟ್ಟಿಗೆ ಪಾಂಡವ-ಕೌರವರುದಿಸಿದರು
ಮಕ್ಕಳೇ ಇರದೆ ಕೊರಗಿದ ವಂಶದಿ ನೂರ ಆರು ಜನ ಎನಿಸಿದರು
ಭೀಷ್ಮನಿಗಂತೂ ನೆಮ್ಮದಿ ದೊರಕಿತು ಕುರುವಂಶವು ಚಿಗುರೊಡೆದಿರಲು
ವಂಶವ ಬೆಳೆಸುವ ತನ್ನ ಕಾರ್ಯದಲ್ಲಿ ಅಪಾರ ಯಶಸ್ಸು ದೊರೆತಿರಲು
ಸತ್ಯವತಿಗೂ ಈಗ ನೆಮ್ಮದಿಯೆನಿಸಿತು ರಾಜವೈಭವವು ಸಾಕಾಯ್ತು
ಶಾಶ್ವತ ಸುಖವನು ಪಡೆಯುವಂತಹ ತಪಶ್ಚರ್ಯೆಯಲಿ ಮನಸಾಯ್ತು
ಸತ್ಯವತಿ ತಾನು ಸ್ವಯಚ್ಛೆಯಿಂದಲಿ ವಾನಪ್ರಸ್ಥಕ್ಕೆ ನಡೆದಿರಲು
ಸೊಸೆಯರಿಬ್ಬರೂ ಅತ್ತೆಯ ಸಂಗಡ ತಾವೂ ತೆರಳಲು ಬಯಸಿರಲು
ಭೀಷ್ಮನು ಅವರಿಗೆ ಎಲ್ಲ ವ್ಯವಸ್ಥೆಯ ಮಾಡಿಸಿಕೊಟ್ಟನು ಮನವಿರದೆ
ತನಗೆ ಮಾತ್ರ ಈ ಜವಾಬ್ದಾರಿಗಳು ಬೆನ್ನುಬಿಡವೆಂದು ಬಿಡುವಿರದೆ
ಹೆಂಡಿರು ಮಕ್ಕಳ ಸಂಗಡ ಪಾಂಡುವು ಹಸ್ತಿನಾಪುರಕ್ಕೆ ಬರಲೆಂದು
ಹಾರೈಸುತ್ತಲಿ ದಾರಿಯ ನೋಡುತ ಕಾಣುತಲಿದ್ದನು ಕನಸಂದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಹೊತ್ತು
Next post ವಚನ ವಿಚಾರ – ಜ್ಞಾನದ ಎರಡು ಮುಖ

ಸಣ್ಣ ಕತೆ

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…