ಕಣ್ಣಿಲ್ಲದಿರುವುದಕ್ಕೆ
ಇದ್ದೂ ಇಲ್ಲವಾಗುವುದಕ್ಕೆ
ಬಹಳ ವ್ಯತ್ಯಾಸ
ಗಾಂಧಾರಿ, ಕಣ್ಣು ತೆರೆ
ನೂರು ಕಣ್ಣಿನ ಕ್ಷತಿಜ-
ದಾಟದೂಟಕ್ಕೆ ನೀನೂ ಬೆರೆ

ಈ ಕಣ್ಣುಪಟ್ಟಿ ಕಿತ್ತೆಸೆ
ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ
ಕಣ್ಣಾರೆ ನೋಡು
ಭ್ರಮೆಯ ಭವ್ಯವನ್ನೆಲ್ಲ
ದೃಷ್ಟಾಂತ ಅನುಭವಿಸು

ತಾಯೀ ಕಣ್ಣು ತೆರೆದಾಗ
ನೀನು ಬಹುತೇಕ ನೋಡುವುದು ಕುರುಡರನ್ನು
ಅಥವಾ
ನೀನು ನೋಡುವವರಲ್ಲಿ ಕುರುಡರು ಜಾಸ್ತಿ
ಈ ಕಣ್ಣಿರುವ ಕುರುಡರು
ಕುರುಕುಲದ ಆಸ್ತಿ

ಬಹುಕಾಲ ಕಣ್ಣು ಮುಚ್ಚಿದ ನಿನಗೆ
ಬೆಳಕು ಅಸಹ್ಯವಾದೀತು
ಒಪ್ಪಲೇ ಬೇಕಾದ ಬದುಕಿನ ಸತ್ಯ
ಕಠೋರವೂ ಅನಿಸೀತು
ಆದರೂ ಆ ತುತ್ತು
ನುಂಗುವುದು ಅನಿವಾರ್ಯ

ದೇವರ ಮುಂದಿನ ಸೊಡರಿನ ತುಪ್ಪ
ಖಾಲಿಯಾಗುತ್ತ ಬಂತು
ನೆಣೆ ಕಪ್ಪಾಯಿತು ನೋಡು
ಇನ್ನು ತುಪ್ಪ ಹಾಕಿದರೂ ಉರಿಯುವುದು ಕಷ್ಟ

ಅದೇ ಸೊಡರಿಗೆ ಇನ್ನೊಂದು ನೆಣೆ
ಇನ್ನಷ್ಟು ತುಪ್ಪ
ಹಾಕಿ ಉರಿಸುವುದು ಅನಾಯಸದ ಕೆಲಸ
ಅಷ್ಟೆಲ್ಲ ಮಾಡುವ ಮೊದಲು
ನೀನು ಕಣ್ಣು ತೆರೆಯಲೇಬೇಕು

ತೆರೆದರೂ ಮುಚ್ಚುವುದುಂಟಲ್ಲ-
ಉರಿದರೂ ಆರುವುದುಂಟಲ್ಲ-
ಕೂಡಿದರೂ ಕಳೆಯುವುದುಂಟಲ್ಲ-
ಅದು ಬೇರೆ ಮಾತು
ಬೇರೆ ಸಂದರ್ಭ
*****