ಭವ ನೀಗುವ ಬಗೆ

ಭವ ನೀಗುವ ಬಗೆ

ಕತೆಗಾರ ಎಸ್. ಸುರೇಂದ್ರನಾಥ್ ಭರ್ಜರಿಯಾದ ಕಾದಂಬರಿಯೊಂದನ್ನು ಬರೆದಿದ್ದಾರೆ-ಹೆಸರು ‘ಎನ್ನ ಭವದ ಕೇಡು’ (ಛಂದ ಪ್ರಕಾಶನ, ಬೆಂಗಳೂರು, ೨ಂಂ೭)- ಹಾಗೂ ಆ ಮೂಲಕ ಕನ್ನಡ ಕಾದಂಬರೀ ಕ್ಷೇತ್ರವನ್ನು ಭರ್ಜರಿಯಾಗಿಯೇ ಪ್ರವೇಶಿಸಿದ್ದಾರೆ. ಎನ್ನ ಭವದ ಕೇಡು ಎನ್ನುವುದು ಬಸವಣ್ಣನವರ ಸುಪ್ರಸಿದ್ಧ ವಚನವೊಂದರ ‘ಕೂಡಲ ಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯ’ ಎಂಬ ಸಾಲಿನಿಂದ ಎತ್ತಿಕೊಂಡುದು. ಆದರೆ ಸುರೇಂದ್ರಾಥ್ ಈ ಪದಪುಂಜವನ್ನು ಉಪಯೋಗಿಸಿದ ರೀತಿಗೂ ಬಸವ ವಚನದಲ್ಲಿ ಅದು ಉಪಯೋಗವಾದ ರೀತಿಗೂ ವ್ಯತ್ಯಾಸವಿದೆ. ಸುರೇಂದ್ರನಾಥರ ಕಾದಂಬರಿಯಲ್ಲಿ ಭವದ ಕೇಡಿಗೆ ಜನ್ಮದ ಬವಣೆ ಎಂಬ ಅರ್ಥ ಬರುತ್ತದೆ; ಬಸವ ವಚನದಲ್ಲಿ ಅದಕ್ಕೆ ಜನ್ಮದ ಬಂಧನದಿಂದ ಬಿಡುಗಡೆ ಎಂಬ ಅರ್ಥವಿದೆ. ಸುರೇಂದ್ರನಾಥ್ ಭವ ಮತ್ತು ಅನುಭಾವದ ಸಂಬಂಧದ ಬಗ್ಗೆ ಏನೂ ಹೇಳುವುದಿಲ್ಲವಾದರೂ ಬಸವ ವಚನದ ಕಾರಣ-ಹಾಗೂ ಇಡೀ ಶರಣ ತತ್ವವೇ ಅದರ ಮೇಲೆ ನಿಂತಿರುವ ಕಾರಣ-ಭವ ಎಂಬ ಮಾತು ಅನುಭಾವವನ್ನು ಧ್ವನಿಸುತ್ತಲೇ ಇರುತ್ತದೆ: ಅನುಭಾವದಿಂದ ಮಾತ್ರವೇ ಭವದಿಂದ ಬಿಡುಗಡೆ. ಹೀಗೆ ಭವ ಮತ್ತು ಅನುಭಾವ ಮನುಷ್ಯಜೀವನದ ಎರಡು ಕೊನೆಗಳಾಗುತ್ತವೆ. ಅನುಭವ ಬಹುಶಃ ಇವುಗಳ ನಡುವಣ ಕೊಂಡಿಯಾಗುವ ಸಾಧ್ಯತೆಯನ್ನು ಒಳಗೊಂಡುದು. ಕಾದಂಬರಿಯ ಅನೇಕ ಪಾತ್ರಗಳು ವಾಸ್ತವ ಪ್ರಪಂಚದಲ್ಲಿರುವಂತೆಯೇ ಒಂದಲ್ಲ ಒಂದು ಪರಿಯಾಗಿ ಭವದಲ್ಲಿ ಬಿದ್ದು ಹೊರಳಾಡುತ್ತ ಇರುತ್ತವೆ-ಈ ಬೇಗುದಿಯೇ ಅವುಗಳು ಪಡೆಯುವ ಅನುಭವ. ಆದರೆ ಕೆಲವೇ ಕೆಲವು ಪಾತ್ರಗಳು ಮಾತ್ರವೇ ತಮ್ಮ ಅನುಭವವನ್ನು ಅನುಭಾವದ ಸೀಮೆಯತ್ತ ಕೊಂದೊಯ್ಯುವುದಕ್ಕೆ ಸಮರ್ಥವಾಗುತ್ತವೆ. ಉದಾಹರಣೆಗೆ ಗೋವರ್ಧನರಾಯರು ಹಾಗೂ ಅವರ ಕೊನೆಯ ಮಗಳು ಸರಸ್ವತಿ. ಆದರೆ ಮಾಮಿಯಲ್ಲ-ಮಾಮಿಗೆ ಭವದಿಂದ ಮುಕ್ತಿಯೇ ಇಲ್ಲ, ಮಾತ್ರವಲ್ಲ ಅವಳು ಭವದ ಆದಿಮ ಹಂತದತ್ತ ಅಂತರ್‌ಪಿಶಾಚದಂತೆ ಹಿಂದಕ್ಕೆ ನಡೆಯುತ್ತಲೇ ಇರುತ್ತಾಳೆ. ಯಾಕೆಂದರೆ ಅವಳ ಪಾದಗಳು ತಿರುಗಮುರುಗ, ಅರ್ಥಾತ್ ಮಾಮಿ ಮೂಲತಃ ಸ್ವಾರ್ಥಿ.

ಕಾದಂಬರಿಯ ಉದ್ದಕ್ಕೂ ಅಜಗರದಂತೆ ಬಿದ್ದುಕೊಂಡಿರುವ ಈ ಮಾಮಿಯ ಪಾತ್ರದ ಕುರಿತು ಯೋಚಿಸುತ್ತಿರುವಂತೆ ನನಗೆ ಎಚ್. ಜಿ. ವೆಲ್ಸ್ ತನ್ನ ಜಗತ್ ಚರಿತ್ರೆಯಲ್ಲಿ ಎಲ್ಲೋ ಒಂದು ಕಡೆ ಸರೀಸೃಪಗಳ ಕುರಿತು ಹೇಳಿದ ಮಾತು ನೆನಪಾಗುತ್ತದೆ: ಈ ಸರೀಸೃಪಗಳು (ಸರ್ಪ, ಮೊಸಳೆ ಮುಂತಾದ ಜೀವಿಗಳು) ಜೀವವಿಕಾಸದ ಎಷ್ಟು ಆದಿಮ ಯುಗಕ್ಕೆ ಸೇರಿದುವೆಂದರೆ ನಮಗೂ ಅವುಗಳಿಗೂ ದಾಟಲಾರದ ಅಂತರವೊಂದು ಏರ್ಪಟ್ಟಿದೆ ಎನ್ನುತ್ತಾನೆ ವೆಲ್ಸ್. ಈ ಒಂದು ಮನಸ್ಸು ಎನ್ನುವುದಾದರೂ ಇದೆಯೇ, ಇದ್ದರೆ ಅವು ಏನನ್ನು ಯೋಚಿಸುತ್ತವೆ. ಮುಂತಾದ ಪ್ರಶ್ನೆಗಳೇ ಅರ್ಥಹೀನವಾಗಿಬಿಡುತ್ತವೆ. ಮಾಮಿ ಅಂಥದೊಂದು ಪಾತ್ರ. ಇವಳಿಂದ ಮಾನಸಿಕವಾಗಿಯೂ ದೈಹಿಕವಾಗಿಯೂ ಚಿತ್ರಹಿಂಸೆಗೊಳಗಾದ ಸರಸ್ವತಿ ‘ಈ ಹೆಣ್ಣು ನನಗೆ ಅರ್ಥವಾಗೋದೇಯಿಲ್ಲ. ಎಂದೂ ಅರ್ಥವಾಗಿದ್ದಿಲ್ಲ. ಇನ್ನು ಮುಂದೂ ಅರ್ಥವಾಗೋದಿಲ್ಲ’ ಎಂದು ಹತಾಶಳಾಗುತ್ತಾಳೆ. ಯಾಕೆಂದರೆ ಮನುಷ್ಯ ಎಷ್ಟು ಕೆಟ್ಟವನಾಗಿದ್ದರೂ ಅವನ ಜತೆ ಜಗಳ ಸಾಧ್ಯ; ಆದರೆ ಆತ ಪ್ರಾಕೃತನಾದರೆ ಜಗಳವೂ ಸಾಧ್ಯವಾಗುವುದಿಲ್ಲ.

ಆದರೂ ಈ ಮಾಮಿ ಕೂಡಾ ಕೆಲವೂಮ್ಮೆ ಜೀವಪರ ಗುಣಗಳನ್ನು ತೋರಿಸುತ್ತಾಳೆ: ಮಗಳು ಗಂಗೆ ಮತ್ತು ಅವಳ ಗಂಡ ಸತ್ತು ಗೋವರ್ಧನರಾಯರು ಶೋಕತಪ್ತರರಾಗಿ ಕುಳಿತಿದ್ದಾಗ ಈ ಮಾಮಿಯೇ ಹಸಿಯುತ್ತಿದ್ದ ಮಕ್ಕಳಿಗೆ ಊಟಕ್ಕೆ ಏರ್ಪಾಟು ಮಾಡಿದ್ದು: ‘ಅಬ್ಬೂನ್ನ ಕರ್ಕಂಡು ಹೋಗಿ ಹೋಟ್ಲಿಂದ ಯೇನಾರೆ ತರ್ತೀನಿ ತಟ್ಟೆ ಹಾಕಕೆ ಹೇಳಿ. ನಾವು ಉಪಾಸ ಸಾಯಣ ಬೇಕಾರೆ. ಬೆಳೀತಿರಾ ಮಕ್ಕಳನ್ನ ಯಾಕೆ ಉಪಾಸ ಸಾಯಿಸಬೇಕು…’ ಎಂದು ಗೋವರ್ಧನರಾಯರನ್ನು ಕಾರ್ಯಪ್ರವರ್ತರಾಗುವಂತೆ ಪ್ರೇರೇಪಿಸಿದ್ದು, ಚಿನ್ನಸ್ವಾಮಿ ಎಂಬ ಉದ್ದಟ ನೌಕರನಿಗೆ ಥಳಿಸುವ ಧೈರ್ಯ ತೋರಿದ್ದೂ ಈ ಮಾಮಿಯೇ. ಶಶಿಕಲ ಎಂಬ ಪೂರ್ವಾಶ್ರಮ ಹೆಸರಿನ ಈಕೆಗೂ ಮದುವೆಗೆ ಮುನ್ನ ಒಬ್ಬ ‘ಲವರ್’ ಇದ್ದ ಎನ್ನುವುದನ್ನು ಸರಸ್ವತಿ ಪತ್ತೆಹಚ್ಚುತ್ತಾಳೆ. ಈ ಲವರ್‌ನ್ನ ಅದು ಯಾಕೋ ಅವಳು ಮದುವೆಯಾಗುವುದು ಸಾಧ್ಯವಾಗಲಿಲ್ಲ. ಗೋವರ್ಧನರಾಯರ ಜತೆ ಅವಳ ಮದುವೆಯಾದ ನಂತರವೂ ಲವರ್ ಅವಳಿಗೆ ಪ್ರೇಮಪತ್ರಗಳನ್ನು ಬರೆಯುತ್ತಲೇ ಇದ್ದ-ಆಕಸ್ಮಿಕವಾಗಿ ಅವನು ಸಾಯುವತನಕ. ಈ ಪತ್ರಗಳನ್ನು ಮಾಮಿ ಪೆಟಾರಿಯಲ್ಲಿ ಭದ್ರವಾಗಿ ಜೋಪಾನ ಮಾಡಿ ಇಟ್ಟುಕೊಂಡಿರುತ್ತಾಳೆ. ಮಾಮಿ ಇಡೀ ಲೋಕದ ವಿರುದ್ಧವಾಗುವುದಕ್ಕೆ ಈ ಪ್ರೇಮನೈರಾಶ್ಯ ಒಂದು ಕಾರಣವೆಂದು ಹೇಳಬಹುದು. ಇನ್ನೊಂದು, ಮಕ್ಕಳಾದರೆ ತಾನು ಸತ್ತುಹೋಗುತ್ತೇನೆ ಎಂಬ ಅವಳ ಕಾಲಜ್ಞಾನ, ಯಾಕೆಂದರೆ ಈ ಮಾಮಿ ಸ್ವಲ್ಪಮಟ್ಟಿಗೆ ಕ್ಲೇರ್‌ವಾಯೆಂಟ್ (ಅತೀಂದ್ರಿಯಜ್ಞಾನಿ) ಕೂಡಾ ಹೌದು; ಆದರೆ ಇದು ಗಂಡನನ್ನು ಕೂಡದೆ ಇರುವುದಕ್ಕೆ ಅವಳು ಮಾಡಿಕೊಂಡ ತಂತ್ರವಾಗಿರುವುದು ಕೂಡಾ ಸಾಧ್ಯ. ನಂತರ ಮಾಮಿ ತನ್ನೆಲ್ಲ ದ್ವೇಷವನ್ನೂ ಸರಸ್ವತಿಯ ಮೇಲೆ -ಹಾಗೂ ಸರಸ್ವತಿಯ ಸಹಾಯಕ್ಕೆ ಯಾರೇ ಬಂದರೂ ಅವರ ಮೇಲೆ-ಕೇಂದ್ರೀಕರಿಸುತ್ತಾಳೆ. ಸರಸ್ವತಿ ಮತ್ತು ವಾಸುವಿನ ಪ್ರೀತಿಯ ನಡುವೆ ಬಂದು ಯಮುನೆಯನ್ನು ವಾಸುವಿಗೆ ಮದುವೆ ಮಾಡಿಸುತ್ತಾಳೆ. ಅಲ್ಲಿಗೂ ಸರಸ್ವತಿಯ ಕುರಿತಾದ ಅವಳ ಕ್ರೋಧ ಕಡಿಮೆಯಾಗುವುದಿಲ್ಲ; ಅವಳಿಗೆ ಮದುವೆಯಾಗದಂತೆ, ಮಕ್ಕಳಾಗದಂತೆ ಶಾಪ ಹಾಕುತ್ತಲೇ ಇರುತ್ತಾಳೆ. ಸಹನೆ ಮೀರಿ ಸರಸ್ವತಿ ಒಮ್ಮೆ ಮುಖಕ್ಕೆ ಉಗಿದಳೆಂದು ಅವಳಿರುವ ಕೋಣೆಗೆ ಬೀಗ ಹಾಕಿಸಿ ಸಾಯಲಿ ಎನ್ನುವಷ್ಟು ಅಮಾನುಷತೆ ತೋರುತ್ತಾಳೆ. ಪೂರ್ವದ ತನ್ನ ಪ್ರೇಮನೈರಾಶ್ಯವಾಗಲಿ ಇನ್ನೇನೇ ಆಗಲಿ ಅವಳ ಈ ವರ್ತನೆಯನ್ನು ಸಮರ್ಥಿಸುವಂತಿಲ್ಲ. ಆದ್ದರಿಂದ ಮಾಮಿ ದಿನೇ ದಿನೇ ಮೃಗೀಯವಾಗುತ್ತ ಹೋಗುತ್ತಾಳೆ -ಇನ್ನು ಭವ ನೀಗುವ ಮಾತು ದೂರವೇ ಉಳಿಯಿತು.

ಮಾಮಿಗೆ ವಿರುದ್ಧವಾದ ಸಾಧ್ಯತೆಯೊಂದನ್ನು ತೋರಿಸುವವಳು ಸರಸ್ವತಿ. ಅಡುಗೆ ಮನೆಯಲ್ಲೇ ಇವಳ ಜನನ. ಹುಟ್ಟಿದಾಗಲೆ ತಾಯಿ ತೀರಿಕೊಳ್ಳುತ್ತಾಳೆ. ನಂತರ ಅಡುಗೆ ಮನೆಯಲ್ಲೇ ಇವಳ ಶೈಶವ, ಬಾಲ್ಯ ಎಲ್ಲವೂ. ಇಡೀ ಬೃಂದಾವನಕ್ಕೆ ಅನ್ನಪೂರ್ಣೆಯಾದ ಇವಳು ನಿಸ್ವಾರ್ಥ ಜೀವಿ. ತಾನು ಯಾವ ವಾಸುವನ್ನು ಮದುವೆಯಾಗಬೇಕಿತ್ತೋ ಅವನನ್ನು ಅಕ್ಕ ಯಮುನೆ ಮದುವೆಯಾಗಿ ಮಗುವನ್ನು ಹಡೆದಾಗ ಹೆರಿಗೆ ಮಾಡಿಸಿದವಳೂ ಈಕೆಯೇ. ಇಡೀ ಕಾದಂಬರಿಯಲ್ಲಿ ಸರಸ್ವತಿಯಷ್ಟು ಯಾತನೆಗೆ ಒಳಗಾಗುವ ಇನ್ನೊಂದು ಪಾತ್ರವಿಲ್ಲ. ಈ ಯಾತನೆಯನ್ನು ಪಡುವುದರಲ್ಲೇ ಅವಳು ತನ್ನ ಅನುಭಾವವನ್ನೂ ಗಳಿಸಿಕೊಳ್ಳುತ್ತಾಳೆ. ಮಾಮಿಯ ಬಂಧನದಿಂದ ಅವಳನ್ನು ಬಿಡಿಸಿದ ಅಜಿತನೆಂಬ ಡಾಕ್ಟರ್ ಅವಳಿಗೆ ಅನ್ನುವುದು: ‘ಪ್ರತಿಯೊಬ್ಬರೂ ಹುಟ್ಟೋವಾಗ ಎದೇಲಿ ಒಂದು ನಂದಾದೀಪ ಇಟ್ಕಂಡೇ ಹುಟ್ತಾರಂತೆ. ಈಗ ನಿನ್ನ ಎದೇಲೂ ಅಂಥಾ ಒಂದು ನಂದಾದೀಪ ಇದ್ದೇ ಇರತ್ತೆ. ಈ ನಂದಾದೀಪನ್ನ ಹಚ್ಚೋಕೆ ಎಣ್ಣೆ ಬೇಕು. ಬೆಳಗೋಕೆ ಬೆಂಕಿ ಬೇಕು. ನಿನ್ನ ಎದೇಲಿರೋ ನಂದಾದೀಪನ್ನ ಬೆಳಗೋಕೆ ನಿನ್ಕೈಲಿ ಆಗಲ್ಲ. … ಅಂದ್ರೆ ನಿನ್ನ ಎದೇಲಿರೋ ದೀಪಾನ್ನ ಬೆಳಗೋಕೆ ನೀನು ಪ್ರೀತಿ ಮಾಡಿದ ಯಾರಾದ್ರೂ ಒಬ್ರು ಬರಬೇಕು. ಅವರ ಪ್ರೀತಿಯಿಂದ ನಿನ್ನ ದೀಪ ಹತ್ತಬೇಕು.’ ಅಜಿತ ಈ ಪ್ರೀತಿ ನೀಡಲು ತಯಾರಿದ್ದರೂ ಸರಸ್ವತಿ-ಓದುಗರ ದೃಷ್ಟಿಯಲ್ಲಿ ಹುಂಬನೆನಿಸುವ, ಅಜಿತನ ಯಾವುದೇ ಉದಾತ್ತ ಗುಣಗಳೂ ಇಲ್ಲದಿರುವ-ವಾಸುವನ್ನೇ ಅಯ್ಕೆಮಾಡುತ್ತಾಳೆ. ಈ ಆಯ್ಕೆಯೂ ಸರಸ್ವತಿಯ ಭವದ ಒಂದು ಭಾಗವೆಂದೇ ತಿಳಿಯಬೇಕಾಗುತ್ತದೆ.

ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವ ಒಂದು ಸಂಗತಿಯೆಂದರೆ ಮೇಲಿಂದ ಮೇಲೆ ಸಂಭವಿಸುವ ಆಕಸ್ಮಿಕಗಳು: ಓದುಗರು ನಿರೀಕ್ಷಿಸುವಂತೆ ಯಾವುದೂ ನಡೆಯುವುದಿಲ್ಲ. ಟ್ರೇನ್ ಆಕ್ಲಿಡೆಂಟ್ನಲ್ಲಿ ಗಂಗ ಮತ್ತು ಅವಳ ಪತಿ ಸಾಯುತ್ತಾರೆ. ಗೋದಾವರಿ ತಾನು ಪ್ರೀತಿಸುವ ಬಸವರಾಜನ ಜತೆ ಸುಖಜೀವನವನ್ನು ಅರಸಿ ಓಡಿಹೋಗುತ್ತಾಳೆ, ಬೀದಿಗೆ ಬೀಳುತ್ತಾಳೆ, ಸಿನಿಮಾದಲ್ಲಿ ಉಪನಟಿಯಾಗಿ ಬದುಕು ಸಾಗಿಸುತ್ತಾಳೆ. ಯಮುನೆಯ ಮಗು ಸತ್ತುಹೋಗುತ್ತದೆ. ಯಮುನೆಗೆ ಯಾವುದೋ ರೋಗ ಅಂಟಿಕೊಂಡು ದೇಹ ಊದುತ್ತಹೋಗಿ ಹುಣ್ಣಾಗಿ ವಾಸನೆ ಬಂದು ಅವಳೂ ಸಾಯುತ್ತಾಳೆ. ಮಾಮಿ ತನ್ನ ಎಣ್ಣೆಮಜ್ಜನದ ಜಳಕದಲ್ಲೇ ಜಾರಿಬಿದ್ದು ಸೊಂಟಮುರಿದು ಮಲಗುತ್ತಾಳೆ. ಚಿಕ್ಕ ಚಿಕ್ಕ ವಾಕ್ಯಗಳ ನಿರೂಪಣಾ ಶೈಲಿ ಮುಂದೇನು ಆಘಾತ ನಡೆಯಲಿದೆಯೋ ಎಂದು ಓದುಗರನ್ನು ಉದ್ದಕ್ಕೂ ತುದಿಗಾಲ ಮೇಲೆ ನಿಲ್ಲಿಸುವಂಥದು ಎನ್ನುವುದೂ ಇಲ್ಲಿ ಉಲ್ಲೇಖಾರ್‍ಹ. ಆಕಸ್ಮಿಕಗಳು ಜೀವನದಲ್ಲಿ ಸಾಮಾನ್ಯವಾದರೂ ಒಂದೊಂದು ಪಾತ್ರವೂ ಅವನ್ನು ಹೇಗೆ ಎದುರಿಸುತ್ತದೆ ಎನ್ನುವುದರ ಮೇಲೆ ಆಯಾ ಪಾತ್ರ ರೂಪುಗೊಳ್ಳುತ್ತ ಹೋಗುತ್ತದೆ. ಒಂದು ಹಂತದಲ್ಲಿ ಸರಸ್ವತಿ ತನ್ನನ್ನು ತಾನೇ ಕೇಳಿಕೊಳ್ಳುತ್ತಾಳೆ: ತಾನ ಯಾಕೆ ಆರಂಭದಿಂದಲೇ ಈ ಮಾಮಿಯನ್ನು ಧಿಕ್ಕರಿಸಲಿಲ್ಲ ಎಂಬುದಾಗಿ. ನಿಜ, ಆರಂಭದಿಂದಲೇ ಧಿಕ್ಕರಿಸುತ್ತಿದ್ದರೆ ಸರಸ್ವತಿಯ ಜೀವನದ ಗತಿಯೇ ಬೇರಾಗುತ್ತಿತ್ತು. ಮಾಮಿ ಸೊಂಟ ಮುರಿದು ಮಲಗಿದ್ದಾಗಲೂ ಸರಸ್ವತಿ ಅವಳ ಮೇಲೆ ಪ್ರತೀಕಾರ ಸಾಧಿಸುವುದಿಲ್ಲ; ಸರಸ್ವತಿ ತನ್ನ ಭವವನ್ನು ಎದುರಿಸುವ ರೀತಿ ಅನುಭಾವಿಗಳದು.

ಸುರೇಂದ್ರನಾಥರ ಈ ಕಥಾನಕವನ್ನು ನೈತಿಕ, ಸಾಮಾಜಿಕ, ಮಾನಸಿಕ ಎಂಬಿತ್ಯಾದಿ ಹಲವಾರು ದೃಷ್ಟಿಕೋನಗಳಿಂದ ನೋಡುವುದು ಸಾಧ್ಯ. ನೈತಿಕವಾಗಿ ನೋಡುವುದಿದ್ದರೆ ಲೇಖಕರು ಇಲ್ಲಿ ಇವಿಲ್‌ನ (ಸೈತಾನಶಕ್ತಿಯ) ಕೆಲವೊಂದು ಆಯಾಮಗಳನ್ನು ಅನಾವರಣಗೊಳಿಸಿದಂತೆ ಅನಿಸುತ್ತದೆ; ಇವಿಲ್ ಹಲವು ಜನರಲ್ಲಿ ಹಲವು ರೀತಿಯಾಗಿ ಕಾಣಿಸಿಕೊಳ್ಳುತ್ತದೆ: ಚಿನ್ನಸ್ವಾಮಿಯಲ್ಲಿ ಕೃತಘ್ನತೆಯಾಗಿ, ಯಮುನೆಯಲ್ಲಿ ಅಸೂಯೆಯಾಗಿ, ಮಾಮಿಯಲ್ಲಿ ಇಡಿಯಾಗಿ, ಹಾಗೂ ಸಾಧು ಪಾತ್ರಗಳೆಲ್ಲವೂ ಇದರ ಮುಂದೆ ನಿಸ್ಸಹಾಯಕ ಸ್ಥಿತಿಯಲ್ಲಿ ಕಂಗೆಡುತ್ತವೆ. ಇಡೀ ಕಾದಂಬರಿಯ ಓದು ನಮ್ಮನ್ನು ತಲ್ಲಣಗೊಳಿಸುತ್ತದೆ, ಮನಸ್ಸಿನಿಂದ ಅಳಿಸಿಹೋಗದ ಪರಿಣಾಮ ಬೀರುತ್ತದೆ. ಇಂಗ್ಲಿಷ್‌ನಲ್ಲಿ ಎಮಿಲಿ ಬ್ರಾಂಟಿ, ಹಾಥೋರ್ನ್, ಮೆಲ್ವಿಲ್, ಫಾಕ್ನರ್ ಮುಂತಾದ ಶ್ರೇಷ್ಠ ಕಾದಂಬರಿಕಾರರು ಇವಿಲ್‌ನ ಅನ್ವೇಷಣೆ ನಡೆಸಿದ್ದು ನೆನಪಿಗೆ ಬರುತ್ತದೆ. ‘ಎನ್ನ ಭವದ ಕೇಡು’ ಇಂಥವರ ಕೃತಿ ಸಾಲಿನಲ್ಲಿ ನಿಲ್ಲುವಂಥದು.

ಸುರೇಂದ್ರನಾಥ್ ಇಲ್ಲಿ ಚಿತ್ರಿಸುವ ದಾವಣಗೆರೆ, ಅದರಲ್ಲೂ ಬೃಂದಾವನವೆಂಬ ಮನೆ, ರಾಗ ದ್ವೇಷ, ಕಾಮ ಕ್ರೋಧ, ಹಿಂಸೆ ಕ್ರೌರ್ಯ ಮುಂತಾದ ಹಲವು ಪ್ರಾಕೃತಿಕ ಶಕ್ತಿಗಳ (‘ವಾಸನೆ’ಗಳ) ಕೇಂದ್ರದಂತೆ ತೋರುತ್ತದೆ. ಇದರ ಪ್ರಿಸೈಡಿಂಗ್ ಡೀಟಿ ಅರ್ಥಾತ್ ಅಭಿಷಿಕ್ತ ದೇವತೆ ಮಾಮಿ. ಕತೆಯ ಕೊನೆಯಲ್ಲಿ ಸೊಂಟಮುರಿದು ಬಿದ್ದಿದ್ದರೂ ಅವಳು ಸಾಯದೆ ಉಳಿದಿರುವುದು ಸರಸ್ವತಿಯಂಥವರ ಬದುಕಿನ ಸಾರ್ಥಕತೆಗೆ ಇಂಥದೊಂದು ಶಕ್ತಿಯ ವಿರೋಧವೂ ನಿರಂತರವಾಗಿ ಅಗತ್ಯವಿದ್ದೀತು ಎನ್ನುವುದನ್ನು ಸೂಚಿಸುವ ಹಾಗಿದೆ.

ಬಹುಶಃ ಈ ಕಾದಂಬರಿ ವಾಸ್ತವವಾದೀ ಶೈಲಿಯಲ್ಲಿ ನಿರೂಪಿತವಾಗಿದ್ದರೆ ನಮ್ಮ ಮನಸ್ಸನ್ನು ಇಷ್ಟೊಂದು ಕಾಡುತ್ತಿರಲಿಲ್ಲವೇನೋ. ಲೇಖಕರು ಇಲ್ಲಿ ಎಲ್ಲಕ್ಕೂ ಮಾಯಾವಾಸ್ತವದ ಲೇಪನವೊಂದನ್ನು ನೀಡುತ್ತಾರೆ. ಕಣ್ಣೀರು ನಿಜವಾದ ನೀರಿನಂತೆ ಕೋಡಿ ಹರಿದು ಮರಗಿಡಗಳನ್ನು ಸೇರುತ್ತದೆ; ಗಂಡು ಹೆಣ್ಣಿನ ಸಂಯೋಗ ನೇರಳೆ ಬೆಳಕೊಂದನ್ನು ನೀರಿನ ಹಾಗೆ ಹರಿಸುತ್ತದೆ; ಹಾಗೂ ಅದರ ಗಂಧ ಇಡೀ ಪ್ರದೇಶದಲ್ಲಿ ವ್ಯಾಪಿಸುತ್ತದೆ; ಕನಸು ನೆನಸುಗಳು ಒಂದನ್ನೊಂದು ಪ್ರವೇಶಿಸುತ್ತವೆ, ನಿರ್ದೇಶಿಸುತ್ತವೆ; ಮಾಮಿಯ ಭೀತಿ ಇತರ ಪಾತ್ರಗಳ ಮನಸಿನಲ್ಲಿ ಎಷ್ಟೊಂದು ಗಾಢವಾಗಿದೆಯೆಂದರೆ, ಆಕೆ ಏಕಕಾಲದಲ್ಲಿ ಎಲ್ಲೆಡೆ ಕಾಣಿಸಿಕೊಳ್ಳುವ ಶಕ್ತಿಪಡೆದಿರುತ್ತಾಳೆ ಅನಿಸುತ್ತದೆ. ಕೆಲವೊಮ್ಮೆ ವಾಸ್ತವ ಯಾವುದು, ಭ್ರಮೆ ಯಾವುದು ಎಂದು ಗೊತ್ತಾಗದೆ ಓದುಗರಿಗೆ ಗೊಂದಲವುಂಟಾಗುತ್ತದೆ. ಅನಂತಮೂರ್ತಿಯವರು ಈ ಶೈಲಿಯನ್ನು ‘ಗದ್ಯಗಂಧಿ’ ಎಂದು ಸರಿಯಾಗಿಯೆ ಕರೆದಿದ್ದಾರೆ; ಹಾಗೂ ಅವರ ಪುಟ್ಟ ಮುನ್ನುಡಿ ಇಡೀ ಕಾದಂಬರಿಗೆ ಹಿಡಿದ ಕೈಗನ್ನಡಿಯಂತಿದೆ.

ಒಮ್ಮೆ ಊರಿಗೆ ಹೋಗಿದ್ದಾಗ ಅಲ್ಲಿನ ಮನೆಯೊಂದರಲ್ಲಿ ನಡೆದ ಘಟನೆಯ ಬಗ್ಗೆ ಕೇಳಿ ನಾನು ತಲ್ಲಣಿಸಿದ್ದೆ: ಒಬ್ಬ ಅಣ್ಣ ಶಾಲೆಗೆ ಹೋಗುವ ತಂಗಿ ಸ್ವಲ್ಪ ಹಣ ಕೇಳಿದಳೆಂದು ಕ್ರೋಧಾವಿಷ್ಟನಾಗಿ ಅವಳ ತಲೆಗೆ ಮಣೆಯಿಂದ ಹೊಡೆದ; ತಕ್ಷಣವೇ ಅಸುನೀಗಿದ ಹುಡುಗಿಯನ್ನು ಮನೆಯವರ ಜತೆ ಸೇರಿ ಬಾವಿಗೆ ಹಾಕಿದ ಅಪಘಾತದಲ್ಲಿ ಸತ್ತಳು ಎಂದು ಮಾಡುವುದಕ್ಕೆ. ಆಮೇಲೆ ಪೋಲೀಸರಿಗೆ ಸಾಕಷ್ಟು ತಿನ್ನಿಸಿ ಇಡೀ ಘಟನೆಯನ್ನು ಮುಚ್ಚಿಹಾಕಿದರು. ಊರವರಿಗೆಲ್ಲ ನಿಜ ಗೊತ್ತಿದ್ದರೂ ಮೌನ ತಳೆದರು. ಹೀಗೆ, ಸತ್ತ ಹುಡುಗಿಗೆ ಇಮ್ಮಡಿಯ ಅನ್ಯಾಯವಾಯಿತು. ‘ಎನ್ನ ಭವದ ಕೇಡು’ ನನಗೆ ಈ ಘಟನೆಯನ್ನು ಮತ್ತೆ ಮತ್ತೆ ನೆನಪಿಗೆ ತರುತ್ತದೆ, ಹಾಗೂ ಇದರಲ್ಲಿ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳು ಎನ್ನುವುದೇ ನಿಜವಾದ ತಲ್ಲಣಕ್ಕೆ ಕಾರಣ.*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದಾನ ತೈದಾನೋ
Next post ಮಹಾ ಪರಿನಿರ್ವಾಣ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys