ಐತಿಹ್ಯದ ನಿರಚನೆ: ತೇರು

ಐತಿಹ್ಯದ ನಿರಚನೆ: ತೇರು

ಯಾವುದರ ಬಗ್ಗೆಯೇ ಆಗಲಿ ನೇರ ನೋಟ ನೀಡುವುದು ಒಂದು ಬಗೆಯಾದರೆ ವಾರೆನೋಟ ನೀಡುವುದು ಇನ್ನೊಂದು ಬಗೆ. ನೇರವಾಗಿ ನೋಡಿದಾಗ ಪ್ರಕಟವಾಗದ ಆಯಾಮಗಳು ವಾರೆನೋಟದಲ್ಲಿ ಪ್ರಕಟವಾಗುತ್ತವೆ. ಈ ಕಾರಣದಿಂದಲೋ ಏನೋ ಮನುಷ್ಯ ಸಮಾಜ ಸಾಹಿತ್ಯ ಎಂಬ ಪ್ರಕಾರವನ್ನು ಸೃಷ್ಟಿ ಮಾಡಿಕೊಂಡಿತು. ಯಾಕೆಂದರೆ ಸಾಹಿತ್ಯ ಇಂಥ ವಾರೆನೋಟವನ್ನು ನೀಡುವಂಥದು; ಆದರೆ ಅದರಲ್ಲೂ ಹೆಚ್ಚು ನೇರವಾದುದು, ಹೆಚ್ಚು ವಾರೆಯಾದುದು ಎಂಬ ವರ್ಗೀಕರಣವನ್ನು ಮಾಡಬಹುದು. ಯಾಕೆಂದರೆ ಸಾಹಿತ್ಯದಲ್ಲೂ ನೇರ ಸಮೀಪನದ ಮಿತಿಯನ್ನು ಇಪ್ಪಪಡದ ಸಾಹಿತಿಗಳು ವಾರೆ ಸಮೀಪನದ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶಸ್ತಿಗೆ ಪಾತ್ರವಾದ ರಾಘವೇಂದ್ರ ಪಾಟೀಲರ ‘ತೇರು’ ಎಂಬ ಕಾದಂಬರಿ ಇಂಥದೊಂದು ಬಹು ಆಯಾಮಗಳ ವಾರೆ ಕಥನ-ಆದ್ದರಿಂದ ಯಾರು ಗರ್ಭಗುಡಿಯ ಪೂಜೆಯನ್ನು ಮಾತ್ರ ನೋಡಿ ತೃಪ್ತಿಪಡುವುದಕ್ಕಿಂತ ಸಂತೆಯಲ್ಲಿ ಸುತ್ತಾಡುವುದನ್ನೂ (ಬಹುಶಃ ಅದನ್ನೇ ಹೆಚ್ಚು) ಇಷ್ಪಪಡುತ್ತಾರೋ ಆ ತರದ ನನ್ನಂಥ ಓದುಗರ ‘ಮನಂಬೊಗುವ’ ಕೃತಿ.

ಐದಾರು ತಲೆಮಾರುಗಳಷ್ಟು ಕಾಲಾವಧಿಯನ್ನು ಪರಿಧಿಗೆ ತೆಗೆದುಕೊಂಡಿರುವ ‘ತೇರು’ ಗ್ರಾಮಾಂತರದ ಒಂದು ಪಾಳೆಗಾರಿ ಪ್ರಭುತ್ವದ ಕತೆಯನ್ನು ಹೇಳುತ್ತದೆ: ಧರಮನಟ್ಟಿ ಎಂಬ ಒಂದು ಊರು. ಅದರಲ್ಲಿ ಆ ಊರೂ ಸೇರಿದಂತೆ ಸುತ್ತುಮುತ್ತಲ ಪದೇಶದ ‘ದೇಸಗತಿ’ ಅರ್ಥಾತ್ ಆಡಳಿತ ನಡೆಸುವ ಪಟವರ್ಧನ್ ಎಂಬ ಒಂದು ದೇಸಾಯರ ಮನೆತನ. ಇಲ್ಲಿ ಆಡಳಿತವೆಂದರೆ ಜನರನ್ನು ಹಲವು ರೀತಿಯಿಂದ ಶೋಷಣೆ ಮಾಡುವುದು ಎಂದರ್ಥ. ದೇಸಾಯರ ಖೋಲಿಯಲ್ಲಿ ಅವರೇ ಕಟ್ಟಿಸಿದ ಒಂದು ವಿಠಲ ರುಕುಮಾಯರ ದೇವಾಲಯವೂ ಇದೆ: ರಾಜಕೀಯ ಮತ್ತು ಧರ್ಮ ಹೇಗೆ ಕಾಲಾಂತರದಿಂದಲೂ ಒಟ್ಟೊಟ್ಟಿಗೇ ಒಂದನ್ನೊಂದು ಪೋಷಿಸುತ್ತ, ರಕ್ಷಿಸುತ್ತ ಬಂದಿವೆಯೋ ಹಾಗೆ. ಈ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಎಳೆಯುವ ಒ೦ದು ಭರ್ಜರಿ ತೇರಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಒಂದು ಐತಿಹ್ಯವೂ: ತೇರು ಕಟ್ಟಿಸಿದ ಆರಂಭದಲ್ಲಿ (ಎಂದರೆ ರಂಗೋ ಪಟವರ್ಧನನ ಕಾಲದಲ್ಲಿ) ಅದು ಎಷ್ಟೇ ಎಳೆದರೂ ಜಪ್ಪೆನ್ನದಿರುತ್ತ, ಶಾಸ್ತ್ರದ ಅಯ್ಯ ನುಡಿದ ಜೋತಿಷ್ಯದ ಪ್ರಕಾರ ಅದಕ್ಕೊಂದು ‘ಕಟುಕ’ರ ಜಾತಿಯ ಹುಡುಗನ ಬಲಿ ಕೊಡಲಾಗಿ, ಆ ತೇರು ಹೊರಡುತ್ತದೆ. ಕೊನೆಗೂ ತನ್ನ ಮಗನ ಬಲಿಕೊಡಲು ದ್ಯಾವಪ್ಪ ಎಂಬ ನಾಡಾಡಿ ಗೊಂಬೀರಾಮನೊಬ್ಬ ಒಪ್ಪುತ್ತಾನೆ; ಅ ದ್ಯಾವಪ್ಪನಿಗೆ ದೇಸಾಯರು ಹತ್ತಿರದ ಹಳ್ಳಿಯಲ್ಲಿ ಸಾಕಷ್ಟು ಜಮೀನನ್ನು ಉಂಬಳಿ ಕೊಡುವರು. ನಂತರದ ವರ್ಷಗಳಲ್ಲಿ ಇಡೀ ಜೀವದ ಬಲಿ ಕೊಡದೆ ಇದ್ದರೂ, ದ್ಯಾವಪ್ಪನ ಮನೆತನದ ಹಿರಿಯವನು ಉತ್ಸವದ ದಿನ ಬ೦ದು ತೇರಿನ ಚಕ್ರಕ್ಕೆ ತಲೆ ಚಚ್ಚಿ `ರಕ್ತತಿಲಕ’ದ ಸೇವೆ ಮಾಡುವ ಪದ್ಧತಿಯೊಂದು ಅಸ್ತಿತ್ವಕ್ಕೆ ಬರುತ್ತದೆ. ಆದರೆ ಕಾಲಾಂತರದಲ್ಲಿ ದೇಸಾಯರ ದೇಸಗತಿ ಹೊರಟುಹೋಗುತ್ತದೆ. ಇದೆಲ್ಲಕ್ಕೂ ಒಂದು ರೀತಿಯಲ್ಲಿ ಕಾರಣನಾದ ಪೂಜಾರಿ ತ್ರಿಯಂಬಕ ಭಟ್ಟನ ಕುಟುಂಬವೂ ದೇಶಾಂತರ ಹೋಗುತ್ತದೆ. ದ್ಯಾವಪ್ಪನ ಕುಟುಂಬಕ್ಕೆ ಸೇರಿದ ಜಮೀನ ಅದೇ ಹಳ್ಳಿಯ ಗೌಡನ ಕುಟುಂಬಕ್ಕೆ ಸೇರುತ್ತದೆ. ‘ತೇರು’ ಕತೆ ಆರಂಭವಾದಾಗ ರಕ್ತತಿಲಕದ ಆಚರಣೆಯೊಂದೇ ಉಳಿದುಕೊಂಡಿರುತ್ತದೆ. ದ್ಯಾವಪ್ಪನ ಕುಲಕ್ಕೆ ಸೇರಿದ ಅದೇ ಹೆಸರಿನ ಯುವಕನೊಬ್ಬನ ವಿಚಾರಗಳೇ ಬೇರೆಯಾಗಿಬಿಟ್ಟವೆ! ಅವನಿಗೆ ತಾನು ಮಾಡಬೇಕಾದ ತನ್ನ ಮನೆತನದ ರಕುತಸೇವೆಗಿಂತಲೂ ಜಯಪ್ರಕಾಶ ನಾರಾಯಣರ ನವನಿರ್ಮಾಣ ಆಂದೋಲನದಲ್ಲೇ ಹೆಚ್ಚು ಆಸಕ್ತಿ. ಕೊನೆಗೆ ಈತ ರಕ್ತತಿಲಕ ಸೇವೆಯ ನೂರೈವತ್ತನೆಯ ವರ್ಷದ ಮಹತ್ತರ ಉತ್ಸವಕ್ಕೆ ಬಾರದೆ ಪದ್ಧತಿಯ ಅ೦ತ್ಯಕ್ಕೆ ಕಾರಣನಾಗುತ್ತಾನೆ. ಕಾಕತಾಳೀಯವೆಂಬಂತೆ ಅದೇ ಹೊತ್ತಿಗೆ ವಿಠ್ಠಲ ರುಕ್ಮಾಯಿಯರ ಚಿನ್ನಾಭರಣಗಳೂ ಕಳವಾಗಿ ಅವನ್ನು ದ್ವಾವಪ್ಪನೇ ಹಾರಿಸಿಕೊಂಡು ಹೋಗಿರಬಹುದೆಂಬ ಸಂದೇಹವೂ ಹುಟ್ಟಿಕೊಳ್ಳುತ್ತದೆ. ದ್ಯಾವಪ್ಪನಾದರೆ ಊರು ಬಿಟ್ಟು ಮಹಾರಾಷ್ಟ್ರ ಸೇರಿ ಅಲ್ಲಿ ಬಾಬಾ ಆಮ್ಟೆಯವರ ಆಶ್ರಮದಲ್ಲಿ ಸೇವೆಗೆ ಜೀವನ ಮುಡಿಪು ಮಾಡುತ್ತಾನೆ. ಹೀಗೆ ದೇವರನ್ನೂ ದೇವರ ಹೆಸರಲ್ಲಿ ನಡೆಯುವ ಶೋಷಣೆಯನ್ನೂ ಧಿಕ್ಕರಿಸುವ ಮೂಲಕ ಅವನು ಬಂಡಾಯಗಾರನಾಗುತ್ತಾನೆ.

ಕಾದಂಬರಿಯ ಕೊನೆ ಭಾಗದಲ್ಲಿ ದ್ಯಾವಪ್ಪ ತಾನು ಪ್ರೀತಿಸುತ್ತ ಬಂದಿರುವ, ಮದುವೆಯಾಗದಿದ್ದರೂ ಆಗಿದ್ದೇನೆಂದು ನಂಬುವ, ಆದರೆ ಊರಲ್ಲೇ ಬಿಟ್ಟುಬಿಡಬೇಕಾಗಿ ಬ೦ದ, ಬಾಳವ್ವ ಎಂಬವಳಿಗೆ ಆಶ್ರಮದಿಂದ ಬರೆಯುವ ಪತ್ರ ಇಡೀ ಕಾದಂಬರಿಯ ತತ್ವದಂತಿದೆ-ಡೊಂಬರವಳಾದ ಎರಡು ಮಕ್ಕಳ ತಾಯಿ ಬಾಳವ್ವ ವಿಧವೆ; ಅವಳು ದ್ಯಾವಪ್ಪನನ್ನು ಮದುವೆಯಾಗಬೇಕಾದರೆ ಊರ ದೇವತೆ ಉದ್ದವ್ವನ ಒಪ್ಪಿಗೆ ಬೇಕು ಎನ್ನುತ್ತಾಳೆ ಅವಳ ಅತ್ತೆ; ಆದರೆ ಉದ್ದವ್ವ (ಅರ್ಥಾತ್ ಉದ್ದವ್ವನ ಪೂಜಾರಿ) ಇದಕ್ಕೆ ಒಪ್ಪಿಗೆ ಕೊಡುವುದೇ ಇಲ್ಲ! ದ್ಯಾವಪ್ಪ ಬರೆಯುತ್ತಾನೆ: ‘ದೇವರು ಎನ್ನುವುದು ಇದ್ದರೆ ಅದರ ವಿರುದ್ಧ ನನ್ನ ಬಂಡಾಯವಿದೆ. ಅದರ ವಿರುದ್ದ ನನ್ಕ ಧಿತಿಃಕ್ಕಾರವಿದೆ-ಅದರ ವಿರುದ್ದ ನನ್ನ ಸತ್ಯಾಗ್ರಹವಿದೆ. ಆ ದೇವರ ವಿರುದ್ಧದ ಸತ್ಯಾಗ್ರಹದ ಸಲುವಾಗಿಯೇ ನನ್ನ-ನಿನ್ನ ಮದುವಿಯ ದೈಹಿಕ ಮುಖ ಈ ಜನ್ಮದಲ್ಲಿ ಸಾಧ್ಯ ಆಗುವುದಿಲ್ಲ. ದೇವರ ವಿರುದ್ಧದ ನನ್ನ ಬಂಡಾಯ ಇದು. ದೇವರು ಅನ್ನುವುದು ಇದೆ ಎನ್ನುವುದಾದರೆ ನನ್ನ ನಿನ್ನಂಥವರ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಯಾವ ಅರ್ಥವಿದೆ? ಇದು ಅವನಿಗೆ ತಿಳಿಯಬೇಕಲ್ಲವೆ? ಇದನ್ನು ಬಿಟ್ಟು ಬೇರೆ ಯಾವ ಹಾದಿಯಿಂದ ಆ ದೇವರಿಗೆ ತಿಳಿಸಲಿಕ್ಕೆ ಸಾಧ್ಯ?’

ಕಾದಂಬರಿ ಈ ಸಂದೇಶದ ಕಡೆಗೆ ಒಲಿದರೂ, ಕಥಾನಕ ಇಷ್ಟು ಸರಳವಾಗಿರದೆ, ಕತೆ ಉಪಕತೆ ಅಡ್ಡಕತೆಗಳಲ್ಲಿ ಸಂಚರಿಸುವುದರಿಂದ ಸಾಕಷ್ಟು ಸಂಕೀರ್ಣವೂ ಆಗಿದೆ. ಇವೆಲ್ಲವೂ ಅ೦ತ್ಯದಲ್ಲಿ ದ್ಯಾವಪ್ಪ ನೀಡುವ ಸಂದೇಶಕ್ಕೆ ನಮ್ಮನ್ನು ಸಿದ್ಧಪಡಿಸುತ್ತವೆ ಎಂದುಕೊಂಡರೂ ಸಹಾ, ಆಯಾ ‘ಮಜಲು’ಗಳ ಸ್ವಾಯತ್ತ ಆಕರ್ಷಣೆಯನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ, ನೂರೈವತ್ತು ವರ್ಷಗಳ ಹಿಂದಣ ಮೂಲಪುರುಷ ದ್ಯಾವಪ್ಪ ರಕ್ತತಿಲಕದ ಸೇವೆಯಲ್ಲಿ ನಂಬಿಕೆಯಿರಿಸಿದವ ಮಾತ್ರವಲ್ಲ, ಈ ಆಚರಣೆಗೆ ಮೊದಲು ರಕ್ತಶುದ್ಧಿ ಮಾಡಿಕೊಂಡು ತೀರ್ಥಯಾತ್ರೆಗೆ ಹೋಗಿಬರುವ ಸಂಪದಾಯವೊಂದನ್ನು ರೂಢಿಗೆ ತರುತ್ತಾನೆ. ಅವನ ಈ ಸಾಧನೆಗಳು ಕಾದಂಬರಿಯಲ್ಲಿ ವಿವರವಾಗಿ ತನ್ಮಯತೆಯಿಂದ ಮೂಡಿಬಂದಿರುವುದು ಗಮನಾರ್ಹ. ಆ ದೃಷ್ಪಿಯಿಂದ ನಂತರದ ವಿದ್ಯಮಾನಗಳು ಒಂದು ‘ಅವನತಿ’ಯಂತೆ ಕಾಣಿಸಿದರೆ ಆಶ್ಚರ್ಯವಿಲ್ಲ. ಅದೇ ರೀತಿ, ಧರಮನಟ್ಟಿಯ ರಕ್ತತಿಲಕದ ಕತೆಯನ್ನು ನಿರೂಪಕನಿಗೆ ಹೇಳುವ ಸ್ವಾ೦ವಜ್ಜ ಕಾದಂಬರಿಯ ಇನ್ನೊಂದು ಸಶಕ್ತ ಪಾತ್ರ. ಧರ್ಮದಲ್ಲಿ ಜೈನನಾದರೂ ಇವನಿಗೆ ಊರ ದೇವರಾದ ವಿಠ್ಠಲನಲ್ಲಿ ಅಪಾರವಾದ ಒಲವು; ಇದೊಂದು ರೀತಿಯಲ್ಲಿ ಇವನಿಗೆ ಊರಮೇಲಿರುವ ಪ್ರೀತಿಯ ಪ್ರತೀಕವೂ ಹೌದು. ಒಂದು ಊರಿನಲ್ಲಿದ್ದ ಮೇಲೆ ಆ ಊರಿನ ದೇವರಿಗೆ ನಡೆದುಕೊಳ್ಳಬೇಕು ಎನ್ನುವುದು ಅವನ ತತ್ವ. ಊರಿನ ಪ್ರಶ್ನೆ ಬಂದಾಗ ಸ್ವಾಂವಜ್ಜನಿಗೆ ಉಳಿದೆಲ್ಲವೂ ಗೌಣ. ಆದ್ದರಿಂದಲೇ ನಿರೂಪಕ ಅವನನ್ನು ‘ಧರಮನಟ್ಟಿಯ ಜನರ ವಿವೇಕಪ್ರಜ್ಞೆ’ ಎಂದು ಕರೆಯುವುದು. ಆದರೂ ಅವನು ಸದಾ ಜನರ ಸಂದೇಹ ದೃಷ್ಟಿಗೆ ಗುರಿಯಾಗುತ್ತಲೇ ಇರುತ್ತಾನೆ. ಕೊನೆಗೆ ಪೊಲೀಸರು ಕೂಡಾ ಚಿನ್ನಾಭರಣ ದರೋಡೆಯ ಗುಮಾನಿಯಲ್ಲಿ ತನಿಖೆಗೆಂದು ಎರಡು ದಿನ ಅವನನ್ನು ಠಾಣೆಯಲ್ಲಿ ಕೂಡಿಹಾಕುತ್ತಾರೆ. ಇದೇ ಮನೋವೇದನೆಯಲ್ಲಿ ಸ್ವಾ೦ವಜ್ಜ ಸಾವನ್ನಪ್ಪುವುದು.

ಮೂಲತಃ ಯಥಾಸ್ಥಿತಿವಾದಿಯೂ ಸಾಮರಸ್ಯವಾದಿಯೂ ಆದ ಸ್ವಾಂವಜ್ಜ ಅದೇ ಕಾರಣಕ್ಕೆ ದ್ಯಾವಪ್ಪನನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾನೆ; ಸ್ಥಾಪಿತ ಹಿತಾಸಕ್ತಿಗಳು ದ್ಯಾವಪ್ಪನ ಕುರಿತಾಗಿ ಹರಡಿದ ಕೆಟ್ಟ ಕಿ೦ವದಂತಿಗಳನ್ನೂ ಅವನು ಪ್ರಶ್ನಾತೀತವಾಗಿ ನಂಬುತ್ತಾನೆ. ಇಂಥ ಕನ್ಸರ್ವೇಟಿವ್ ಎದುರಾಗಿ ನಮಗೆ ಧರಮನಟ್ಟಿಯಲ್ಲಿ ಕಾಣಿಸುವುದು ಪಜಾಪ್ರಭುತ್ವದ ಹೆಸರು ಹೇಳಿಕೊಂಡು ಜಗಳಕ್ಕೆ ಬರುವ ಕೆಲವು ಪುಂಡಪೋಕರಿ ಯುವಕರು. ಹೀಗೆ ಒಂದೆಡೆ ಕನ್ಸರ್ವೇಟಿಸಂ, ಇನ್ನೊಂದೆಡೆ ಪ್ರಜಾಪ್ರಭುತ್ವದ ಅಣಕ, ಮಗುದೊಂದು ಕಡೆ ಪೊಲೀಸ್ ದೌರ್ಜನ್ಯ-ಇಂಥ ಅನಾಯ್ಕೆಯಿಂದ ತುಂಬಿದ ಊರನ್ನು ಬಿಟ್ಟು ದ್ಯಾವಪ್ಪ ಹೋದುದರಲ್ಲಿ ಆಶ್ಚರ್ಯವೇನು ಎಂದು ಕೇಳಬಹುದು; ಆದರೆ ದ್ಯಾವಪ್ಪನ ಆಯ್ಕೆಯೂ ಒಂದು ಆಯ್ಕೆಯೇ ಎಂಬ ಸಂದೇಹ ಬರದೆ ಇರುವುದಿಲ್ಲ. ಕಾದಂಬರಿಯಮಟ್ಟಿಗೆ ಹೇಳುವುದಾದರೆ ಈ ವೈರುಧ್ಯಗಳೇ ಅದಕ್ಕೆ ವೈವಿಧ್ಯತೆಯನ್ನೂ ನೀಡುವುದು.

ಆದರೆ ತೇರಿನ ವೈಶಿಷ್ಟ್ಯವಿರುವುದು ಅದು ಐತಿಹ್ಯವೊಂದು ಹೇಗೆ ಸೃಷ್ಟಿಯಾಗುತ್ತದೆ ಎ೦ದು ನಿರಚನಾವಾದದ ನೆಲೆಯಲ್ಲಿ ಎಂಬಂತೆ ನಮಗೆ ಬಿಡಿಸಿ ತೋರಿಸಿ- ಕೊಡುವುದರಲ್ಲಿ, ‘ತೇರು’ ಓದುವವರು ಜತೆಗೆ ಪಾಟೀಲರ ‘ದೇಸಗತಿ’ ಕಥಾಸಂಕಲನದ ಅದೇ ಹೆಸರಿನ ಕತೆಯನ್ನೂ ಓದಬೇಕು. ‘ತೇರು’ ಅದನ್ನು ಅಪೇಕ್ಷಿಸುತ್ತದೆ ಕೂಡಾ. ಯಾಕೆಂದರೆ ಈ ‘ದೇಸಗತಿ’ ಕತೆಯಲ್ಲಿ ಧರಮನಟ್ಟಿ ದೇಸಾಯರ ಒಟ್ಟು ಹಣೆಬರಹವೇ ತೆರೆದಿರಿಸಲ್ಪಟ್ಟಿದೆ: ಇಡೀ ಐತಿಹ್ಯ ಒಂದು ದೊಡ್ಡ ಸುಳ್ಳಿನ ಮೇಲೆ ನಿಂತಿರುವುದು. ಈ ರಂಗೋ ಪಟವರ್ಧನ್ ನಿಜಕ್ಕೂ ಅವನ ಹೆಸರೇ ಅಲ್ಲ! ಪೇಶ್ವೆ ಸಿಪಾಯಿಗಳಿಂದ ತಲೆತಪ್ಪಿಸಿಕೊಂಡು ಧರಮನಟ್ಟಿ ಕಡೆಗೆ ಬಂದ ವೆಂಕೋಬರಾವ್ ಎಂಬ ಯಃಕಶ್ಚಿತ್ ಬಂಡುಕೋರ, ತಟ್ಟೆಂದು ತ್ರಿಯಂಬಕ ಭಟ್ಟರು ಕೇಳಿದ್ದಕ್ಕೆ ಹೇಳಿದ ಹೆಸರು. ಈಗಾಗಲೇ ಆತ ಚಿಮಣಾ ಎಂಬ ತನ್ನ ಪ್ರೇಯಸಿಯನ್ನು ಆಕೆ ಪೇಶ್ವೆ ಸಿಪಾಯಿಗಳಿಗೆ ತನ್ನ ಸುಳಿವು ನೀಡುತ್ತಿರಬಹುದು ಎಂಬ ಸಂದೇಹದಿಂದ ಕೊಲೆಮಾಡಿರುತ್ತಾನೆ ಹಾಗೂ ಅವನ ಕತ್ತಿ ಇನ್ನೂ ರಕ್ತದ ಕಲೆಯಿಂದ ತುಂಬಿರುತ್ತದೆ. ತ್ರಿಯಂಬಕ ಭಟ್ಟ ತನ್ನದೇ ಸ್ಧಾರ್ಥಕ್ಕಾಗಿ ಈತನನ್ನು ಇಂಥದೆ ಸುಳ್ಳಿನಿಂದ ಧರಮನಟ್ಟಿಯ ದೇಸಾಯಿಯಾಗಿ ಮಾಡಿಬಿಡುತ್ತಾನೆ. ನಂತರ ವಾಡೆ, ಕಿಲ್ಲೆ, ಸಿಪಾಹಿದಳ, ವಿಠಲ ರುಕುಮಾಯರ ದೇವಾಲಯ ಎಲ್ಲವೂ ಒಂದೊಂದಾಗಿ ಮೂಡಿಬರುತ್ತವೆ; ಒಂದೊಂದೂ ಜನರ ಶೋಷಣೆಯನ್ನೇ ಗುರಿಯಾಗಿಸಿಕೊಂಡಂಥ ‘ರಾಜಚಿಹ್ನೆ’ಯೇ ಸರಿ. ಜನರ ಪುರಾಣಪ್ರಜ್ಜೆಯನ್ನು ವರ್ಷ ವರ್ಷವೂ ನೆನಪಿಗೆ ತಂದು ಫ್ಯೂಡಲ್ ವ್ಯವಸ್ಥೆಯನ್ನು ಸ್ಥಿರೀಕರಿಸುವ ಒಂದು ಸಾಧನವೇ ‘ರಕುತ ತಿಲಕ’ ಎಂಬ ಬರ್ಬರ ಆಚರಣೆ-ಇದರ ಹಿಂದೆಯೂ ಒಂದು ರೋಚಕ ಐತಿಹ್ಯ! ‘ತೇರು’ ಆರಂಭವಾಗುವುದೇ ರಕ್ತತಿಲಕದ ಸೇವೆಯ ಮುನ್ನಾದಿನ ಈ ರೋಚಕ ಐತಿಹ್ಯವನ್ನು ಗೊಂದಲಿಗರು (=ಕೋರಸ್?) ಎಂಬ ಸಮುದಾಯ ಹಾಡಿ ಕೇಳಿಸುವುದರ ಮೂಲಕ. ಈ ಗೊಂದಲಿಗರ ಹಾಡು ಕೂಡಾ ಕಾಲಾಂತರದಿಂದ ಆಚರಣೆಯ ಒಂದು ಅಂಗವೇ ಆಗಿಬಿಟ್ಟದೆ ಎಂದ ಮೇಲೆ ಒಟ್ಟಾರೆ ಐತಿಹ್ಯ ಜನರನ್ನು ಪರೋಕ್ಷವಾಗಿ -ಆದರೆ ಗಾಢವಾಗಿ-ಆಳುತ್ತಿದೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಡವಾಗುತ್ತದೆ.

ಪಾಟೀಲರು ಈ ಪದ್ಯಗದ್ಯ ಮಿಶ್ರಿತವಾದ ಗೊಂದಲಿಗರ ಹಾಡನ್ನು ಎಷ್ಟು ಚೆನ್ನಾಗಿ ರಚಿಸಿದ್ದಾರೆಂದರೆ ಇದೇ ಇನ್ನೂ ಮುಂದರಿದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಆದರೆ ಗೊಂದಲಿಗರ ಹಾಡು ಕತೆಗೆ ಒಂದು ಪ್ರವೇಶ ಇದ್ದಂತೆ; ವಾಸ್ತವದಲ್ಲಿ ಈ ಐತಿಹ್ಯ ಹೇಗೆ ಹುಟ್ಟುತ್ತದೆ, ಹೇಗೆ ಬೆಳೆಯುತ್ತದೆ, ಹೇಗೆ ತನ್ನ ಬೇರುಗಳನ್ನು ಹರಡುತ್ತದೆ, ದೇಸಗತಿಯೆ೦ಬ ಶೋಷಣಾ ವ್ಯವಸ್ಥೆಗೆ ಹೇಗೆ ರಸಗೊಬ್ಬರವಾಗುತ್ತದೆ ಎನ್ನುವುದನ್ನು ತೋರಿಸುವುದು ಕಾದಂಬರಿಯ ಒಂದು ಮುಖ್ಯ ಉದ್ದೇಶ. ದೇಸಗತಿಯ ಅವನತಿಯೂ ಈ ಆಚರಣೆಯ ಅವನತಿಯೂ ಸಮಾನಾಂತರವಾಗಿ ನಡೆಯುವುದೇನೂ ಆಕಸ್ಮಿಕವಾಗಿರಲಾರದು. ಈ ಐತಿಹ್ಯ ನಿಜಕ್ಕೂ ಒಂದು ಆರ್ಕಿಟೈಪ್ ಆಗಿದ್ದರೂ, ಕಾದಂಬರಿಯ ವಿಶೇಷವೆಂದರೆ ಲೇಖಕರು ಅದನ್ನು ನಿರೂಪಿಸುವ (ನಿರಚಿಸುವ) ಬಗೆ: ಇಲ್ಲಿ ಯಾವುದೂ ‘ಸರಾಗ’ವಾಗಿ ಇಲ್ಲ; ಕೆಲವೊಂದು ಭಾಗಗಳನ್ನು ಪತ್ರಕರ್ತನಾದ ನಿರೂಪಕ ಕಥಿಸಿದರೆ, ಇನ್ನು ಕೆಲವನ್ನು ಕಥಾಪಾತ್ರವಾದ ಸ್ವಾಂವಜ್ಜ ನಿರೂಪಿಸುತ್ತಾನೆ; ಇನ್ನು ಕೆಲವು ಭಾಗಗಳನ್ನು ಇತರರು ವರದಿ ಮಾಡುತ್ತಾರೆ; ಕೆಲವೊಮ್ಮೆ ಓದುಗರು ಕಥಾನಕದ ಹತ್ತಿರ ಇರುತ್ತಾರೆ; ಇನ್ನು ಕೆಲವೂಮ್ಮೆ ಕಥಾನಕ ದೂರ ಸರಿದಿರುತ್ತದೆ; ಕೆಲವೊಮ್ಮೆ ನಮಗೆ ಅಡ್ಡನೋಟ ಮಾತ್ರವೇ ದೊರೆಯುತ್ತದೆ. ಈ ಮಿಶ್ರತ೦ತ್ರ ಐತಿಹ್ಯ ನಿರೂಪಣೆಯ ದೃಷ್ಪಿಯಿಂದ ಅತ್ಯಂತ ಮಹತ್ವದ್ದಾಗಿ ಅನಿಸುತ್ತದೆ.

‘ತೇರು’ ಓದುತ್ತ ನನ್ನ ಮೂಲವಿಶ್ವಾಸವೊಂದು ಮತ್ತೆ ದೃಢವಾಗುತ್ತಿದೆ: ಅದೆಂದರೆ ನಮ್ಮ ಪ್ರಾದೇಶಿಕ ಕನ್ನಡಗಳಲ್ಲಿ ಎಷ್ಟೊಂದು ವ್ಯಂಜನಶಕ್ತಿಯಿದೆ ಎನ್ನುವುದು. ಪಾಟೀಲರು ಉಪಯೋಗಿಸುವ ಪ್ರಾದೇಶಿಕ ಕನ್ನಡದ ಪ್ರತಿಯೊಂದು ಪದವೂ ಎಲ್ಲರಿಗೂ ಅರ್ಥವಾಗುತ್ತದೆ ಎನ್ನಲಾಗದು: ಆದರೆ ‘ತೇರು’ ಓದಲು ಅದೊಂದು ತಡೆಯೆನಿಸುವುದಿಲ್ಲ. ಓದುತ್ತ ಹೋದಂತೆ ಈ ಕನ್ನಡದ ಸೊಗಸಿಗೆ ಯಾರೂ ಮಾರುಹೋಗುತ್ತಾರೆ; ಕಾದಂಬರಿಯ ಕೊನೆಯಲ್ಲಿ ದ್ಯಾವಪ್ಪ ಶುದ್ಧ ಕನ್ನಡದಲ್ಲಿ ಬರೆದ ಪತ್ರಕ್ಕೆ ಬಂದಾಗ ಸ್ವಲ್ಪಮಟ್ಟಿಗೆ ‘ರಸಭಂಗ’ವೆನಿಸುವುದೂ ಈ ಪ್ರಾದೇಶಿಕ ಕನ್ನಡ ಒಡ್ಡುವ ಮೋಡಿಗೆ ಒಂದು ನಿದರ್ಶನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾನಾನಾ ತಂದ್ರನಾನಾ
Next post ಚಿಟ್ಟೆಗೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…