೧
ಕಾಂಡವೇ ಶಿಲೀಕೃತಗೊಂಡು
ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ
ಕೆತ್ತಿದ ಬುದ್ಧನಿಗೆ
ಅವಳಡುಗೆ ಮನೆಯೀಗ ತಪೋವನ.
ನೀಳ ಕಣ್ಣು ಮುಚ್ಚಿ
ಧ್ಯಾನಕ್ಕೆ ಕೂತ ಅವನೊಂದಿಗೆ
ಅವಳ ನಿತ್ಯ ಕಸುಬಿನಲ್ಲೇ
ಮೌನ ಜುಗಲ್‌ಬಂದಿ.
೨
ಸೊಪ್ಪು ಸೋಸುತ್ತಾ
ಕಾಳು ಬಿಡಿಸುತ್ತಾ
ಪಾತ್ರೆ ತೊಳೆಯುತ್ತಾ
ಮಗುವಿಗೆ ಹಾಲೂಡಿ
ಲಾಲಿ ಹೇಳುತ್ತಾ
ಮರಗಲ್ಲ ಬುದ್ಧನನ್ನು ನೆಟ್ಟಿದ್ದಾಳೆ
ಹೆಣ್ಣ ಪ್ರತಿರೂಪದ ಮೃತ್ತಿಕೆಯಲಿ.
೩
ಗಡಿಬಿಡಿಯಲಿ ಕೈಸುಟ್ಟು
ಬೆರಳು ಕೊಯ್ದು
ಜಾರಿ ಬಿದ್ದು
ನೋವು ಉಮ್ಮಳಿಸಿ
ಬಿಕ್ಕಳಿಸಿದ ಸದ್ದು.
ಒಂದಿಷ್ಟೇ ಕಣ್ತೆರೆದು ನೋಡಿ
ಥಟ್ಟನೆ ಮುಚ್ಚುವ ತಥಾಗತ!
ಅವಳ ನೋವಿಗೆ ಮಿಡುಕುವನೇ?
ತನ್ನ ಸಂಘಕ್ಕೇ ಹೆಣ್ಣ ನಿರಾಕರಿಸಿ
ಅವಳೊಡಲನೇ ಅಪಮಾನಿಸಿ
ಈ ಹಸಿಮಣ್ಣನೊದ್ದು ಮೇಲೇರಿದವನು?
೪
ಆದರೀಗ…
ಈರುಳ್ಳಿ ಹೆಚ್ಚುವ ನೆವದಲಿ
ಒಳಗಿನ ಸಂಕಟಕ್ಕೇ ಬಾಯ್ಬಂದು
ದಳ ದಳ ಉದುರುವ ಅವಳ ಕಣ್ಣೀರಿಗೆ
ಈಗೀಗ ಅವನ ಕಣ್ಣಂಚಿನಲ್ಲೂ
ಕಂಡೂ ಕಾಣದಂತೆ ನೀರ ಪಸೆಯೇ?
೫
ಒಲೆಯ ಕಾವಿಗೆ ಬಿಸಿಯಾಗಿ
ಕುಳಿರ್ಗಾಳಿಗೆ ತಂಪಾಗಿ
ಜೋಗುಳಕ್ಕೆ ನಿದ್ದೆಯಾಗಿ
ಪಾತ್ರೆ ಸಪ್ಪಳಕ್ಕೆ ಕಿವಿಯಾಗಿ
ಅಡುಗೆ ಘಮಕ್ಕೆ ವಾಸನೆಯಾಗಿ
ಅವಳ ತುಡುಮುಡಿಕೆಗೆ ಕಣ್ಣಾಗಿ
ಅರಳುತ್ತಿವೆ ಅವನೊಳಹೊರಗು
ಬುದ್ಧನೆನಿಸಿಕೊಂಡೂ ಮುಕ್ಕಾಗಿ
ಮಿಕ್ಕುಳಿದ ಸಾಕ್ಷಿಗಾಗಿ.
೬
ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ
ಮರಗಲ್ಲ ಬುದ್ಧನಿಗೀಗ
ನೆಲದಾಳದಲ್ಲೆಲ್ಲಾ ಬೇರು
ಕೈಕಾಲು ಎದೆ ತಲೆಗಳೆಲ್ಲ ಚಿಗುರು
ಕಣಕಣದ ಚಲನೆಗೂ ಮಿಡಿವ
ಹೆಣ್ಣ ನೋವಿಗೂ ತುಡಿವ
ಅವನೀಗ ಮರ್ತ್ಯಲೋಕದ ಕೂಸು!
[ಮರದ ಕಾಂಡ ಒಣಗಿ ಅನೇಕ ವರ್ಷಗಳ ಕಾಲ ಮಣ್ಣಿನೊಂದಿಗಿನ ಸಂಪರ್ಕ ದಿಂದ, ರಾಸಾಯನಿಕ ಕ್ರಿಯೆ ನಡೆದು ಖನಿಜವನ್ನು ಹೀರಿ ಮರದ ಕಾಂಡವೇ ಕಲ್ಲಾಗಿ ಪರಿವರ್ತನೆಯಾಗುವ ಸೃಷ್ಟಿ ವಿಶೇಷಕ್ಕೆ ಇಂಗ್ಲಿಷಿನಲ್ಲಿ petrified wood ಎನ್ನುತ್ತಾರೆ. ಅದಕ್ಕೆ ಸಂವಾದಿಯಾಗಿ ‘ಮರಗಲ್ಲು’ ಎಂದಿಲ್ಲಿ ಬಳಸಿದ್ದೇನೆ.
*****