ಕಾಗೆ ಹೊಕ್ಕ ಮನೆಯಾತಲ್ರಿ ಸಾಹಿತ್ಯ ಪರಿಷತ್ತು

ಇನ್ನೊಂದು ತಿಂಗಳು ಹೊಳ್ಳಿತೋ ಡಂಬಾಯ ಸಾಯಿತಿ ಹರಕುಬಾಯಿ ಚಂಪಾ ಕ.ಸಾ.ಪ.ಕ್ಕೆ ಕಾಲಿಕ್ಕಿ ವರ್ಷ ಆಗ್ತದ. ಅವರು ಈತನಕ ಮಾಡಿದ ಸಾದ್ನೆ ಸಲುವಾಗಿ ಅವರ ಚೇಲಾಗಳು ಅದ್ದೂರಿಯಾಗಿ ವರ್ಷಾಬ್ಧಿಕ ಆಚರಿಸಲಿಕ್ಕ ರೆಡಿ ಆಗ್ಲಿಕತ್ತಾರಂತ ಎಲ್ಲೆಲ್ಲೂ ಖಬರ್ ಆಗೇತ್ ನೊಡ್ರಿ. ಚಂಪಾನೇ ಇಲ್ಲೋ, ಕಸಾಪ ನೇ ಇಲ್ಲೋ ಅನ್ನೋ ಮಟ್ಟಿಗೆ ಕನ್ನಡಿಗರು ಕಸಾಪನ್ನ ಮರೆಯೋ ಹಂಗ ಮಾಡಿದ್ದೇ ಈವಯ್ಯನ ಮಾಸಾಧ್ನೆ ಆಗೇತಿ. ಬೀದರ್ದಾಗ ಅ.ಭಾ.ಸಾ. ಸಮ್ಮೇಳ್ನದಾ ಭರ್ಜರಿ ಮಾಡ್ತಾನ್ರಿ ಅಂತ ಹೋದ ವರ್ಸ ತೊಡೆ ತಟ್ಟಿಕೊಂಡಿದ್ದ ಚಂಪಾ ಸಾಹಿತಿ ಶಾಂತರಸರನ್ನ ಸೆಲೆಕ್ಟ್ ಮಾಡಿದ್ದಾಟು ಬಿಟ್ರೆ ಸಮ್ಮೇಳ್ನದ ಕಾವ್ನೆ ಶಾಂತ ಮಾಡಿ ಬಿಟ್ಟದ್ದೇನು ಕಡಿಮಿ ಸಾದ್ನೆ ಅಲ್‌ಬಿಡ್ರಿ. `ಬೇರೆ ಭಾಷಾ ಸಾಯಿತಿಗಳಿಂದ್ಲೆ ಉದ್ಧಟತನ ಮಾಡಿಸ್ಲಿಕ್‌ತ್ತೀನ್ರಿ. ಭ್ರಷ್ಟ ರಾಜಕಾರ್ಣಿಗುಳ್ನ ಸನಿಯದಾಗೂ ಸೇರಿಸಾಕಿಲ್ರಿ’ ಅಂತ ಒದರಿ ತನ್ನ ಅಸಲಿವಕ್ರ ಬುದ್ಧಿ ಚಂಪಾ ತೋರಿದ್ದೇ ತಡ ಕನ್ನಡದ ಮಾಮಾ ಸಾಯಿತಿಗಳು ನಮ್ಮ ಕಿಮ್ಮತ್ತೇ ಕಳೆದುಬಿಟ್ಟ ಈವಯ್ಯ ಅಂತ ಮಾರಿ ಕೆಡಿಸಿಕ್ಸಂಡ್ವು. ರಾಜಕಾರ್ಣಿಗಳೂ ಒಳಗೇ ರಾಂಗ್ ಆದ್ವು. ಹಿಂಗಾಗಿ ಸಾಯಿತಿಗಳ ಕೊ-ಆಪರೇಸನ್, ರಾಜಕೀಯದ ಮಂದಿಯಿಂದ ನಟ್ಗೆ ರೊಕ್ಕದ ರೇಸನ್ ಸಿಗ್ದೆ ಬರಿ ಬಡಾಯ ಘರ್ಮೆ ಲಡಾಯ ಅಂಬಂಗಾಗಿ ಸಮ್ಮೇಳ್ನ ಪೋಸ್ಟ್ ಫೋನಾತು. ಇಗೋರಿ, ಈವಯ್ಯನ್ನ ಕಂಡ್ರೆ ಸಾಯಿತಿಗಳಿಗೆ ಅಲರ್ಜಿ ಮಠಪತಿಗಳಿಗೆ ಅಸಿಡಿಟಿ ರಾಜಕೀಯದೋರ್ಗೆ ಅಲಸರ್ರು… ಯಾಕಂತಿರಾ? ಮಠಾಧಿಪತಿಗಳ ಮುಂದೆ ಬಂಡಾಯಗಾರ್ನಾಗಿ ಪೋಜ್ ಕೂಡುವ ಚಂಪ, ಕಸಾಪ ಚುನಾವಣೆ ಬರುತ್ಲು ಜಂಗಮ ಭಕ್ತನಾಗಿ ಬಂಡಾಯವನ್ನು ಬಂಡಲ್‌ಕಟ್ಟಿ ಅಟ್ಟದ ಮ್ಯಾಗೆಸ್ದು ಮಠಗಳಿಗೆಲ್ಲಾ ರೌಂಡ್ ಹೊಡ್ದು ಶಿವಶರಣರ ಪಾದ ಹಿಡ್ದು ಗೆದ್ದು ಕ.ಸಾ.ಪ.ದ ಗದ್ದುಗೆ ಹಿಡಿದಿದ್ದು ಓಪನ್ ಸಿಕ್ರೇಟ್ ಬಿಡ್ರಿ. ಅಧಿಕಾರಕ್ಕಾಗಿ ಖಾದಿಗಳ ಬೂಟ್‌ಪಾಲಿಶ್ ಮಾಡಿದ್ದೂ ಅಗ್ದಿ ಓಲ್ಡ್ ನ್ಯೂಸು. ಇಂತಿಪ್ಪ ಚಂಪಾ ಬಂಡಾಯದ ಜಮಾನ ಉಚ್ಛ್ರಾಯ ಸ್ಥಿತಿನಾಗಿದ್ದಾಗ ಕಸಾಪನ ಕಾಲಕಸ ಮಾಡಿ ಇರೋಧಿಸಿದ್ದು ಆಮ್ಯಾಗೆ ಬಣ್ಣ ಬದಲಿಸಿ ಚುನಾವಣೆಗೆ ನಿಂತು ಸಾಯಿತಿಗುಳಿಂದ ಮೂತಿಗೆಟ್ಟಸ್ಕಂಡು ಮಾಣಿ ಪುನರೂರರ ಎದುರು ನಿಂತು ಸೋತು ಸುಣ್ಣವಾದ್ದು ಈವತ್ತಿಗೆ ಫ್ಲಾಶ್ ಬ್ಯಾಕು. ಬಂಡವಾಳವಿಲ್ಲದ ಬಂಡಾಯದಿಂದ ಮೂರು ಕಾಸಿನ ಉಪೇಗಿಲ್ಲ ಅಂತ ತಿಳೀತ್ಲು ಚಂಪಾ ರುದಯದಾಗ ವೈಬ್ರೇಸನ್‌ಸ್ಟಾರ್ಟಾತು. `ಇಕ್ಕರಲಾ ಒದಿರ್ರಲಾ’ ಅಂತ ರುದ್ರ ನರ್ತನ ಮಾಡಿದ ಕವಿನ್ ಇಧಾನಸೌಧ ಏರಿ ಕುಂತಿರೋದ್ನ ನೆನೆದು, ತಾನೂವೆ ಸರ್ಕಾರದ ಸಂಗಡ ಸಲ್ಲಾಪವಾಡಿ ಕೂಡಿಕಿ ಮಾಡ್ಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ್ದ ಅಧ್ಯಕ್ಷಗಿರಿ ಹೊಡ್ಕಂಡಿದ್ದು ಅನದರ್ ಫ್ಲಾಶ್‌ಬ್ಯಾಕು. ತರಾವರಿ ಬಿಲ್ಲ್‌ಗುಳ್ನ ತಯಾರಿ ಮಾಡಿ ರೊಕ್ಕ ಮೇದ ಮ್ಯಾಗೆ ಎಂಜಲ ಕಾಸಿನ ರುಚಿ ಹತ್ತಿ ಧಾರವಾಡ್ಡ ಪೇಡೆ ಕಹಿಯಾಗಿ ಬೆಂಗಳೂರಿನ ಎಂಟಿ‌ಆರ್ ದೋಸೆ ಆಸೆ ಹೆಚ್ಚಾಗಿ ಬೆಂಗಳೂರ್ದಾಗೆ ಬಂದು ಚಂಪಾ ಟೆಂಟ್ ಹೊಡೆದದ್ದೂ ಆತು. ಎಲ್ಲರನೂ ಏಕ್‌ಧಂ ಟೀಕೆ ಮಾಡ್ತಿದ್ದ, ಹರಕು ಬಾಯಿ ಪೋಲಿಟಿಶಿಯನ್‌ಗಳ ಪೊನಿಟೇಲ್ ಆದ್ದು ವಂಡರ್ಮೆ ಥಂಡರ್ ಬಿಡ್ರಿ. `ಸೋಲು ಗೆಲುವಿನ ಮೆಟ್ಲು ಕಣ್ಲೆ ಚಂಪಾ. ಇನ್ನೊಂದಪ ಕ.ಸಾ.ಪ. ಯಲಕ್ಷನ್ದಾಗ ನಿಲ್ಲು’ ಆಂತ ಮಾಜಿ ಸಿನಿಮಾ ನಟ, ನರ್ಸರಿ ಸಾಯಿತಿ ಚಂಪಾ ಚೇಲಾ ವಿಥ್ ಬಾಲ ಲೋಹಿತಾಸ್ವ ಜರಗನಹಳ್ಳಿ ಹಾಲಂಬಿ ಇತ್ಯಾದಿ ವಾನರರು ವರಾತ ಮಾಡ್ಲಿಕತ್ತಿದ್ವು. ಚಂಪಾ ಅಂಜುತ್ತಲೇ ನಿಂತಿದ್ದಾತು. `ಮತ್ತೆ ನನ್ನ ಸೋಲಿಸಿಬ್ಯಾಡ್ರೋ ಯಪಾ. ನಾ ಸೋತ್ರೆ ಸಾಯಿತಿ ಸಂಕುಲವೇ ಸತ್ತಂಗಾಕ್ಕತಿ’ ಅಂತ ಸಾಯಿತಿಗಳ ಮುಂದಾಗಡೆ ಒದರಿಕ್ಕಂತ ಕಣ್ಣೀರು ಸುರಿಸಿದ ಪಾಪದ ಫಲವೋ ಅಂಬಂಗೆ ಚಂಪಾ ಬಾಯಿಗೆ (ಲಂಕೇಶ್ ಕೊಟ್ಟ ಬಿರುದು) ಕ.ಸಾ.ಪ ಪಟ್ಟ ಗಿಟ್ತು. ಸಾಯಿತಿಗಳು ದಿಲ್‌ಖುಸ್ ಆದ್ರು. ಆದರೆ ಖುಸಿ ಭಾಳ ದಿನ ಉಳಿಲಿಲ್ಲ ಬಿಡ್ರಿ. ಬೀದರ್ ಸಮ್ಮೇಳ್ನ ಕನಸಾಗಿ ಬದುಕಿಲ್ಲದ ಬಡಗಿಯಂತಾದ ಚಂಪಾ ಹಳೆ ಪುಸ್ತಕದ ಸಂತೆ ಮಾಡ್ತಾ ರದ್ದಿ ವಾಸ್ನೇ ಕುಡ್ಕಂಡು ಕುಂದ್ರಂಗಾತು. ಸುಮ್ಗೆ ಕುಂತ್ರೆ ಪಬ್ಲಿಸಿಟಿ ಸಿಗೋದಾರ ಹೆಂಗೆ ಅಂತ ಇಂಗ್ಲೀಸ್ ಭಾಸೆನಾ ಮೂರನೆ ಕ್ಲಾಸಿಂದ್ಲೆ ಜಾರಿ ಮಾಡ್ಬೇಕಂತ ರಿಟೈರ್ಡ್ ಸಾಯಿತಿಗಳ್ನ ಕರೆಸಿ, ತಪಡೆ ಬಡ್ಸಿ ಕುಣಿತಾ ಗೋಕಾಕ್ ಚಳುವಳಿ ಸಾಂಗ್ ಹಾಡುತ್ಲು ದಲಿತ ಹೈಕ್ಳು ರಾಂಗ್ ಆಗೋದ್ವು. ಒಂದ್ನೆ ಕ್ಲಾಸಿಂದ್ಲೆ ಇಂಗ್ಲೀಸ್ ಕಲತ್ತೆ ನಿಮ್ಮ ಡ್ಯಾಡಿ ಗಂಟೇನ್ ಹೋದಾತಲೆ ಚಂಪಾ ಅಂತ ಮೂತಿಗಿಕ್ಕಿದರು. ಕಮ್ಲಹಂಪ್ನ ಅಂಬೋ ಈರ ಮಹಿಳೆಯಿಂದ್ಲೂ ಮೀಟಿಂಗ್ನಾಗೆ ಮಾತಿಗೆ ತವಿಸ್ಕಂಡ ಚಂಪಾ ಮಾರಿ ಅಗಿತಿ ಡಾಂಬರ್ ಕಲರಾಗ್ಹೋತು. ಸಧ್ಯಕ್ಕೆ ಆಸುದ್ದಿನೇ ಬ್ಯಾಡಂತ ಸರ್ಕಾರನೂ ಸೈಲೆಂಟಾಗೋತು. ಚಂಪಾ ಕಲಿದು ಸೈಲೆಂಟಾಗೋ ಜಾಯಮಾನೈ ಅಲ್ ನೋಡ್ರಪಾ. ತನ್ನ ತಾಳಕ್ಕೆ ತಕ್ಕಂಗೆ ಕುಣಿಯೋ ಸದಸ್ಯರನೇ ಪರಿಷತ್ನಾಗ ತುಂಬಿಕೂಂಡು ಡೀಲ್ ನೆಡ್ಸಿ ಬೈಲಾನೇ ತಿದ್ದುಪಡಿ ಮಾಡಿ ಸಾಯೋವರ್ಗೂ ತಾನೇ ಕ.ಸಾ.ಪ. ಗದ್ದುಗೆ ಮ್ಯಾಗೆ ಕುಂಡ್ರೋ ಸ್ಕೆಚ್ಚು ಹಾಕಿದಾಗ ಸಾಯಿತಿ ಸಂಕುಲವೆ ಬೇವೋಷ್ ಆತು. ಅಧ್ಯಕ್ಷಾವಧಿ ಐದು ವರ್ಷಕ್ಕೆ ಏರಿಸೋದು, ಎರಡ್ನೆ ಸಲ್ವು ಚುನಾವಣೆ, ತಾನೇ ಸ್ಪರ್ಧಿಸೋ ಮಸಲತ್ತಿಗಿಳ್ದ ಚಂಪಾ, ಮರಿ ರಾಜಕಾರ್ಣಿ ಹಂಗೇ ಆಡ್ಲಿಕತ್ತ್ಯಾಗ `ಕಸಾಪನೇನ್ ನಿನ್ ಅಡ್ಡ ಮಾಡಿಕೊಂಬಾಕತ್ತಿಯೇನ್ಲೆ ಕಾಗೆ ಮಕದೋನೆ’ ಅಂತ ಸದಸ್ಯರು ಮಾಸಾಯಿತಿಗಳು ಮಕ್ಕೆ ಉಗಿತಾ ಫೈಟಿಂಗ್ ಬಿದ್ದರು. ಸಭೆ ಅನಿರ್ದಿಷ್ಟಾವಧಿ ಮುಂದುಕ್ಕೋತು. ಅಸಲಿ ಚಂಪಾ ಆಶೆಗೆ ಬಿದ್ದು ಕಳೆದು ಹೋಗಿದ್ದು ಈ ಶತಮಾನದ ದುರಂತ ಕಣ್ರಿ.

ಇನ್ನು ಮುಂದಾರ ಚಿಲ್ರೆ ಯೋಜನೆಗಳ್ನ ಬಿಟ್ಟಾಕಿ ಸಾಹಿತ್ಯದ ಗಂಧ ಗಾಳಿಯಿಲ್ಲದ ದ.ಕ. ಮಾಣಿ ಪುನರೂರು ಮಾಡಿದ ಸಾದ್ನೆ ಕಡೆ ಚಂಪಾರಂತಹ ಡಂಬಾಯ ಸಾಯಿತಿಗಳು ವಸಿ ಗ್ಯಾನ ಹರಿಸೋದು ಚಲೋ. ಸುಮಾರು ೫೦ ಲಕ್ಷ ದಾಟು ಸಾಲ ತೀರ್ಸಿ ೫೦ ಲಕ್ಷದೋಟು ರೊಕ್ಕ ಮುಂದೆ ಬರೋ ಚಂಪಾರಂತೋರು ತಂಪಾಗಿರಲು ಮಡಗಿದೋರು, ಪುನರೂರು. ಕಟ್ಟಡದ ನವೀಕರಣ, ೪೮ ಲಕ್ಷಕ್ಕೂ ಮೀರಿ ಶಾಶ್ವತ ನಿಧಿ, ೫೦ ಲಕ್ಷಕ್ಕೂ ಹೆಚ್ಚು ದತ್ತಿ ನಿಧಿ ಕೂಡಿಟ್ಟ ಪುನರೂರು ತನ್ನದಾದ ಗೌರವಧನ ಟಚ್ ಮಾಡ್ದೆ, ಟಿ‌ಎ ರೊಕ್ಕಕ್ಕೆ ಟಂಗ್ ಚಾಚ್ದೆ ಸ್ವಂತ ಕಾರ್ನಾಗೇ ಟೂರ್ ಮಾಡ್ತಾ ಮೂರು ವರ್ಸದಾಗೆ ಮೂರು ಸ್ಷಲ ಅ.ಭಾ.ಸಾ ಸಮ್ಮೇಳ್ನ, ೩೦ ಜಿಲ್ಲಾ, ೬೫ ತಾಲ್ಲೂಕು, ೫೦ ಹೋಬಳಿ ಮಟ್ಟದ ಸಮ್ಮೇಳನ ನಡೆಸಿ ವಡೆ ಪಾಯಸ ಹಾಕಿಸಿದಂತಹ ಪುನರೂರಂಥ ಪುನರೂರರ ಪಂಚೆಯನ್ನೇ ತುಂಬಿದ ಭಾರಿ ಸಭೆದಾಗ ರೌಡಿ ಸಾಯಿತಿಗಳು ಚಿಂದಿ ಮಾಡಿ ಮಾನಭಂಗ ಮಾಡಿದ ಸೆಂಟಿಮೆಟ್ ಸೀನ್ನ ನೆಪ್ಪಿನಾಗೆ ಮಡಗಿಕೊಂಡಾರ ಚಂಪಾಕಲಿ ತನ್ನ ಹಳೆ ಪ್ಯಾಂಟಿಗೆ ಭದ್ರವಾಗಿ ಬೆಲ್ಟ್ ಹಾಕ್ಕಂಬೋದು ಚಲೋ. ಈಗಾರ ಹರಕು ಬಾಯಿ ಹೊಲ್ಕೊಂಡು ಎಲ್ಲರ ಪ್ರೀತಿ ಇಸ್ವಾಸ ಗಳಿಸ್ಕೊಂಡು ನವಂಬರ್ದಾಗರ ಬೀದರ್ ಸಾಹಿತ್ಯ ಸಮ್ಮೇಳ್ನವಾ ಪಸಂದಾಗಿ ಮಾಡಿ `ಕನ್ನಡ ಕೊಬ್ನೆ ಹರಕು ಬಾಯಿ ಚಂಪಾ’ ಅನ್ನೋ ಬಿರುದು ತಕ್ಕಳ್ಳಿ ಅಂಬೋದು ಕನ್ನಡಮ್ಮನ ಕೂಸುಗಳೆಲ್ಲರ ಮಹಾದಾಶಾ ಆಗೇತಿ.
ಕ್ವಿಜ್: ಕಾಗೆ ಹೊಕ್ಕ ಮನೆ ಖಾಲಿ
ಚಂಪಾ ಹೊಕ್ಕ ಪರಿಷತ್‌ನಾಳ್ಗ ……………….ಖಾಲಿ
(ರೊಕ್ಕ| ಮಾನ | ಸಾಹಿತ್ಯ | ಒಗ್ಗಟ್ಟು)
*****
( ೧೭-೦೮-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪಗಳ ದಾರಿಯಲಿ
Next post ನಾನು ನೀನು

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…