ಮುನಿಯ ಬೇಡ ಪ್ರಕೃತಿ ಮಾತೆ
ಗೊತ್ತು ನಾವು ಕಟುಕರು
ಇರಲಿ ಕರುಣೆ ಇನ್ನು ಕೊಂಚ
ನಾವು ನಿನ್ನ ಕುವರರು

ನೀನು ತಾಯಿ ಪೊರೆದೆ ನಮ್ಮ
ಇನಿತು ನೋವು ಆಗದಂತೆ
ಇದನು ಅರಿಯದೆ ನಾವು ಬೆಳೆದೆವು
ಎಲ್ಲ ಕ್ರೌರ್‍ಯ ನಾಚುವಂತೆ

ಇಂಥ ತಪ್ಪಿಗೆ ಒಂದು ಏಟು
ನೀನು ಕೊಟ್ಟ ಸುನಾಮಿ
ಇನ್ನು ಸಾಕು ಮೀರಿ ಮಕ್ಕಳ
ಆಗಬೇಡ ಬೇನಾಮಿ

ನಮ್ಮ ಆಸೆಗೆ ಎಲ್ಲಿ ಅಂಕುಶ
ಅದಕೆ ನಮ್ಮ ಕೈಗಳುದ್ದ
ಜೊತೆಗೆ ಆಸೆ ಆಗಿ ದುರಾಸೆ
ಕೊಡಲಿ ಹಿಡಿದೆವು ಮುಗಿಲ ಉದ್ದ

ಅನ್ನ ಕೇಳುವ ಹೊಟ್ಟೆ ಮೀರಿ
ದೇಹ ತುಂಬ ಸಕ್ಕರೆ
ಇಂಥ ಸ್ಥಿತಿಯಲಿ ಬಂದ ಗತಿಯಲಿ
ಸಾವು ನಮ್ಮ ನೆರೆಹೊರೆ
*****