ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಒತ್ತಾಸೆ : ದಿನಾಂಕ ೨೩, ೨೪, ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಬರೆದ ಲೇಖನ.

ಬಂಡಾಯದ ಕ್ರಿಯೆ ಮತ್ತು ಸಾಹಿತ್ಯ ಇವತ್ತಿಗೂ ಜೀವಂತವಾಗಿದೆ. ಆದರೆ ಪ್ರಖರವಾಗಿಲ್ಲ. ಈ ಪ್ರಶ್ನೆ ಸರಳ; ಉತ್ತರವು ಸಂಕೀರ್ಣ. ಆದರೂ ಆತ್ಮಾವಲೋಕನದ ಹಾಗೂ ಭವಿಷ್ಯ ಮುಖಿಯಾದ ನೆಲೆಗಟ್ಟಿನಲ್ಲಿ ಮೇಣದ ಬತ್ತಿಯನ್ನು ಹಿಡಿದು ಹೊರಟ ಈ ಪ್ರಯತ್ನ ಸಣ್ಣದು. ಕತ್ತಲನ್ನು ಕಳಚುವ ಸಾಮೂಹಿಕ ಪ್ರಯತ್ನದಲ್ಲಿ ಮೇಣದ ಬತ್ತಿಗಳ ಸಂಖ್ಯೆ ಕಾರ್ಖಾನೆಗಳ ಉತ್ಪನ್ನಕ್ಕೆ ಸಮವಾಗಬೇಕು.

ನಮ್ಮ ನಡುವೆ ಅನೇಕ ‘ಇಸಂ’ಗಳು ಇಂದಿಗೂ ಉಸಿರಾಡುತ್ತಿವೆ. ಅವು ಕೆಲವರ ಬರವಣಿಗೆಯಲ್ಲಿ ಮತ್ತೂ ಕೆಲವರ ಮಾತಿನಲ್ಲಿ, ಚರಿತ್ರೆಯ ಪುಟಗಳಲ್ಲಿ, ಧೂಳು ತಿನ್ನುತ್ತಿರುವ ಪುಸ್ತಕಗಳ ರ್‍ಯಾಕುಗಳಲ್ಲಿ ಇವೆ. ಅವುಗಳು ನೆಲದ ಮೇಲೆಲ್ಲಾ ಓಡಾಡಿದ ಕಾಲವೊಂದಿತ್ತು. ಮೂರ್ತವಾಗಿ ಹೇಳುವುದಾದರೆ ಕಳೆದ ಶತಮಾನದ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ. ಅಲ್ಲಿ ಕ್ರಿಯೆ ಮತ್ತು ಚಿಂತನೆಗೆ ಹೆಚ್ಚು ನಿಕಟತೆ ಇದ್ದಾಗ ಚಳವಳಿಗೂ, ಚಿಂತನೆಗೂ, ಸಾಹಿತ್ಯಕ್ಕೂ ಹೆಚ್ಚು ಪ್ರಖರತೆ ಸಾಧ್ಯವಾಗಿತ್ತು. ಆದರೆ ಅದೇ ವ್ಯಕ್ತಿಗಳೂ ಇಂದಿಗೂ ನಮ್ಮೊಡನಿದ್ದಾರೆ. ಆದರೆ ಅವರಲ್ಲಿ ಬಹುಪಾಲು ವ್ಯಕ್ತಿಗಳ ಮತ್ತು ಚಳುವಳಿಯ ನಡುವೆ ಅಂತರವೇರ್ಪಟ್ಟಿರುವುದರಿಂದ ಚಳವಳಿ ಮುನ್ನಡೆಯುತ್ತಿದ್ದಾಗಲೂ, ಅದೇ ವ್ಯಕ್ತಿಗಳು ಬರೆಯುತ್ತಿದ್ದಾಗಲೂ ಅವರ ಕ್ರಿಯೆ ಮತ್ತು ಬೌದ್ಧಿಕತೆಗೆ ಕಾಂತಿ ಇಲ್ಲದಂತಾಗಿದೆ.

ಚಳುವಳಿಯ ಸಂದರ್ಭದಲ್ಲಿ ನಿರ್ದಿಷ್ಟ ವ್ಯಕ್ತಿಗಳು ಅಂತಿಮ ಎಂದು ಹೇಳುತ್ತಿಲ್ಲ. ಆದರೆ ಅವರು ಅವಶ್ಯಕ ಎಂದಷ್ಟೇ ಹೇಳುತ್ತಿದ್ದೇನೆ. ಇಲ್ಲವಾದಲ್ಲಿ ಅವರ ಹೊರಳು ದಾರಿಯು ಕಿರಿಯರಲ್ಲಿ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಬಿಡುತ್ತದೆ. ಅದರಿಂದ ಚಳುವಳಿಯ ಜೀವಂತ ಪ್ರವಾಹಕ್ಕೆ ಅಣೆಕಟ್ಟನ್ನು ಕಟ್ಟಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ತಲೆಮಾರಿನ ನೈತಿಕ ಸೋಲು ಇವತ್ತಿನ ಸಾಹಿತ್ಯ ಚಳುವಳಿಯ ಕ್ರಿಯೆ ಮತ್ತು ಚಿಂತನೆಯ ಸಪ್ಪೆತನದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂಬುದನ್ನು ಗುರುತಿಸಿಕೊಳ್ಳಬೇಕು.

ನಮ್ಮೆದುರು ಇಂದು ಹೊಸ ಸವಾಲುಗಳಿವೆ. ಹಳೆಯ ಸವಾಲುಗಳೂ ಇಲ್ಲವೆಂದಲ್ಲ. ಈ ಎಲ್ಲಾ ಸವಾಲುಗಳಿಗೆ ಮುಖಾಮುಖಿಯಾಗುತ್ತಿರುವ ಹೊಸಬರ ಶಕ್ತಿಯೂ ಪ್ರದರ್ಶನ ಗೊಳ್ಳುತ್ತಿದೆ. ಅಂತಹ ಪ್ರದರ್ಶನದಲ್ಲಿ ವಿಭಿನ್ನ ‘ಇಸಂ’ಗಳ ಇಣುಕು ನೋಟಗಳೂ ಇವೆ. ಆದರೂ ಇವುಗಳ ಚಿಂತನ ಧಾರೆಗೆ ಬೇಕಾದಷ್ಟು ಪ್ರಖರತೆ ಇಲ್ಲ. ಯಾಕೆಂದರೆ ಕ್ರಿಯಾ ನೆಲೆಯ ಚಳುವಳಿಗಳಿಂದ ಇವರು ಕಾಯ್ದುಕೊಂಡಿರುವ ದೂರ. ಈ ‘ದೂರ’ ದೂರವಾಗಿ, ಸಮೀಪವಾದಾಗ ಚಳುವಳಿಗೆ ಹೊಸ ಆಯಾಮ ಬರುವುದಲ್ಲದೆ; ಇವರ ಚಿಂತನೆಗಳಿಗೂ ಪ್ರಖರತೆ ಬರುತ್ತದೆ. ಅಂಥಲ್ಲಿ ಜನ ಸಾಮುದಾಯಿಕವಾದ ಅಂತಃಶಕ್ತಿ ಸಾಹಿತ್ಯದ ರುಚಿಯನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಬಸವಣ್ಣ, ಅಂಬೇಡ್ಕರ್, ಮಾರ್ಕ್ಸ್ ಅವರ ತತ್ವ ಹೆಚ್ಚು ಸಮರ್ಪಕವೂ ಮತ್ತು ‘ಇಸಂ’ ಎನ್ನುವಷ್ಟರ ಮಟ್ಟಿಗೆ ವ್ಯಾಪಕವೂ ಆದದ್ದು. ಇಂತಹ ಪಾಠಗಳನ್ನು ಚರಿತ್ರೆಯಿಂದ ಕಲಿಯದ ಹೊರತು, ಚರಿತ್ರೆಯ ನಿರ್ಮಾಣವನ್ನು ಮಾಡಲಾಗುವುದಿಲ್ಲ. ಆದ್ದರಿಂದ ಬಂಡಾಯದ ಆಶಯವನ್ನು ಇಟ್ಟುಕೊಂಡು ಹೊರಟಿರುವ ಸಾಹಿತ್ಯ ಮತ್ತು ಅನೇಕ ಸಂಘಟನೆಗಳ ತರುಣರು ಓದು ಮತ್ತು ಚಳುವಳಿಯೆಂಬ ಕ್ರಿಯೆಯ ಸಂಲಗ್ನವನ್ನು ಸಾಧಿಸಿಕೊಳ್ಳಬೇಕಾಗಿದೆ. ಅದು ಸಾಧ್ಯವಾದಾಗ ನಮ್ಮ ಸಾಹಿತ್ಯ ಮತ್ತು ಚಳವಳಿ ಹೆಸರಿಸಲು ಅನಗತ್ಯವೆನಿಸಿದ ಎಲ್ಲಾ ಸಮಕಾಲೀನ ಸವಾಲುಗಳಿಗೆ ಗುರುತರ ಮುಖಾಮುಖಿಯಾಗಿ ನಿಲ್ಲುತ್ತದೆ. ಅಂತಹ ಚಟುವಟಿಕೆಯಷ್ಟೇ ಭವಿಷ್ಯವನ್ನು ಬೆಳಕಾಗಿಸಬಲ್ಲದು.

‘ಕರಣ’ – ಇದರ ಮೂಲಕ ಕೊನೆಯಾಗುವ ಅನೇಕ ಪರಿಭಾಷೆಗಳು ನಮ್ಮ ಇವತ್ತಿನ ಸವಾಲುಗಳುಗಳಾಗಿವೆ. ಇವುಗಳ ವಿಜೃಂಭಣೆಯಲ್ಲಿ ಬಲಪಂಥೀಯ ಶಕ್ತಿಗಳ ಯಶಸ್ಸು ಅಡಗಿದೆ. ಇಂತಹ ಶಕ್ತಿಗಳು ದೇಶದ ಒಳಗಿನ ಮತ್ತು ಹೊರಗಿನ ಹಾಗೂ ಮನುಷ್ಯನ ಅಂತರಂಗ ಮತ್ತು ಬಹಿರಂಗ; ಹೀಗೆ ಎಲ್ಲಾ ವಲಯಗಳನ್ನು ಆಕ್ರಮಿಸಿವೆ. ಇವುಗಳ ವಿರಾಟ್‌ರೂಪದ ಬೆಳವಣಿಗೆಗೆ ಎಡಪಂಥೀಯ ಶಕ್ತಿಗಳ ನಿಷ್ಕ್ರಿಯತೆಯೂ ಮುಖ್ಯ ಕಾರಣ ಎಂಬುದನ್ನು ಲಕ್ಷಿಸಬೇಕು. ಇಂತಹ ಸನ್ನಿವೇಶದಲ್ಲಿ ಎಡಪಂಥೀಯ ಮನಸ್ಸುಗಳು ತಮ್ಮ ಜಡತೆಯನ್ನು ಕೊಡವಬೇಕಾಗಿದೆ; ಕ್ರಿಯಾರೂಪಕ್ಕಳಿಯಬೇಕಾಗಿದೆ. ಅಂತಹ ಆಶಾವಾದವೇ ಚಳವಳಿ ಮತ್ತು ಚಿಂತನೆಗಳನ್ನು ಜೀವಂತವಾಗಿಡುವ ಶಕ್ತಿ. ಆ ನೆಲೆಯಲ್ಲಿ ಕ್ರಮೇಣ ವ್ಯಾಪಕವಾಗಬೇಕಾದ ಜನ ಸಂಘರ್ಷಕ್ಕೆ ಹಿರಿಯ ಮತ್ತು ಯುವ ಜನಾಂಗ ಒಂದುಗೂಡಬೇಕಾಗಿದೆ. ಇದರ ಫಲಿತವು ಶಿಕ್ಷಣ ಕ್ಷೇತ್ರಕ್ಕೂ ಸರ್ಜರಿ ಮಾಡುವುದಲ್ಲದೆ, ಅಲ್ಲಿ ಮಾನವೀಯ ಮತ್ತು ನೈತಿಕ ನೆಲೆಗಳ ಶಿಕ್ಷಿತರನ್ನು ರೂಪಿಸುವಂತಾಗುತ್ತದೆ. ಹಾಗಾದಾಗ ಶೈಕ್ಷಣಿಕ ಕೇಂದ್ರಗಳು ಬೆಳಕಿನ ಕೇಂದ್ರಗಳಾಗುತ್ತವೆ; ಬೆಂಕಿಯ ಕೇಂದ್ರಗಳಾಗುವುದಿಲ್ಲ. ಈ ಮಾತನ್ನು ಯಾಕೆ ಆಡುತ್ತಿದ್ದೇನೆಂದರೆ, ಆವತ್ತು ಬಾಬರಿ ಮಸೀದಿಯನ್ನು ಕೆಡವಿ ಮಸೀದಿ ಕೋಲಾಹಲವನ್ನು ಸೃಷ್ಟಿಸಿದವರು, ಮಂಡಲ ವರದಿ ಜಾರಿಯ ಸಂದರ್ಭದಲ್ಲಿ ಅನೇಕರ ಆತ್ಮಾಹುತಿಗಳಿಗೆ ಕಾರಣರಾದವರು, ಗೋದ್ರಾವನ್ನು ಸುಟ್ಟವರು ಅಕ್ಷರ ಕಲಿತ ಶಿಕ್ಷಿತರೇ ಹೊರತು, ಅಶಿಕ್ಷಿತರಲ್ಲ. ಆದ್ದರಿಂದ ನಿಜದ ಅಥವಾ ಮನುಷ್ಯ ಪರ ಆಶಯವನ್ನಿರಿಸಿಕೊಂಡ ಶಿಕ್ಷಣ ಮತ್ತು ಶಿಕ್ಷಿತರ ಸೃಷ್ಟಿ ನಮ್ಮ ಇವತ್ತಿನ ತುರ್ತುಗಳಲ್ಲಿ ಒಂದಾಗಬೇಕಿದೆ.

ಹೀಗೆ ಸಮಾಜದ ಎಲ್ಲಾ ವಲಯಗಳನ್ನು ಆವರಿಸುವ ಎಲ್ಲಾ ಚಳುವಳಿಗಳ ಬಂಡಾಯ ಸಾಹಿತ್ಯ ತೀವ್ರಗೊಳ್ಳುವ ನಿಟ್ಟಿನಲ್ಲಿ ಇವತ್ತಿನ ಬೌದ್ಧಿಕ ಮತ್ತು ಕ್ರಿಯಾ ಜಗತ್ತು ಒಂದಾಗಿ, ಮುಂದಾಗಬೇಕಿದೆ.

ಇಲ್ಲಿ ಬರವಣಿಗೆ ಮಾಡುತ್ತಿರುವವರು ಸಂಪೂರ್ಣವಾಗಿ ಚಳವಳಿಗೆ ತೊಡಗಬೇಕೆಂದು ಹೇಳುತ್ತಿಲ್ಲ. ಆದರೆ ಚಳುವಳಿಯೊಂದಿಗೆ ನಿಕಟ ಸಂಪರ್ಕ ಮತ್ತು ಸಂಬಂಧವನ್ನು ಇಟ್ಟುಕೊಳ್ಳದ ಹೊರತು ಪ್ರಖರ ಸಾಹಿತ್ಯವನ್ನು ನೀಡುವುದಕ್ಕಾಗುವುದಿಲ್ಲ. ಉದಾಹರಣೆಗೆ, ಮಾರ್ಕ್ಸ್ ಮೂಲದ ಲೆನಿನ್ ಚಳುವಳಿಯಲ್ಲಿ ಮ್ಯಾಕ್ಸಿಂಗಾರ್ಕಿ ಸಂಪೂರ್ಣವಾಗಿ ತೊಡಗಿರಲಿಲ್ಲ. ಆದರೆ ಅದರೊಂದಿಗೆ ನಿಕಟ ಸಂಪರ್ಕವನ್ನಂತೂ ಇಟ್ಟುಕೊಂಡಿದ್ದ. ಅಂತಹ ಬದ್ಧತೆಯೇ ಅವನಿಂದ ಅತ್ಯಂತ ಪ್ರಖರತೆಯನ್ನುಳ್ಳ ‘ತಾಯಿ’ಯಂತಹ ಕಾದಂಬರಿಗಳನ್ನು ಬರೆಸಲು ಸಾಧ್ಯಮಾಡಿತು. ಅಂತಹ ಕಾದಂಬರಿಗಳು ಸಮಾಜಕ್ಕೂ ಸಂಘರ್ಷದ ದಾರಿಯನ್ನು ತೋರಿದವು. ಇಂತಹ ನಿಕಟತೆ ಎಪ್ಪತ್ತು-ಎಂಭತ್ತರ ದಶಕಗಳಲ್ಲಿ ಕನ್ನಡದ ಅನೇಕ ಸಾಹಿತಿಗಳಿಗೆ ಸಾಧ್ಯವಾಗಿತ್ತು. ಅವರ ಪಟ್ಟಿ ಉದ್ದವಿದೆ. ಆದ್ದರಿಂದಲೇ ಅವರ ಅವೊತ್ತಿನ ಬರವಣಿಗೆಯಲ್ಲಿ ಸ್ವಲ್ಪ ಅಬ್ಬರ ಜಾಸ್ತಿಯೆನಿಸಿದರೂ ಜೀವಂತಿಕೆಯಿತ್ತು; ಪ್ರಖರ ಕಾಂತಿಯಿತ್ತು. ಅದು ಮಾರ್ಕ್ಸ್‌ವಾದಿ ಬರವಣಿಗೆಯಾಗಿರಬಹುದು ಅಥವಾ ಅಂಬೇಡ್ಕರ್, ಲೋಹಿಯಾ ಮೊದಲಾದ ಪಂಥಗಳ ಬರವಣಿಗೆಯಾಗಿರಬಹುದು. ಆದ್ದರಿಂದ ಇಂದು ಪುನಃ ಆ ಚಿಂತನೆಗಳನ್ನು ಇರಿಸಿಕೊಂಡ ವಿಭಿನ್ನ ಸಂಘಟನೆಗಳು ಮತ್ತು ಅವು ನಡೆಸುವ ಚಳುವಳಿಗಳು-ಇವುಗಳೊಂದಿಗೆ ಸಾಹಿತಿಗಳಿಗೆ ನಿಕಟ ಸಾಮೀಪ್ಯ ಬೇಕಾಗಿದೆ. ಅದು ದಲಿತ ಚಳುವಳಿಯಿರಬಹುದು ಅಥವಾ ರೈತ, ಕಾರ್ಮಿಕ, ಮಹಿಳೆ, ಕನ್ನಡ ಮೊದಲಾದ ಯಾವುದೇ ಚಳುವಳಿಯಿರಬಹುದು. ಒಬ್ಬ ಬರಹಗಾರ ಇವುಗಳಲ್ಲಿ ಒಂದಾದರೂ ಸಂಘಟನೆ-ಚಳುವಳಿಯ ಜೊತೆಗೆ ತನ್ನ ಬದ್ಧತೆಯನ್ನು ಸ್ಥಾಪಿಸಿಕೊಂಡಾಗ ಅದರಿಂದ ಚಳುವಳಿ ಬೆಳೆಯುವುದಲ್ಲದೆ, ತನಗೂ ತನ್ನ ಬರವಣಿಗೆಗೂ ಪ್ರಖರವಾದ ಜನಪರತೆ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೆ ತೆಲುಗಿನ ವಿಪ್ಲವ ಕಾವ್ಯ, ಮರಾಠಿಯ ದಲಿತ ಕಾವ್ಯ, ಕನ್ನಡದ ಬಂಡಾಯ ಕಾವ್ಯ ಮತ್ತು ಆಪೀಕಾದ ಕಾವ್ಯ – ಇವುಗಳನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಡೆದಾಗ ಕರ್ನಾಟಕದ ಎಲ್ಲಾ ಜನಪರ ಚಳುವಳಿಗಳಿಗೆ ಮತ್ತೆ ರಕ್ತ ತುಂಬುವುದಲ್ಲದೆ, ಕನ್ನಡದ ಬಂಡಾಯ ಸಾಹಿತ್ಯಕ್ಕೂ ಒಗರು ಮೂಡುತ್ತದೆ. ಈ ಮೂಲಕವಾಗಿ ಹೊರ ಸವಾಲುಗಳಿಗೆ ಮುಖಾಮುಖಿಯಾಗುವ ಸಾಹಿತ್ಯವು ಬಂಡಾಯ ಪರಂಪರೆಗೆ ವಿಸ್ತರಣೆಯೂ ಆಗಿ ನಿಲ್ಲುತ್ತದೆ. ಆಗ ಬಂಡಾಯವೆಂಬುದು ಹಳೆಯ ಮಾದರಿಯಲ್ಲೇ ಇರಬೇಕಾದ್ದಿಲ್ಲ. ಆ ಮಾದರಿಯಲ್ಲೇ ಇವತ್ತಿನ ಬಂಡಾಯ ಇಲ್ಲ; ಆದ್ದರಿಂದ ಅದು ಬಂಡಾಯವೇ ಅಲ್ಲ ಎಂದು ಮೌಢ್ಯದ ನೆಲೆಯಲ್ಲಿ ಪರಿತಪಿಸುವ ನಮ್ಮ ನಡುವಿನ ಅನೇಕ ನವ ಸಾಂಸ್ಕೃತಿಕ ಮೂಲಭೂತವಾದಿಗಳಿಗೆ ತಾನು ಉತ್ತರವೂ ಆಗುತ್ತದೆ.

ಒಟ್ಟಾರೆ ಸಮಕಾಲೀನ ಜಗತ್ತಿಗೆ ಸ್ಪಂದಿಸುವ ಎಲ್ಲಾ ಚಳುವಳಿಗಳ ಮೂಲದ ಒಟ್ಟು ಬಂಡಾಯ ಸಾಹಿತ್ಯವು ಜನಸಮುದಾಯಕ್ಕೆ ಚಾಲನ ಶಕ್ತಿಯಾಗಬೇಕಾಗಿದೆ. ಆದ್ದರಿಂದ ಚಳುವಳಿಗಳನ್ನು ಗಭಿಕರಿಸಿಕೊಂಡು ಮುನ್ನಡೆಯಬೇಕಾದ ಸಾಹಿತ್ಯವು ಇತಿಹಾಸದಿಂದ ಪಾಠವನ್ನು ಕಲಿತು ಹೊಸ ಇತಿಹಾಸವನ್ನು ಬರೆಯಬೇಕಾಗಿದೆ. ಅಂತಹ ಕಾಲ ಈಗ ನಮ್ಮ ಮುಂದಿದೆ. ಇದು ಸಾಧ್ಯವಾಗದೇ ಹೋದಲ್ಲಿ ಮುಂದಿನ ಜನಾಂಗದಿಂದ ನಾವು ಪಾಠವನ್ನು ಕಲಿಯಬೇಕಾಗುತ್ತದೆ!
*****
ಪ್ರಜಾವಾಣಿ, ೨೯ ಸೆಪ್ಟಂಬರ್ ೨೦೦೨
ಬಂಡಾಯ ಸಂವೇದನೆ (ಸಂ), ೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಕದಾಸರು
Next post ಬೆಂಕಿ

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys