ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು !
ಯಾವ ಸತ್ವವ ಬಳಸಿ ನೀನು ಮೂಡಿರುವೆ ?
ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು,
ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ.
‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ
ನಿನ್ನ ರೂಪದ ಸತ್ವಹೀನ ಅನುಕರಣೆ,
ರೂಪಸಿ ಹೆಲೆನ್ ಕೆನ್ನೆ ಚೆಲುವ ತವರಾದರೂ
ಗ್ರೀಕ್ ತೊಡುಗೆಯಲ್ಲಿ ನೀನಿರಲವಳು ಸಮನೇ ?
ಹೋಲಿಸಲೆ ಚೈತ್ರಕ್ಕೆ ಸುಗ್ಗಿಯ ಸಮೃದ್ಧಿಗೆ ?
ನಿನ್ನ ರೂಪಿನ ಎದುರು ಚೈತ್ರ ಕೇವಲ ನೆರಳು,
ಔದಾರ್ಯದಲಿ ನೀನು ಮೀರಿರುವೆ ಸುಗ್ಗಿಗೆ
ನಿನ್ನೊಳಿವೆ ಬೆರೆತು ಏನೆಲ್ಲ ಬಗೆ ಚೆಲುವೂ.
ನಿನ್ನ ಕೆಲವಂಶ ಇದೆ ಎಲ್ಲ ಮೈಚೆಲುವಲ್ಲೂ
ನಿನ್ನ ಪ್ರೇಮದ ಹಿರಿಮೆ ಇಲ್ಲ ಯಾರಲ್ಲೂ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 53
What is your substance, whereof are you made