ಮುಸ್ಸಂಜೆಯ ಮಿಂಚು – ೧

ಮುಸ್ಸಂಜೆಯ ಮಿಂಚು – ೧

ಅಧ್ಯಾಯ ೧ ವಿಲಕ್ಷಣ ಸಂದರ್ಶನ

ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ ಮೇಲೆ ಕುಳಿತುಕೊಂಡಳು. ಹೊರಡುವ ಘಳಿಗೆಯಲ್ಲಿ ಕೈನಿ ಕೈಕೊಟ್ಟಿತ್ತು. ಮತ್ತೆ ಎಲ್ಲಿ ಸಂದರ್ಶನಕ್ಕೆ ತಡವಾಗುವುದೋ ಎಂದು ಆಟೋ ಹಿಡಿದು ಅವಸರವಾಗಿ ತಲುಪಿದ್ದಳು. ಸಂದರ್ಶನಕ್ಕೆ ಇನ್ನೂ ಐದು ನಿಮಿಷ ಬಾಕಿ ಇತ್ತು. ಅವಳಂತೆಯೇ ಬಂದಿದ್ದ ಇನ್ನೂ ಕೆಲವರು ಕುರ್ಚಿಯ ಮೇಲೆ ಕುಳಿತು ಚಡಪಡಿಸುತ್ತಿದ್ದರು. ಎಲ್ಲರ ಮುಖಗಳಲ್ಲೂ ಈ ಬಾರಿಯಾದರೂ ಕೆಲಸ ಸಿಗುವುದೇನೋ ಎಂಬ ನಿರೀಕ್ಷೆ, ಸಿಗದೇ ಹೋದಲ್ಲಿ ಮುಂದೇನು ಎಂಬ ಆತಂಕ ತುಂಬಿ ತುಳುಕಾಡುತ್ತಿತ್ತು. ರಿತು ಮಾತ್ರ ನಿರ್ಭಾವದಿಂದಿದ್ದಳು. ಇದಲ್ಲದಿದ್ದರೆ ಮತ್ತೊಂದು ಎಂಬ ಭಾವವಿತ್ತು.

ಅಷ್ಟರಲ್ಲಿ ಬಾಗಿಲು ತೆರೆದು ಹೊರ ಬಂದಾಕೆ, ‘ಸಂದರ್ಶನ ಪ್ರಾರಂಭವಾಗಲು ಇನ್ನು ಒಂದು ಗಂಟೆ ತಡ’ ಎಂದು ಹೇಳಿ ಹೋದಾಗ, ‘ಥೂ’ ಎಂದು ಗೊಣಗಿಕೊಂಡವರೇ ಹೆಚ್ಚು, ಕೆಲವರಾಗಲೇ ಎದ್ದು ಆಮೇಲೆ ಬಂದರಾಯಿತೆಂದು ಹೊರ ನಡೆದೇಬಿಟ್ಟರು. ಮತ್ತೆ ಕೆಲವರು ಆಕಳಿಸುತ್ತ ಅಲ್ಲಿಯೇ ಕುಳಿತುಕೊಂಡು ಪರಸ್ಪರ ಮಾತನಾಡತೊಡಗಿದರು. ಆ ಮಾತುಗಳು ಕೆಲಸಕ್ಕೆ ಬಾರದ ವಿಷಯದತ್ತಲೇ ಸುತ್ತುವರಿಯುತ್ತಿದ್ದುದನ್ನು ಗಮನಿಸಿದ ರಿತು ಮೆಲ್ಲನೆ ಎದ್ದು ನಿಂತಳು. ಎಲ್ಲಿಗೆ ಹೋಗಬೇಕೆಂದು ಕ್ಷಣ ತಿಳಿಯದೆ ನಿಧಾನವಾಗಿ ಹೆಜ್ಜೆ ಹಾಕುತ್ತ ಅಲ್ಲಿದ್ದ ಗಾರ್ಡನ್ ಸುತ್ತಿದಳು. ಬಹಳ ಚೆಂದವಾಗಿ ಗಿಡಗಳು ಬೆಳೆದು ನಿಂತಿದ್ದವು. ಅಲ್ಲಿರದ ಗಿಡಗಳೇ ಇಲ್ಲವೇನೋ ಎನಿಸಿ, ಇಷ್ಟೊಂದು ಚೆನ್ನಾಗಿ ತೋಟ ಮಾಡಿಸಿರುವ ಸಂಸ್ಥೆಯವರ ಅಭಿರುಚಿಗೆ ತಲೆದೂಗಿದಳು. ಅವಳಿಗರಿವಿಲ್ಲದೆ ಮುಂದೆ ಸಾಗಿದಳು. ದೊಡ್ಡ ಕಟ್ಟಡದ ಮುಂದೆ ಮುರಳಿ ಊದುತ್ತಿರುವ ಮುರಳಿ ಮೋಹನ, ಅವನ ಸುತ್ತಲೂ ಕಾರಂಜಿಯಂತೆ ಚಿಮ್ಮುತ್ತಿರುವ ಅಮೃತಧಾರೆ. ‘ವಾಹ್!’ ಎಂದುಸುರಿದಳು. ಪಾಪ, ಒಬ್ಬನೇ ಕೃಷ್ಣ ನಿಂತುಬಿಟ್ಟಿದ್ದಾನೆ. ಸದಾ ಅವನ ಜತೆ ಇರುತ್ತಿದ್ದ ರಾಧೆ ಇಲ್ಲಿ ಯಾಕಿಲ್ಲವೋ? ಪಾಪ ರಾಧೆಗೂ ಸದಾ ಅವನ ಜತೆ ನಿಂತು ನಿಂತು ಬೋರಾಗಿತ್ತೇನೋ? ಎಲ್ಲಿಗೊ ಹೋಗಿಬಿಟ್ಟಿದ್ದಾಳೆ. ತನ್ನ ಆಲೋಚನೆಗೆ ತಾನೇ ನಗುತ್ತ ಮುಂದಡಿ ಇರಿಸಿದಳು. ತನ್ನತ್ತಲೇ ನೋಡುತ್ತ ನಗುತ್ತಿರುವಾಕೆಯನ್ನು ಕಂಡು ತಬ್ಬಿಬ್ಬಾಗಿ ಈಕೆ ಯಾರನ್ನು ನೋಡಿ ನಗುತ್ತಿದ್ದಾಳೆ ? ತನ್ನನ್ನೇ? ತಾನೆಂದೂ ಈಕೆಯನ್ನು ನೋಡಿಯೇ ಇಲ್ಲವಲ್ಲ! ಥಟ್ಟನೆ ನೆನಪಿಗೆ ಬಂತು. ತಾನು ರಾಧೆಯನ್ನು ಕುರಿತು ನಗುತ್ತಿರುವಾಗ ತನ್ನ ನೋಟ ಬಹುಶಃ ಆಕೆಯತ್ತ ಇತ್ತೇನೋ? ತನ್ನ ನಗು ಆಕೆಯನ್ನು ಕುರಿತು ಎಂದುಕೊಂಡು ಪ್ರತಿಯಾಗಿ ನಗುತ್ತಿದ್ದಾರೆ ಎನಿಸಿ, ‘ನಮಸ್ಕಾರ’ ಎಂದಳು ನಸುನಗುತ್ತ. ಹಿಗ್ಗಿದ ಆಕೆ ಪ್ರತಿ ನಮಸ್ಕಾರ ಮಾಡುತ್ತ – “ಯಾರಮ್ಮ ನೀನು? ಯಾರು ಬೇಕಾಗಿತ್ತು?” ಎಂದರು.

“ನೀವೇ” ಎಂದಳು ತುಂಟತನದಿಂದ.

“ನಾನೇ!” ಆಶ್ಚರ್ಯಪಟ್ಟರಾಕೆ.

“ನಿಮ್ಮನ್ನ ನೋಡ್ತಾ ಇದ್ರೆ ನಮ್ಮ ಅಜ್ಜಿ ನೆನಪಾಗುತ್ತೆ. ಅಜ್ಜಿ ಥರವೇ ಇದ್ದೀರಿ. ನಿಮ್ಮನ್ನು ಅಜ್ಜಿ ಅಂತ ಕರೆಯಲಾ?” ಎಂದಳು ಆತ್ಮೀಯವಾಗಿ.

ರಿತುವಿನ ಆತ್ಮೀಯತೆ ಆಕೆಯಲ್ಲಿ ಸಡಗರ ತಂದಿತು. “ಕರೀ ತಾಯಿ, ಕರೀ. ಅಜ್ಜಿ ಅಂತ ಕರೆಯಬೇಕಾದವರೆಲ್ಲ ದೂರ ಇದ್ದಾರೆ. ಆ ಪದ ಕೇಳಿ ಯುಗಗಳಾಯ್ತೇನೊ ಅನ್ನಿಸುತ್ತ ಇದೆ. ನೀವಾದ್ರೂ ಹಾಗೆ ಕರೆದ್ರೆ ಬೆಂದ ಒಡಲಿಗೆ ತಂಪೆರೆದಂತೆ ಆಗುತ್ತದೆ. ಧಾರಾಳವಾಗಿ ಅಜ್ಜಿ ಅಂತ ಕರೆಯಮ್ಮ” ವೇದನೆ ತುಂಬಿದ ಧ್ವನಿಯಲ್ಲಿ ಒತ್ತಾಯ ತುಂಬಿತ್ತು.

“ಅಜ್ಜಿ, ಅಜ್ಜಿ” ಮನಃಪೂರ್ವಕವಾಗಿ ಕರೆದಳು.

“ಯಾರ ಹೆತ್ತ ಮಗಳೇ ತಾಯಿ ನೀನು? ಈ ಕರೆಯಲ್ಲಿ ಜೇನು ತುಂಬಿದಂತಿದೆ. ನಿನ್ನ ಹೆತ್ತ ಹೊಟ್ಟೆ ತಣ್ಣಗಿರಲಿ. ಆದ್ಸರಿ, ಇಲ್ಲಿಗ್ಯಾಕೆ ಬಂದಿದ್ದೀಯಾ? ಯಾರನ್ನ ನೋಡೋಕೆ?” ಪ್ರಶ್ನಿಸಿದರು.

“ಏನಿಲ್ಲ ಅಜ್ಜಿ, ಅಲ್ಲಿರೋ ಆಫೀಸಿನಲ್ಲಿ ಒಂದು ಕೆಲಸ ಇತ್ತು. ಅದಕ್ಕೆ ಇವತ್ತು ಸಂದರ್ಶನ ನಡೀತಿದೆ. ಒಂದು ಗಂಟೆ ತಡವಾಗುತ್ತೆ ಅಂದರು. ಅದಕ್ಕೆ ಹಾಗೇ ಸುತ್ತಾಡುತ್ತ ಇಲ್ಲಿಗೆ ಬಂದೆ. ನಿಮ್ಮನ್ನ ನೋಡಿದೆ. ನಮ್ಮ ಅಜ್ಜನೇ ನೋಡಿದಂತಾಯ್ತು. ನಿಮ್ಮ ಹಾಗೆ ಒಬ್ರು ಅಜ್ಜಿ ನಮ್ಮ ಮನೆಯಲ್ಲಿ ಇದ್ದಾರೆ. ಅವರು ಅಂದ್ರೆ ನಂಗೆ ತುಂಬಾ ಪ್ರೀತಿ, ಅಜ್ಜಿಗೂ ಅಷ್ಟೇ ನಾನು ಅಂದ್ರೆ ಪ್ರಾಣ” ಅಜ್ಜಿಯನ್ನು ಮೃದುವಾಗಿ ಕೈಹಿಡಿದು ಅಲ್ಲಿದ್ದ ಕಟ್ಟೆಯ ಮೇಲೆ ಕೂರಿಸುತ್ತ ಹೇಳಿದಳು.

“ಪುಣ್ಯವಂತೆ ಆ ನಿಮ್ಮ ಅಜ್ಜಿ, ಮನೆಯಲ್ಲಿಯೇ ಇಟ್ಕೊಂಡು ನೋಡ್ಕೊತಿರೋ ನಿಮ್ಮ ಅಮ್ಮ-ಅಪ್ಪನ್ನ ಪಡೆದಿರೋ ಅಜ್ಜಿ ತುಂಬಾನೇ ಪುಣ್ಯವಂತೆ. ಎಲ್ಲರಿಗೂ ಆ ಭಾಗ್ಯ ಬೇಕಲ್ಲ” ಒಮ್ಮೆಲೇ ಕಣ್ಣೀರು ಹಾಕುತ್ತ ಅವಳ ಕೈ ಬಿಡಿಸಿಕೊಂಡು ಬಿರಬಿರನೇ ಒಳ ನಡೆದೇಬಿಟ್ಟಾಗ ಅವಾಕ್ಕಾಗಿ ನೋಡಿಯೇ ನೋಡಿದಳು. ಕರುಳು ಚುರ್ರೆಂದಿತು. ಪಾಪ, ಅಜ್ಜಿ ಯಾಕೆ ಇಲ್ಲಿ ಬಂದಿರಬೇಕಾಗಿದೆಯೋ? ಕನಿಕರಿಸುತ್ತ ಸಮಯ ನೋಡಿಕೊಂಡಳು. ಇನ್ನೊಂದು ಹತ್ತು ನಿಮಿಷ ಬಾಕಿ ಇತ್ತು. ಅಜ್ಜಿ ಜತೆ ಮಾತಾಡ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಲಗುಬಗನೇ ಸಂದರ್ಶನ ಪಡೆಯುವ ಜಾಗಕ್ಕೆ ಬಂದಳು. ಎಲ್ಲರೂ ಅವರವರ ಪ್ರಪಂಚದಲ್ಲಿ ಮುಳುಗಿಬಿಟ್ಟಿದ್ದಾರೆ. ಯಾರೊಬ್ಬರೂ ಇವಳು ಹೋದದ್ದನ್ನಾಗಲೀ ಬಂದದ್ದನ್ನಾಗಲೀ ಗಮನಿಸಿಯೇ ಇರಲಿಲ್ಲ. ಖಾಲಿ ಇದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ಅಷ್ಟರಲ್ಲಿ ನರಳುವ ಸದ್ದಾಯಿತು. ಎಲ್ಲರ ದೃಷ್ಟಿ ಅತ್ತ ಕೇಂದ್ರೀಕೃತವಾಯಿತು. ಗೋಡೆಗೊರಗಿ ಕುಳಿತಿದ್ದ ವ್ಯಕ್ತಿಯೊಬ್ಬ ಎದೆ ಹಿಡಿದುಕೊಂಡು ನರಳುತ್ತಿದ್ದಾನೆ.

ಒಬ್ಬಾಕೆ ಅತ್ತ ಹೋಗಿ – “ಏನಾಯ್ತಪ್ಪ? ಯಾಕೆ ನರಳ್ತಾ ಇದ್ದೀಯಾ? ಇಷ್ಟು ವಯಸ್ಸಾಗಿದೆ. ಒಬ್ಬೊಬ್ಬರೇ ಓಡಾಡಬಾರದು, ಗೊತ್ತಿಲ್ಲವೇ?” ಎಂದು ಕೇಳಿ ಮತ್ತೆ ತನ್ನ ಜಾಗಕ್ಕೆ ಬಂದು ಕುಳಿತಳು.

“ಎಲ್ಲೋ ಮಕ್ಕಳು ಓಡಿಸಿರಬೇಕು. ಅದಕ್ಕೆ ಈ ಆಶ್ರಮಕ್ಕೆ ಸೇರಿಕೊಳ್ಳೋಕೆ ಬಂದಿದಾನೆ ಅಂತ ಕಾಣುತ್ತೆ” ಕುಹಕನಾಗಿ ನುಡಿದ ಒಬ್ಬ.

“ಇಂಥವರಿಗ್ಯಾಕೆ ಆ ದೇವ್ರು ಆಯುಸ್ಸು ಕೊಡುತ್ತಾನೋ? ಇಷ್ಟೊಂದು ವಯಸ್ಸಾಗಿದೆ. ಬೇರೆಯವರಿಗೆ ಹೊರೆಯಾಗುವ ಬದಲು ಸಾಯಬಾರದೆ?” ಜಿಗುಪ್ಸೆ ಪಟ್ಟುಕೊಂಡನು ಮತ್ತೊಬ್ಬ.

ತಲೆಗೊಬ್ಬರು ಮಾತನಾಡುತ್ತಿದ್ದಾರೆಯೇ ವಿನಾ ನರಳುವ ವ್ಯಕ್ತಿಯ ಬಳಿ ಯಾರೂ ಹೋಗಲೊಲ್ಲರು. ಆ ವೃದ್ಧನ ನೋವು, ನರಳಿಕೆ ರಿತುವಿನ ಮನಸ್ಸನ್ನ ಕಲಕಿಬಿಟ್ಟಿತು. ಎದ್ದು ಬಂದವಳೇ ತನ್ನ ಬ್ಯಾಗಿನಲ್ಲಿದ್ದ ಬಾಟಲಿಯ ಮುಚ್ಚಳ ತೆರೆದು ನೀರು ಕುಡಿಸುತ್ತ, “ಏನಾಗ್ತಾ ಇದೆ ತಾತ? ತುಂಬ ಎದೆ ನೋವಾ? ಆಸ್ಪತ್ರೆಗೆ ಹೋಗೋಣ್ವ? ಏಳಿ ಮೇಲೆ, ನನ್ನ ಹಾಗೆ ಹಿಡ್ಕೊಂಡು ನಿಂತುಕೊಳ್ಳಿ. ರೀ, ಮಿಸ್ಟರ್, ಒಂದು ಆಟೋ ಕರೆತರ್ತಿರಾ? ಇವ್ರನ್ನ ಆಸ್ಪತ್ರೆಗೆ ಕರ್ಕೊಂಡು ಹೋಗೋಣ” ಎಂದು ಹೇಳಿದಳು.

“ನಿಮಗ್ಯಾಕ್ರಿ ಇಲ್ಲದ ಉಸಾಬರಿ? ಇವರೇನು ನಿಮ್ಮ ನೆಂಟರಾ? ಬಂಧುವಾ? ಬಂದ ಕೆಲ್ಸ ಏನು ಅಂತ ನೋಡ್ಕೊಂಡು ಇರಬಾರದೇ? ನೀವು ಬಂದಿರೋದು ಇಂಟರ್‌ವ್ಯೂಗೆ, ನೀವು ಆ ಕಡೆ ಕರ್ಕೊಂಡು ಹೋದ್ರೆ ಅಲ್ಲಿಂದ ಬರೋ ವೇಳೆಗೆ ಇಂಟರ್‌ವೂನೇ ಮುಗಿದುಹೋಗಿರುತ್ತದೆ ಅಷ್ಟೆ” ವ್ಯಂಗ್ಯವಾಗಿ ನುಡಿದ ಮಹಾನುಭಾವ.

“ಬೇಡಮ್ಮ ಆಟೋ ಏನೂ ಬೇಡ. ಅಲ್ಲೇ ಡಾಕ್ಟರ್‌ ಇದ್ದಾರೆ, ಅಲ್ಲಿಗೇ ಹೋಗೋಣ ಬಾಮ್ಮ” ಸಾವರಿಸಿಕೊಂಡು ಆ ವೃದ್ಧನುಡಿದು, ರಿತುವಿನ ಹೆಗಲಿನ ಮೇಲೆ ಕೈ ಊರುತ್ತ ಹೆಜ್ಜೆ ಹಾಕಿದರು.

ಅವರಿಬ್ಬರೂ ಅತ್ತ ಹೋಗುತ್ತಿರುವತ್ತಲೇ ಕುಹಕ, ವ್ಯಂಗ್ಯ, ಅಪಹಾಸ್ಯ, ತಾತ್ಸಾರದ ನೋಟಗಳು ಹಿಂಬಾಲಿಸಿದವು.

“ತಾತ, ಮೆಲ್ಲನೆ ನಡೆಯಿರಿ, ಎದೆ ತುಂಬಾ ನೋಯ್ತಾ ಇದೆಯಾ ತಾತ? ಡಾಕ್ಟರ್ ಒಂದು ಇಂಜೆಕ್ಷನ್ ಕೊಟ್ಟುಬಿಟ್ಟರೆ ನೋವೆಲ್ಲ ಮಾಯವಾಗಿ ಬಿಡುತ್ತದೆ. ಬನ್ನಿ ತಾತ, ನಿಧಾನವಾಗಿ ಬನ್ನಿ” ಎಚ್ಚರಿಕೆಯಿಂದ ರಿತು ಆತನನ್ನು ಕರೆತಂದು ಮಂಚದ ಮೇಲೆ ಮಲಗಿಸಬೇಕು ಎಂದುಕೊಳ್ಳುವಷ್ಟರಲ್ಲಿ – “ಅಭಿನಂದನೆಗಳು ಮಗಳೇ. ಇಂಟರ್‌ವ್ಯೂನಲ್ಲಿ ಪಾಸಾಗಿಬಿಟ್ಟೆ” ರಿತುವಿನಿಂದ ಬಿಡಿಸಿಕೊಂಡು ಹೇಳಿದಾಗ ರಿತು ದಿಘ್ಮೂಢಳಾದಳು. ಎಲ್ಲವೂ ಆಯೋಮಯವೆನಿಸಿತು. ಏನಿದು? ಇದೆಲ್ಲ ಏನು? ನೂರು ಪ್ರಶ್ನೆಗಳು ಮೂಡಿದರೂ ಒಂದೂ ಹೊರಬರದೆ ಶಿಲೆಯಂತೆ ನಿಂತುಬಿಟ್ಟಳು. ಅಷ್ಟರಲ್ಲಿ ಒಳಬಂದ ಮತ್ತೊಬ್ಬಾತ,

“ಕಂಗ್ರಾಟ್ಸ್, ಇವತ್ತಿನ ನಮ್ಮ ಪರೀಕ್ಷೆಯಲ್ಲಿ ಫಸ್ಟ್ ರ್‍ಯಾಂಕ್ ನಿಮಗೆ. ಹೇಗಿತ್ತು ನಮ್ಮ ವಿನೂತನ ಸಂದರ್ಶನ. ಮಾಮೂಲಿಯಂತೆ ಒಬ್ಬೊಬ್ಬರನ್ನೇ ಕರೆದು, ಪ್ರಶ್ನೆ ಕೇಳಿ ಆಯ್ಕೆ ಮಾಡುವ ಸಂದರ್ಶನಕ್ಕಿಂತ ವಿಭಿನ್ನವಾಗಿಲ್ಲವೇ?” ರಿತುವನ್ನು ನೋಡುತ್ತ ಕೇಳಿದರು.

“ಸಾರ್, ನಂಗೊಂದೂ ಅರ್ಥ ಆಗುತ್ತ ಇಲ್ಲ. ನಾನು ಬಂದದ್ದು ಇಂಟರ್‌ವ್ಯೂಗೆ. ಆದರೆ ನೀವು ಫಸ್ಟ್ ರ್‍ಯಾಂಕ್ ಅಂತ ಇದ್ದೀರಿ. ಇದೆಲ್ಲ ಹೇಗೆ? ಇನ್ನೂ ಅಲ್ಲಿ ಕ್ಯಾಂಡಿಡೇಟ್ಸ್ ಇದ್ದರಲ್ಲಾ? ಅದು ಹೇಗೆ ನನ್ನ ಪಾಸು ಮಾಡಿಬಿಟ್ರ?” ಗೊಂದಲದಲ್ಲಿ ಮುಳುಗೇಳುತ್ತ ಕೇಳಿದಳು.

“ನಿಮ್ಮ ಗೊಂದಲ ನಮಗೆ ಅರ್ಥವಾಗುತ್ತೆ. ನಮಗೆ ಬೇಕಾಗಿರೋ ಅಭ್ಯರ್‍ಥಿ ಸಿಗಬೇಕಾದರೆ, ಬರೀ ಸಂದರ್ಶನ ಮಾಡಿ ಏನೂ ಪ್ರಯೋಜನ ಇಲ್ಲ ಅಂತ ನಮ್ಗೆ ಈಗಾಗ್ಲೆ ಗೊತ್ತಾಗಿಬಿಟ್ಟಿದೆ. ಹಿಂದೆ ಹಾಗೆ ಆಯ್ಕೆಯಾದವರೆಲ್ಲ ಇದನ್ನು ಒಂದು ಸಂಬಳ ಸಿಗೋ ಕೆಲ್ಸ ಅಂದುಕೊಂಡರೇ ವಿನಾ ಮಾನವೀಯ ಮೌಲ್ಯವಿರುವ, ಹೃದಯವಂತಿಕೆ ಇರುವ, ವೃದ್ಧರ ಸೇವೆಯೇ ಜನಾರ್ದನ ಸೇವೆ ಎಂದುಕೊಳ್ಳುವಂಥ ಭಾವನೆಗಳೇ ಇಲ್ಲದ, ಸಂಬಳಕ್ಕಷ್ಟೆ ದುಡಿಯುವ ಯಂತ್ರದಂತಿದ್ದರು. ಹಾಗಾಗಿಯೇ ಅವರನ್ನು ಕೆಲಸದಿಂದ ತೆಗೆಯಬೇಕಾಯಿತು. ಈ ಸಂಸ್ಥೆಗೆ ಬೇಕಾಗಿರುವುದು ವೃದ್ಧರ ಬಗ್ಗೆ ಅಂತಃಕರಣವುಳ್ಳ, ಅವರಿಗಾಗಿ ಮರುಗುವ, ತುಡಿಯುವ, ತನ್ನವರೆಂದು ತಿಳಿಯುವ ವಾತ್ಸಲ್ಯಮಯವಾದ ವ್ಯಕ್ತಿ ಈ ಕೆಲಸಕ್ಕೆ ಅತ್ಯಾವಶ್ಯಕವಾಗಿತ್ತು. ಹಾಗಾಗಿಯೇ ಸಂದರ್ಶನದ ಸಮಯ ಕೊಟ್ಟು ಅನಂತರ ಒಂದು ಗಂಟೆ ಮುಂದೂಡಿದೆವು. ಆ ಸಮಯದಲ್ಲಿ ಅವರೆಲ್ಲರ ಚಲನವಲನವನ್ನು ಮರೆಯಲ್ಲಿಯೇ ಗಮನಿಸಲಾಗುತ್ತಿತ್ತು. ಎಲ್ಲರಿಗಿಂತ ಭಿನ್ನವಾದ ನಡೆ ನಿಮ್ಮದು. ಸಿಕ್ಕ ಸಮಯದಲ್ಲಿ ಒಳಬಂದಿರಿ. ಮಮತಾಮಯಿಯಾಗಿ ಆಕೆಯನ್ನು ಕಂಡಿರಿ. ಅದಷ್ಟೆ ನಿಮ್ಮ ಗೆಲುವಿಗೆ ಅಳತೆಗೋಲಾಗಿರಲಿಲ್ಲ. ಅಲ್ಲಿದ್ದವರಲ್ಲಿನ ಮಾನವೀಯತೆ, ಪರೋಪಕಾರ, ಬೇರೆಯವರಿಗಾಗಿ ಸ್ಪಂದಿಸುವ ಹೃದಯ ಹುಡುಕುವ ಸಲುವಾಗಿಯೇ ಇವರನ್ನು ಅಲ್ಲಿ ಕೂರಿಸಿ, ಎದೆನೋವಿನ ನಾಟಕವಾಡಿಸಿದೆವು. ಆ ಪರೀಕ್ಷೆಯಲ್ಲಿಯೂ ನೀವು ಗೆದ್ದುಬಿಟ್ಟಿರಿ. ಇವರನ್ನು ಶುಶ್ರೂಷೆ ಮಾಡಿ, ಆಸ್ಪತ್ರೆಗೆ ಕರೆದೊಯ್ದರೆ ಸಂದರ್ಶನ ತಪ್ಪಿಹೋಗುವುದೆಂದು ಗೊತ್ತಿದ್ದರೂ ಅಲ್ಲಿ ಒಬ್ಬಾತ ಆ ಬಗ್ಗೆ ಎಚ್ಚರಿಸಿದರೂ ಅದಕ್ಕೆ ಮಹತ್ವ ಕೊಡದೆ, ಒಂದು ಜೀವ ಉಳಿಸುವ ಯತ್ನ ಮಾಡಿದಿರಿ. ಈ ಕಾಳಜಿ, ನಿಷ್ಕಲ್ಮಷ ಪ್ರೀತಿಯೇ. ಬೇರೆಯವರಿಗಾಗಿ ತುಡಿಯುವ ಹೃದಯವಂತಿಕೆಯೇ ನಮಗೆ ಬೇಕಾಗಿದ್ದುದು. ಈ ಸಂಸ್ಥೆಯಲ್ಲಿ ದುಡಿಯುವ ಅರ್ಹತೆ ನಿಮಗಿದೆ.” ಸುದೀರ್ಘವಾಗಿ – ಆತ ಹೇಳುತ್ತಿದ್ದರೆ ಕನಸೋ ನನಸೋ ತಿಳಿಯದೆ ಒದ್ದಾಡಿದಳು. ಹೀಗೂ ನಡೆಯುವುದುಂಟೇ? ತನಗೆ ಕೆಲಸ ಸಿಕ್ಕಿಯೇಬಿಟ್ಟಿತೇ? ತನ್ನೆಲ್ಲ ಕನಸು, ಆಸೆ, ನಿರೀಕ್ಷೆಗಳೆಲ್ಲ ಸಾಕಾರವಾಗಿಹೋಯಿತೇ? ಇದೇನು ಅನಿರೀಕ್ಷಿತ? ಇಷ್ಟು ದೊಡ್ಡ ಸಂಸ್ಥೆಯ ಈ ಹುದ್ದೆ ತನ್ನ ಪಾಲಾಯಿತೇ? ಸಂತೋಷ ತಡೆಯಲಾರದೆ ಕಣ್ಣಲ್ಲಿ ದಳದಳನೇ ನೀರಿಳಿಯಿತು.

“ಬಾಮ್ಮ ಕುಳಿತುಕೊ, ಕೊಡು ನಿನ್ನ ಫೈಲ್” ಎಂದು ತಾವೇ ಕೇಳಿ ಫೈಲ್ ನೋಡಿದವರೇ, “ವೆರಿ ಗುಡ್, ಇಷ್ಟೊಂದು ಕ್ವಾಲಿಫಿಕೇಶನ್ ಇಟ್ಕೊಂಡಿರೋ ನೀವು ಇದೇ ಕೆಲ್ಸ ಯಾಕೆ ಬಯಸಿದಿರಿ?” ಪ್ರಶ್ನಿಸಿದರು.

ಅಷ್ಟರಲ್ಲಿ ಸಾವರಿಸಿಕೊಂಡಿದ್ದ ರಿತು, “ನಂಗೆ ಮೊದಲಿನಿಂದಲೂ ನಮ್ಮ ಅಮ್ಮನೆ ಆದರ್ಶ. ನಮ್ಮ ಅಮ್ಮಂಗೆ ವಯಸ್ಸಾದವರನ್ನು, ಅಸಹಾಯಕರನ್ನು ಕಂಡರೆ ವಿಪರೀತ ಅಕ್ಕರೆ. ಯಾರಿಗೆ ನಮ್ಮ ಅಗತ್ಯವಿದೆಯೋ ಅವರಿಗೆ ನಮ್ಮ ಸಹಾಯ ನೀಡಬೇಕು. ಹಸಿದವರಿಗೆ ಅನ್ನ ನೀಡಬೇಕೇ ವಿನಾ ಹೊಟ್ಟೆ ತುಂಬಿದವರಿಗಲ್ಲ ಎಂದು ಸದಾ ಹೇಳ್ತಾ ಇರ್ತಾರೆ. ದೇವರಿಗೆ ನೇರವಾಗಿ ಕೃತಜ್ಞತೆ ಸಲ್ಲಿಸೋಕೆ ಸಾಧ್ಯವಿಲ್ಲ. ಹಾಗಾಗಿ ಇನ್ನೊಬ್ಬರಿಗೆ ಸ್ಪಂದಿಸೋ ಮೂಲಕ, ನೆರವಾಗೋ ಮೂಲಕ, ಆ ದೇವರು ನಮ್ಗೆ ಕೊಟ್ಟದ್ದನ್ನು ಹಿಂತಿರುಗಿಸೋಕೆ ಸಾಧ್ಯ ಎನ್ನುವ ನಮ್ಮ ಅಮ್ಮನ ಆದರ್ಶವೇ ನಂಗೆ ಸ್ಫೂರ್ತಿ. ನಾನು ಇಷ್ಟೊಂದು ಓದಿರೋದೆಲ್ಲ ನನ್ನ ಜ್ಞಾನಾರ್ಜನೆಗಾಗಿ. ಅದಕ್ಕೂ-ಇದಕ್ಕೂ ಸಂಬಂಧವಿಲ್ಲ. ನಮ್ಮ ಅಮ್ಮನ ಎದೆಹಾಲಿನ ಜತೆ ಇನ್ನೊಬ್ಬರಿಗೆ ಮಿಡಿಯೊ ಹೃದಯಾನೂ ಕೊಟ್ಟು ನನ್ನ ಬೆಳೆಸಿದ್ದಾಳೆ. ಸಾರ್, ನೀವೇನಾದರೂ ನನ್ನ ಈ ಗುಣಗಳನ್ನು ಮೆಚ್ಚಿ ಕೆಲ್ಸ ನೀಡಿದ್ದೇ ಆದ್ರೆ ಅದೆಲ್ಲವೂ ನಮ್ಮ ತಾಯಿಗೆ ಸೇರಬೇಕು” ಹೃದಯ ತುಂಬಿ ನುಡಿದಳು ರಿತು.

ತತ್‌ಕ್ಷಣವೇ ಅಪಾಯಿಂಟ್‌ಮೆಂಟ್ ಆರ್ಡರನ್ನು ಟೈಪ್ ಮಾಡಿಸಿ ಕೊಟ್ಟೇಬಿಟ್ಟರು. ಆರ್ಡರನ್ನು ಕೈಯಲ್ಲಿ ಹಿಡಿದುಕೊಂಡ ರಿತು ಅದನ್ನು ಕಣ್ಣಿಗೊತ್ತಿಕೊಂಡು – “ಥ್ಯಾಂಕ್ಯೂ ಸರ್, ಥ್ಯಂಕ್ಯೂ ವೆರಿಮಚ್, ನಾನು ತುಂಬ ಲಕ್ಕಿ ಫೆಲೋ. ನಾನು ಬಯಸಿದ ಕೆಲ್ಸ ನಂಗೆ ಸಿಕ್ಕಿದೆ. ನಿಮ್ಮ ನಿರೀಕ್ಷೆನಾ ನಾನು ಸುಳ್ಳು ಮಾಡಲ್ಲ ಸರ್. ನನ್ನ ಶಕ್ತಿಮೀರಿ ಈ ಸಂಸ್ಥೆಗಾಗಿ ದುಡಿಯಲು ಪ್ರಯತ್ನಿಸುತ್ತೇನೆ” ಹೃದಯ ತುಂಬಿ ಹೇಳಿದಳು.
*****

One thought on “0

  1. ಸಂದರ್ಶನ ಹೀಗೂ ಉಂಟೆ?. ಕಥೆ ಮೆಚ್ಚುಗೆ ಆಯಿತು.

Leave a Reply to Krishnamurti K Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಹೆಂಡತಿಯಾಗಲಾರೆ
Next post ಮೋಂಬತ್ತಿ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys