ನಾ ಗಳಿಸಿದ್ದು ಏನು ?
ಉತ್ತರದ ಬದಲು ಸಿಕ್ಕಿದ್ದು
ಇಷ್ಟೇ.
ನಿರಂತರ ಜೀವನದ
ಆಗು – ಹೋಗು ಗಳ ಚಿತ್ರ
ಬಲು ವಿಚಿತ್ರ

ಕೆಲವರ ಗಳಿಕೆ
ಹೆಣ್ಣು ಹೊನ್ನು ಮಣ್ಣೆಂಬ
ಮಮಕಾರಗಳು,
ಕಾಸು, ಮೇಲಿಷ್ಟು
ಕೊಸರು

ಇನ್ನೂ ಕೆಲವರದು
ಮಿತಿ ಇರುವ ಮತಿ

ನಾನೂ ಗಳಿಸಬೇಕು
ಇನ್ನಾದರೂ
ಗಾಳಿ, ನೀರು,ವಾಯು,ಬೆಂಕಿ
ಭೂಮಿಗಳೆಂಬ ಐದು ಭೂತಗಳಲಿ ಒಂದಾಗುವ ಮುನ್ನ

ಈ ತನಕ ಗಳಿಸಿದ್ದು ಏನು ?
ಹಿಂದಿರುಗಿ ನೋಡಿದೆ
ತಿಳಿಯದೇ ಅಳಿದ ದಾರಿಯಲಿ
ಅಳಿಯುತ್ತ ಗಂಡಾಗಿ ಮಗನಾಗಿ
ಹುಟ್ಟುವವರಿಗೆ‌ಅಣ್ಣ ಬೆಳೆದವರಿಗೆ
ತಮ್ಮ, ತಂದೆ ಮಾವ ತಾತ

ಮತ್ತೆ ? ಮತ್ತೇನಿದೆ ?
ನಿಂತಿದ್ದೆ ಎಲ್ಲಿದ್ದೆ ಅಲ್ಲೇ
ಗಳಿಕೆ ಎಂಬುದು ವೃತ್ತದ ಪರಿಧಿ
ಮತಿಭ್ರಮಣ ಆದರೂ
ಪರಿಭ್ರಮಣ ಸೊನ್ನೆ.
*****