ಹೂವು ಸಸ್ಯದ ಅತ್ಯಾಕರ್‍ಷಕ ಭಾಗಗಳಲ್ಲೊಂದು. ಅವು ನಮ್ಮ ಜೀವನಕ್ಕೆ ಬಣ್ಣ ತುಂಬುತ್ತವೆ. ಆದರೆ ಅವುಗಳ ಚೆಲುವಿಗೇನು ಕಾರಣ? ಬಿಳಿ, ನೀಲಿ, ಕೆಂಪು, ಗುಲಾಬಿ, ಹಳದಿ, ನೇರಳೆ ಒಂದೇ ಎರಡೇ! ಅನೇಕ ವರ್‍ಣವಿನ್ಯಾಸದ ಹೂಗಳು ಹಾಗೂ ಅವುಗಳ ಎನಿಸಲಸದಳ ಛಾಯೆಗಳು. ಸಾಮಾನ್ಯವಾಗಿ ಎಲ್ಲ ಸಸ್ಯಗಳ ಎಲೆ, ಕಾಂಡ ಮತ್ತಿತರ ಭಾಗಗಳು ಹಸಿರು ಬಣ್ಣದಾಗಿದ್ದರೂ ಹೂಗಳು ಮಾತ್ರ ಬೇರೆ ಬೇರೆ ಬಣ್ಣಗಳವು ಏಕೆ?

ನಿಸರ್‍ಗದಲ್ಲಿ ಅನೇಕ ಬಣ್ಣದ ಹೂಗಳಿವೆ ಎಂದೆನಲ್ಲ. ಆದರೆ ಹೂ ಬಿಡುವ ಯವು ಗಿಡವೂ ಎಲ್ಲ ಬಣ್ಣಗಳ ಹೂ ಬಿಡಲಾರದು. ಆರ್‍ಕಿಡ್ ಗಿಡಗಳು ಕಪ್ಪುವರ್‍ಣವೊಂದನ್ನು ಬಿಟ್ಟು ಎಲ್ಲ ಬಣ್ಣದ ಹೂ ಬಿಡುತ್ತವೆ. ಕೆಂಪು, ಹಳದಿ, ಬಿಳಿ, ಗುಲಾಬಿ, ಕಿತ್ತಳೆ ಮತ್ತವುಗಳ ಆಕರ್‍ಷಕ, ಛಾಯೆಗಳ ಗುಲಾಬಿ ಹೂ ಕಾಣಬಹುದು. ಆದರೆ, ಕಡುನೀಲಿ ಅಥವಾ ಕಪ್ಪುಬಣ್ಣದ ಗುಲಾಬಿ ಹೂಗಳಿಲ್ಲ. ಡಯಾಂಥಸ್, ಟುಲಿಪ್, ಜರ್‍ ಬೆರಾಗಳಂತಹ ಹೂಬಿಡುವ ಸಸ್ಯಗಳಲ್ಲಿ ನೀಲಿ ಬಣ್ಣದ ಹೂ ಕಾಣಲಾರೆವು. ಅದೇ ರೀತಿಯಾಗಿ ಜರಾನಿಯಮ್, ಸೈಕ್ಲೋಮೆನ್ ಹೂಗಳಲ್ಲಿ ಹಳದಿ ಬಣ್ಣದ ಹೂ ಹಾಗೂ ಪದ್ಮಪುಸ್ಕರ, ಯುಸ್ಟೋಮಾ ಮತ್ತಿತರ ಸಸ್ಯಗಳಲ್ಲಿ ಕೇಸರಿ ಅಥವಾ ಕಡುವರ್‍ಣದ ಹೂಗಳನ್ನು ಕಾಣಲಾರೆವು.

ಹೂಗಳ ಬಣ್ಣಕ್ಕೆ ವರ್‍ಣದ್ರವ್ಯಗಳು ಕಾರಣ. ಅವುಗಳ ಕುರಿತು ಒಂದಿಷ್ಟು ತಿಳಿಯೋಣ. ಈ ವರ್‍ಣದ್ರವ್ಯಗಳು ಸಸ್ಯಗಳ ಜೀವಕೋಶಗಳಲ್ಲಿ ಸಣ್ಣದಾದ ಮಂಡಲಾಕೃತಿಯ ಪ್ಲಾಸ್ಟಿಡ್‌ಗಳೆಂಬ ಅಂಗಕಗಳಲ್ಲಿ ತಯಾರಾಗುತ್ತವೆ. ಪ್ಲಾಸ್ಟಿಡ್‌ಗಳಲ್ಲಿ ಮೂರು ಬಗೆ; ಲ್ಯೂಕೋಪ್ಲಾಸ್ಟ್, ಕ್ರೋಮೋಪ್ಲಾಸ್ಟ್ ಮತ್ತು ಕ್ಲೋರೋಪ್ಲಾಸ್ಟ್. ಲ್ಲೂಕೋಪ್ಲಾಸ್ಟ್ ವರ್‍ಣರಹಿತವಾದರೆ, ಕ್ರೋಮೋಪ್ಲಾಸ್ಟ್ ವಿವಿಧ ಬಣ್ಣಗಳ ಪ್ಲಾಸ್ಟಿಡ್‌ಗಳು ಮತ್ತು ಕ್ಲೋರೋಪ್ಲಾಸ್ಟ್ ಹಸಿರು ಪ್ಲಾಸ್ಟಿಡ್ಗಳು. ಸಸ್ಯಗಳಲ್ಲಿ ಕ್ಲೋರೋಫಿಲ್‌ಗಳು, ಕೆರೋಟಿನಾಯಿಡ್‌ಗಳು ಮತ್ತು ಫೈಕೋಬಿಲಿನ್‌ಗಳು ಎಂಬ ಮೂರು ಪ್ರಮುಖ ವರ್‍ಣದ್ರವ್ಯಗಳು ವಿವಿಧ ಬಣ್ಣಗಳಿಗೆ ಕಾರಣವಾಗಿವೆ.

ಕ್ಲೋರೋಫಿಲ್‌ಗಳು – ಕೊಬ್ಬಿನಲ್ಲಿ ಕರಗುವಂತಹ ಹರಿಸು ವರ್‍ಣದ್ರವ್ಯಗಳು.

ಕೆರೋಟಿನಾಯಿಡ್‌ಗಳು ಕೂಡ ಕೊಬ್ಬಿನಲ್ಲಿ ಕರಗುವಂತಹ ಹಸಿರು ವರ್‍ಣದ್ರವ್ಯಗಳು. ಅವನ್ನು ಕೆರೋಟಿನ್‌ಗಳು, ಜಾಂತೋಫಿಲ್‌ಗಳು ಮತ್ತು ಕೆರೋಟಿನಾಯಿಡ್ ಆಮ್ಲಗಳು ಎಂದು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಕೆರೋಟಿನ್‌ಗಳು ಸೂರ್‍ಯಕಿರಣದ ನೀಲಿ ಮತ್ತು ಹಸಿರು ಬಣ್ಣಗಳನ್ನು ಹೀರಿಕೊಂಡು ಹಳದಿ ಮತ್ತು ಕೆಂಪು ಬಣ್ಣಗಳನ್ನು ವಹಿಸುತ್ತವೆ. ಜಾಂತೋಫಿಲ್‌ಗಳು ಮತ್ತು ಕೆರೋಟಿನಾಯಿಡ್ ಆಮ್ಲಗಳು ಕೂಡ ಕೆರೋಟಿನಾಯಿಡ್‌ಗಳ ಗುಣಲಕ್ಷಣಗಳನ್ನು ಹೋಲುತ್ತವೆ.

ಫೈಕೋಬಿಲಿನ್‌ಗಳು ನೀರಿನಲ್ಲಿ ಕರಗುವಂತಹ ನೀಲಿ ಮತ್ತು ಕೆಂಪು ಬಣ್ಣದ ವರ್‍ಣದ್ರವ್ಯಗಳು. ಅವುಗಳನ್ನು ಫೈಕೋಸಯಾನಿನ್ ಮತ್ತು ಫೈಕೋಎರಿಥ್ರಿನ್‌ಗಳೆಂದು ವಿಂಗಡಿಸಲಾಗಿದೆ. ಫೈಕೋಸಯಾನಿನ್ ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳನ್ನು ಹೀರಿಕೊಂಡು ನೀಲಿ ಬಣ್ಣವನ್ನು ವಹಿಸುತ್ತದೆ. ಫೈಕೋಎರಿಥ್ರಿನ್ ನೀಲಿ, ಹಸಿರು ಮತ್ತು ಹಳದಿ ಬಣ್ಣಗಳನ್ನು ಹೀರಿಕೊಂಡು ಕೆಂಪು ಬಣ್ಣವನ್ನು ವಹಿಸುತ್ತದೆ.

ಈಗ ಮತ್ತೆ ಹೂವಿನ ಬಣ್ಣಕ್ಕೆ ಬರೋಣ. ವಿವಿಧ ಬಗೆಯ ವರ್‍ಣದ್ರವ್ಯಗಳು ವಿವಿಧ ಪ್ರಮಾಣದಲ್ಲಿ ಕೂಡಿದಾಗ ಹೂಗಳ ವಿವಿಧ ಬಣ್ಣಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಕೆಂಪು ಬಣ್ಣದ ಹೂವಿದೆ ಎಂದಿಟ್ಟುಕೊಳ್ಳಿ. ಆ ಬಣ್ಣವು ಈ ಎರಡು ಕಾರಣಗಳಿಂದ ಬರಬಹುದು. ಒಂದು – ಕೆಂಪು ಫ್ಲಾವಿನಾಯಿಡ್‌ಗಳ ಉಪಸ್ಥಿತಿಯಲ್ಲಿ ಮತ್ತು ಕ್ಲೋರೋಫಿಲ್, ಕೆರೋಟಿನಾಯಿಡ್‌ಗಳ ಅನುಪಸ್ಥಿತಿಯಲ್ಲಿ. ಎರಡು – ಊದಾ ಫ್ಲಾವಿನಾಯಿಡ್ ಹಾಗೂ ಕಿತ್ತಳೆ ಕ್ಯಾರೋಟಿನಾಯಿಡ್‌ಗಳ ಮಿಶ್ರಣದಿಂದ.

ಎಂಟೀರ್‍ಹಿನಮ್, ಡಯಾಂಥಸ್, ಪೇಟುನಿಯಾ, ಗುಲಾಬಿ ಮತ್ತು ಟುಲಿಪಾ ಹೂಗಳಲ್ಲಿ ಗುಲಾಬಿ, ನೇರಳೆ, ಕೆಂಪು, ನೀಲಿ, ಕೇಸರಿ ಮತ್ತು ರಕ್ತವರ್‍ಣದ ಬಣ್ಣಗಳಿಗೆ ಅಂತೋಸಯಾನಿನ್ ಎಂಬ ವರ್‍ಣದ್ರವ್ಯವೇ ಕಾರಣವಾಗಿದೆ. ಹಳದಿ ಫ್ಲಾವಿನಾಯಿಡ್‌ಗಳು ಮತ್ತು ಅಂತೋಸಯಾನಿನ್‌ಗಳ ಮಿಶ್ರಣದಿಂದ ಕಂದು ಬಣ್ಣ ಬರುತ್ತದೆ.

ಹೂವಿನ ಹಿನ್ನೆಲೆಯೂ ಕೂಡ ಹೂವಿನ ಆಕರ್‍ಷಣೆಗೆ ಕಾರಣವಾಗುತ್ತದೆ. ಹಳದಿ ಹಿನ್ನೆಲೆಯ ಮೇಲೆ ಅಂತೋಸಯಾನಿನ್ ಕಾರಣವಾಗಿ ಕಿತ್ತಳೆ ಬಣ್ಣ ಬರುತ್ತದೆ. ಎಂಟೀರ್‍ಹಿನಮ್, ಡಯಾಂಥಸ್, ಚೀನಾ ಎಸ್ಟರ್‍, ಡೇಲಿಯಾ ಹೂಗಳಲ್ಲಿಯ ಕಿತ್ತಳೆ,-ಹಳದಿ ಮತ್ತು ಕಿತ್ತಳೆ-ಕೆಂಪು ಬಣ್ಣಗಳಿಗೆ ಅಂತೋಸಯಾನಿನ್ ಮತ್ತು ಹಳದಿ ಫ್ಲಾವಿನಾಯಿಡ್‌ಗಳ ಮಿಶ್ರಣವೇ ಕಾರಣ.

ಹಳದಿ ಕ್ಯಾರೋಟಿನಾಯಿಡ್‌ಗಳೂ ಮತ್ತು ಅಂತೋಸಯಾನಿನ್‌ಗಳು ಒಟ್ಟಿಗೆ ಕೂಡಿರುವುದರಿಂದ ಪ್ರೇಶಿಯಾ, ಜರ್‌ಬೆರಾ, ಗುಲಾಬಿ ಮತ್ತು ಝೀನಿಯಾಗಳಂತಹ ಅಲಂಕಾರಿ ಸಸ್ಯಗಳಲ್ಲಿ ಕಂಡುಬರುವ ಕಿತ್ತಳೆ ಛಾಯೆಗಳಿಗೆ ಕಾರಣವಾಗಿದೆ. ಅದೇ ರೀತಿಯಾಗಿ ಹಳದಿ ಕ್ಯಾರೋಟಿನಾಯಿಡ್ ಹಿನ್ನೆಲೆ ಮೇಲೆ ಕೆಂಪು ಅಥವಾ ಮೆಜೆಂಟ ಅಂತೋಸಯಾನಿನ್‌ವು ಕಂದು ಬಣ್ಣಕ್ಕೆ ಕಾರಣವಾಗುತ್ತದೆ.

ಮಣ್ಣಿನ ಪಿ.ಎಚ್. ಮೌಲ್ಯವೂ ಕೂಡ ಹೂ ಬಣ್ಣಕ್ಕೆ ಕಾರಣವಾಗುತ್ತದೆ. ಉದಾಹಣೆಗೆ; ಹೈಡ್ರಾಂಜಿಯಾ ಎಂಬ ಅಲಂಕಾರಿಕ ಸಸ್ಯದ ಹೂವಿನ ಗುಲಾಬಿ ಬಣ್ಣಕ್ಕೆ ೬.೦ ಪಿ. ಎಚ್. ಮೌಲ್ಯ ಕಾರಣವಾದರೆ, ೫.೫ ನಷ್ಟು ಪಿ.ಎಚ್ ಮೌಲ್ಯ ನೀಲಿ ಬಣ್ಣಕ್ಕೆ ಕಾರಣವಾಗುತ್ತದೆ.

ಅದೇ ರೀತಿ ಬೆಳಕು ಮತ್ತು ಉಷ್ಣತೆಯೂ ಕೂಡ ಹೂ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಜಾತಿಯ ಆರ್‍ಕಿಡ್‌ಗಳ ಹೂಗಳು ಕಡಿಮೆ ಉಷ್ಣತೆಯಲ್ಲಿ ಹೆಚ್ಚು ಕಾಂತಿಯುಕ್ತವಾಗಿರುತ್ತವೆ. ಹೂವಿನ ಬೆಳವಣಿಗೆಯ ಸಮಯದಲ್ಲಿ ಬೆಳಕಿನ ತೀವ್ರತೆಯು ಕಂಪಿಸುವ ವರ್‍ಣಯೋಜನೆಗೆ ಕಾರಣವಾಗುತ್ತದೆ.

ವಯೋಗತಿಯೂ ಕೂಡ ಹೂ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಹೂ ಅರಳಿ ಸಮಯವಾಗುತ್ತಾ ಹೋದಂತೆ ಹೂವಿನ ಬಣ್ಣ ಬದಲಾಗುತ್ತ ಹೋಗುತ್ತದೆ. ಉದಾಹರಣೆಗೆ ಮುಂಜಾನೆಯ ಚೆಲುವೆ “ಐಪೋಮಯಾ” ಹೂಗಳು ಅರಳಿದಾಗ ಗುಲಾಬಿ ವರ್‍ಣದಾಗಿದ್ದು, ಕೆಲವು ಗಂಟೆಗಳ ನಂತರ ನೀಲಿ ಬಣ್ಣಕ್ಕೆ ತಿರುಗಿ ಮತ್ತೆ ಕೊನೆಗೆ ಗುಲಾಬಿ ಬಣ್ಣ ತಾಳಿ ಬಾಡಿ ಹೋಗುತ್ತವೆ. ಹೀಗೆ ಹೂಗಳ ಬಣ್ಣಕ್ಕೆ ಪರಿಸರದ ಮತ್ತು ಅನುವಂಶಿಕ ಅಂಶಗಳು ಪರಿಣಾಮ ಬೀರುತ್ತವೆ.

ಪ್ರತಿ ಸಸ್ಯವೂ ಎಲೆಗಳಿಗೆ ಹಸಿರು ಬಣ್ಣವನ್ನು ಉಳಿಸಿ ಇತರ ಬಣ್ಣಗಳನ್ನು ಹೂಗಳಿಗೆ ನೀಡುವುದು ಹೇಗೆಂಬುದನ್ನು ಆಯಾ ಸಸ್ಯದ ಜೀನ್‌ಗಳಲ್ಲಿ ನಿಸರ್‍ಗ ತನ್ನದೇ ಆದ ಸೂಚನೆಗಳ ಮೂಲಕ ಅಡಗಿಸಿಟ್ಟಿದೆ. ಆದ್ದರಿಂದಲೇ ಒಂದು ಜಾತಿಯ ಸಸ್ಯ ಜಗತ್ತಿನ ಯಾವ ಮೂಲೆಯಲ್ಲಿ ಬೆಳೆದರೂ ಕೂಡ ಒಂದೇ ಬಗೆಯ ಹೂ ಬಿಡುತ್ತದೆ.

ಕೃಪೆ: ಸೈನ್ಸ್ ರಿಪೋರ್‍ಟರ್‍
*****