ಹಾಸಿಗೆಯ ಮೇಲಿನ ಮೆತ್ತನೆ ದಿಂಬಿನ ಹಾಗೆ,
ಗರ್ಭಿಣಿ ತಾಯಿಯ ಹೊಟ್ಟೆಯ ಹಾಗೆ,
ನೆಲ ಅಲ್ಲಿ ಉಬ್ಬಿ ಕೊಂಡಿತ್ತು.
ಅಷ್ಟು ಇಲ್ಲಷ್ಟು,
ಮನೆಯಲ್ಲಿ ಮತ್ತು ಮಲಗುವ ಮನೆಯಲ್ಲಿ
ಅಲಂಕಾರಕ್ಕೆ ಇಡುವ ಹಾಗೆ,
ಯಾರೂ ಕೀಳದ ಕೆಂಪು ಕೆಂಪು, ಬಣ್ಣ ಬಣ್ಣ
ಹೂವಿನ ಗಿಡ ಇತ್ತು.
ಕತ್ತಲಾಗುತ್ತಿರುವ ಸೂರ್ಯನು
ಆಗತಾನೇ ಹುಟ್ಟಿದ ಚಂದ್ರನಷ್ಟು ಕೆಂಪಗೆ ಇದ್ದ.
ನಮ್ಮಿಬ್ಬರ ಕೈಗಳು ಭದ್ರವಾಗಿ,
ಸಿಮೆಂಟು ಹಾಕಿದ ಹಾಗೆ ಹಿಡಿದಿದ್ದೆವು.
ನಮ್ಮ ಕಣ್ಣಿನ ನೋಟಗಳು ಒಂದಕ್ಕೆ ಒಂದು
ಮತ್ತೆ ಮತ್ತೆ ಹೊಲಿದುಕೊಂಡಿದ್ದೆವು.
ಭಾರ ಹೊತ್ತ ತೊಲೆಗಳ ಹಾಗೆ ಕೀಲಿಸಿಕೊಂಡಿದ್ದೆವು.
ಎರಡು ಗಿಡಗಳನ್ನು ಕಸಿಮಾಡಿದ ಹಾಗೆ
ಬೆರಳುಗಳು, ಕಣ್ಣು, ಓ ಇಡೀ ನಾವು ಕೂಡಿದ್ದೆವು.
ಎರಡು ಸಮಾನ ಬಲದ ಚದುರಂಗ ಸೈನ್ಯ ಕಲ್ಪಿಸಿಕೊಳ್ಳಿ.
ಯುದ್ಧ ಮಾಡುತ್ತಿವೆ, ಘೋರಯುದ್ಧ, ಜಯವು ಯಾರಿಗೋ
ಎಂದು ಅನುಮಾನಪಡುತ್ತಾ ಆಕಾಶದಲ್ಲಿ ಜಯಲಕ್ಷ್ಮಿ
ಹಾರ ಹಿಡಿದು ಚಿಂತಾಮಗ್ನಳಾಗಿದ್ದಾಳೆ.
ಅವಳ ಚಿಂತೆಗೆ ಇಡೀ ಇತಿಹಾಸದ ಬೆಲೆ,
Silly.
ಬಹುಶಃ ಹಾಗೆ, ಆ ಥರ
ನಮ್ಮ ನಿಜವಾದ ನಾವುಗಳು ಅಂದರೆ, ನಮ್ಮ ಆತ್ಮಗಳು ನಮ್ಮ ಹೊರಗೆ ಅಥವಾ ತೀರ ಒಳಗೆ ಅಲ್ಲಿದ್ದವು.
ನಾವು ದೇವಸ್ಥಾನದಲ್ಲಿ ಕಂಬಗಳ ಮೇಲೆ
ಚಾವಣಿಯ ತೊಲೆ ಹೊತ್ತು ನಿಂತ
ಬೊಂಬೆಗಳ ಹಾಗಿದ್ದೆವು.
ಇದು ಒಂದು ದಿನ ಅಲ್ಲ,
ಪ್ರತಿದಿನ, ಇನ್ನೂ ಎಷ್ಟೋ ದಿನ
ದಿನವೂ ಅಲ್ಲೇ ಹಾಗೇ ಇರುತ್ತೇವೆ.
ದಿನವೆಲ್ಲ ಹಾಗೇ ಇದ್ದರೂ ನಾವು ಮಾತಾಡಲ್ಲ.
ಆದರೆ ನಮ್ಮಲ್ಲಿ ಸೆರೆಹಿಡಿದಿಟ್ಟಿದ್ದ ಆತ್ಮಗಳು
ಅಲ್ಲಿ ಸೇರಿ ಶೃಂಗ ಸಭೆ ನಡೆಸುತ್ತವೆ.
ಆಗ ಅವನು ಬಂದರೆ,
ಆ ಅವನು ನೀನೇ ಅಂತ ಇಟ್ಟು ಕೊಳ್ಳಿ,
ಅವನಿಗೂ, ಬೇಕಾದರೆ, meeting ನಲ್ಲಿರುವ
ಆತ್ಮಗಳ ಮಾತು ಅರ್ಥ ಆಗುತ್ತೆ.
ನಿಜವಾದ ಪ್ರೇಮ ಅಂದರೆ ಏನು ಅಂತ ತಿಳಿಯುತ್ತೆ.
ಆದರೆ ಯಾವ ಆತ್ಮ ಯಾವ ಮಾತು ಆಡುತ್ತೆ
ಅಂತ ಗೊತ್ತಾಗಲ್ಲ ಅಷ್ಟೆ.
ಯಾಕೆಂದರೆ ಒಂದಾದ ಆತ್ಮಗಳ ಮಾತು
ಒಂದೇ ಥರ ಇರುತ್ತೆ;
‘ನೀನು’ ಮತ್ತು ‘ನಾನು’
ಹೀಗೆ ‘ನಾವು’ ಆದಾಗ
ಏನೋ ಒಂದು
ಹೊಸಾ ಹೊಸ ಬೆಳಕು ಹಾಯಾಗಿ
ಬೀಸುತ್ತದೆ.
ಬೆಂಕಿಯಲ್ಲಿ ಸುಡದೆ ಇರೋಂಥಾದ್ದು,
ಎಲ್ಲಾ ಕಡೆ ಮತ್ತು ಎಲ್ಲಾದರ ಒಳಗೆ ಇರೋಂಥಾದ್ದು,
ಮತ್ತು ಎಲ್ಲಾ ಗೊತ್ತಿರೋಂಥಾದ್ದು ಅಂತ ಅನ್ನುತಾರಲ್ಲ
ಅದು ನಮ್ಮನ್ನು ಹೀಗೆ ತೊಡಗಿಸುತ್ತದೆ.
ಆದರೆ ಅಂಥಾದ್ದು ಎಲ್ಲಿದೆ,
ಅದರಿಂದ ನಾವು ಯಾಕೆ ಹೀಗೆ ತೊಡಗಿಕೊಳ್ಳಬೇಕು ಗೊತ್ತಿಲ್ಲ
ಅದು ಇದಾಗುತ್ತೆ, ಇದು ಅದಾಗುತ್ತೆ,
ಪ್ರೀತಿಯಲ್ಲಿ ಏನೇನೋ ಸೇರಿ
ಬೇರೆ ಇನ್ನೇನೋ ಒಂದು ಆಗುತ್ತೆ.
ಒಂದೇ ಹೂವಿನಲ್ಲಿ ಬಣ್ಣ ಇರಲ್ಲವೇ,
ಆಕಾರ ಇರಲ್ಲವೇ, ವಾಸನೆ ಇರಲ್ಲವೇ,
ಅದೇನೇ ಮತ್ತೆ ಹಣ್ಣು ಇತ್ಯಾದಿ ಆಗಲ್ಲವೇ,
(ಕೊಳೆಯೊಲ್ಲವೇ) ಹಾಗೆನೇ ಪ್ರೀತಿಯೂ ಕೂಡ.
ನಮ್ಮಿಬ್ಬರ ಆತ್ಮದಿಂದ ಬಂದಿದ್ದು
ನಾನೂ ನೀನೂ ಹಾಗೆ ಇರುತ್ತಾ
ಇದು ಮೊದಲು ಏನೂ ಇಲ್ಲದೆ ಇದ್ದ ಕಡೆಯಿಂದ ಹುಟ್ಟಿ ಬರುತ್ತೆ.
ಬೆಳೆಯುತ್ತಾ ಹೋಗುತ್ತೆ. ಹಾಗೇ ಇರುತ್ತೆ.
(ನಾನಿಲ್ಲದೆ ಹೋದರೂ ನಮ್ಮಂಥವರು
ಕೊಟ್ಟ ಅರ್ಥ ಇತಿಹಾಸವಾಗಿ ಇರುತ್ತೆ.)
ಬೆಳೆಯುತ್ತಾ ಹೋಗುತ್ತೆ!
ಹೋಗುತ್ತೆ? ಎಲ್ಲಿಗೆ?
ಅದು ಆಗ, ನಾವು ಎಲ್ಲೆಲ್ಲಿಗೆ ಹೋಗುತ್ತಿದ್ದೆವೋ ಅಲ್ಲಿಗೆ.
ನಾವು ಹೋಗುತ್ತಿದ್ದಾಗ, ಆಗ,
ಸೂರ್ಯ ಆಕಾಶದ ಮಧ್ಯೆ ದೊಡ್ಡವನಾಗುತ್ತಿದ್ದಾಗ,
ನಾವು ಬಹುದುಗಳ ಸಾಧ್ಯಗಳ, ಬಹುಶಃಗಳ, ಆದರೂಗಳ
ಮಧ್ಯೆ ಹಂಚಿ ಹೋಗುತ್ತಿದ್ದಾಗ,
ನಮ್ಮ ಮಧ್ಯೆ ಮತ್ತು ಮೂಲಕ
ಸೂರ್ಯ ಚಂದ್ರರು ಹರಿದು ಹೋಗುತ್ತಿದ್ದಾಗ,
ಆ ಅನುಭವಕ್ಕೆಲ್ಲ ಎಷ್ಟೊಂದು ಬೆಲೆ ಇತ್ತು.
ಈಗ
ಮುಳುಗುವ ಸೂರ್ಯ
ಹುಟ್ಟುವ ಚಂದ್ರ
ಎಲ್ಲರನ್ನೂ ದಾಟಿ ಬಂದಿದ್ದೇವೆ.
ನಮ್ಮ ಕೈಯ ಬಿಗಿ
ಮೈಯ ಬಿಸಿ
ಮನಸ್ಸಿನ ಆಸೆ
ಹೇಗಿತ್ತು ಎಂಬುದು
ಯಾವುದೂ
ಈ ಕಾಲು ದಾರಿಯಲ್ಲಿ ಹೋಗುವ ಅವನಿಗೆ
ಗೊತ್ತಾಗಲ್ಲ,
ಅವನಿಗೆ
ನಮ್ಮ ತಲೆಯ ಹತ್ತಿರ ಇರುವ ಕಲ್ಲಿನಮೇಲೆ
ಕೆತ್ತಿದ ನಮ್ಮ ಹೆಸರು ಕಾಣುತ್ತದೆ ಅಷ್ಟೆ.
ಅದರೆ ನಾವು ಬರಿಯ ಹೆಸರಲ್ಲ.
ನಮ್ಮ ಇತಿ ಹಾಸಕ್ಕೆ ನಾವೇ ಕೊನೆ,
ನಾವೇ ಬೆಲೆ
ನಾವು ಅವನಿಗೆ ಅರ್ಥ ಆಗಲ್ಲ.
ನಾನು ಆಗಲೇ ಹೇಳಿದ್ದು ತಪ್ಪು,
ಅವನು ಮಾಡಿಕೊಳ್ಳುವ ಅರ್ಥ
ನಮ್ಮ ಅರ್ಥ ಆಗಲ್ಲ.
*****