ಪದಗಳೆಂದರೆ ನನಗೆ ಅಚ್ಚುಮೆಚ್ಚು
ದಿನಂಪ್ರತಿಯ ಅಭ್ಯಾಸವೂ
ಪದಗಳ ಹೊಸೆಯುವುದರಲ್ಲಿ,
ಮಸೆಯುವುದರಲ್ಲಿ:
ಆದರೆ ಆ ಪದಗಳಿಗೆ ಶಬ್ದಕೋಶದಿ
ಅರ್ಥಗಳ ಹುಡುಕಿ ಸೋತಿದ್ದೇನೆ.

ಹೊಸ ಹಾಡಿಗೆ ಕುಣಿದಾಡುವ
ನವಿಲುಗಳ ದಾರಿ ಕಾಯುತ್ತ,
ನಾನೇ ನವಿಲಾಗಬಯಸುತ್ತೇನೆ.
ಮತ್ತೆ ಕುಕಿಲದ ಗಾನಕ್ಕೆ ಪದ ಜೋಡಿಸಿ
ಶ್ರುತಿ ಕೂಡಿಸಿ ಹಾಡಾಗ ಬಯಸುತ್ತೇನೆ.

ಪದಗಳು ಪರಾರಿಯಾಗುತ್ತವೆ
ಆಗೊಮ್ಮೆ ಈಗೊಮ್ಮೆ ಸುಳಿವುಕೊಡದೆ,
ಪಕ್ಕಾ ಪರದೇಶಿಯಂತೆ.
ಹಳಹಳಿಸಿ ನೋಡುತ್ತೇನೆ:
ಪದಗಳ ಜೋಡಿಸಿ ಇಡಲಾಗದ್ದಕ್ಕೆ.

ನಡುರಾತ್ರಿಯಲ್ಲಿ ಕಂದೀಲ ಬೆಳಕಿನಲ್ಲಿ
ನಡಗುವ ಕೈಗಳು
ಆಡಿಯಾಡುತ್ತವೆ ಕೆತ್ತಿದ ಪದಗಳ ಮೇಲೆ,
ಕಂಗಳಿಂದ ಉದುರಿದ ಮುತ್ತೊಂದು
ಕರ ಸೋಕಿದಾಗ ಎಚ್ಚರ ಗೊಳ್ಳುತ್ತವೆ ಪದಗಳು,
ಸಡಿಲವಾಗಿಲ್ಲ ಎಲ್ಲಪದಗಳು
ಅವಕ್ಕೆ ಸಂದೂಕದ ಪೆಟ್ಟಿಗೆಯಲ್ಲಿಟ್ಟು
ಕಾಪಿಡು ಎನ್ನುತ್ತದೆ ಮನಸ್ಸು.

ಪದಗಳೆಂದರೆ ನನಗೆ ಅಲರ್ಜಿ
ನನ್ನೊಳಗಿನ ನನ್ನನ್ನು
ಹೊರಗಟ್ಟಿ ಅಣಕಿಸಿ ನಗುತ್ತವೆ.
ಹಾಡಾಗುವ ಬದಲು ಹಾವಾಗಿ
ಹಗೆಯ ಹೊಗೆ ಹಬ್ಬಿಸುತ್ತವೆ

ಪದಗಳೆಂದರೆ ನನಗೆ ಅಲರ್ಜಿ
ಪಟ್ಟಾಂಗದಲ್ಲಿ ಪದಗಳ ಭರ್ಜರಿ
ಬೇಟೆಯಾಡುವ ನಾನು
ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ.

ಪದಗಳೆಂದರೆ ಅಚ್ಚುಮೆಚ್ಚು ಅಲರ್ಜಿ ನನಗೆ
ಪರಪರನೆ ಕೆರೆದುಕೊಳ್ಳುವ ಚಟವಿದ್ದ ಹಾಗೆ.
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)