ನವ್ಯದಪಿತಾಮಹರೆಂದು ವಿಮರ್ಶಕಜನ
ಕಟ್ಟಿದರೂನು ನಿಮಗೆ ಪಟ್ಟ
ಏರಲಿಲ್ಲ ನೀವಾ ಅಟ್ಟ

ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು
ಹಿಡಿದಿರಿ ನಿಮ್ಮದೆ ದಿಕ್ಕು
ನೀವು ಸುಮ್ಮನೆ ನಕ್ಕು

ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ
ಸರ್ವರನು ನಾಚಿಸುವ ತರ
ಗ್ರಹಿಸಿದ್ದು ಸಂಸಾರ ಸಾರ

ಇನ್ನು ಮುಗಿಯಿತು ದಾರಿಯೆನ್ನುತಿರುವಂತೆಯೆ
ಕಾಣಿಸುವುದಿನ್ನೊಂದು ತಿರುವು
ಹೊಸ ಮಾತುಗಳ ಬರವು

ಆಚೆ ಆತ್ಮದ ಶೋಧ ಈಚೆ ಕಾಂತನ ವಿಷಾದ
ನಡುವೆ ಸಲ್ಲುವ ಕಾಲ
ಪಡೆದು ಸರ್ವಸ್ವ ಫಲ
*****