ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ
ಅನ್ನದ ಅಗುಳು
ಕಲಾವಿದ ಕೊಂಚ ಕೊಂಚ
ಬಲಗೈಯೂರಿ ಒತ್ತತೊಡಗಿದ ಕುಂಚ.
ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು
ಎನ್ನುತ್ತ ಕವಿತೆ ಬರೆಯತೊಡಗಿದ.

ಅದು ಬರಿಯ ಒಂದು ನೋಟವಲ್ಲ
ಒಂದು ಆಟ, ಒಂದು ಅಧ್ಯಾಯ
ಮತ್ತೆ ಪುಟ ತಿರುವಿ ಬಳಿಯಬೇಕು
ವರ್ಣಗಾಥೆ – ಬಣ್ಣ ಬಣ್ಣಗಳಲ್ಲಿ

ಕೈಯ ಹಿಂಡತೊಡಗಿತು ಕುಂಚ
ಆಕುಂಚಿಸಿ ಸೆಟೆದುಕೊಳ್ಳುತ್ತ.
ಚುಕ್ಕಿಗಳ ಜೊತೆಗೇಕೆ ಚಂದಿರ?
ಉತ್ತರವಿಲ್ಲ ಕಲಾವಿದನಲ್ಲಿ.

ಬರೆದ ಚಿತ್ರದ ಅಡಿಗೆ ಕೊಂಚಕೊಂಚವೇ ಅದೆಷ್ಟೋ
ಕುಂಚಗಳ ಸೃಷ್ಟಿಯಾಗತೊಡಗಿತು.
ಈಗ ಹತ್ತಾರು ನೂರಾರು ಕುಂಚಗಳು
ಎದ್ದು ಬರತೊಡಗಿದವು. ಚಿತ್ರಪಟದಿಂದ
ಗಾಬರಿಗೊಂಡ ವಿಹ್ವಲಿತನಾದ ಕಲಾವಿದ
ಮುಖತಿರುವಿ ಮರೆಯಾಗಬಯಸಿದ.

ಸೂಜಿ ಇರಿತಕ್ಕಿಂತ ಆಳವಾಗಿ ಕುಂಚ
ಕುಕ್ಕತೊಡಗಿತು. ಇಂಚು ಇಂಚಿಗೂ ಬಿಡದೆ
ತೊಟ್ಟಿಕ್ಕುವ ರಕ್ತದೊಂದಿಗೆ ಕಲಾವಿದ
ಹಿಂಗಾಲಲ್ಲಿ ನಡೆಯತೊಡಗಿದ.
ಕಾಲಲ್ಲಿ ಎನೋ ಸಿಕ್ಕಂತಾಗಿ ಎಡವಿಬಿದ್ದ
ಅಂಗಾತಾಗಿ, ಚಿತ್ರಪಟದ ಚಾರಕಲ ಚುಕ್ಕಿಗಳ
ಮಧ್ಯೆ ಈಗ ರಕ್ತಸಿಕ್ತ ಗುಳಿಬಿದ್ದ ಮುಖದ
ಅವನಿದ್ದಾನೆ
*****