ಮನೆಯ ಹಿಂದಿನ ಗಲ್ಲಿಯಲ್ಲಿ
ಮುಸ್ಸಂಜೆಯ ಸಮಯದಲ್ಲಿ
ಎದುರಾಯಿತೊಂದು ಬೆಕ್ಕು
ಮೂಡಿತ್ತು ಅಲ್ಲಲ್ಲಿ ಸುಕ್ಕು

“ಸಾರ್!” ಎಂದು ತಡೆಯಿತು
“ಸಿಗಲಿಲ್ವೆ ನನ್ನ ಗುರುತು?
ಮುಖಾಮುಖಿಯಂಥ ಪದ್ಯ
ಕನ್ನಡದಲ್ಲಿ ಸದ್ಯ
ಇನ್ನೊಂದಿಲ್ಲ ಸಾರ್
ಒಂದೆಂಟಾಣಿ ಕೊಡಿ ಸಾರ್!”

ಜೋಲು ಮೋರೆ ಹಾಕಿತು ಬೆಕ್ಕು
ಏನೇನೋ ನೆನಪುಗಳಲ್ಲಿ ಸಿಕ್ಕು
ನಡೆದು ಬಂದ ದಾರಿಗಳೆ?
ಹುಡುಕಾಡಿದ ಗಲ್ಲಿಗಳೆ?
ನಾನೆಲ್ಲಿ ನೊಡಿರಲಿಲ್ಲ
ನಮ್ಮ ವಠಾರದಲ್ಲಿ ನಾಯಿಗಳೆ ಎಲ್ಲ

ಕೋರಿತು ಬೆಕ್ಕು: “ಸಾಕ್ಕೊಳ್ಳಿ ಸಾರ್ ನನ್ನ
ನನಗೆ ಬೇಕಾದ್ದು ಬರೀ ಅನ್ನ
ಕವಿತೆ ಮತ್ತು ವಾಸ್ತವತೆಗಿರೋ ಅಂತರ
ದಾಟಿಬಿಡಿ ನನ್ನ ಮುಖಾಂತರ!”

ಯಾವ ವಿಮರ್ಶಕನೂ ಹೀಗೆ
ಹೇಳಿರಲಿಲ್ಲ ನನಗೆ
“ಆಗೋಲ್ಲಪ್ಟ” ಎಂದೆ
“ಇಲ್ಲೆಲ್ಲ ಬರೀ ನಾಯಿಯ ದಂಧೆ”
ಕೊಟ್ಟೆ ಒಂದು ರೂಪಾಯಿ
ಮಿಯಾಂ ಎಂದಿತು ಬಡಪಾಯಿ

ಎಂದಾದರೂ ಸಿಗುವ ಹೀಗೆ
ಎಂದು ಮರೆಯಾಯಿತು ಬಂದ ಹಾಗೆ
ಮುಳುಗಿದ ನಾನು ಚಿಂತೆಯಲ್ಲಿ
ಕವಿಗಳಿಗೆ ಸಹಜ ರೀತಿಯಲ್ಲಿ

ಆಹಾ! ಅದೇನು ಸದ್ದು ?
ಯಾರು ಕಿಟಾರನೆ ಕೂಗಿದ್ದು ?
ಒಂದು ಬೆಕ್ಕಿನ ಆಕ್ರಂದನ
ಗೊತ್ತಿರಲಿಲ್ಲಿವೆ ನನಗೆ ಆ ಕ್ಷಣ!
*****

Latest posts by ತಿರುಮಲೇಶ್ ಕೆ ವಿ (see all)