ಮಳೆ ಬರಲಿ….
ಆದರೆ
ಹಸಿರು ಹೊಲಗದ್ದೆಗಳನ್ನೂ
ರೈತರ ಸುಖ ನಿದ್ದೆಗಳನ್ನೂ
ಕಸಿದುಕೊಳ್ಳದಿರಲಿ.

ಮಳೆ ಬರಲಿ….
ಆದರೆ
ಹುಲ್ಲಿನ ಛಾವಣಿಗಳನ್ನೂ
ಮಣ್ಣಿನ ಗೋಡೆಗಳನ್ನೂ
ಕೆಡವಿ ಹಾಕದಿರಲಿ.

ಮಳೆ ಬರಲಿ….
ಇರಲೊಂದು ಪುಟ್ಟ ಮನೆ
ಹೊದೆಯಲು ಬೆಚ್ಚನೆಯ
ಕಂಬಳಿ ಎಲ್ಲರಿಗೂ ಸಿಗಲಿ.

ನೊಂದ ಬಯಲುಗಳಿಗೆ
ಬೆಂದ ಬೆಟ್ಟಗಳಿಗೆ
ಬಾಯಾರಿದ ಕೆರೆ ಬಾವಿ
ಹಳ್ಳ ಕೊಳ್ಳಗಳಿಗೆ-
ಬರಲಿ ಮಳೆ ಬರಲಿ.

‘ಧೋ’ ಎಂದು ಸುರಿದು
ಹೊರಟು ನಿಂತಾಗ
ನೆಲ-ಮುಗಿಲು ನಗಲಿ
ಏಳು ಬಣ್ಣಗಳಲ್ಲಿ.
*****