-೧-
ಆಕಾಶವ ದಿಟ್ಟಿಸಿದೆ
ಅಹಂಕಾರ ಮರೆಯಾಯ್ತು

ಹಕ್ಕಿಗಳ ನೇವರಿಸಿದೆ
ಕನಸುಗಳು ಚಿಗುರೊಡೆದವು

ದಂಡೆ ಬಳಿ ನಡದೆ
ವಿನಯ ಅರ್ಥ ಹೊಳೆಯಿತು
*****

-೨-

ಇಕ್ಕಾಟ್ಟಾದ ದಾರಿಯಲಿ
ನಡೆದ ಹುಡುಗಿ
ತನ್ನಷ್ಟಕ್ಕೆ ತಾನೇ
ನಗುತ್ತಿದ್ದಳು
ಅವಳ
ಒಳಗೆ
ಕಚಗುಳಿ ಇಡುತ್ತಿದ್ದ
ಪ್ರೇಮ
ಹೊರಗೆ
ಇಣುಕುತ್ತಿದ್ದುದು
ಅವಳಿಗೆ ಮಾತ್ರ
ಕಾಣುತ್ತಿರಲಿಲ್ಲ
*****

-೩-
ಬಂದು ಬಿಡು ಒಮ್ಮೆ
ಭೂಮಿಯ ಎದೆಗಿಳಿದ ಮಳೆಯಂತೆ
ದುಮ್ಮಿಕ್ಕುವ ಜಲಧಾರೆಯಂತೆ
ತಾಯ ಒಡಲು ಬಾಯಾರಿದೆ
ತಣಿಸಿಬಿಡು ಎಂದು ಮುಗಿಯದ
ಚಿರಂತನ ದಾಹವ
*****