ಈ ಮುಸ್ಸಂಜೆಯಲಿ ಮೃದುವಾಗಿ
ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ
ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ

ಮಗುವಾಗಿ ಅತ್ತ ದಿವಸಗಳ ಮರೆತರೆ
ಹಕ್ಕಿ ಹಾಡು ಎದೆಗಿಳಿಯುವದಿಲ್ಲ
ತಾಯ ಹಾಡು ಆಕಾಶಗಂಗೆಯ
ಬಿಳಿ ಹಾದಿಯಾಗುವದಿಲ್ಲ.

ಚಂದ್ರನ ತಿಳಿ ಬೆಳದಿಂಗಳ ಕಣ್ಣಕಾಂತಿ
ಬೆಚ್ಚನೆಯ ದೇವರ ಮನೆಯಲ್ಲಿ ರಿಂಗಣಿಸಲು
ಸಂಜೆಗೆ ಮೀರಿದ ನೀಲಿಬಾನು ನಕ್ಷತ್ರಗಳ ಮಿಂಚು
ಹಕ್ಕಿ ಗುಟುರುಗಳಲ್ಲಿ ಪ್ರತಿಫಲಿಸಬೇಕು.

ಹಕ್ಕಿ ಮನಸ್ಸಿನ ಸಮ್ಮಿಶ್ರ ಭಾಷೆ
ಪಲಕು ಗುಟುಕುಗಳಾಗಿ ಉಳಿದು
ತಾಯಿಮಾತು ಹಕ್ಕಿಸ್ಪರ್ಶ ನಾದ ನಾದ
ಮುಗ್ಧ ಮಗುವಿನ ತೊಡೆಯ ನುಡಿ ಹೂವರಿಳಿಸಬೇಕು.

ಹಕ್ಕಿ ಬಾನಬಯಲ ಆಟದ ಹಾರಾಟ
ಬಟ್ಟೇ ಬೀಸುಹಾಸು ಪುಕ್ಕ ಕಳುಚಿದ ಅಂತರಂಗ
ಬಹಿರಂಗ ಒಂದಾದ ಭಾವಗೀತೆಯಾಗಿ
ಸಂಗೀತವಾಗಿ ಜಗದ ಮನೆಯ ಕಲರವ ಆಗಬೇಕು.

ಬಾಂದಳದ ಬಯಲಾಟ ಎದೆಯಾಟ
ಓಟ ಮೀರುವ ಹಕ್ಕಿ ಹಾರಾಟ
ಮೇಲಿಂದ ಕೆಳಗೆ ಹರಿದ ಜೀವ ಭಾವ
ನದಿ ಹರಿದ ತಣ್ಣನೆ ನೆಲಹಾಸು ಬಯಲು.
*****