ಕಾರಾಗೃಹದಲ್ಲಿದ್ದಂತೆಯೇ ಪಾಪ ಅವು
ಕಟ್ಟಿಹಾಕಿದ್ದಾನೆ ದೇವರು
ನೆಲದೆದೆಯ ಬೆಟ್ಟ ಪರ್ವತಗಳು ಚಲಿಸದಂತೆ,
ಯಾರೂ ಸುಳಿಯದಂತೆ
ಸುಡಲು ಬಿಟ್ಟಿರುವನೆ ಮರಳ
ಪಾಪ ಪ್ರಾಯಶ್ಚಿತಕ್ಕೊಳಪಡುವಂತೆ,
ಉಪ್ಪು ಬೆರಿಸಿರುವನು ಸಮುದ್ರಕೆ
ಹೊಳೆಹಳ್ಳ ಕೆರೆ ನೋಡಿ ನಗುವ
ಅದರ ಸೊಕ್ಕು ಮುರಿಯಲೆಂದು-

ಕಣ್ಣಿಟ್ಟು ನೋಡಿದರೆ ಕಿವಿಕೊಟ್ಟು ಕೇಳಿದರೆ
ಒಮ್ಮೊಮ್ಮೆ ಇವುಗಳೊಳಗಿನ
ಕಿಚ್ಚು ನೊರೆ ತೆರೆ ಭಯಂಕರ
ಏನಿದೇನಿದು ಪಾಪ ಪ್ರಾಯಶ್ಚಿತ ಘಳಿಗೆ-

ಆದರಿಲ್ಲಿ ಮೋಡಗಳಿಗೆ ರೆಕ್ಕೆಗಳ ಮೇಲೆ ರೆಕ್ಕೆ
ಅಂಗವಿಕಲರಿಗೂ ಕೈಕಾಲು
ಶಾಪವಿಮೋಚಕರ ಹಗುರಾದ ಹಾರಾಟ
ತೇಲಾಟ ಕುಣಿದು ಕುಪ್ಪಳಿಸುವಾಟ
ಮತ್ತೊಮ್ಮೆ ಮೋಡಗಳಿಗೆ ಫಳಾರನೆ ಬೆಳಕು
ಬಿಕ್ಕಿಬಿಕ್ಕಿ ಅತ್ತು ಹಗುರಾಗುವ ಸಮಯ.
*****