ಮಂಗಲಂ ಜಯ ಜಯತು ಜಗನ್ಮಾತೆ
ಅಂಗಜಹರರೂಪ ಮಂಗಲಾಂಗಿಗೆ
ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ ||

ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು
ಸರಿಗಾಣದಿರುವಂಥ ಹರಮೂರ್ತಿಗೆ
ಪರಿಪರಿಯ ವರ್ಣದಲಿ ಹೊಳೆಯುತಲಿ
ಪರಿಪೂರ್ಣ ಸುರಜಾಲಮಯಳಾದ ಸ್ಥಿರಕೀರ್ತಿಗೆ || ೧ ||

ಕೊಬ್ಬಿದಾ ಮಧುಕೈಟಭಾಸುರರ ಸಂಹರಿಸಿ
ಕೊಬ್ಬಿರಿದು ಉಬ್ಬಿದಾ ಮಹಾಕಾಳಿಗೆ
ಅಬ್ಬರಿಸಿ ಬರುವಂಥಾ ದುಷ್ಟದೈತ್ಯರನೆಲ್ಲ
ಇಬ್ಭಾಗ ಸೀಳಿ ಶಾಶ್ವಿತಳಾದ ರಣಕೇಳಿಗೆ || ೨ ||

ಸಿಟ್ಟಿಲೆ ಮಹಿಷನನು ಶಿರಮೆಟ್ಟಿ ಸಂಹರಿಸಿ
ಕಷ್ಟವನು ಕಳಿದಂಥ ಮಹಾಲಕ್ಷ್ಮಿಗೆ ವಟ್ಟರಸಿ ಬರುವಂಥ
ಕೆಟ್ಟ ದೈತ್ಯರನೆಲ್ಲ ಕುಟ್ಟಿ ಸವರಿದ ವೀರ ಜಯಲಕ್ಷ್ಮಿಗೆ || ೩ ||

ಚಂಡಮುಂಡರದೋದ೯ಂಡ ದ್ಯೆತ್ಯರ ಶಿರವ
ಚಂಡಾಡಿ ಮೆರದಂಥ ಚಾಮುಂಡಿಗೆ
ಅಂಡಲೆದು ಒದರುತಲೆ ಬರುವಂಥ ಬಂಡರನು
ತುಂಡಾಗಿ ಖಂಡಿಸಿದ ಪ್ರಚಂಡಿಗೆ || ೪ ||

ಉದ್ಧಟರು ಶುಂಭ-ನಿಶುಂಭರೆಂಬುವರನ್ನು
ಯುದ್ಧದಲ್ಲಿ ಕೊಂದಂಥ ಬ್ರಹ್ಮಾಣಿಗೆ
ಸಿದ್ದ ಶಾಶ್ವಿತನಾದ ಗುಡಿಪುರದ ಕಲ್ಮಾನ
ಪೊದ್ದು ಪೊರೆದಿಹ ಗುರು ಕಲ್ಯಾಣಿಗೆ || ೫ ||
*****