ಮನಸೂ ಸಾರದ ಕನಸೂ ಹಾಯದ
ಘನತೆಯ ಗೌರೀಶಂಕರವೇ,
ಮಾನವಜೀವನ ಮೇರುವಿನೆತ್ತರ
ನಿಲಿಸಿದ ಅಹಿಂಸೆಯಂಕುರವೇ!
ಸತ್ಯಕಾಗಿ ವಿಷ ಕುಡಿದ ವಿವೇಕವೆ
ಸತಿಸುತರನು ಮಾರಿದ ಛಲವೇ,
ಜ್ಞಾನವರಸಿ ವನ ಸಾರಿದ ಬೋಧಿಯೆ
ಶಿಲುಬೆಯೇರಿ ಹರಸಿದ ಕರವೇ!
ರಾಜಕಾರಣದ ಮರಳುಗಾಡಿನಲು
ಧರ್ಮಜಲವ ಹರಿಸಿದ ಶುಭವೇ,
ಯುದ್ಧಜ್ವಾಲೆಯಲಿ ಬಿದ್ದ ಮಾನವನ
ತೋಯಿಸಿ ಹರಿದ ಮೋಹನ ಸುಧೆಯೇ !
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.