ಸ್ವಗೃಹಸ್ಥನಾಗದೆ ಸಾವಯವವುಂಟೇ ?

ಸಾವಯವವೆಂದರದು ಗೃಹಸ್ಥನಾಗುವುದೆಂದೆ ಸಂತೆಯೊಳಗಿಂದೇನೆ ತಂದರು ಕುಂದೆ ಸ್ವಗೃಹದ ಸುತ್ತಿನೊಳೆಲ್ಲ ಸೊತ್ತನು ಸಾನುರಾಗದಿ ಸಾಗುವಳಿಗೊಂಡೊಡಾತಂಗೆ ಸದೃಹಸ್ಥನೆಂದೆಂಬ ಶುಭನಾಮ ಸಲ್ಲುವುದು - ವಿಜ್ಞಾನೇಶ್ವರಾ *****

ಹೇಳಿ ಕೇಳಿ ಸಾವಯವವಾಗುವುದು ಹೇಗೆ ?

ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ - ವಿಜ್ಞಾನೇಶ್ವರಾ *****

ನವೆ ಕೆರೆದರದನೆ ಕೆಲಸವೆನಲುಂಟೇ ?

ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ - ವಿಜ್ಞಾನೇಶ್ವರಾ *****

ಬಾಕಿ ಏನುಂಟಿನ್ನು ಅನ್ನದ ದಾರಿ ಮಾಡಲಿಕೆ ?

ಬೇಕಿಹುದಾದೊಡಂ ಒಂದಷ್ಟು ಹಣ, ರಣ ಶೋಕಿ ವಾಹನ ದಾರಿಯನು ಮಾಡಲಿಕೆ ಬೇಕಿಲ್ಲವದು ಅನ್ನದರಿವಿಗೆ ಬಾಳ ದಾರಿಗೆ ಭುಕ್ತಿಯನ್ನವದು ಭುವಿಯಲ್ಲಿ ತಾನೆ ಬೆಳೆಯುವುದು ಯುಕ್ತಿಯೊಳದುವೆ ಸೆಳೆಯುವುದು ಹಸಿದವನ - ವಿಜ್ಞಾನೇಶ್ವರಾ *****

ಮನೆಯೊಳಿಲ್ಲದ ಸಾವಯವವನೆಲ್ಲಿ ಹುಡುಕುವುದು ?

ವನ, ಮನ, ಮನೆ, ಮಡದಿಯೊಂದಾದಂದು ಘನ ಕೃಷಿಗಿರದಾವ ಮನ್ನಣೆಯ ಕುಂದು ಧನದ ಮಿತಿಯನರಿತು ಅನ್ನದ ಗತಿಯ ನನುಸರಿಸಿ, ತನು ಮನದ ಬಯಕೆ ಯನು ಅವರಿಗವರೇ ಭರಿಸಿದರದು ಸಾವಯವ - ವಿಜ್ಞಾನೇಶ್ವರಾ *****

ಅದು ಎಲ್ಲಿಯುದು ಸಾವಯವ ?

ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ - ವಿಜ್ಞಾನೇಶ್ವರಾ *****

ಸುಮ್ಮನೆಂದರದು ಸಾವಯವವಾದೀತೇ ?

ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ - ವಿಜ್ಞಾನೇಶ್ವರಾ *****

ಹಸುರುಳಿಸದೆ ಇನ್ನೇನು ಕೆಲಸ ?

ಹಸುರ ಕೆಲಸಗಳೆಲ್ಲ ಜೀವಕು, ಬದುಕಿನುದ್ದಕು ಹಸಿದು ತಿನ್ನುತ, ಬೀಜ ಚೆಲ್ಲುತ, ಹೊಸತು ಬೆ ಳೆಸುತ, ತಂಪು ಕಾಯುವ ಲೇಸು ಜೀವನವೆಲ್ಲ ಜೀವಕು ಏಸು ಜೀವರ ಶ್ರಮದ ಹಸುರನು ಘಾಸಿಗೊಳಿಸದ ಕಸದ ಕೃಷಿಯನು, ಹಸದಿ ಸಾವಯವವೆನಲಕ್ಕು...

ಸೂರ್‍ಯನವಯವವಲ್ಲವೇ? ಹಸುರೆಲ್ಲ

ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ - ವಿಜ್ಞಾನೇಶ್ವರಾ *****

ಅನ್ನಕೆಮ್ಮವಯವ ಬಳಸದೊಡದನು ಸಾವಯವವೆನಲುಂಟೇ ?

ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು - ವಿಜ್ಞಾನೇಶ್ವರಾ *****