ಧರೆಯ ಮೇಲೆಲ್ಲಾ ಹಾರುವ
ಬಣ್ಣ ಬಣ್ಣದ ಚಿಟ್ಟೆಗಳು
ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ
ಅಂದೆಂದೋ ಯಾವನದೋ
ತೆವಲಿಗೆ ಹುಟ್ಟಿದ ಆಚಾರ
ವಿಚಾರಗಳ ತುಳಿದರೆ,
ಉಕ್ಕುಕ್ಕಿ ಹರಿಯುತ್ತಿದ್ದ
ಮಧುರ ಪ್ರೇಮದ ಪರಿ
ಪರಿಧಿದಾಟಿ ವಿಜೃಂಭಿಸಿ
ಹಿಡಿತದ್ಹೊರಗೆ ಹಾರಿದರೆ
ಅಳುಕದೆ ಹೆಮ್ಮೆಯಲಿ
ನಡೆದರೆ ಹಾರಾಡುತ್ತವೆ
ಈ ಚಿಟ್ಟೆಗಳು ಒಡಲೊಳಗೆ
ಧರ್ಮಶಾಸ್ತ್ರವ ಹರಿದು
ಕಟ್ಟು ಕಟ್ಟಲೆಗಳ ಮುಷ್ಠಿ
ಯಲಿ ಬಿಗಿದು ನಗುವವರ
ಬಾಯಿ ಬಡಿದು ವಿಜಯದ
ನಗೆ ನಕ್ಕರೆ ಹಾರಾಡುತ್ತವೆ
ತಗ್ಗಿ ಬಗ್ಗಿ ನಡೆವ ಜೀವ
ತನ್ನೆತ್ತರವ ಮೀರಿ ಬೆಳೆದರೆ
ಗರ್ಭಗುಡಿಯಲಿ ಪೂಜೆ
ಗೊಳುವ ಸಿಲೆ ಸಿಡಿದೆದ್ದರೆ
ಸಮಾನತೆಯನೊಲ್ಲದ
ದರ್ಪದಲಿ ಬೀಗುವ ಜೀವದ
ಒಡಲೊಳಗೆ ಹರಿದಾಡುತ್ತವೆ ಚಿಟ್ಟೆಗಳು
*****