ಆರ್‍ಯಭೂಮಿಯ ಕಾಂತಿ ಮಾಸುತಿರೆ ದಿನ ದಿನಕೆ,
ಶತಮಾನ ಹಲವಾರು ಕಂಗೆಟ್ಟು ದಾಸ್ಯದಲಿ
ಕೊಳೆಯುತಿರೆ ಜನವೆಲ್ಲ ತಮ್ಮೊಂದು ಆತ್ಮಾಭಿ-
ಮಾನವನು ಘನತೆಯನು ವೀರ್ಯವನು ಶಕ್ತಿಯನು
ಕಳೆದುಳಿದು ಮೋಸದಾ ದ್ರೋಹದಾ ಉದರದಾ
ಹೇಡಿತನದಾ ಒಂದು ಕ್ಷುದ್ರಬಾಳನು ಕಳೆಯೆ,-
ಭಾರತಿಯೆ ಈ ಸ್ಥಿತಿಗೆ ನಾಚಿದಳು, ಬಾಗಿದಳು;
ಅಸಹಾಯಳಾದಳೀ ಕೋಟಿ ಮಕ್ಕಳು ಸಹಿತ!

ಸಿಡಿದುರಿದು ಹಾರಿದನು ವಂಗದೇಶದ ವೀರ
ಜನ್ಮಭೂಮಿಯ ಬದುಕ ಬವಣೆಯನು ನೋಡುತಲಿ!
ಸಾಮ್ರಾಜ್ಯವಾದಗಳ ಉಕ್ಕುಗೋಟೆಯ ಮುರಿದು
ಸರ್ವಮತಸೇನೆಯನು ‘ಜೈ ಹಿಂದ್’ ಮಂತ್ರವನು
ಆಸೇತುವಿಂದೊಗೆದ ದೇಶದಲಿ ಬಿತ್ತಿದನು.
ಅದೃಶ್ಯನಾದನಾ ಸಿಂಹ! ಸುಭಾಷ್ ಧನ್ಯನು ಹೌದು!!
*****

Latest posts by ಮುತ್ತಣ್ಣ ಐ ಮಾ (see all)