ಹೊಳೆಯ ಆ ದಂಡೆಯಲಿ
ಸುಂದರ ಜನ
ಕಣ್ಣ ಕುಕ್ಕುತ್ತಾರೆ

ತುಂಬಿ ಹರಿವ ಹೊಳೆ
ಸಿಹಿ ನೀರು
ಅವರ ಹೊಲಗದ್ದೆಗಳಿಗೆ
ಅಲ್ಲಿ ಮೀಯುವ ಮೀನು
ಅವರ ಗಂಗಾಳಕೆ
ಆ ಹಸಿರು ಕಾಡು
ಅಲ್ಲಿ ಜಿಗಿದಾಡುವ ಜಿಂಕೆ
ಕುಣಿವ ನವಿಲು
ಉಲಿವ ಹಕ್ಕಿಗಳು
ಅವರ ಸಂತೋಷಕೆ

ಕಣ್ಣು ಕುಕ್ಕುತ್ತಾರೆ
ಲಕಲಕ ಅವರು
ಬಿಸಿಲು ಬಿದ್ದ ಕನ್ನಡಿ

ಈ ದಂಡೆಯಲಿ
ನನ್ನಕ್ಕ ತಂಗಿಯರು
ಅಣ್ಣ ತಮ್ಮಗಳು
ಹೊಳೆಯ
ನೀರು ಮುಟ್ಟಲು ದೂರ
ಬಲು ದೂರ
ಕಣ್ಣು ಕಾಣುವವರೆಗೆ ಮುಳ್ಳು
ಕಲ್ಲುಗಳ ನಡುವೆ
ಬಿಸಿಲು ಕುದುರೆಯ ಓಟ
ಕಾಗೆ ಗೂಬೆ ಹದ್ದುಗಳೇ ಇವರ
ಜೀವದ ಗೆಳೆಯರು

ಕಣ್ಣು ಕುಕ್ಕುವುದಿಲ್ಲ ಇವರು
ಎದೆಯ ಮೂಳೆಗಳು
ಹೊಟ್ಟೆಯ ಕರುಳು
ಕಣ್ಣೊಳಗಿನ ಸಾವು
ಅಡ್ಡ ನಿಲ್ಲುತ್ತವೆ

ಆ ದಂಡೆಯ ಜನರಿಂದು
ಕಟ್ಟಬೇಕಿದೆ
ಸುಂದರ
ಶಾಶ್ವತ ಸೇತುವೆಯೊಂದ

ಕೈ ಜೋಡಿಸಬೇಕಿದೆ
ಈ ದಂಡೆಯ ಜನರು
ಬೊಗಸೆಯಲಿ
ತಿಳಿನೀರು ತುಂಬಿ
ಹೊಟ್ಟೆ ತುಂಬಾ ಕುಡಿಯಲು
*****