ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು?
ಸರ್ವರಿಗೆಂದೆ ತಂಪು;
ಒನಪು, ವೈಯಾರ, ಥಳಕು ಬಳಕು ಕೈಕುಲುಕು!
ಹಳ್ಳ ದಿನ್ನಿ ಊರು ಕೇರಿ ಹಾರಿ;
ಹಗಲಿರುಳೂ ಸಾಗಿ,
ಚಳಿ ಮಳೆ ಗಾಳಿಗೆ ಮಾಗಿ,
ನಿತ್ಯ ದುಡಿವೆ ನೋಡಿ.
ಆಸೆ ನಿರಾಸೆ ಸುಖ ದುಃಖಗಳ ಹೊದ್ದು,
ಮದುವೆ ಮುಂಜಿ ಮಸಣಕಂಜಿ
ಶುಭ ಲಾಭ ನಷ್ಟ, ಟೀಕೆ ಟಿಪ್ಪಣಿ ಲೆಕ್ಕಿಸೆ
ನಿಜ ಸೇವೆ ಸ್ವರ್ಗ ಸಮಾನ!
ಬಡವ ಬಲ್ಲಿದ, ಭೇದವಿಲ್ಲದ,
ವಿದ್ಯಾವಂತ ಅವಿದ್ಯಾವಂತ
ಸಣ್ಣ ದೊಡ್ಡವ ಎಣಿಸದೆ,
“ಈಶ ಸೇವೆ, ದೇಶ ಸೇವೆ,
ಸಾರಿಗೆ ಸೇವೆ, ನೈಜ ಸೇವೆಂಬ”
ಮಂತ್ರ ಜಪಿಸುತ್ತಾ…
ನಿತ್ಯ ನಿತ್ಯ ಲಕ್ಷ ಜನರ ಹೊತ್ತು,
ಅವರವರ ಕನಸು, ಮನಸ್ಸಿಗೆ ಸ್ಪಂಧಿಸಿ,
ನಿರೀಕ್ಷೆ ಪರೀಕ್ಷೆಗೆ ತವಕಿಸಿ,
ನನ್ನ ದಾರಿ ನಿಮಗೆ ಶ್ರೀ ರಕ್ಷೆ,
ನನ್ನ ನಂಬಿ, ತಬ್ಬಿ ಹಬ್ಬಿ ಕೊಬ್ಬಿ ಬೆಳೆದವರೆ,
ಗದ್ದುಗೆ ಹಿಡಿದವರೆ,
ಪಟ್ಟಣವ ಕಂಡು,
ಡಿಗ್ರಿಗಳ ಪಡೆದು,
ಏನೆಲ್ಲ ಆದವರಿಗೆ,
ಏಣಿಯಾದವ!
ನನ್ನೆಲ್ಲ ಕಥೆ ವ್ಯಥೆಗೆ ೫೦ರ ಪ್ರಾಯ!
ತಾಯಿ ಭಾರತಿಗೆ ಎರಡನೆ ದೊಡ್ಡಕೂಸು.
ಕನ್ನಡದ ಕಂದ-
ರಾಜ್ಯ ರಾಜ್ಯಕ್ಕೆ ಸಂಚರಿಸಿ, ಕೋಟಿ ಕೋಟಿ… ರೊಕ್ಕ ಒಪ್ಪಿಸಿ,
ಕೀರ್ತಿ ಪತಾಕೆ ಹಾರಿಸಿ…!
ನಿಲ್ದಾಣ, ಡಿಪೋ, ಪಾಸು, ರಿಯಾಯಿತಿ, ಆಶ್ರಯ, ಕಾಮಧೇನು,
ಏನೆಲ್ಲ ಹಿಗ್ಗಿ ಹೀರೆಕಾಯಿ ಆದವ
ಎಳೆಯ ಗೆಳೆಯರ, ಶಾಲೆ ಬಾಲಕರ,
ಸ್ವಾತಂತ್ರ್‍ಯಯೋಧರ, ವೃದ್ಧ
ಆಬಾಲರ ಎತ್ತಿ ಮುದ್ದಾಡಿ,
ಬಲು ಎತ್ತರಕೆ ಬೆಳೆಸಿ,
ಕನಸುಗಳ ಅರಳಿಸಿ
ನಿಮ್ಮ ಬೇಕು, ಬಯಕೆಗಳಿಗೆ ನಿತ್ಯ ಉಸಿರಾಗಿ, ಬಸಿರಾಗಿ,
ಏನೆಲ್ಲ ಹೆಸರಾಗಿ, ಹಸಿರಾಗಿ,
ಕಿಸಿ ಕಿಸಿ ನಕ್ಕು ಕಸಿಯಾದವ
ವರ್ಷ ವರ್ಷಕೂ ಹರ್ಷದಿ ನಿರೀಕ್ಷೆಗಳ ತೂಗು ಸೇತುವೆ ಕಟ್ಟಿ,
ಹೊಳೆ ದಾಟಿಸಿದ ಅಂಬಿಗ
ಹೊಳೆ ದಾಟಿದ ನೀವೆಲ್ಲ.
ಆಕಾಶಕ್ಕೆ ಕೈ ಹಬ್ಬಿ ಬೂಟುಗಾಲಲಿ
ನನ್ನ ಒದ್ದರೂ;
ಒಂದೇ ಮುಗುಳ್ನಗೆಗೆ ಅದೇ ರಾಗ-
“ನಿಮ್ಮ ದೇವರೆಂದು” ‘ಪ್ರಭು’ ‘ಅನ್ನದಾತ’ ‘ಮಾಲೀಕರೆಂದು’
ಅಪ್ಪಿ ಮುದ್ದಿಡುವ, ಒಪ್ಪಿ ಓಡಾಡುವ,
ವಿಲ ವಿಲ ಒದ್ದಾಡುವ,
ಮುಲು ಮುಲು ಮುಲುಗುಟ್ಟುವ,
ಕೆಂಪು ಬಸ್ಸು ನಾ!… ನಿಮ್ಮ ಬಸ್ಸು ನಾ.
*****