water-464953_960_720ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ ಸುರಿಯುವ ಆಮ್ಲ ಮಳೆಯ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ.

ಈ ದಿನಗಳಲ್ಲಿ ದಿನಕ್ಕೊಂದು ಕಾರ್ಖಾನೆ ತಲೆಯೆತ್ತುತ್ತಿದೆ.  ಇವುಗಳ ಜೀವಾಳ ಕಲ್ಲಿದ್ದಲು ಮತ್ತು ತೈಲ ಅನಿಲಗಳು.  ಈ ಉದ್ಯಮಗಳು ಹೊರ ಚೆಲ್ಲುವ ರಾಸಾಯನಿಕ ವಸ್ತುಗಳು, ರಾಸಾಯನಿಕ ಇಂಧನಗಳನ್ನು ಬಳಸುವ ವಾಹನಗಳಿಂದ ಹೊರಚೆಲ್ಲುವ ಹೊಗೆ, ಕೃಷಿಗಾಗಿ ಬಳಸುವ ಗೊಬ್ಬರ  ಕ್ರಿಮಿನಾಶಕಗಳೂ, ಯುದ್ದಕ್ಕಾಗಿಯೇ ಸೃಷ್ಟಿಸಲಾದ ಮಾರಕ ವಿಷಾನಿಲಗಳು ವಾತಾವರಣವನ್ನು ಒಂದೇ ಸಮನೇ ಮಲಿನಗೊಳಿಸುತ್ತಿವೆ.  ಈ ವಿಷಾನಿಲಗಳಲ್ಲಿ ಗಂಧಕದ ಡೈ ಆಕ್ಸೈಡ್ ಅಲ್ಲದೆ ಸಾರಜನಕದ ಆಕ್ಸೈಡ್ ವಾಯುಮಂಡಲದಲ್ಲಿ ಸೇರಿಕೊಂಡ ಮೇಲೆ ಅಲ್ಲಿರುವ ಆಮ್ಲಜನಕ ಹಾಗೂ ನೀರಾವಿಗಳೊಂದಿಗೆ ಬೆರೆತು ಸಲ್ಫ್ಯೂರಿಕ್ ಆಮ್ಲ ಹಾಗೂ ನೈಟ್ರಿಕಾಮ್ಲಗಳಾಗಿ ಪರಿವರ್ತನೆ ಹೊಂದುತ್ತವೆ.  ಇವು ಮಳೆಯೊಂದಿಗೆ ಬೆರೆತು ಭೂಮಿಗೆ ಇಳಿಯುತ್ತವೆ.

ಮಳೆಯ ಸಾಮಾನ್ಯ ಪಿ.ಹೆಚ್. ಅಂಶವು ೫.೬ರಷ್ಟಿರುತ್ತದೆ.  ಆದರೆ ಪಿ.ಹಚ್. ಮಟ್ಟವು ಇದಕ್ಕಿಂತ ಕಡಿಮೆ ಆದಾಗ ಅದು ಆಮ್ಲ ಮಳೆಯಾಗುತ್ತದೆ.  ಪಿ.ಹೆಚ್. ಕಡಿಮೆ ಇರುವ ಮಳೆಯಾದರೆ ಮನುಷ್ಯರ ಮೈಮೇಲೆ ಬೊಬ್ಬೆಗಳು ಏಳಬಹುದು.  ಕೆರೆ, ನದಿ, ಸಮುದ್ರಗಳಲ್ಲಿ ಸೇರಿ ಅಲ್ಲಿಯ ಜಲಚರಗಳ ನಶಿಸುವಿಕೆಗೆ ಕಾರಣವಾಗುತ್ತದೆ.  ಆಮ್ಲದ ಅಂಶ ಮೀನುಗಳ ಶರೀರವನ್ನು ಸೇರಿದಾಗ ಎಲುಬುಗಳಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಕರಗುವಂತೆ ಮಾಡಿ ಮೂಳೆಗಳನ್ನು ಮೃದುವನ್ನಾಗಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತದೆ.

ಈಗಾಗಲೇ ಆಮ್ಲ ಮಳೆ ಯೂರೋಪ್ ಬ್ರಿಟನ್ ಅಮೆರಿಕಾಗಳಲ್ಲಿ ಕಾಣಿಸಿಕೊಂಡು ದುಷ್ಪರಿಣಾಮ ಬೀರಿದೆ.  ಕೆನಡಾದಲ್ಲಿ ಸುಮಾರು ೧೪,೦೦೦ ಕೆರೆ, ಸರೋವರಗಳು ಆಮ್ಲ ಮಳೆಯಿಂದಾಗಿ ಬರಿದಾಗಿವೆ.  ನಲವತ್ತು ಸಾವಿರ ಕೆರೆಗಳು ಆಮ್ಲದಿಂದ ತುಂಬಿವೆ. ಚಿಕ್ಕ ಪುಟ್ಟ ಜಲಚರಗಳಲ್ಲದೆ ಅಸಂಖ್ಯ ಸಾಲ್ಮನ್ ಮೀನುಗಳು ಬಲಿಯಾಗಿವೆ.

ಭಾರತವೂ ಈ ಅಪಾಯದಿಂದ ಹೊರತಿಲ್ಲ.  ಹೈದರಾಬಾದ್‌ನ ವಿವಿಧೆಡೆಗಳಲ್ಲಿ ಆಮ್ಲ ಮಳೆ ಬಿದ್ದ ವರದಿಯಾಗಿದೆ.  ಆದರೆ ಈ ಆಮ್ಲ ಮಳೆ ಹೆಚ್ಚಿನ ಹಾನಿ ಮಾಡುವಷ್ಟು ತೀರ್ವವಾಗಿಲ್ಲ ಹಾಗೂ ಇದು ಮುಂದುವರೆದರೆ ಮುಂದಾಗುವ ಹಾನಿಗಳ ಸೂಚನೆಯನ್ನು ಕೊಟ್ಟಿದೆ.  ಮಥುರಾ ತೈಲ ಶುದ್ಧಿಕರಣ ಕಾರ್ಖಾನೆಯಿಂದ ಹೊರ ಬರುವ ಆಮ್ಲ ಅನಿಲಗಳು, ಆಗ್ರಾದ ತಾಜ್‌ಮಹಲ್‌ನ ಸೌಂದರ್ಯಕ್ಕೆ ಕುತ್ತಾಗಿದೆ.  ಭರತ್‌ಪುರ ಪಕ್ಷಿಧಾಮದ ಸರೋವರವು ಆಮ್ಲಾಂಶ ಹೊಂದಿರುವುದರಿಂದ ನೀರ ಹಕ್ಕಿಗಳು ಭೇಟಿ ಕೊಡುವುದನ್ನು ನಿಲ್ಲಿಸಿವೆ.
*****