ಜಿಟಿಜಿಟಿ ಮಳೆಯ ಮುಂಜಾವು
ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ
ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ!

ಮಳೆಯೊಳಗೆ ನೆನೆದ ಪೇಪರ ಹುಡುಗ
ಹಾಡುತ್ತ ನಗುತ್ತ
ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ

ದೇಹಕಂಟಿದ ದುಪಟ್ಟ ಚೂಡಿದಾರ ತೊಯ್ದ
ಕೆಲಸದ ಹುಡುಗಿಗೆ ಸಂಕೋಚ

ಯಾರಿಗೂ ಟವಲ್ ಬೆಚ್ಚನೆಯ ಬಟ್ಟೆ
ಬೇಡವಂತೆ, ಕಾಫಿ ಎಂದರೆ ನಗು-

ಬಿಸಿ ಬಿಸಿ ಸುದ್ದಿ ಕೊಡುವ
ಪೇಪರ ಕೂಡಾ ಆರಿ ಬಿಗಿದಿತ್ತು

ಹೊದ್ದ ಶಾಲು ತೆಗೆದೊಗೆದು
ಕಾಫಿ ಸುರುವಿ
ಬರಿಗಾಲಿನಲಿ ಹೊರನಡೆದು
ಮಳೆಯಲಿ ನಿಂತದ್ದೇನು ಮಜ.

ಹಸಿರು ಹುಲ್ಲು ಕಾಲಿಗೆ
ಮಳೆರಾಜನ ಮುದ್ದುಗಳು ಮೈತುಂಬಾ!
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)