ನಾನು ನನ್ನ ದೇಶದ ಗಡಿಯನ್ನು
ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ.
ನಿತ್ಯ ಕಾವಲು ಕಾಯುವ ನೂರು
ಕಣ್ಣುಗಳಿಗಾಗಿ ದುಃಖಿಸುತ್ತೇನೆ.

ಹಸಿರು ಉಸಿರಾಡದ ಮರಗಳಿಗಾಗಿ
ಗೂಡು ಕಟ್ಟದ ಹಕ್ಕಿಗಳಿಗಾಗಿ
ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ
ದುಃಖಿಸುತ್ತೇನೆ.

ನೀರವತೆಯಲ್ಲಿ ನರ್ತಿಸುವ
ಸದ್ದುಗಳ-ಆಕ್ರಂದನಗಳ
ಜುಗಲಬಂದಿ
ನನ್ನನ್ನು ಕಂಗೆಡಿಸುತ್ತದೆ.

ಕೆಂಪು ಸೂರ್ಯನನ್ನು ಹಣೆಗಿರಿಸಿಕೊಂಡು
ಹಳದಿ ಸೇವಂತಿಗೆಯನ್ನು ಮುಡಿಗಿರಿಸಿಕೊಂಡು
ನರೀಕ್ಷೆಯಲ್ಲೆ ನಲುಗಿಹೋಗುವ
ನೂರು ಹೆಣ್ಣುಗಳಿಗಾಗಿ ದುಃಖಿಸುತ್ತೇನೆ.

ಬೆಳದಿಂಗಳ ರಾತ್ರಿಗಳನ್ನು
ಮಲ್ಲಿಗೆ ಹಗಲುಗಳನ್ನು
ಮುದ್ದಿಸಬೇಕಾದ ಕಣ್ಣುಗಳು
ಯಮನ ಕಣ್ಣುಗಳಲ್ಲಿ
ಮುಗುಳು ನಗುವುದು
ನನ್ನನ್ನು ಕಂಗೆಡಿಸುತ್ತದೆ.

ಯುದ್ಧ ನನ್ನನ್ನು ಕಂಗೆಡಿಸುತ್ತದೆ.
ಬುದ್ಧ ನನ್ನನ್ನು ಸಂತೈಸುತ್ತಾನೆ.