ಮಂಥನ – ೪

swirling-light-1209350_960_720Unsplashಬೆಳಗ್ಗೆ ತಿಂಡಿ ತಿನ್ನುತ್ತಿದ್ದ ಅನುವಿಗೆ ನೀಲ “ಅನು ಸಂಜೆ ಬೇಗ ಬಾಮ್ಮ”

“ಯಾಕೆ” ಪ್ರಶ್ನಿಸಿದಳು.

ಉತ್ತರಿಸಲು ತಡಬಡಾಯಿಸಿ ಗಂಡನ ಮೋರೆ ನೋಡಿದಳು.

“ನನ್ ಫ್ರೆಂಡ್, ಅವರ ಮಗ ಸಂಜೆ ಬರ್ತಾ ಇದ್ದಾರೆ” ಯಾರಿಗೋ ಹೇಳುವಂತೆ ನುಡಿದ ಜಗದೀಶ.

“ಯಾರೋ ಬಂದ್ರೆ ನಾನ್ಯಾಕಮ್ಮ ಬೇಗ ಬರಬೇಕು. ನೀನಿರ್ತಿಯಲ್ಲ ಸಾಕು” ಕೈ ತೊಳೆದು ಏಳ ಹೊರಟವಳನ್ನು

“ನೀಲ ನಿನ್ನ ಮಗಳಿಗೆ ಹೇಳು, ಅವರು ಬರ್ತಾ ಇರೋದು ಹೆಣ್ಣು ನೋಡೋಕೆ ಅಂತ. ಬಂದವರ ಮುಂದೆಲ್ಲ ಅಧಿಕ ಪ್ರಸಂಗತನ ಬೇಡ. ಮರ್ಯಾದೆಯಾಗಿ ಬೇಗ ಬಂದು ಅವರ ಮುಂದೆ ಕೂತ್ಕೊ ಅನ್ನು” ಒರಟಾಗಿ ನುಡಿದ.

“ಅಮ್ಮ ಯಾರ್ಯಾರ್ದೋ ಮುಂದೆ ಕೂತ್ಕೊಳ್ಳೋ ಅವಶ್ಯಕತೆ ನಂಗಿಲ್ಲ. ಇದು ನನ್ನ ಜೀವನದ ಪ್ರಶ್ನೆ. ನನ್ನ ಜೀವನ ನಾನು ಅಂದುಕೊಂಡ ಹಾಗೆ ಇರುತ್ತೆ. ಇದರಲ್ಲಿ ಯಾರೂ ತಲೆ ಹಾಕೋದು ಬೇಡ ಅನ್ನು.”

“ಅನು. ಅನು ಏನಾಗಿದೆ ನಿಂಗೆ, ಅವರು ಹೇಳ್ತಾ ಇರೋದು ನಿನ್ನ ಒಳ್ಳೇದಿಕ್ಕೆ ಕಣೆ. ಗಂಡಿನವರು ನಿನ್ನ ನೋಡದೆ ನೀನು ಅವರ ಮುಂದೆ ಕೂತ್ಕೊಳ್ದೆ ನಿನ್ನ ಮದ್ವೆ ಸಾಧ್ಯಾನಾ ಅನು. ಅವರು ಇಷ್ಟು ಆಸಕ್ತಿ ತಗೊಂಡು ನಿನ್ನ ಮದ್ವೆ ಬಗ್ಗೆ ಯೋಚ್ನೆ ಮಾಡ್ತಿರುವಾಗ ನೀನು ಕೊಬ್ಬು ತೋರಿಸ್ತಿಯಾ, ಅವರು ನಿನ್ನ ಅಪ್ಪ ಕಣೆ” ಹತಾಶಳಾಗಿ ನೀಲ ಹೇಳಿದಾಗ

“ಅಪ್ಪಾ” ತಿರಸ್ಕಾರವಾಗಿ ನೋಡುತ್ತಾ ಎದ್ದು ಹೊರಟೇಬಿಟ್ಪಳು. ಆ ತಿರಸ್ಕಾರದ ನೋಟ ಜಗದೀಶನನ್ನು ಇಂದು ಘಾಸಿಗೊಳಿಸಿ

“ನೋಡಿದ್ಯಾ, ನಿನ್ನ ಮಗಳ ಉದ್ದಟತನನಾ. ಕೊಬ್ಬಿಸಿ ಬಿಟ್ಟಿದ್ದೀಯಾ. ನನ್ನಿಂದ ಏನು ಬಂದ್ರೂ ಅವಳಿಗೆ ತಿರಸ್ಕಾರ. ನಿನ್ನ ಕಾಟ ತಡಿಲಾರದೆ ಗಂಡು ಹುಡುಕುವುದಕ್ಕೆ ಹೊರಟೆ. ಇವತ್ತು ಅವರೆಲ್ಲ ಬಂದ್ರೆ ನನ್ನ ಮರ್ಯಾದೆ ಏನಾಗಬೇಕು. ದೊಡ್ಡದಾಗಿ ನನ್ನ ಮಗಳನ್ನು ನೋಡೋಕೆ ಬನ್ನಿ ಅಂತಾ ಕರೆದುಬಿಟ್ಟಿದ್ದೇನೆ” ಅವನ ಕೋಪದ ಮಾತುಗಳಾವುವೂ ಅವಳ ಕಿವಿಗೆ ಬೀಳುತ್ತಿಲ್ಲ. ಸಂಭ್ರಮದಿಂದ ಅವನನ್ನೇ ನೋಡುತ್ತಿದ್ದಾಳೆ.

“ಯಾಕೆ ಹಾಗೆ ನೋಡುತ್ತಾ ಇದ್ದಿಯಾ, ಮಗಳಿಗೆ ಬುದ್ದಿ ಹೇಳು ಅಂದ್ರೆ ನನ್ನ ಮುಖ ಏನ್ ನೋಡ್ತಾ ಇದ್ದಿಯಾ”

ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ, ಏನೂ ಇಲ್ಲವೆನ್ನುತ್ತ ತಲೆಯಾಡಿಸಿದಳು. ಜೀವನದಲ್ಲಿ ಮೊದಲ ಬಾರಿ ನನ್ನ ಮಗಳು ಎನ್ನುವ ಪದ ಕಿವಿಗೆ ಬಿದ್ದದ್ದೆ ಅವಳಿಗೆ ಸಂಭ್ರಮ ತರಿಸಿದೆ, ರೋಮಾಂಚನ ತಂದಿದೆ. ಅಂತೂ ಅವಳ ಮನದಾಸೆ ನೆರವೇರಿದೆ. ಪತಿಯ ವರ್ತನೆ ಹೇಗೇ ಇರಲಿ, ಮಗಳು ಅಂತ ಕೊನೆಗಾದರೂ ಒಪ್ಪಿಕೊಂಡರಲ್ಲ. ಈ ಮಾತು ಕೇಳಲು ಅನು ಇರಬಾರದಿತ್ತೆ. ನನ್ನ ಬಲವಂತಕ್ಕಾದರೂ ಮಗಳಿಗೆ ಗಂಡು ನೋಡಲು ಒಪ್ಪಿಕೊಂಡಿದ್ದಾರಲ್ಲ. ಸಾಕು ಈ ಬದುಕಿಗೆ, ಅದಷ್ಟೇ ಸಾಕು. ನನ್ನ ಬಾಳಿನಂತಾಗದಿದ್ದರೆ ಸಾಕು, ಮಗಳ ಬಾಳು. ಅವಳ ಬದುಕು ನಂದನವನವಾಗಲಿ. ಹಾಲು ಜೇನು ಉಕ್ಕಿ ಹರಿಯಲಿ. ಈ ಮನೆಯಲ್ಲಿ ಅವಳು ನೊಂದದ್ದೇ ಸಾಕು. ಹೇಗಾದರೂ ಗಂಡಿನವರು ಬರುವಷ್ಟರಲ್ಲಿ ಅನುವನ್ನು ಬರಲು ಒಪ್ಪಿಸಬೇಕು ಎಂದು ಅನುವಿಗೆ ಫೋನ್ ಮಾಡಿದಳು. ಗಂಡಿನವರ ಮುಂದೆ ಕೂರಲು ಸ್ವಲ್ಪವೂ ಇಷ್ಟವಿಲ್ಲದಿದ್ದರೂ, ಅಮ್ಮನ ದೈನ್ಶತಗೆ ಕರಗಿ ಬೇಗ ಬರಲು ಒಪ್ಟಿದಳು.

ನೀಲಳ ಯಾವ ಬಲವಂತಕ್ಕೂ ಒಪ್ಪದೆ ಕಾಟನ್ ಸ್ಯಾರಿಯಲ್ಲಿಯೇ ಸಿದ್ದಳಾದಳು. ನೀಲಾ ಮಗಳ ಹಟಕ್ಕೆ ಬೇಸರಗೊಂಡಳು.

“ಅಮ್ಮ ಈ ಪ್ರದರ್ಶನ ನಂಗೆ ಮೊದ್ಲೇ ಇಷ್ಟ ಇಲ್ಲ. ಅದರ ಜೊತಗೆ ನೀನು ರೇಷ್ಮೆ ಸೀರೆ ಉಟ್ಕೊಂಡು ಒಡವೆ ಹೇರ್ಕೊ ಅಂತಾ ಇದ್ದೀಯಲ್ಲ. ನಾನೇನು ದಸರಾ ಗೊಂಬೆನಾ. ನೋಡು ನಿನ್ನ ಬಲವಂತಕ್ಕೆ ನಾನು ಬಂದಿದ್ದೀನಿ. ಹಾಗಂತ ಮದ್ವೆಗೆ ಒಪ್ಟಿಕೊಂಡು ಬಿಡ್ತೀನಿ ಅಂತಾ ಮಾತ್ರ ತಿಳೀಬೇಡ. ಇನ್ನು ಮೇಲೆ ನನ್ನ ಕೇಳದೆ ಯಾವುದೇ ಗಂಡು ಕರೆಸಿದರೂ ನಾನು ಮಾತ್ರ ಇರಲ್ಲ. ಈ ಜನ್ಮದಲ್ಲಿ ನಂಗೆ ಮದ್ವೆ ಬೇಡ. ನಿನ್ನ ಸುಖ ನೋಡೇ ಗಂಡ, ಸಂಸಾರ ಇವೆಲ್ಲದರ ಬಗ್ಗೆ ನಂಬಿಕೆ ಕಳ್ಕೊಂಡು ಬಿಟ್ಟಿದೀನಿ. ಕೈ ತುಂಬಾ ದುಡೀತಾ ಇದ್ದೀನಿ. ಈವತ್ತು ನೀನು ನನ್ನ ಜೊತೇಲಿ ಬರ್ತೀನಿ ಅಂದ್ರೂ ಈ ನರಕನ ಬಿಟ್ಟು ಬೇರೆ ಮನೆ ಮಾಡ್ತೀನಿ. ಇಲ್ಲ ಸಲ್ಲದ ಅಸೆ ಇಟ್ಕೊಂಡು ಆಮೇಲೆ ಕೊರಗಬೇಡ. ನಿನ್ನ ಕಣ್ಣೀರಾಗಲಿ, ನಿನ್ನ ಗಂಡನ ಕೋಪ ಅಗಲಿ ನನ್ನ ನಿರ್ಧಾರನಾ ಬದಲಾಯಿಸೋಕೆ ಸಾಧ್ಯ ಇಲ್ಲ. ಬಂದವರಿಗೆ ಅವಮಾನವಾಗಬಾರದು ಅಷ್ಟೆ. ಫ್ರೆಂಡ್ಲಿಯಾಗಿ ರಿಸೀವ್ ಮಾಡ್ತೀನಿ” ದೃಢವಾಗಿ ನುಡಿದಾಗ ನೀಲಾ ಪೆಚ್ಚಾದಳು. ಹುಡುಗನನ್ನು ನೋಡಿದ ಮೇಲಾದರೂ ಅನು ತನ್ನ ನಿರ್ಧಾರ ಬದಲಿಸಿಯಾಳು ಎಂಬ ದೂರದ ಭರವಸೆಯ ಕಿರಣವನ್ನು ಭದ್ರವಾಗಿ ಹಿಡಿದಳು.

ಗಂಡಿನವರು ಬಂದಾಗ ಸ್ವತಃ ತಾನೇ ಅನು ಎದುರುಗೊಂಡಳು. ಪತಿ ಬಂದವರ ಮುಂದೆ ಅನುವನ್ನು ಏನೆಂದು ಪರಿಚಯಿಸಿಯಾನು ಎಂಬ ಕುತೂಹಲದಿಂದ ಕಾಯುತ್ತಿದ್ದರೆ ಅನು ತಾನೇ “ಐ ಯಾಮ್ ಅನುಷಾ” ಅಂತ ಹೇಳಿಬಿಟ್ಬಾಗ ನೀಲಾ ನಿರಾಶೆಯನ್ನು ಹತ್ತಿಕ್ಕದಾದಳು. ಬಂದವರ ಮುಂದೆ ತೋರಿಸಿಕೊಳ್ಳದಂತೆ ಸಾಹಸ ಪಡಬೇಕಾಯಿತು. ನಗುವಿನ ಮುಖವಾಡ ಧರಿಸಿ ಅವರೊಂದಿಗೆ ಮಾತಿಗಿಳಿದಳು. ಅಪ್ಪ, ಅಮ್ಮ, ಮಗ ಮೂವರ ಸಂಸಾರ. ಅವರ ಸರಳತೆ ನೀಲಳಿಗೆ ಬಹಳವಾಗಿ ಹಿಡಿಸಿತು.

ಕಾಟನ್ ಸ್ಯಾರಿಯಲ್ಲಿಯೂ ಮುದ್ದಾಗಿ ಕಾಣುತ್ತಿದ್ದ ಅನುವನ್ನು ಮೆಚ್ಚುಗೆಯಿಂದ ರಾಕೇಶನ ನೋಟದಲ್ಲಿಯೇ ಒಪ್ಟಿಗೆ ಕಾಣುತ್ತಿತ್ತು. ಅದರೆ ಅನುವಿನಲ್ಲಿ ಮಾತ್ರ ಯಾವುದೇ ರೀತಿಯ ಸ್ಪಂದನ ಕಾಣಿಸಲಿಲ್ಲ. ಅತ್ಯಂತ ಸಹಜದಿಂದ ಮಾತಾಡುತ್ತಿದ್ದಳು. ಎದುರಿಗಿದ್ದವನು ತನ್ನನ್ನು ಮೆಚ್ಚುಗೆಯಿಂದ ನೋಡುತ್ತಿದ್ದಾನೆ, ಈ ಸಂದರ್ಭದಲ್ಲಿ ತಾನು ನಾಚುತ್ತ ಕುಳಿತಿರಬೇಕಾದವಳು. ಎಲ್ಲವೂ ಸರಿಯಾದರೆ ಈತ ತನ್ನ ಕೈ ಹಿಡಿಯುವಾತ. ಈ ಭಾವನೆಗಳಾವುವೂ ಅವಳಲ್ಲಿ ಇರಲೇ ಇಲ್ಲ. ಹೆಣ್ತನದ ಸ್ಪಂದನವೂ ಇಲ್ಲದ ನಿರ್ಭಾವುಕತೆ ನೀಲಳಲ್ಲಿ ತಳಮಳವನ್ನೆಬ್ಬಿಸಿದವು. ಅವಳ ಸೂಕ್ಷ್ಮ ಮನಸ್ಸಿಗಾಗಲೇ ಹೊಳದಿತ್ತು. ಅನುವಿನಲ್ಲಿ ಮಧುರ ಅಲೆಗಳನ್ನೇಳಿಸುವ ಶಕ್ತಿ ಈ ರಾಕೇಶ್‌ಗಾಗಲೀ ಅಥವಾ ಮತ್ಯಾವುದೇ ಗಂಡಿಗಾಗಲೀ ಇಲ್ಲ ಎನ್ನುವ ಸತ್ಯ ಇಂದವಳಿಗೆ ಬಹು ಸ್ಪಷ್ಟವಾಗಿ ಗೋಚರಿಸಿಬಿಟ್ಟಿತು. ಈ ಸತ್ಯ ಬೇಗ ತನಗೆ ತಿಳಿಯಬಾರದಿತ್ತು. ನನ್ನ ಬಾಳಿನ ಕಪ್ಪು ಛಾಯೆ ಇಡೀ ಅನುವಿನ ಮನಸ್ಸನ್ನು ಮುಚ್ಚಿಬಿಟ್ಟಿದೆ. ಈ ತೆರೆ ಸರಿಸಿ ಅನು ಎಲ್ಲರಂತೆ ಬಾಳುವುದನ್ನು ತಾನು ನೋಡಲು ಸಾಧ್ಯವಿಲ್ಲದೇ. ನೀಲಳ ಮನಸ್ಸಿನ ಈ ಹೋರಾಟ ಅಲ್ಲಿ ಯಾರಿಗೂ ತಿಳಿಯದಂತಿರಲು ಬಲು ಸಂಯಮದಿಂದ ಸಹಜವಾಗಿರಲು ಯತ್ನಿಸಿ ಸೋಲುತ್ತಿದ್ದಳು.

ಇದಾವುದರ ಅರಿವಿಲ್ಲದ ಜಗದೀಶ ಅತ್ಮೀಯವಾಗಿ ಸ್ವಾಮಿನಾಥ್ ದಂಪತಿಗಳೊಂದಿಗೆ ನಡೆದುಕೊಳ್ಳುತ್ತಿದ್ದ. ತನ್ನ ಮಾತುಕತೆ ವರ್ತನೆಗಳಿಂದ ಜಗದೀಶ್ ಒಂದು ಸುಂದರ ಸಂಸಾರದ ಚಿತ್ರಣವನ್ನೇ ಸ್ವಾಮಿನಾಥ ದಂಪತಿಗಳಿಗೆ ಉಂಟುಮಾಡಿದ್ದ. ತಂದೆಯ ಈ ನಾಟಕವನ್ನು ನೋಡುತ್ತ ಮನದೊಳಗೆ ಜುಗುಪ್ಸೆಗೊಂಡರೂ ತಾನೂ ಕೂಡ ಆ ನಾಟಕದಲ್ಲಿ ಪಾತ್ರವಾಗಲು ಯತ್ನಿಸಿದಳು ಅನು. ಆದರೆ ರಾಕೇಶನ ಆರಾಧನಾ ನೋಟವನ್ನು ಅವಳಿಂದ ಸಹಿಸಲಾಗುತ್ತಿಲ್ಲ. ಇಂತಹ ನೋಟವನ್ನು ಅವಳಿಲ್ಲಿ ನಿರೀಕ್ಷಿಸಿರಲಿಲ್ಲ. ಅಪ್ಪನ ಅಯ್ಕೆ ಎಂದಾಗಲೇ ಮನಸ್ಸಿಗೆ ಅಸಡ್ಡೆ ಮೂಡಿತ್ತು. ಅದರೆ ಈಗ ಈ ಸಜ್ಜನ, ಸರಳ ವೃಕ್ತಿಗಳನ್ನು ಕಂಡಾಗ ಅವಳ ಕಲ್ಪನೆಗಳೆಲ್ಲ ತಲೆಕೆಳಗಾಗಿ ನಿರ್ಲಕ್ಷಿಸದಿಂದಿರಬೇಕೆಂದಿದ್ದ ಅವಳ ವರ್ತನೆ ಬದಲಾಗಿತ್ತು. ದಿನಗಳಿಂದ ಪರಿಚಿತವೇ ಎಂಬ ಭಾವ ಅವಳಲ್ಲಿ ಮೂಡಿತ್ತು. ಅತ್ಮೀಯತಯಿಂದಲೇ ನಡೆಸಿಕೊಂಡ ಸ್ವಾಮಿನಾಥ್ ದಂಪತಿಗಳು ಅಲ್ಲೊಂದು ಸೌಹಾರ್ದ ವಾತಾವರಣ ನಿರ್ಮಿಸಿಬಿಟ್ಟರು.

ಅನುವನ್ನು ಅವರು ಮೆಚ್ಚಿದ್ದಾರೆಂದು ಅವರ ಮಾತುಕತೆಯಲ್ಲಿಯೇ ತಿಳಿಯುತ್ತಿತ್ತು. ಅನುವಿನ ಗಂಭೀರತೆಯನ್ನು ಗಮನಿಸಿಯೋ ಏನೋ ಅವರು ಅಪ್ಟಿ ತಪ್ಪಿ ಕೂಡ ಹೆಣ್ಣು ನೋಡಲು ಬಂದವರೆಂದು ವರ್ತಿಸಲಿಲ್ಲ. ಸ್ನೇಹಿತರ ಮನೆಗೆ ಬಂದವರಂತೆ ಅತ್ಯಂತ ಸರಳವಾಗಿ ಸಹಜವಾಗಿ ನಡೆದುಕೊಳ್ಳುತ್ತಿದ್ದರು.

ಕಾಫಿ ತಿಂಡಿ ಎಲ್ಲಾ ಮುಗಿದ ಮೇಲೆ ಹೊರಟು ನಿಂತಾಗ ಊಟ ಮುಗಿಸಿಯೇ ಹೋಗಬಹುದಲ್ಲ ಎಂದು ನೀಲ ಒತ್ತಾಯಿಸಿದರು. ಇನ್ನೊಮ್ಮೆ ಬಂದಾಗ ಖಂಡಿತಾ ಊಟ ಮಾಡಿಯೇ ಹೋಗುತ್ತೇವೆ. ‘ತಾವು ಒಮ್ಮೆ ನಮ್ಮ ಮನೆಗೆ ಬನ್ನಿ’ ಎಂದು ಆಹ್ವಾನಿಸಿದರು. ಅನು ನೀನೂ ಬಾಮ್ಮ ಎಂದು ಅತ್ಮೀಯವಾಗಿ ಆಹ್ವಾನಿಸಿದಾಗ ಸುಮ್ಮನೆ ಅಗಲೆಂಬಂತೆ ತಲೆಯಾಡಿಸಿಬಿಟ್ಪಳು ಅನು.

ಅವರು ಅತ್ತ ಹೊರ ಹೋದೊಡನೆ ಅನು ತನ್ನ ರೂಮು ಸೇರಿಕೊಂಡು ಬಿಟ್ಟಳು. ಸ್ವಾಮಿನಾಥ್ ಸಂಸಾರವನ್ನು ಹೊರಗಿನವರೆಗೂ ಬೀಳ್ಕೊಟ್ಟು ಬಂದ ಜಗದೀಶ್ ನೀಲಳನ್ನು ಹುಡುಕಿಕೊಂಡು ಅಡುಗೆ ಮನೆಗೆ ಬಂದ.

“ನೀಲಾ, ಈ ಸಂಬಂಧ ದಿವ್ಯವಾಗಿದೆ. ಹುಡುಗ ಡಾಕ್ಟರ್. ಒಬ್ಬನೇ ಮಗ. ಅಪ್ಪ ಕೂಡ ಚೆನ್ನಾಗಿ ಸಂಪಾದಿಸಿ ಇಟ್ಟಿದ್ದಾರೆ. ಅವರ ಮಾತುಕತೆ ಗಮನಿಸಿದರೆ ಅವರು ನಿನ್ನ ಮಗಳನ್ನು ಒಪ್ಪಿಕೊಂಡಿದ್ದಾರೆ ಅನ್ನಿಸುತ್ತೆ. ಈ ಸಂಬಂಧನೇನಾದ್ರೂ ಅವಳು ಒಪ್ಪಲಿಲ್ಲ ಅಂದ್ರೆ ಈ ಜನ್ಮದಲ್ಲಿ ನಾನು ಅವಳಿಗೆ ಗಂಡು ಹುಡುಕುವುದಿಲ್ಲ. ತಮ್ಮ ಮನೆಗೆ ಬರೋ ಸೊಸೆ ಏನೂ ತರೋದು ನಮಗೆ ಇಷ್ಟ ಇಲ್ಲಾ ಅಂದಿದ್ದಾರೆ. ಅಂದ್ರೆ ವರದಕ್ಷಿಣೆ, ಒಡವೆ ಏನೂ ಬೇಡ ಅಂತ. ಇಂತ ಸಂಬಂಧ ಸಿಗೋದು ನಮ್ಮ ಪುಣ್ಯ. ಆದಷ್ಟು ಬೇಗ ಮದ್ವೆ ಮುಗ್ಸಿಬಿಡೋಣ. ಅವಳೇನಾದರೂ ತರಲೆ ತೆಗೆದ್ರೆ ಸರಿಯಾಗಿ ಉಗಿದು ಒಪ್ಸು ಗೊತ್ತಾಯ್ತ. ಅವಳ ತಾಳಕ್ಕೆ ತಕ್ಕಂತೆ ಕುಣಿಬೇಡ. ಆಮೇಲೆ ನಿನ್ನ ಕಥೆ ತರ ಅಗೋದು ಬೇಡ” ಉತ್ತರಕ್ಕೂ ಕಾಯದೆ ದಡ ದಡ ಹೊರ ನಡೆದು ಬಿಟ್ಟ.

ಪಾತ್ರೆಗಳನ್ನೆಲ್ಲ ಸಿಂಕ್‌ಗೆ ಹಾಕಿ ಅಡುಗೆ ಮನೆ ಕ್ಲೀನ್ ಮಾಡಿದಳು. ಸಂಜೆ ತಿಂಡಿ ತಿಂದಿದ್ದರಿಂದ ಅನು ಊಟ ಮಾಡುವುದಿಲ್ಲ.” ರಾತ್ರಿಗೆ ಅಡುಗೆ ಮಾಡಬೇಕೋ ಬೇಡವೋ ಅನುಮಾನಿಸಿದಳು. ತನಗೂ ಊಟ ಸೇರುವುದಿಲ್ಲ. ಅವರೊಬ್ಬರಿಗೆ ತಾನೇ, ತಿಂಡಿ ಮಿಕ್ಕಿದೆ. ಅದೇ ಆಗುತ್ತೆ. ಏನಾದ್ರೂ ಅಂದುಕೊಳ್ಳಲಿ, ತನಗಂತೂ ಈಗ ಅಡುಗೆ ಮಾಡೋ ಮೂಡಿಲ್ಲ ಎಂದುಕೊಂಡ ನೀಲಾ ಹಾಲು ಕಾಯಿಸಿ ಸೀದಾ ಮಗಳ ರೂಮಿಗೆ ನಡೆದಳು. ಅಂಗಾತ ಮಲಗಿದ್ದ ಅನು ಮೇಲಿನ ಫ್ಯಾನನ್ನೇ ನೋಡುತ್ತ ಮಲಗಿದ್ದಳು.

ಮುಖದ ಭಾವ ನಿರ್ಲಿಪ್ತವಾಗಿತ್ತು. ತಾನೀಗ ಬಾಳಿನ ಮುಖ್ಯ ತಿರುವಿನಲ್ಲಿದ್ದೇನೆ. ಮದುವೆ ಎಂಬ ಮಹತ್ವ ಘಟನೆ ನಡೆಯಲಿದೆ ಎಂಬ ಯಾವ ಆಲೋಚನೆಗಳೂ ಇಲ್ಲದೆ ಮೌನವಾಗಿ, ಕನಸುಗಳ ಹೆಣೆದು ಸ್ವಪ್ನ ಲೋಕದಲ್ಲಿ ವಿಹರಿಸಬೇಕಿದ್ದ ಅನು ಏನೂ ನಡೆದೇ ಇಲ್ಲವೆನ್ನುವಂತೆ ಮಲಗಿರುವುದು ನೀಲಳ ಕರುಳನ್ನು ಚುರಕ್ಕೆನಿಸಿತು. ಎಲ್ಲಾ ಮಕ್ಕಳಂತೆ ತನ್ನ ಮಗಳೂ ಬೆಳೆದಿದ್ದರೆ, ಅಪ್ಪ ಅಮ್ಮನ ಸುಂದರ ದಾಂಪತ್ಯ ಕಂಡಿದ್ದರೆ, ಈ ಅನು ಇಷ್ಟೇಕೆ ಸೂಕ್ಷ್ಮ ಮನಸ್ಸಿನವಳಾದಳು. ಇಂತಹ ಎಷ್ಟು ದಾಂಪತ್ಯದ ನಡುವೆಯೇ ಹುಟ್ಟಿ ಬೆಳೆದ ಮಕ್ಕಳೆಲ್ಲರೂ ತಮ್ಮ ತಮ್ಮ ಸುಂದರ ಬದುಕಿನಲ್ಲಿ ತೇಲುತ್ತಿಲ್ಲವೇ. ಇವಳೊಬ್ಬಳೇಕೆ ಹೀಗಾದಳು. ಮದುವೆ ಎಂದರೆ ಸಿಡಿದು ಬಿಡುತ್ತಾಳೆ. ಗಂಡಸರೆಂದರೆ ಅಸಯ್ಯಿಸಿಕೊಳ್ಳುತ್ತಾಳೆ. ಇಂತಹ ಮನಸ್ಥಿತಿಯಲ್ಲಿರುವ ಅನುವನ್ನು ಮದುವೆಯಾಗೆಂದು ಹೇಗೆ ಕೇಳುವುದು. ಧೈರ್ಯ ಸಾಲದಾಯಿತು. ಅವಳು ಒಪ್ಪದಿದ್ದರೆ ನನ್ನ ಕಥೆಯಂತಾಗುತ್ತದೆ ಎಂದ ಪತಿಯ ಮಾತು ನೆನಪಾಯಿತು. ಹಾಲನ್ನು ಟೇಬಲ್ ಮೇಲೆ ಇರಿಸಿ ಮಾತಾಡದೆ ಹೊರ ಬಂದುಬಿಟ್ಟಳು.

ತನ್ನ ಕಥೆ, ತನ್ನ ಕಥೆ, ಎಲ್ಲವೂ ನಾ ಬಯಸಿದಂತೆ ಆಗಿದ್ದರೆ ತನ್ನ ಕಥೆ ಬೇರೆಯದೇ ಅಗಿರುತ್ತಿತ್ತು. ಪ್ರೇಮ ಸಾಮ್ರಾಜ್ಯದ ಒಡತಿಯಾಗಿ, ಒಲವೇ ಬದುಕು, ಬದುಕೇ ಒಲವು ಎಂದು ಸದಾ ಒಲವು ತುಂಬಿದ ಬದುಕಿನಲ್ಲಿ ತೇಲುತಲಿರುತ್ತಿದ್ದೆ . ವಿಧಿ ನನ್ನ ಹಣೆ ಬರಹವನ್ನು ಬದಲಾಯಿಸಿಬಿಟ್ಚಿತು. ಈ ಜಗದೀಶ್ ನಮ್ಮ ಮನೆಗೆ ಬಾರದಿರುತ್ತಿದ್ದರೆ, ನಾನವರಿಗೆ ನನ್ನ ಒಲವನ್ನು ಹೇಳಿಕೊಳ್ಳದಿದ್ದರೆ, ರೇ ರಾಜ್ಯದಲ್ಲಿಯೇ ಮುಳುಗಿ ಹೋದಳು ನೀಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರೀ ಚಿಣ್ಣ?
Next post ನಿಮಿತ್ತ ಆಯ್ತೂಂತ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys