ತಗೊ ಹಿಂದಕೆ ತಗೊ ಹಿಂದಕೆ
ನೀ ನೀಡಿದ ವರವ
ಓ ಆನಂಗದೇವ
ಮುಕ್ತಿ ನೀಡು ಅಳಿಸಿ ನಿನ್ನ
ಈ ಮಿಥ್ಯಾ ಜಾಲ
ಓ ಅನಂಗ ದೇವ

ಸುರಿವೆ ನಿನ್ನ ಪಾದದಲ್ಲಿ
ಹುಸಿಯಾದೀ ಚೆಲುವ
ಮರೆಸಿ ಪಡೆದ ಫಲವ
ನೀಡುತಿರುವೆ ಹಿಂದಕೆ
ಅರ್ಥವಿರದ ಸೊಬಗ
ಓ ಅನಂಗ ದೇವ

ನಿನ್ನ ದಯದಿ ಅಳಿಯಲಿ
ಈ ಭ್ರಾಮಕ ರೂಪ
ಅಲ್ಲದ ಆಲಾಪ
ಜೊತೆಜೊತೆಗೇ ಕರಗಲಿ
ಮನದಾಳದ ಬೇಗೆ
ಹಿಮಕರಗುವ ಹಾಗೆ

ಆಧಾರ : ಟಾಗೋರರ ‘ಚಿತ್ರಾ’

***