ಯಾರೋ ತಾಪಸಿ ನೀನು?
ರಂಭೆಯೆ ಕರೆದರು ತೆಪ್ಪಗೆ ಕೂತಿಹೆ
ಎಂಥಾ ಮರುಳನೊ ನೀನು?
ಅಮೃತವ ಹೀರಿ ಮುಪ್ಪನು ತೂರಿ
ಅಪ್ಸರೆಶಯ್ಯೆಯ ಸೇರಿ
ಸುಖಿಸಲು ತಾನೇ ಈ ತಪವೆಲ್ಲಾ
ಭೋಗದ ಎಲ್ಲೆಯ ಮೀರಿ
ಗೀತದಿ ಅರಳಿಸಿ ನೃತ್ಯದಿ ಕೆರಳಿಸಿ
ಅಮಲಿನ ಅಂಚಿಗೆ ಸಲಿಸಿ
ಮಾದಕ ರೂಪದ ಮೈಯಲಿ ಮೀಯಿಸಿ
ಜೇನು ಉಣಿಸುವಳು ನಾನು.
ಆಸೆಯ ಕೊಂದು, ಒಳಗೇ ಬೆಂದು
ಬಾಳನು ಕೊಳೆಸುವರೇನೋ?
ಇಂದ್ರಭೋಗಕೂ ಇಂದ್ರಿಯ ಬೇಕು
ಅದನೇ ಹಳಿಯುವರೇನೋ?
* ಊರ್ವಶಿ ನಾಟಕದ ಒಂದು ಗೀತೆ
****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.