ನಾನೇ ಮಂಗ ಆಗಿದ್ರೆ
ಮರದಿಂದ್ ಮರಕ್ಕೆ ಹಾರಿ
ತಿಂದ್ಬಿಡ್ತಿದ್ದೆ ಚೇಪೇಕಾಯ್
ದಿನಾ ಒಂದೊಂದ್ ಲಾರಿ!

ಹದ್ದು ಕಾಗೆ ಆಗಿದ್ರೆ
ರೆಕ್ಕೆ ಚಾಚಿ ಹೊರಗೆ
ಹಾಯಾಗ್ ತೇಲಿ ಹೋಗ್ತಿದ್ದೆ
ಬಿಳೀ ಮೋಡದ್ ಒಳಗೆ!

ಇಲೀ ಗಿಲೀ ಆಗಿದ್ರೆ
ಹಗಲು ರಾತ್ರಿ ಬಿಡದೆ
ಚಕ್ಲಿ ಉಂಡೆ ಕೂಡಾಕ್ತಿದ್ದೆ
ಭಾರೀ ಡೊಗರಿನ ಒಳಗೆ!

ಆನೆ ಎತ್ತರ ಇದ್ದಿದ್ರೆ
ಅಟ್ಲು ಮೇಲಿನ್ ಡಬ್ಬ
ಒಂದೊಂದೇನೇ ಪೂರಾ ಖಾಲಿ
ದಿನಾ ಬಾಯಿಗ್ ಹಬ್ಬ!

ಹುಡುಗ ಆಗಿ ಎಲ್ಲಾ ಹಾಳು
ಪುಟ್ ಪುಟ್ ಕೈಯಿ ಕಾಲು,
ಅಪ್ಪನ ಹಾಗೇ ದೊಡ್ಡೋನಾಗಿ
ಒಟ್ಗೇ ತಿಂತೀನ್ ತಾಳು!

*****

ಪುಸ್ತಕ: ಕಿನ್ನರ ಲೋಕ