ಭೀಮನ ಮದುವೆ

-ತಂದೆಯ ಸ್ಥಾನದಲ್ಲಿದ್ದ ಧೃತರಾಷ್ಟ್ರನ ಅಪ್ಪಣೆಯಂತೆ ದೈವಕಾರ್ಯಕ್ಕೆಂದು ವಾರಣಾವತಕ್ಕೆ ಹೊರಟ ಪಾಂಡವರು ದುಷ್ಟಕೂಟದ ಸಂಚನ್ನು ಭೇದಿಸಿ ಅರಗಿನಮನೆಯಲ್ಲಿನ ಸಾವಿನ ದವಡೆಯಿಂದ ಪಾರಾದರು. ತಮ್ಮನ್ನು ಸುಡಲು ನೇಮಕಗೊಂಡಿದ್ದ ದುಷ್ಟ ಪುರೋಚನನನ್ನು ಒಳಗೆ ಕೂಡಿಹಾಕಿ ಅರಗಿನಮನೆಗೆ ತಾವೇ ಬೆಂಕಿಯಿಕ್ಕಿ, ಮನೆಯ ಹಿಂಬದಿಯ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಿಂದ ತಪ್ಪಿಸಿಕೊಂಡು ಅರ್ಧರಾತ್ರಿಯಲ್ಲಿ ಅವರಲ್ಲಿಂದ ಹೊರಟುಬಿಟ್ಟರು. ಹಗಲಿನಲ್ಲಿ ಅನುಕೂಲವಾದ ಸ್ಥಳಗಳಲ್ಲಿ ಉಳಿದುಕೊಂಡಿದ್ದು ಇರುಳು ಪ್ರಯಾಣ ಮಾಡುತ್ತ, ಗಂಗಾನದಿಯನ್ನು ದಾಟಿ ದುರ್ಗಮವಾದ ದಟ್ಟ ಅರಣ್ಯವನ್ನು ಪ್ರವೇಶಿಸಿದರು-

ಅರಗಿನಮನೆಯಲಿ ಅವಘಡ ಭೇದಿಸಿ ಹೊರಬಂದಂತಹ ಪಾಂಡವರು
ಹಗಲಲಿ ಅಡಗುತ ಇರುಳಲಿ ನಡೆಯುತ ದಟ್ಟಕಾಡಿನೆಡೆ ಸಾಗಿದರು
ಬೆಟ್ಟಗುಡ್ಡಗಳ ಏರಿಳಿಯುತ್ತಲಿ ಹಳ್ಳಕೊಳ್ಳಗಳ ದಾಟುತ್ತ
ಮೆಲ್ಲನೆ ಮೆಲ್ಲನೆ ಮುಂದಕೆ ನಡೆದರು ಕಲ್ಲುಮುಳ್ಳುಗಳ ತುಳಿಯುತ್ತ
ಭೀಮನ ವಯಸ್ಸು ಇಪ್ಪತ್ತನಾಲ್ಕು ಧರ್ಮಜನಿಗೆ ಇಪ್ಪತ್ತೈದು
ಪಾರ್ಥನಿಗಿಪ್ಪತ್ತೂರರ ಹರೆಯವು ಕುಂತಿ ಪ್ರಾಯ ನಲವತ್ತೈದು
ಯಮಳರಿಗಿಪ್ಪತ್ತೆರಡಾಗಿದ್ದಿತು ದೇಹದಿ ಒಳ್ಳೆಯ ಕಸುವಿತ್ತು
ಕುಂತಿಯ ದೇಹವು ಬಳಲಿಕೆಯಲ್ಲಿ ನಡೆಯಲು ಆಗದೆ ಕುಸಿದಿತ್ತು!
ಭೀಮನು ತಾಯಿಯ ಹೆಗಲಲಿ ಹೊರುತ್ತ ಸರಸರ ಸಾಗಿದ ಮುಂದಕ್ಕೆ
ಉಳಿದವರೆಲ್ಲರು ಅನುಸರಿಸಿದ್ದರು ಭೀಮನ ಬೆನ್ನಿನ ಹಿಂದಕ್ಕೆ
ಅಂತೂ ಇಂತೂ ಆಯಾಸದಲ್ಲಿ ಏದುಸಿರಿಡುತಲಿ ನಡೆದವರು
ರಕ್ಕಸವಾಸದ ಕರ್ಕಶ ಧ್ವನಿಗಳ ಹಿಡಿಂಬವನವನು ತಲುಪಿದರು!
ಅಲ್ಲಿನ ವಿಶಾಲ ಮರದಡಿ ನೆರಳಲಿ ನಿಂತರು ನಿದ್ದೆಗೆ ಆಕಳಿಸಿ
ಆಯಾಸದೊಂದಿಗೆ ಹಸಿವನು ಸಹಿಸುತ ಕುಳಿತರು ಮೆಲ್ಲಗೆ ತೂಕಡಿಸಿ
ಭೀಮನು ಕಾವಲು ಕಾಯುತಲಿದ್ದರೆ ಉಳಿದವರೆಲ್ಲರು ಮಲಗಿದರು
ಕೆಲವೇ ಕ್ಷಣದಲಿ ಗೊರಕೆಯ ಹೊಡೆಯುತ ನಿದ್ದೆಯ ಮಡಿಲಿಗೆ ಜಾರಿದರು!

ಹಿಡಿಂಬಾಸುರನು ಒಡೆಯನು ಅಲ್ಲಿನ ಕಾಡಿನ ರಕ್ಕಸರೆಲ್ಲರಿಗೆ
ಹಿಡಿಂಬೆ ಎಂಬುವ ತಂಗಿಯು ಇದ್ದಳು ಭೀಕರ ರಾಕ್ಷಸರೊಡೆಯನಿಗೆ
ರಾಕ್ಷಸರೆಲ್ಲರು ಪ್ರಾಣಿ ಪಕ್ಷಿಗಳ ಭಕ್ಷಿಸುತಿದ್ದರು ತೃಪ್ತಿಯಲಿ
ಕೈಗೆ ಸಿಕ್ಕಿದರೆ ಮಾನವರನ್ನೂ ತಿನ್ನುತಲಿದ್ದರು ಮೋಜಿನಲಿ
ಇಂತಹ ರಕ್ಕಸ ಕಾಡಿನೊಳೀ ದಿನ ಪಾಂಡವರಿದ್ದರು ತಾಯಿ ಜೊತೆ
ರಕ್ಕಸ ದಾಳಿಗೆ ಸಿಕ್ಕರೆ ಫಕ್ಕನೆ ಮುಗಿದೇಹೋಗುವುದವರ ಕತೆ!

ರಕ್ಕಸನಾಡನು ಹೊಕ್ಕವರೆಲ್ಲರೂ ರಕ್ಕಸರೊಡಲಿಗೆ ಆಹಾರ
ಸೊಕ್ಕಿನ ರಕ್ಕಸರನ್ನೆದುರಿಸುವುದೇ ಬಲು ಇಕ್ಕಟ್ಟಿನ ವ್ಯವಹಾರ
ಉಕ್ಕುವ ಯೌವನದುತ್ಸಾಹಗಳೂ ಫಕ್ಕನೆ ಇಳಿಮುಖವಾಗುವುವು
ಹೊಕ್ಕರೆ ವನವನು ಸಿಕ್ಕುತ ಕಷ್ಟಕ್ಕೆ ಸೊಕ್ಕಿಳಿಯುತ್ತದೆ ಮರುಕ್ಷಣವು!

ಹಿಡಿಂಬೆ ಹೊರಟಳು ಹೊರಸಂಚಾರಕೆ ಹುಣ್ಣಿಮೆ ಚಂದ್ರನ ಬೆಳಕಿನಲಿ
ಪೂರ್ಣ ಚಂದಿರನು ಬೆಳಗುತಲಿದ್ದನು ನೀಲಾಕಾಶದಿ ಚೆಲುವಿನಲಿ
ಕಂಡಳು ಭೀಮನ ಮರದಡಿ ಬಯಲಲಿ ತನ್ನ ಸೋದರರ ಜೊತೆಯಲ್ಲಿ
ಅಂಗಸೌಷ್ಠವದ ಸಿರಿಯನು ನೋಡುತ ಮೋಹಿತಳಾದಳು ಅವನಲ್ಲಿ
ಹೆಣ್ಣಾನೆಯ ಥರ ಇದ್ದಳು ರಕ್ಕಸಿ ಕಾಡಿನ ಮರಗಳ ನಡುವಿನಲಿ
ಗಂಡಾನೆಯ ಥರ ಕಂಡನು ಭೀಮನು ಹಸುರಿನ ಮರಗಳ ನೆರಳಿನಲಿ
ಫಕ್ಕನೆ ರಕ್ಕಸಿಯೆದೆಯಲಿ ಉಕ್ಕಿದ ಪ್ರೇಮದ ಬೀಜವು ಮೊಳೆದಿತ್ತು
ರಕ್ಕಸಕನ್ಯೆಯ ಉಕ್ಕುವ ಯೌವನ ಭೀಮನ ಸನಿಹವ ಬಯಸಿತ್ತು!
ಮೆಲ್ಲನೆ ಬಂದಳು ಭೀಮನ ಹತ್ತಿರ ಪ್ರೇಮಭಿಕ್ಷೆಯನ್ನು ಬೇಡುತ್
`ನಲ್ಲನೆ ಪ್ರೀತಿಸು!’ ಎನ್ನುತ ನಿಂತಳು ಭೀಮಹೃದಯವನು ಕಾಡುತ್ತ
ಭೀಮನು ಅವಳ ನಿವಾರಿಸಲೆನ್ನುತ ಏನನ್ನೋ ಬಡಬಡಿಸಿರಲು
ಹಿಡಿಂಬೆ ಅವನನು ಬೇಡತೊಡಗಿದಳು ಪ್ರೀತಿಯು ಹೆಚ್ಚುತ ಬರುತಿರಲು
ಅಷ್ಟರಲ್ಲಿಯೇ ಅಲ್ಲಿಗೆ ಬಂದನು ಹಿಡಿಂಬಾಸುರನು ಕೆರಳುತ್ತ
ತಂಗಿಯ ಪ್ರೇಮದ ಆಟವ ನೋಡುತ ಕಣ್ಣಲಿ ಕೆಂಡವ ಕಾರುತ್ತ
“ಅನುಮತಿ ಇಲ್ಲದೆ ನಮ್ಮ ಕಾಡಿಗೆ ಬಂದಿಹ ಮಾನವ ಪ್ರಾಣಿಯನು
ಕೊಲ್ಲದೆ ಸುಮ್ಮನೆ ಏತಕೆ ಬಿಟ್ಟಿಹೆ? ಬೇಡುವೆ ಅವನಲಿ ಏನನ್ನು?”
ಅಬ್ಬರಿಸುತ್ತಲಿ ಭೀಮನ ಕೆಣಕಿದ ಜಗಳಕೆ ಕಾಲನು ಕೆರೆಯುತ್ತ
ಆತ್ಮರಕ್ಷಣೆಗೆ ಭೀಮನು ತಾನೂ ಕದನಕೆ ನಿಂತನು ಜರೆಯುತ್ತ
ಪಾಂಡವರೆಲ್ಲರು ಎಚ್ಚರಗೊಂಡರು ಕಂಡರು ಭೀಮ-ಹಿಡಿಂಬರನು
ಒಬ್ಬರ ಮೇಗಡೆ ಒಬ್ಬರು ಉರುಳುತ ಕಾದಾಡುವ ಆ ಹುಂಬರನು
ಕೂಡಲೆ ಅವರೂ ಆಯುಧ ಹಿಡಿದರು, ಆದರೆ ತಡೆದನು ಕಲಿಭೀಮ
‘ಕುಸ್ತಿಯಲಿವನನು ಚಿತ್ತುಗೆಡಹುವೆನು ಮಾಡುವೆನಿವನನು ನಿರ್ನಾಮ’
ಎನ್ನುತ ಭೀಮನು ಕಾದಾಡಿದ್ದನು ರಕ್ಕಸರೊಡೆಯನ ಮೀರುತಲಿ
ಹಿಡಿಂಬೆ ಸುಮ್ಮನೆ ನಿಂತಳು ಅಲ್ಲಿಯೆ ಏನೂ ಮಾಡದ ಸ್ಥಿತಿಯಲ್ಲಿ!
ಹಿಡಿಂಬಾಸುರನು ಮರದಕೊಂಬೆಯನ್ನು ಮುರಿದುಕೊಂಡು ಮುನ್ನುಗ್ಗಿದನು
ಭೀಮನು ಅಸುರನ ಏಟಿಗೆ ಸಿಕ್ಕದೆ ಹಿಡಿದು ಕೊಂಬೆಯನು ಜಗ್ಗಿದನು
ಅಸುರನು ಭೀಮನ ಎದುರಿಸಲಾಗದೆ ಆಯತಪ್ಪಿ ಮುಗ್ಗರಿಸಿದನು
ಭೀಮನು ನೀಡಿದ ಮರುಹೊಡೆತಕ್ಕೆ ‘ಅಯ್ಯೋ..’ ಎನ್ನುತ ಚೀರಿದನು

ಮತ್ತೆ ಚೇತರಿಸಿಕೊಂಡ ರಕ್ಕಸನು ಒರಟು ಕದನಕ್ಕೆ ತೊಡಗಿದನು
ಸುತ್ತಿ ಬಳಸಿ ಎತ್ತೆತ್ತಲಿಂದಲೋ ದಾಳಿ ಮಾಡಿ ಕಾದಾಡಿದನು
ಬಹಳ ಹೊತ್ತು ಕಾದಾಡಿದ ನಂತರ ಭೀಮನು ಅಸುರನ ಹಿಡಿದೆತ್ತಿ
ಕೆಳಗೆ ಕುಕ್ಕಿ ನೆಲದಲ್ಲಿ ಉರುಳಿಸುತ ಹೂಂಕರಿಸಿದ ಗಂಟಲನೊತ್ತಿ
ಒಣಗಿದ ಮರವೊಂದರ ತುಂಡಿಂದಲಿ ಅವನ ತಲೆಗೆ ಅಪ್ಪಳಿಸಿದನು
ಒರಗಿದ ಅಸುರನ ತಲೆ ಹೋಳಾಗುತ ನೆತ್ತರು ಹರಿಯಲು, ಗತಿಸಿದನು
ರಕ್ಕಸರೊಡೆಯನ ಕೊಲ್ಲುವ ಯೋಚನೆ ಭೀಮನ ಮನದಲಿ ಇರಲಿಲ್ಲ
ಆದರೆ ಕೊಲ್ಲದೆ ವಿಧಿಯಿರದಾಯಿತು ಬೇರೆ ಮಾರ್ಗ ಗೋಚರಿಸಿಲ್ಲ!
ಕಾರಣವಿಲ್ಲದೆ ಜಗಳಕೆ ಬಂದನು ಎನ್ನುವುದೊಂದೆಡೆ ಮುನಿಸಿತ್ತು
ಮಲ್ಲಯುದ್ಧದಲಿ ಅವನನ್ನು ಮಣಿಸುತ ಮಣ್ಣುಮುಕ್ಕಿಸುವ ಮನಸಿತ್ತು
ಆದರೆ, ರಕ್ಕಸ ಒರಟೊರಟಾಗಿಯೇ ವರ್ತಿಸಿ ಕೊಲ್ಲಲು ಬಂದಿದ್ದ
ಮಾಡಿದ ತಪ್ಪಿಗೆ ಒಪ್ಪಿತವೆನ್ನುತ ಸಾವಿನ ಫಲವನು ಉಂಡಿದ್ದ!

ನಾಯಕನಳಿದರೆ ಕಾಯಕವಾವುದು ಎಂಬ ಪ್ರಶ್ನೆ ಎದುರಾಗುವುದು
ನಾಯಕನಿಲ್ಲದ ಮೇಲಿನ್ನೇನಿದೆ ಎಂದು ಮನವು ಪರಿತಪಿಸುವುದು
ನಾಯಕನೇ ನಮಗೆಲ್ಲವು ಎನ್ನುವ ಭಾವನೆ ಮನದಲ್ಲಿ ಬೆಳೆಯುವುದು
ನಾಯಕನೊಬ್ಬನು ಇರಲೇಬೇಕಿದೆ ಎಂಬ ನಿರ್ಣಯವ ತಳೆಯುವುದ!

ಅಣ್ಣನ ಸಾವನ್ನು ನೋಡಿದ ತಂಗಿಯು ಒಂದೇ ಸಮ ಗೋಳಾಡಿದಳು
ಮುಂದಿನ ಕ್ಷಣದಲಿ ಸುತ್ತಲೂ ನೋಡಿ ಕೂಡಲೆ ಕಾಡೊಳಗೋಡಿದಳು
ಕುಂತಿಯು ನುಡಿದಳು- “ಇಲ್ಲಿರೆ ತೊಂದರೆ ನಡೆಯಿರಿ ಹೊರಡುವ ಬೇರೆಡೆಗೆ
ರಕ್ಕಸರೊಂದಿಗೆ ಬರುವಳು ರಕ್ಕಸಿ ದಾಳಿಯ ಮಾಡಲು ಈ ಕಡೆಗೆ”
ಎಲ್ಲರು ಹೊರಡಲು ಅನುವಾಗುತ್ತಿರೆ, ಬಂದರು ಹಲವರು ರಕ್ಕಸರು
ಅವರೊಳಗಿದ್ದರು ಕೆಲವರು ಯುವಕರು, ಮುದುಕರು ಮಕ್ಕಳು ಹೆಂಗಸರು
ಹಿಡಿಂಬಾನುಜೆಯು ಅವರೊಡನಿದ್ದಳು ಚಿಂತೆಯ ಮೊಗದಲಿ ತಾನಂದು
ಒಡೆಯನು ನೆತ್ತರ ಮಡುವಲಿ ಬಿದ್ದಿರೆ ಅತ್ತರು ಎಲ್ಲರು ಬಲುನೊಂದು!
ಅವರೊಳಗಿನ ಮುದಿರಕ್ಕಸನೊಬ್ಬನು ಮುಂದಕೆ ಬಂದನು ಕೈಮುಗಿದು
ಭೀಮನ ಎದುರಲಿ ಮಂಡಿಯನೂರುತ ದೈನ್ಯದಿ ನುಡಿದನು ಹೀಗೆಂದು-

“ಮಾನವ ವೀರನೆ, ಮನ್ನಿಸು ನಮ್ಮನು ಒಡೆಯನು ದುಡುಕಿದ ನಿನ್ನಲ್ಲಿ
ಮಾಡಿದ ತಪ್ಪಿಗೆ ಮರಣವ ಹೊಂದಿದ ನಾಯಕನಿಲ್ಲವು ನಮಗಿಲ್ಲಿ
ನಮ್ಮ ನಾಯಕನ ಕದನದಿ ಜಯಿಸಿದ ನೀನಮ್ಮಯ ನಾಯಕನಾಗು
ನಿನ್ನಲಿ ಪ್ರೀತಿಯ ಹೊಂದಿರುವಂತಹ ನಮ್ಮ ಹಿಡಿಂಬೆಗೆ ಪತಿಯಾಗು”
ಭೀಮ, ಹಿಡಿಂಬೆಯ ದಿಟ್ಟಿಸಿ ನೋಡುತ ಕುಂತಿಯ ಮೊಗವನು ನೋಡಿದನು
ಅಣ್ಣನು ಇರುವನು, ತಮ್ಮನ ಮದುವೆಯೆ? ಎನ್ನುತ ಚಿಂತೆಯ ಮಾಡಿದನು
ಹಿಡಿಂಬಾನುಜೆಯ ಪಡೆಯುವ ಆಸೆಯು ಭೀಮನಿಗಿದ್ದಿತು ಮನದಲ್ಲಿ
ತನ್ನಯ ರಕ್ಕಸ ದೇಹಕೆ ಹೊಂದುವ ರಕ್ಕಸ ಮಡದಿಯು ಎನ್ನುತಲಿ
ಏಳಡಿ ಎತ್ತರ ಆಜಾನುಬಾಹು ಮದಿಸಿದ ಗಜದಂತಹ ದೇಹ
ಎಷ್ಟೇ ಬಡಿಸಲಿ ಮುಕ್ಕಿಬಿಡುವನವ ಎಲ್ಲ ಕ್ಷಣದಲ್ಲಿಯೇ ಸ್ವಾಹ
ಭೀಮನ ದೇಹವು ಬೆಳೆದಿತ್ತಾದರೂ ಮನದೊಳಗಿನ್ನೂ ಎಳೆತನವು
ಶಕ್ತಿಯು ಅವನಲಿ ತುಂಬಿತ್ತಾದರೂ ಎದೆಯೊಳಗಿನ್ನೂ ಮಗುತನವು
ನಿರ್ಮಲ ಪ್ರೀತಿಯು ಅವನಲ್ಲಿದ್ದಿತು ಹಿಡಿಂಬಾನುಜೆಯು ಎದುರಿನಲಿ
ಅವಳನು ಪಡೆದರೆ ಜನ್ಮ ಸಾರ್ಥಕವು ಎನ್ನುತಲಿದ್ದನು ಮನಸಿನಲಿ!
ಕುಂತಿ ಕೇಳಿದಳು. ಎಲ್ಲ ಮಕ್ಕಳನು- “ಈಗ ನಾವೇನು ಮಾಡೋಣ?
ಕಾಡಿನಲ್ಲಿರುವ ಈ ರಕ್ಕಸರಿಗೆ ನಾವುಗಳೇನನು ಹೇಳೋಣ?”
ಧರ್ಮ ಹೇಳಿದನು- “ಅಮ್ಮಾ, ಕೆಲದಿನ ನಾವು ಮರೆಯಾಗಿ ಇರಬೇಕು
ಬದುಕಿ ಬಂದಿರುವ ಸಂಗತಿ ವೈರಿಗೆ ತಿಳಿಯದಂತೆ ಉಳಿದಿರಬೇಕು
ಆದುದರಿಂದಲಿ ಹಿಡಿಂಬವನವೇ ನಮಗೆ ರಕ್ಷಣೆಯ ನೀಡುವುದು
ಅಲ್ಲದೆ ಇಲ್ಲಿನ ರಕ್ಕಸರೆಲ್ಲರ ಬೇಡಿಕೆಯೂ ಈಡೇರುವುದು”
ಧರ್ಮನ ಮಾತನು ಎಲ್ಲ ಒಪ್ಪಿದರು, ಭೀಮನಿಗೂ ಇಷ್ಟವಾಗಿತ್ತು
ಹಿಡಿಂಬಾಸುರೆಯ ವಿವಾಹವಾಗಲು ಅವನಿಗೆ ಸಮ್ಮತವಾಗಿತ್ತು
ಕುಂತಿಯು ಭೀಮನ ಒಪ್ಪಿಗೆ ಕೇಳಲು ಕೂಡಲೆ ಅವನೂ ಒಪ್ಪಿದನು
ಆದರೆ, ಅಣ್ಣನ ವಿವಾಹವಾಗದೆ ತಮ್ಮನ ಮದುವೆಯೆ? ಕೇಳಿದನು
ಕುಂತಿಯು ನುಡಿದಳು- “ಕಾರ್ಯಸಾಧನೆಗೆ ಬೇರೆಯ ಮಾರ್ಗವು ನಮಗಿಲ್ಲ
ಇಲ್ಲಿ ನಾವು ಕೆಲಕಾಲ ಉಳಿಯುವುದು ಒಂದೇ ದಾರಿಯು ನಮಗೆಲ್ಲ
ಅಣ್ಣನ ಮದುವೆಯ ಚಿಂತೆಯ ಮಾಡದೆ ರಕ್ಕಸಕನ್ಯೆಯ ನೀ ವರಿಸು
ನಿನ್ನ ಅಣ್ಣ ತಮ್ಮಂದಿರ ರಕ್ಷಣೆ ಮಾಡಲು ನೀನೂ ಸಹಕರಿಸು”

ಭೀಮನು ಒಪ್ಪಲು ಹಿಡಿಂಬವನದಲಿ ಆಗಿಹೋಯ್ತು ಭೀಮನ ಮದುವೆ
ರಕ್ಕಸದೇಹಕೆ ತಕ್ಕ ರಕ್ಕಸಿಯು ಸಿಕ್ಕಿದ್ದೇ ಸಂತಸವದುವೇ!
ಪಾಂಡವರೆಲ್ಲರು ವರುಷ ಕಾಲ ಅಲ್ಲುಳಿದರು ಹೊರಗಡೆ ಕಾಣಿಸದೆ
ರಕ್ಕಸನಾಡಿನ ಆತಿಥ್ಯವನೂ ಉಂಡರು ಬೇಸರ ತೋರಿಸದೆ
ಗೆಡ್ಡೆಗೆಣಸುಗಳು ಪುಟ್ಟ ಪ್ರಾಣಿಗಳು ಇವರುಗಳೆಲ್ಲರ ಆಹಾರ
ರಕ್ಕಸರೂ ಇವರೊಟ್ಟಿಗೆ ಇದ್ದರು ನೀಡುತ ಉತ್ತಮ ಸಹಕಾರ
ಕಾಲ ಕಳೆದುದೇ ಅರಿಯದ ತೆರದಲಿ ವರುಷದ ಅವಧಿಯು ಮಗಿದಿತ್ತು
ಕರ್ತವ್ಯದ ಕರೆ ಎಚ್ಚರಿಸುತ್ತಲಿ ಅವರೆಲ್ಲರನೂ ಕರೆದಿತ್ತು!
ಭೀಮನಿಗೂ ಪುತ್ರೋತ್ಸವವಾಯಿತು ರಕ್ಕಸರೊಡೆಯನು ಉದಿಸಿದನು.
ಹಿಡಿಂಬವನದಲಿ ಎಲ್ಲೆಡೆಯಲ್ಲೂ ಸಂತಸ ಸಂಭ್ರಮ ಬರಿಸಿದನು
ಮರಿಗಜದಂತಿಹ ಭೀಮಪುತ್ರನನು ಕರೆದರು ‘ಘಟೋತ್ಕಚ’ ಎಂದು
ಹಿರಿಯರೆಲ್ಲ ಆಶೀರ್ವದಿಸಿದ್ದರು ಮಹಾಬಲಶಾಲಿಯಾಗೆಂದು
ಘಟೋತ್ಕಚನನ್ನು ಹಿಡಿಂಬೆಗೊಪ್ಪಿಸಿ ಕುಂತಿಯ ಸಂಗಡ ಪಾಂಡವರು
ಏಕಚಕ್ರಪುರದೆಡೆಗೆ ಪಾದವನು ಬೆಳೆಸಿದರು ಕಾಡೊಳಿದ್ದವರು
ಎಲ್ಲರು ಬ್ರಾಹ್ಮಣರಂತೆಯೆ ವೇಷವ ಬದಲಿಸಿ ನಡೆದರು ಒಟ್ಟಾಗಿ
ಭಿಕ್ಷಾಟನೆಯನ್ನು ಮಾಡುತ ಉಳಿದರು ಯಾರೂ ಅರಿಯದೆ ಗುಟ್ಟಾಗಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಪ್ರಲಾಪ
Next post ವಚನ ವಿಚಾರ – ಕಾಲಿಲ್ಲದ ಕುದುರೆ

ಸಣ್ಣ ಕತೆ

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys