ನಿನಗಾಗೇ ಈ ಹಾಡುಗಳು
ನೀ ಕಟ್ಟಿಸಿದ ನಾಡುಗಳು;
ನೀನೇ ಇದರ ಮೂಲ ಚೂಲ
ಒಳಗಿವೆ ನನ್ನ ಪಾಡುಗಳು.

ಯಾಕೆ ಕಂಡೆನೋ ನಾ ನಿನ್ನ
ತುಂಬಿ ಹರಿಯುವ ಹೊಳೆಯನ್ನ?
ಯಾಕೆ ಹೊಕ್ಕಿತೋ ಹಿಡಿವಾಸೆ
ಹೊಳೆಯುವ ಕಾಮನ ಬಿಲ್ಲನ್ನ?

ನೀರು ತುಂಬಿರುವ ನಿಜ ಕೊಳವೊ,
ಮೋಹಿಸಿ ಕರೆವ ಮರೀಚಿಕೆಯೋ?
ಏನು ಕಾದಿದೆಯೊ ಜೀವಕ್ಕೆ,
ನಲಿವೊ ನಿರಾಸೆಯ ಕಹಿ ನೋವೋ?

ನನ್ನೆಲ್ಲಾ ಕನಸುಗಳನ್ನ
ಆಳುತ್ತಿರುವೆ ನೀ ಚಿನ್ನ,
ನಿನ್ನ ಚೆಲುವನ್ನೆ ಕನಸುತ್ತ
ಬಾಳೊಳು ಮಿಂಚಿತು ಹೊಸ ಬಣ್ಣ.
*****

ಪುಸ್ತಕ: ನಿನಗಾಗೇ ಈ ಹಾಡುಗಳು

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)