ಕಾಯಬಲ್ಲೆ ನಾ ಕೃಷ್ಣ ಗೋಪಿಯರ
ಮನೆಗೆ ಹೋಗದಂತೆ
ಹೇಗೆ ಕಾಯಲೇ ಗೋಪಿಯರು
ಅವನ ಕಾಡದಂತೆ ?

ಸಾಕಾಗಿದೆಯೆ ದಿನವೂ ಮನೆಗೆ
ಬರುವರು ಗೋಪಿಯರು
ಶಿಕ್ಷೆಯ ನೆಪದಲಿ ಕೃಷ್ಣನ ಬಾಚಿ
ಕೆನ್ನೆಯ ಹಿಂಡುವರು!

ಸೆರಗನು ಸೆಳೆದ, ಮುಡಿಯನು ಎಳೆದ
ಎನುವರು ಕಳ್ಳಿಯರು
ಸೆರಗು ಮುಡಿಗಳ ಹುಡುಗನ ಕೈಗೆ
ಇವರೇ ಚಾಚುವರು!

ಅರಿಯದ ಕಂದ ಎಳೆದಿರಬಹುದು
ಕೈಗೆ ಸಿಕ್ಕುದನ್ನು.
ಮುಟ್ಟಿ, ಅಪ್ಪಿ, ಶಿಕ್ಷಿಸಲೆಂದೇ
ಅವರ ಎಲ್ಲ ದೂರು!

ಗೋಪಿಯರೆಲ್ಲಾ ಹಿಂಡಿ ಹಿಸುಕಿ
ಹೇಗಾಯಿತೆ ಕಂದ!
ಕಾಯಲಿ ಹೇಗೆ ಈ ಮನ್ಮಥನ
ಗೋಪೀದಾಳಿಯಿಂದ
*****